ಕೊಡಗು, ಮಂಡ್ಯ, ಹಾಸನಕ್ಕಿಲ್ಲ ಮಂತ್ರಿಗಿರಿ

By Kannadaprabha NewsFirst Published Aug 21, 2019, 9:42 AM IST
Highlights

ಯಡಿಯೂರಪ್ಪ ಸಂಪುಟದಲ್ಲಿ ಹಳೇ ಮೈಸೂರು ಭಾಗಕ್ಕೆ ಯಾವುದೇ ಪ್ರಾತಿನಿಧ್ಯ ಸಿಕ್ಕಿಲ್ಲ.  ಮೂರು ಜಿಲ್ಲೆಗಳಲ್ಲಿ ಓರ್ವ ವ್ಯಕ್ತಿಗೂ ಸಚಿವ ಸ್ಥಾನ ಸಿಕ್ಕಿಲ್ಲ. 

ಮೈಸೂರು [ಆ.21]: ಒಂದು ಕಾಲಕ್ಕೆ ರಾಜ್ಯ ಸಚಿವ ಸಂಪುಟದಲ್ಲಿ ಅವಿಭಜಿತ ಮೈಸೂರು ಜಿಲ್ಲೆಗೆ ಸಿಂಹಪಾಲು. ಆದರೆ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಯಾರೊಬ್ಬರಿಗೂ ಸಚಿವ ಸ್ಥಾನ ಸಿಕ್ಕಿಲ್ಲ! ಮಾತ್ರವಲ್ಲ ಹಳೇ ಮೈಸೂರು ಸೀಮೆಯಲ್ಲಿ ಬರುವ ಮಂಡ್ಯ, ಹಾಸನ, ರಾಮನಗರ, ಬೆಂಗಳೂರು ಗ್ರಾಮಾಂತರ, ಕೊಡಗು ಜಿಲ್ಲೆಗಳಿಗೂ ಪ್ರಾತಿನಿಧ್ಯ ಸಿಕ್ಕಿಲ್ಲ.

ಮೈಸೂರು-ಚಾಮರಾಜನಗರ ಜಿಲ್ಲೆಗಳಲ್ಲೇ ಬಿಜೆಪಿಯ ನಾಲ್ವರು ಶಾಸಕರಿದ್ದಾರೆ. ಕೃಷ್ಣರಾಜ ಕ್ಷೇತ್ರದಿಂದ ಎಸ್.ಎ. ರಾಮದಾಸ್, ಚಾಮರಾಜದಿಂದ ಎಲ್.ನಾಗೇಂದ್ರ, ನಂಜನ ಗೂಡಿನಿಂದ ಬಿ.ಹರ್ಷವರ್ಧನ್ ಹಾಗೂ ಗುಂಡ್ಲುಪೇಟೆ ಯಿಂದ ಸಿ.ಎನ್.ನಿರಂಜನಕುಮಾರ್ ಶಾಸಕರಾಗಿ ಆಯ್ಕೆಯಾಗಿದ್ದಾರೆ. 

ಯಡಿಯೂರಪ್ಪ ಕ್ಯಾಬಿನೆಟ್ ರೆಡಿ: ಇಲ್ಲಿದೆ ನೂತನ ಸಚಿವರ ಸಂಭಾವ್ಯ ಖಾತೆ

ಈ ಪೈಕಿ ಈ ಹಿಂದೆ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ರಾಮದಾಸ್ ನಾಲ್ಕನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉಳಿದ ಮೂವರು ಪ್ರಥಮ ಬಾರಿ ವಿಧಾನಸಭೆಗೆ ಆಯ್ಕೆಯಾದವರು. ಯಡಿಯೂರಪ್ಪ ನೇತೃತ್ವದ ಸರ್ಕಾರದಲ್ಲಿ ಕಾಂಗ್ರೆಸ್- ಜೆಡಿಎಸ್‌ನಿಂದ ಬಂದಿರುವ  ಅತೃಪ್ತರನ್ನು ತೃಪ್ತಿಪಡಿಸಬೇಕಾದ ಹೊಣೆಗಾರಿಕೆ ಇರುವುದರಿಂದ ಈ ನಾಲ್ವರಲ್ಲಿ ಒಬ್ಬರಿಗೆ ಅಂದರೆ ರಾಮದಾಸ್ ಅವರಿಗೆ ಅವಕಾಶ ಸಿಗಬಹುದು ಎಂದು ಎಣಿಸಲಾಗಿತ್ತು. 

ಆದರೆ ಬ್ರಾಹ್ಮಣ ಕೋಟದಲ್ಲಿ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಸ್ಪೀಕರ್ ಸ್ಥಾನ, ಎಸ್.ಸುರೇಶ್ ಕುಮಾರ್ ಅವರಿಗೆ ಬ್ರಾಹ್ಮಣ ಕೋಟಾದಲ್ಲಿ ಸಂಪುಟದಲ್ಲಿ ಅವಕಾಶ ನೀಡಲಾಗಿದೆ. ಹೀಗಾಗಿ ಬ್ರಾಹ್ಮಣರಾದ ರಾಮದಾಸ್ ಅವರಿಗೆ ಅವಕಾಶ ತಪ್ಪಿದೆ ಎಂದು ಹೇಳಲಾಗಿದೆ. ಸುಪ್ರೀಂ ಕೋರ್ಟಿನಲ್ಲಿ ಅನರ್ಹತೆ ಪ್ರಕರಣ ಇತ್ಯರ್ಥವಾದ ನಂತರ ವಿಶ್ವನಾಥ್‌ರನ್ನು ವಿಧಾನ ಪರಿಷತ್ ಸದಸ್ಯರಾಗಿ ಮಾಡಿ, ಮಂತ್ರಿ ಸ್ಥಾನ ನೀಡುವ ಸಾಧ್ಯತೆ ಇದೆ.

click me!