ಕೊಡಗಿನ ರಾಜರ ಗದ್ದುಗೆಗೆ ಇಲ್ಲ ರಕ್ಷಣೆ: ನಿರ್ವಹಣೆ ಇಲ್ಲದೆ ಸೊರಗುತ್ತಿವೆ ರಾಜರ ಸಮಾಧಿ, ಉದ್ಯಾನವನ

By Govindaraj S  |  First Published May 30, 2024, 9:38 PM IST

ಸ್ವಾತಂತ್ರ್ಯ ಪೂರ್ವದಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಗಿದ್ದು, ಇಲ್ಲಿನ ಹಾಲೇರಿ ರಾಜವಂಶಸ್ಥರಿಂದ ಆಳಲ್ಪಟ್ಟಿದ್ದು ಗೊತ್ತೇ ಇದೆ. ಅದರ ಕುರುಹುಗಳಾಗಿ ಇಂದಿಗೂ ಮಡಿಕೇರಿಯ ಕೋಟೆ, ಹಾಗೆಯೇ ಅವರ ಸಮಾಧಿಗಳೂ ಅಥವಾ ಗದ್ದಿಗೆಗಳು ಇವೆ. 
 


ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಮೇ.30): ಸ್ವಾತಂತ್ರ್ಯ ಪೂರ್ವದಲ್ಲಿ ಕೊಡಗು ಪ್ರತ್ಯೇಕ ರಾಜ್ಯವಾಗಿದ್ದು, ಇಲ್ಲಿನ ಹಾಲೇರಿ ರಾಜವಂಶಸ್ಥರಿಂದ ಆಳಲ್ಪಟ್ಟಿದ್ದು ಗೊತ್ತೇ ಇದೆ. ಅದರ ಕುರುಹುಗಳಾಗಿ ಇಂದಿಗೂ ಮಡಿಕೇರಿಯ ಕೋಟೆ, ಹಾಗೆಯೇ ಅವರ ಸಮಾಧಿಗಳೂ ಅಥವಾ ಗದ್ದಿಗೆಗಳು ಇವೆ. ಇವೆಲ್ಲವೂ ಈಗ ರಾಜರ ಆಳ್ವಿಕೆಯ ಕುರುಹುಗಳು. ವಿಪರ್ಯಾಸವೆಂದರೆ ಇಂತಹ ಐತಿಹಾಸಿಕ ಆಳ್ವಿಕೆಯ ಸ್ಮಾರಕಗಳನ್ನು ರಕ್ಷಿಸಬೇಕಾಗಿರುವ ಜಿಲ್ಲಾಡಳಿತವಾಗಲಿ ಅಥವಾ ಪುರಾತತ್ವ ಇಲಾಖೆಯಾಗಲಿ ಇತ್ತ ಗಮನ ಹರಿಸದೆ ಅವುಗಳು ನಶಿಸಿಹೋಗುವ ಹಾದಿಗೆ ನೂಕುತ್ತಿರುವುದಕ್ಕೆ ಸಾರ್ವಜನಿಕರು, ಸ್ಮಾರಕಗಳ ಪ್ರಿಯರು ಆಕ್ರೋಶ ವ್ಯಕ್ತಪಡಿಸುವಂತೆ ಆಗಿದೆ. 

Tap to resize

Latest Videos

ಪ್ರತ್ಯೇಕ ರಾಜ್ಯವಾಗಿದ್ದ ಕೊಡಗನ್ನು 1770 ರಿಂದ ಆಳ್ವಿಕೆ ಮಾಡಿದ್ದ ರಾಜರು ಕಾಲವಾದ ನಂತರ 19 ನೇ ಶತಮಾನದಲ್ಲಿ ಬಂದ ದೊಡ್ಡವೀರರಾಜೇಂದ್ರ ಅವರು ಅದಕ್ಕೂ ಮೊದಲು ಮೃತಪಟ್ಟಿದ್ದ ರಾಜರಾದ ಲಿಂಗರಾಜ ಮತ್ತು ಆತನ ಮಗ ಹಾಗೂ ಪತ್ನಿಯ ಸಮಾಧಿಗಳನ್ನು ವಿಶೇಷವಾದ ಶೈಲಿಯಲ್ಲಿ ನಿರ್ಮಿಸಿದ್ದರು. ಆದರೆ ಈಗ ಅವುಗಳನ್ನು ನಿರ್ವಹಣೆ ಮಾಡುವಲ್ಲಿ ಸಂಬಂಧಿಸಿದ ಇಲಾಖೆಗಳು ಸೋತಿವೆ ಎನ್ನುವುದು ಸ್ಮಾರಕಗಳನ್ನು ನೋಡಿದಾಗ ಸ್ಪಷ್ಟವಾಗಿ ಗೋಚರವಾಗುತ್ತದೆ. ಸ್ಮಾರಕಗಳ ಗೋಡೆ, ಗುಂಬಜ್ ಮೇಲೆ ಗಿಡಗಂಟಿಗಳು ಬೆಳೆಯುತ್ತಿವೆ. ಇದರಿಂದಾಗಿ ಸ್ಮಾರಕಗಳ ಗೋಡೆಗಳು ಬಿರುಕು ಬಿಡಲಾರಂಭಿಸಿದ್ದು, ಶಿಥಿಲಗೊಳ್ಳುತ್ತಿವೆ. 

ಚಾಮರಾಜನಗರದಲ್ಲಿ ಸದ್ದಿಲ್ಲದೆ ಕೆಎಸ್‌ಆರ್‌ಟಿಸಿ ಬಸ್ ಪ್ರಯಾಣ ದರ ಏರಿಕೆ: ಸರ್ಕಾರದ ವಿರುದ್ಧ ಆಕ್ರೋಶ

ಜೊತೆಗೆ ಕೊಡಗಿನಲ್ಲಿ ಸಹಜವಾಗಿಯೇ ಎತ್ತೇಚ್ಛವಾಗಿ ಮಳೆ ಸುರಿಯುವುದರಿಂದ ಸ್ಮಾರಕಗಳ ಗೋಡೆಗಳಲ್ಲೆಲ್ಲಾ ಪಾಚಿ ಬೆಳೆದು ಎಲ್ಲವೂ ಪಾಳುಬಿದ್ದ ಮನೆಗಳೇನೋ ಎನ್ನುವಂತೆ ಆಗುತ್ತಿವೆ. ಐತಿಹಾಸಿಕ ಸ್ಮಾರಕಗಳು ಇಂತಹ ಸ್ಥಿತಿ ತಲುಪಿರುವುದಕ್ಕೆ ಇತಿಹಾಸ ಪ್ರಿಯರು, ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇದು ಒಂದೆಡೆಯಾದರೆ ಮತ್ತೊಂದೆಡೆ ಈ ಸ್ಮಾರಕದ ಸುತ್ತ ಇರುವ ಉದ್ಯಾನವನವೂ ಬಹುತೇಕ ಹಾಳಾಗಿದೆ. ಸರಿಯಾದ ನಿರ್ವಹಣೆ ಇಲ್ಲದೆ ವಿವಿಧ ಅಲಂಕಾರಿಕ ಗಿಡಗಳು ಹಾಳಾಗಿವೆ. ಜೊತೆಗೆ ಉದ್ಯಾನವನದ ಅಲ್ಲಲ್ಲಿ ಮಕ್ಕಳಿಗಾಗಿ ನಿರ್ಮಿಸಿದ್ದ ಆಟಿಕೆ ಉದ್ಯಾನವೂ ಬಹುತೇಕ ಹಾಳಾಗಿ ಹೋಗಿವೆ. ಬಹುತೇಕ ಆಟಿಕೆಗಳು ತುಕ್ಕು ಹಿಡಿದು ಮುರಿದು ಹೋಗಿವೆ. 

ಇವೆಲ್ಲವೂ ಸ್ಮಾರಕ ನೋಡಲು ಬರುವ ಪ್ರವಾಸಿಗರಿಗೆ ನಿರಾಸೆ ಮೂಡಿಸಿವೆ. ಅದರಲ್ಲೂ ಪ್ರವಾಸಿಗರೊಂದಿಗೆ ಬರುವ ಚಿಕ್ಕಪುಟ್ಟ ಮಕ್ಕಳು ಯಾವುದೇ ಆಟಿಕೆಗಳಲ್ಲಿ ಆಟವಾಡುವುದಕ್ಕೆ ಅವಕಾಶವೇ ಇಲ್ಲದಂತೆ ಆಗಿದೆ. ಒಟ್ಟಿನಲ್ಲಿ ಕೊಡಗಿನ ರಾಜರ ಆಳ್ವಿಕೆಯ ಐತಿಹಾಸಿಕ ಸ್ಮಾರಕಗಳು ನಶಿಸುವ ಸ್ಥಿತಿಗೆ ತಲುಪುತ್ತಿದ್ದು ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಗಮನ ಹರಿಸಿ ಸ್ಮಾರಕಗಳನ್ನು ರಕ್ಷಿಸಬೇಕು ಎಂದು ಜನರು ಆಗ್ರಹಿಸುತ್ತಿದ್ದಾರೆ. ಈ ಕುರಿತು ಮಾತನಾಡಿರುವ ಕೊಡವ ಮಕ್ಕಡ ಕೂಟದ ಸಂಸ್ಥಾಪಕ ಅಧ್ಯಕ್ಷ ಬೊಳ್ಳಜ್ಜೀರ ಬಿ. ಅಯ್ಯಪ್ಪ ಕೊಡಗಿನ ಇತಿಹಾಸವನ್ನು ಸಾರುತ್ತಿರುವ ಐತಿಹಾಸಿಕ ಸ್ಮಾರಕಗಳನ್ನು ನಿರ್ವಹಣೆ ಮಾಡುವುದರಲ್ಲಿ ಅಧಿಕಾರಿಗಳು ಹಿಂದೇಟು ಹಾಕುತ್ತಿದ್ದಾರೆ.

ಪರೀಕ್ಷೆ ಮುಗಿದು ಮೂರೇ ಗಂಟೆಯಲ್ಲಿ ಫಲಿತಾಂಶ ಪ್ರಕಟ: ವಿಟಿಯು ವಿಶ್ವವಿದ್ಯಾಲಯದ ಹೊಸ ದಾಖಲೆ

ಸ್ಮಾರಕಕಗಳು ಪುರಾತತ್ವ ಇಲಾಖೆಗೆ ಸೇರಿದ್ದು ಇಲಾಖೆಯು ಹೆಚ್ಚಿನ ಜವಾಬ್ದಾರಿ ವಹಿಸಿ ಸ್ಮಾರಕಗಳ ರಕ್ಷಣೆಗೆ ಮುಂದಾಗಬೇಕಾಗಿತ್ತು. ಜೊತೆಗೆ ಉದ್ಯಾನವನದ ಅಭಿವೃದ್ಧಿಗೆ ತೋಟಗಾರಿಕೆ ಇಲಾಖೆ ಕ್ರಮ ಕೈಗೊಳ್ಳಬೇಕಾಗಿತ್ತು. ಆದರೆ ಅದ್ಯಾವುದನ್ನು ಮಾಡುತ್ತಿಲ್ಲ. ಸ್ಮಾರಕದ ವೀಕ್ಷಣೆಗೆ ಬರುವ ಪ್ರತಿ ಪ್ರವಾಸಿಗರಿಗೆ 10 ರೂಪಾಯಿ ಶುಲ್ಕ ಹಾಕಲಾಗುತ್ತಿದೆ. ಅವರಿಂದ ಸಂಗ್ರಹಿಸಿದ ಈ ಹಣದಿಂದಲಾದರೂ ಇದನ್ನು ಸಾಕಷ್ಟು ನಿರ್ವಹಣೆ ಮಾಡಲು ಸಾಧ್ಯವಿದೆ. ಆದರೆ ಸಂಬಂಧಿಸಿದ ಇಲಾಖೆಗಳು ಏಕೆ ಇಷ್ಟೊಂದು ನಿರ್ಲಕ್ಷ್ಯ ವಹಿಸವೆ ಎನ್ನುವುದು ಗೊತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ. ಒಟ್ಟಿನಲ್ಲಿ ಕೊಡಗಿನ ಐತಿಹಾಸಿಕ ಸ್ಮಾರಕಗಳ ರಕ್ಷಣೆ ಮಾಡಲಿ ಎನ್ನುವುದು ನಮ್ಮ ಆಶಯವೂ ಹೌದು.

click me!