Bannerghatta Biological Park: 8 ನೀರಾನೆ ವಾಸ, 3-4 ನೀರಾನೆ ಸಾಕುವಷ್ಟು ಮಾತ್ರ ಜಾಗ ಲಭ್ಯ!

By Kannadaprabha News  |  First Published Feb 7, 2022, 9:12 AM IST

*ಬನ್ನೇರುಘಟ್ಟದಲ್ಲಿ ನೀರಾನೆಗಳಿಗಿಲ್ಲ ಜಾಗ!
*ಬಯಾಲಾಜಿಕಲ್ ಪಾರ್ಕಲ್ಲಿ 8 ನೀರಾನೆ ವಾಸ 
*3-4 ನೀರಾನೆ ಸಾಕುವಷ್ಟುಮಾತ್ರ ಜಾಗ ಲಭ್ಯ
*ಸ್ಥಳವಿಲ್ಲದೆ ನೀರಾನೆಗಳ ನಡುವೆಯೇ ಕಚ್ಚಾಟ 


ಬೆಂಗಳೂರು (ಫೆ. 07):  ನಗರದ ಬನ್ನೇರುಘಟ್ಟಜೈವಿಕ ಉದ್ಯಾನವನದಲ್ಲಿ ನೀರಾನೆಗಳ (ಹಿಪ್ಪೋಪೊಟಮಸ್‌) ಸಂಖ್ಯೆ ಹೆಚ್ಚಾಗಿದ್ದು, ಅವುಗಳ ರಕ್ಷಣೆ ಮಾಡುವುದು ಸಿಬ್ಬಂದಿಗೆ ದೊಡ್ಡ ಸವಾಲಿನ ಕೆಲಸವಾಗಿ ಪರಿಣಮಿಸಿದೆ. ಬನ್ನೇರುಘಟ್ಟಉದ್ಯಾನದಲ್ಲಿ 3- 4 ನೀರಾನೆಗಳು ಮಾತ್ರ ವಾಸಿಸುವಷ್ಟುಜಾಗ ನಿರ್ಮಿಸಲಾಗಿದೆ. ಆದರೆ, ಅವುಗಳ ಸಂಖ್ಯೆ ಹೆಚ್ಚಾಗಿ ಪ್ರಸ್ತುತ 8 ನೀರಾನೆಗಳಿದ್ದು (3 ಹೆಣ್ಣು ಮತ್ತು 5 ಗಂಡು) ಒತ್ತಡದಲ್ಲಿ ಪ್ರದೇಶದಲ್ಲಿ ಜೀವಿಸುತ್ತಿವೆ.

ಕಡಿಮೆ ಸ್ಥಳಾವಕಾಶದಲ್ಲಿ ಹೆಚ್ಚು ನೀರಾನೆಗಳು ಇರುವುದರಿಂದ ಕೆಲ ಸಂದರ್ಭಗಳಲ್ಲಿ ಅವುಗಳ ನಡುವೆ ಕಚ್ಚಾಟ ನಡೆಯುತ್ತಿದೆ. ಇದೇ ಕಾರಣದಿಂದ 2011 ಮತ್ತು 2016ರಲ್ಲಿ ಎರಡು ನೀರಾನೆ ಮರಿಗಳು ಸಾವನ್ನಪ್ಪಿದ್ದವು. ಹೀಗಾಗಿ ಅವುಗಳ ರಕ್ಷಣೆ ಮಾಡುವುದು ಸಿಬ್ಬಂದಿಗೆ ದೊಡ್ಡ ಸವಾಲಿನ ಕೆಲಸವಾಗಿ ಪರಿಣಮಿಸಿದೆ ಎಂದು ಮೃಗಾಲಯದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.‌

Latest Videos

undefined

ಇದನ್ನೂ ಓದಿ: ಪಾರ್ಕ್‌ಗಾಗಿ ಜಾರಕಬಂಡೆ ಮೀಸಲು ಅರಣ್ಯ ಬಲಿ? : ಪರಿಸರ ಪ್ರೇಮಿಗಳ ವಿರೋಧ!

ಹಂಪಿಗೆ ಎರಡು ನೀರಾನೆ: ಮುಂದಿನ ಎರಡು ವರ್ಷದಲ್ಲಿ ಇವುಗಳ ಸಂಖ್ಯೆಯೂ ದುಪ್ಪಟ್ಟಾಗಲಿದೆ. ಆದ್ದರಿಂದ ಹೊಸದಾಗಿ ಜನಿಸುವ ನೀರಾನೆಗಳಿಗೆ ಸ್ಥಳಾವಕಾಶ ಮಾಡಿಕೊಡಬೇಕಾಗಿದೆ. ಇದೇ ಕಾರಣದಿಂದ ಬನ್ನೇರುಘಟ್ಟದಲ್ಲಿ ಇರುವ ಒಟ್ಟು ಎಂಟು ನೀರಾನೆಗಳಲ್ಲಿ ಎರಡು ನೀರಾನೆಗಳನ್ನು ಹಂಪಿಯ ಮೃಗಾಲಯಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ. ಈ ಸಂಬಂಧ ಅಲ್ಲಿಯ ಮೃಗಾಲಯದ ನಿರ್ದೇಶಕರಿಗೆ ಮನವಿ ಮಾಡಲಾಗಿದೆ. ಆದರೂ, ಈವರೆಗೂ ಸ್ಥಳಾಂತರಿಸುವ ಪ್ರಕ್ರಿಯೆ ಪ್ರಾರಂಭವಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇತರೆ ಮೃಗಾಲಯಗಳಿಗೂ ಮನವಿ: ಶಿವಮೊಗ್ಗದ ಮೃಗಾಲಯದಲ್ಲಿ ನೀರಾನೆಗಳು ನೆಲೆಸಲು ಉತ್ತಮ ವಾತಾವರಣವಿದೆ. ಇದೇ ಕಾರಣದಿಂದ ಹೆಚ್ಚುವರಿಯಾಗಿರುವ ನೀರಾನೆಗಳನ್ನು ತೆಗೆದುಕೊಳ್ಳುವಂತೆ ಶಿವಮೊಗ್ಗ ಮೃಗಾಲಯಕ್ಕೆ ಮನವಿ ಮಾಡಲಾಗಿದೆ. ಆದರೆ, ಅಲ್ಲಿಯ ಅಧಿಕಾರಿಗಳು ಮೈಸೂರು ಮೃಗಾಲಯದಿಂದ ಪಡೆದುಕೊಳ್ಳುವುದಕ್ಕೆ ಮುಂದಾಗಿದ್ದಾರೆ ಎಂದು ಅಧಿಕಾರಿಗಳು ವಿವರಿಸಿದರು.

ಒಂದು ವರ್ಷದ ಹಿಂದೆ ಉತ್ತರ ಪ್ರದೇಶದ ಲಕ್ನೋ ಮೃಗಾಲಯಕ್ಕೆ ನೀರಾನೆಯನ್ನು ಹಸ್ತಾಂತರಿಸಲು ಕೇಂದ್ರ ಮೃಗಾಲಯ ಪ್ರಾಧಿಕಾರ ಅನುಮತಿ ನೀಡಿತ್ತು. ಆದರೆ, ಲಕ್ನೋದ ಅಧಿಕಾರಿಗಳು ಈ ಬಗ್ಗೆ ಹೆಚ್ಚು ಆಸಕ್ತಿ ತೋರಲಿಲ್ಲ. ಈ ನಡುವೆ ನೀರಾನೆಗಳ ಸಂಖ್ಯೆ ಹೆಚ್ಚಾಗಿದೆ. ಈ ಬೆಳವಣಿಗೆ ಅವುಗಳ ಜೀವಕ್ಕೂ ಹಾನಿಯಾಗುವ ಸಾಧ್ಯತೆಯಿದೆ ಎಂದು ಬನ್ನೇರುಘಟ್ಟಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ವಿಪಿನ್‌ ಸಿಂಗ್‌ ಮಾಹಿತಿ ನೀಡಿದರು.

ಇದನ್ನೂ ಓದಿ: Uttara Kannada: 350ಕ್ಕೂ ಹೆಚ್ಚು ಅಡಿಕೆ, ಬಾಳೆ ಗಿಡಗಳನ್ನು ಕಡಿದು ಹಾಕಿದ ಅರಣ್ಯ ಇಲಾಖೆ ಸಿಬ್ಬಂದಿ

ರಿಲಾಯನ್ಸ್‌ ಝೂಗೆ ನೀಡಲು ವಿರೋಧ: ಅರಣ್ಯ ಮತ್ತು ವನ್ಯಜೀವಿಗಳ ಸಂರಕ್ಷಣಾ ಕಾರ್ಯವನ್ನು ಖಾಸಗಿ ಸಂಸ್ಥೆಗಳಿಗೆ ವಹಿಸಲು ಕೇಂದ್ರ ಸರ್ಕಾರ ನಿಯಮಗಳನ್ನು ರೂಪಿಸಿದೆ. ಗುಜರಾತ್‌ನಲ್ಲಿರುವ ರಿಲಾಯನ್ಸ್‌ ಸಂಸ್ಥೆ ನಿರ್ವಹಿಸುತ್ತಿರುವ ಮೃಗಾಲಯಕ್ಕೆ 5 ನೀರಾನೆಗಳ ಬೇಡಿಕೆ ಇದೆ. ಇದಕ್ಕೆ ಕೇಂದ್ರ ಮೃಗಾಲಯ ಪ್ರಾಧಿಕಾರ ಅನುಮತಿ ನೀಡಿದೆ. ಆದರೆ, ವನ್ಯಜೀವಿ ಪ್ರೇಮಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ರಾಜ್ಯ ಸರ್ಕಾರ ಅನುಮತಿ ನೀಡಿಲ್ಲ ಎಂದು ವನಶ್ರೀ ವಿವರಿಸಿದರು.

ಹಂಪಿಯ ಮೃಗಾಲಯಕ್ಕೆ ನೀರಾನೆ ಬಂದಲ್ಲಿ ಸಾಕಷ್ಟುಪ್ರವಾಸಿಗರನ್ನು ಆಕರ್ಷಿಸಲಿದೆ. ಬನ್ನೇರುಘಟ್ಟಉದ್ಯಾನದಲ್ಲಿರುವ ಎರಡು ನೀರಾನೆಗಳನ್ನು ತರಿಸಿಕೊಳ್ಳಲು ತೀರ್ಮಾನಿಸಲಾಗಿದೆ. ಆದರೆ, ಅವುಗಳ ನೆಲೆಸಲು ಸೂಕ್ತ ರೀತಿಯ ಸ್ಥಳಾವಕಾಶ ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಮುಂದಿನ ಎರಡು ತಿಂಗಳ ಬಳಿಕ ನೀರಾನೆಗಳನ್ನು ಕರೆತರುತ್ತೇವೆ.

-ಕಿರಣ್‌. ಹಂಪಿ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ.

ಬನ್ನೇರುಘಟ್ಟಮೃಗಾಲಯದಲ್ಲಿ ನಿಗದಿತ ಸಂಖ್ಯೆಗಿಂತ ಹೆಚ್ಚು ನೀರಾನೆಗಳಿವೆ. ಇದರಿಂದ ಒತ್ತಡ ಹೆಚ್ಚಾಗುತ್ತಿದ್ದು, ಅವುಗಳ ನಡುವೆ ಕಚ್ಚಾಟಕ್ಕೆ ಕಾರಣವಾಗುತ್ತಿದೆ. ಇತರೆ ಮೃಗಾಲಯಗಳಿಗೆ ಹಸ್ತಾಂತರಿಸಲು ಪ್ರಯತ್ನಿಸಲಾಗುತ್ತಿದೆ.

-ವನಶ್ರೀ ವಿಪಿನ್‌ ಸಿಂಗ್‌, ಬನ್ನೇರುಘಟ್ಟಪಾರ್ಕ್ ಕಾರ್ಯನಿವಾರ್ಹಕ ನಿರ್ದೇಶಕಿ

ರಮೇಶ್‌ ಬನ್ನಿಕುಪ್ಪೆ, ಕನ್ನಡಪ್ರಭ ವಾರ್ತೆ

click me!