ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಸರಬರಾಜು ಮಾಡುವ ಸಂದರ್ಭದಲ್ಲಿ ಗ್ಯಾಸ್ ಏಜೆನ್ಸಿಯ ವಿತರಕರು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಬೇಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತಿದ್ದಾರೆ.
ಚಿಕ್ಕಬಳ್ಳಾಪುರ (ಮಾ.28): ಜಿಲ್ಲೆಯಲ್ಲಿ ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಗ್ರಾಹಕರ ಮನೆ ಬಾಗಿಲಿಗೆ ಸರಬರಾಜು ಮಾಡುವ ಸಂದರ್ಭದಲ್ಲಿ ಗ್ಯಾಸ್ ಏಜೆನ್ಸಿಯ ವಿತರಕರು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೆ ಗೂಡ್ಸ್ ಆಟೋಗಳ ಬದಲಾಗಿ ಪ್ರಯಾಣಿಕರ ಆಟೋಗಳನ್ನು ಬಳಕೆ ಮಾಡುತ್ತಿರುವುದು ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ಆತಂಕಕ್ಕೆ ಕಾರಣವಾಗಿದೆ.
ಮೊದಲೇ ಜಿಲ್ಲೆಯಲ್ಲಿ ಬೇಸಿಗೆ ಆರಂಭವಾಗುತ್ತಿದ್ದಂತೆ ಬಿಸಿಲಿನ ಧಗೆ ಜನರ ನೆತ್ತಿ ಸುಡುತ್ತಿದೆ. ಆದರೆ ಜಿಲ್ಲೆಯ ಅಡುಗೆ ಅನಿಲ ವಿತರಕರು ಸಿಲಿಂಡರ್‌ಗಳ ಪೂರೈಕೆ ವೇಳೆ ಸುರಕ್ಷತಾ ಕ್ರಮಗಳನ್ನು ಅನುಸರಿಸದೇ ಡೋರ್ ಡಿಲಿವರಿ ಮಾಡುವ ಹಣ ಉಳಿತಾಯಕ್ಕೆ ಅಡ್ಡದಾರಿ ಹಿಡಿದು ಸಿಲಿಂಡರ್‌ಗಳನ್ನು ಆಟೋಗಳಲ್ಲಿ ಕುರಿಗಳನ್ನು ತುಂಬಿಸಿದ ರೀತಿಯಲ್ಲಿ ತುಂಬಿ ಜನದಟ್ಟಣೆ ಪ್ರದೇಶಗಳಲ್ಲಿ ಸಂಚರಿಸುತ್ತಿರುವುದು ಸಾಮಾನ್ಯವಾಗಿದೆ.
ಮರೆಯಲಾಗದ ದುರ್ಘಟನೆ
ನಾಲ್ಕೈದು ವರ್ಷಗಳ ಹಿಂದೆ ಜಿಲ್ಲೆಯ ಚಿಂತಾಮಣಿಯ ನಾಯನಹಳ್ಳಿ ಸಮೀಪ ಎಸ್‌ಎಲ್‌ಎನ್ ಗ್ಯಾಸ್ ಏಜೇನ್ಸಿ ತನ್ನ ಗೋದಾಮಿನಲ್ಲಿ ದಾಸ್ತುನು ಮಾಡಿದ್ದ ನೂರಾರು ಸಿಲಿಂಡರ್‌ಗಳು ರಾತ್ರೋರಾತ್ರಿ ಸಿಡಿಮುದ್ದುಗಳಂತೆ ಸ್ಫೋಟಗೊಂಡ ಪ್ರಕರಣ ಇಡೀ ರಾಷ್ಟ್ರದ ಗಮನ ಸೆಳೆದಿತ್ತು. ಗೋದಾಮು ನಗರದ ಹೊರ ಭಾಗದಲ್ಲಿ ಇದ್ದ ಕಾರಣ ಸಿಲಿಂಡರ್‌ಗಳ ಸ್ಫೋಟ ಘಟನೆಯಲ್ಲಿ ಯಾವುದೇ ಸಾವುನೋವು ಸಂಭವಿಸಿರಲಿಲ್ಲ.
ಕುಟುಂಬಕ್ಕೆ 1500 ರೂ., 6 ಎಲ್ಪಿಜಿ ಸಿಲಿಂಡರ್ ಉಚಿತ: ಮತದಾರರಿಗೆ ಭರ್ಜರಿ ಗಿಫ್ಟ್!
ಗ್ಯಾಸ್ ಏಜೆನ್ಸಿಗಳು ಪ್ರಯಾಮಿಕರ ಆಟೋಗಳಲ್ಲಿ ಸಿಲಿಂಡರ್‌ಗಳನ್ನು ತುಂಬಿಕೊಂಡು ಪೂರೈಕೆ ಮಾಡಲು ಆಹಾರ ಹಾಗೂ ನಾಗರಿಕ ಸರಬರಾಜು ಇಲಾಖೆ ಅಧಿಕಾರಿಗಳ ಬೇಜವಾಬ್ದಾರಿಯೇ ಕಾರಣ ಎಂಬ ಆಕ್ರೋಶ ಜಿಲ್ಲೆಯ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗುತ್ತಿದೆ. ಯಾವುದೇ ಅವಘಡ ಸಂಭವಿಸುವ ಮುನ್ನ ಈ ರೀತಿ ಅಸುರಕ್ಷಿತವಾಗಿ ಸಿಲಿಂಡರ್‌ಗಳನ್ನು ಸಾಗಿಸುವ ಆಟೋಗಳಿಗೆ ಜಿಲ್ಲಾಡಳಿತ ಮೂಗುದಾರ ಹಾಕಬೇಕು ಎಂಬುದು ಸಾರ್ವಜನಿಕರ ಅಭಿಪ್ರಾಯ.
ಡೋರ್ ಡಿಲಿವರಿಗೆ ಹಣ ವಸೂಲಿ
ಗ್ಯಾಸ್ ಏಜೇನ್ಸಿಗಳು ಅಡುಗೆ ಅನಿಲದ ಸಿಲಿಂಡರ್‌ಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಂದು ಕೊಡಬೇಕು. ಆದರೆ ಜಿಲ್ಲೆಯ ಬಹುತೇಕ ಏಜೇನ್ಸಿಗಳು ಆಟೋ ಚಾಲಕರಿಗೆ ಡೋರ್ ಡಿಲಿವರಿ ಆಟೋ ಚಾಲಕರು ಸಿಲಿಂಡರ್‌ನ್ನು ಮನೆಗೆ ತಂದುಕೊಟ್ಟು ಗ್ರಾಹಕರಿಂದ 30, 40 ರು, ಶುಲ್ಕ ವಸೂಲಿ ಮಾಡುತ್ತಿರುವುದು ನಿಂತಿಲ್ಲ. ಇತ್ತೀಚೆಗಷ್ಟೇ ಜಿಲ್ಲೆಯ ಜಿಲ್ಲಾಧಿಕಾರಿ ಅಡುಗೆ ಸಿಲಿಂಡರ್ ಡೋರ್ ಡಿಲಿವರಿಗೆ ಶುಲ್ಕ ಪಾವತಿ ಮಾಡುವಂತಿಲ್ಲ ಎಂದು ಹೇಳಿದ್ದರು. ಆದರೂ ಡೀಸಿ ಆದೇಶಕ್ಕೂ ಕ್ಯಾರೆ ಎನ್ನದೇ ಗ್ಯಾಸ್ ಏಜೇನ್ಸಿಗಳು ಗ್ರಾಹಕರಿಂದ ಅಕ್ರಮವಾಗಿ ಶುಲ್ಕ ವಸೂಲಿ ಮಾಡುತ್ತಿವೆ. ಡೋರ್ ಡಿಲಿವರಿ ಹೆಸರಲ್ಲಿ ಏಜೆನ್ಸಿಗಳು ಶುಲ್ಕ ವಸೂಲಿ ಮಾಡುತ್ತಿದ್ದು ಇದಕ್ಕೆ ಸಂಬಂಧಪಟ್ಟಅಧಿಕಾರಿಗಳು ಕಡಿವಾಣ ಹಾಕಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.