ಮಂಡ್ಯ: ಕಾವೇರಿ ನದಿ ತಡೆಗೋಡೆಗೆ ಪ್ರಸ್ತಾವನೆ ಸಲ್ಲಿಕೆ

By Kannadaprabha NewsFirst Published Aug 21, 2019, 8:53 AM IST
Highlights

ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಯ ಎರಡೂ ಬದಿಗೂ ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ. ನದಿಯ ಎರಡೂ ಬದಿಯಲ್ಲಿ ಸುಮಾರು ಎರಡು ಕಿ.ಮೀ ಉದ್ದ ತಡೆಗೋಡೆ ನಿರ್ಮಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. 75 ಕೋಟಿ ರು. ಅಂದಾಜು ಯೋಜನಾ ವರದಿಯೂ ಸಲ್ಲಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಟಿ.ಯೋಗೇಶ್‌ ತಿಳಿಸಿದ್ದಾರೆ.

ಮಂಡ್ಯ(ಆ.21): ಶ್ರೀರಂಗಪಟ್ಟಣ ವ್ಯಾಪ್ತಿಯಲ್ಲಿನ ಕಾವೇರಿ ನದಿಗೆ ತಡೆಗೋಡೆ ನಿರ್ಮಾಣ ಮಾಡುವ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಟಿ.ಯೋಗೇಶ್‌ ಮಂಗಳವಾರ ತಿಳಿಸಿದರು.

ಪಟ್ಟಣಕ್ಕೆ ಭೇಟಿ ನೀಡಿ, ಪರಂಪರೆ ಸಮಿತಿಯ ನೇತೃತ್ವ ವಹಿಸಿದ್ದ ವೇಳೆ ಸ್ಮಾರಕಗಳನ್ನು ವೀಕ್ಷಿಸಿ ಮಾತನಾಡಿದ ಅಪರ ಜಿಲ್ಲಾಧಿಕಾರಿಗಳು, ಶ್ರೀರಂಗಪಟ್ಟಣದಲ್ಲಿ ಕಾವೇರಿ ನದಿಯ ಎರಡೂ ಬದಿಗೂ ತಡೆಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ. ನದಿಯ ಎರಡೂ ಬದಿಯಲ್ಲಿ ಸುಮಾರು ಎರಡು ಕಿ.ಮೀ ಉದ್ದ ತಡೆಗೋಡೆ ನಿರ್ಮಿಸಲು ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆಯನ್ನೂ ಸಲ್ಲಿಸಲಾಗಿದೆ. 75 ಕೋಟಿ ರು. ಅಂದಾಜು ಯೋಜನಾ ವರದಿಯೂ ಸಲ್ಲಿಕೆಯಾಗಿದೆ ಎಂದರು.

ಸ್ಮಾರಕಗಳ ರಕ್ಷಣೆಗೆ ಅಗತ್ಯ ಕ್ರಮ:

ಶ್ರೀರಂಗಪಟ್ಟಣದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಪಾರಂಪರಿಕ ಸ್ಮಾರಕಗಳ ರಕ್ಷಣೆಗೆ ಅಗತ್ಯ ಕ್ರಮ ಜರುಗಿಸಲಾಗುವುದು. ತೂಗು ಸೇತುವೆ, ವಸಂತ ಕೊಳ, ಮ್ಯೂಸಿಯಂ, ರಂಗನಾಥಸ್ವಾಮಿ ದೇಗುಲದ ಕಲ್ಯಾಣಿ, ವೆಲ್ಲೆಸ್ಲಿ ಸೇತುವೆ, ಗುಲಾಂ ಅಲಿಖಾನ್‌ ಗುಂಬ್ಚಿ, ಬಂಗಾರದೊಡ್ಡಿ ಅಕ್ವಡಕ್‌ ಹಾಗೂ ಮುಮ್ಮಡಿ ಕೃಷ್ಣರಾಜ ಒಡೆಯರ್‌ ಅವರ ತಾಯಿ ಕೆಂಪು ನಂಜಮ್ಮಣ್ಣಿ ಅವರ ಸಮಾಧಿ ಸೇರಿದಂತೆ ಇತರ ಸ್ಥಳಗಳನ್ನು ತಂಡ ಇಂದು ಭೇಟಿ ನೀಡಿ ಪರಿಶೀಲಿಸಿದೆ. ಕೆಲವು ಸ್ಮಾರಕಗಳು ಅತಿಕ್ರಮಕ್ಕೆ ಒಳಗಾಗಿವೆ. ಸಂಬಂಧಿಸಿದ ಇಲಾಖೆಗೆ ವರದಿ ಸಲ್ಲಿಸಲಾಗುವುದು. ಕೆಲವು ರಚನೆಗಳು ಮೈಸೂರು ರಾಜ ವಂಶಸ್ಥರಿಗೆ ಸೇರಿವೆ. ಈ ಬಗ್ಗೆ ಹಾಲಿ ರಾಜರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಶ್ರೀರಂಗನಾಥಸ್ವಾಮಿ ದೇವಾಲಯದ ಬಳಿಯ ವಸಂತಕೊಳಕ್ಕೆ ಟೈಲ್ಸ್‌ ಹಾಕಿಸಿ ಮೂಲ ಪರಂಪರೆಯನ್ನು ನಾಶಪಡಿಸಲಾಗಿದೆ. ಪ್ರತಿ ಶುಕ್ರವಾರ ರಂಗನಾಯಕಿ ಅಮ್ಮನಿಗೆ ಧರಿಸಲು ಅಲಮೇಲಮ್ಮ ಅವರು ನೀಡಿರುವ ಮೂಗುತಿಯನ್ನು ಧರಿಸುವಂತೆ ಸೂಚಿಸಬೇಕು ಎಂದು ತೈಲೂರು ವೆಂಕಟಕೃಷ್ಣ ಹೇಳಿದರು.

ವೆಲ್ಲೆಸ್ಸಿ ಸೇತುವೆ ಬಿರುಕು:

ಕಾವೇರಿ ಪ್ರವಾಹ ಬಂದು ನಿಂತ ನಂತರ ವೆಲ್ಲೆಸ್ಸಿ ಸೇತುವೆಯ ಅಕ್ಕ ಪಕ್ಕದಲ್ಲಿ ಬಿರುಕು ಕಾಣಿಸಿಕೊಂಡಿದೆ. ಸೇತುವೆ ಅಡ್ಡಲಾಗಿ ನಿಂತಿರುವ ಕಂಬಗಳಿಗೆ ಮರದ ತುಂಡುಗಳ ದಿಮ್ಮಿಗಳು, ತ್ಯಾಜ್ಯ ವಸ್ತುಗಳು ಸಿಕ್ಕಿಹಾಕಿಕೊಂಡಿದ್ದು ಸೇತುವೆಗೆ ಅಪಾಯ ಎದುರಾಗಲಿದೆ. ಕಸ, ತ್ಯಾಜ್ಯಗಳನ್ನು ತೆಗೆದು ದುರಸ್ತಿ ಕಾರ್ಯಮಾಡುವಂತೆ ಪುರಾತತ್ವ ಹಾಗೂ ಪುರಸಭೆ ಅಧಿಕಾರಿಗಳಿಗೆ ಸೂಚಿಸಿದರು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಅಭಿವೃದ್ಧಿಗೆ ಮನವಿ:

ಗುಜರಾತಿನ ಸಬರಾಮತಿ ನದಿ ಅಭಿವೃದ್ಧಿಯಂತೆ ಪಟ್ಟಣದ ಸುತ್ತಲು ಹಾಗೂ ವೆಲ್ಲೆಸ್ಲಿ ಸೇತುವೆಯ ಬಳಿ ಅಭಿವೃದ್ಧಿ ಪಡಿಸಬೇಕು. ಪಟ್ಟಣದಲ್ಲಿರುವ ಸ್ಮಾರಕ ಸಂರಕ್ಷಣೆಗೆ ವಿಚಾರದಲ್ಲಿ ಪಟ್ಟಣ ನಿವಾಸಿಗಳಲ್ಲಿ ಯಾವುದೇ ಅಭ್ಯಂತರವಿಲ್ಲ ಆದರೆ ಇಲ್ಲಿನ ನಿವಾಸಿಗಳು ಮನೆಕಟ್ಟಲು ಹಾಗೂ ಮನೆ ದುರಸ್ತಿ ಪಡೆಸಿಕೊಳ್ಳಲು ಪುರಾತತ್ವ ಇಲಾಖೆಯಿಂದ ಅನುಮತಿ ಸಿಗದೆ ತುಂಬಾ ತೊಂದರೆ ಪಡುತ್ತಿದ್ದಾರೆ. ಇದನ್ನು ಸಡಿಲಗೊಳಿಸಬೇಕು ಎಂದು ಪುರಸಭೆ ಸದಸ್ಯ ದಿನೇಶ್‌ ಅಪರ ಜಿಲ್ಲಾಧಿಕಾರಿ ಅವರಿಗೆ ಮನವಿ ಮಾಡಿದರು.

ಮಂಡ್ಯ: ಪಿಒಪಿ, ಬಣ್ಣ ಲೇಪಿತ ಗಣೇಶ ಮೂರ್ತಿಗಳ ಬಳಕೆ ನಿಷೇಧ

ಪಾಂಡವಪುರ ಉಪ ವಿಭಾಗಾಧಿಕಾರಿ ಶೈಲಜಾ, ತಹಶೀಲ್ದಾರ್‌ ಡಿ.ನಾಗೇಶ್‌, ಪರಂಪರೆ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಮಠಪತಿ, ಕ್ಯೂರೇಟರ್‌ ಎನ್‌.ಎಲ್‌.ಗೌಡ, ಸಮಿತಿಯ ಸದಸ್ಯರಾದ ಡಾ.ಬಿ.ಸುಜಯಕುಮಾರ್‌, ಬಸಪ್ಪ ನೆಲಮಾಕನಹಳ್ಳಿ, ಡಾ.ಮಮತಾ, ಎಂಜಿನಿಯರ್‌ ರೇವಣ್ಣ ಇತರರು ಇದ್ದರು.

click me!