ಭದ್ರಾ ನಾಲೆಯಲ್ಲಿ ಅಳವಡಿಸಿದ ರೈತರ ಎಲ್ಲಾ ನೀರಿನ ಮೋಟಾರುಗಳನ್ನು ತೆರವುಗೊಳಿಸಲಾಗುತ್ತದೆ. ಈ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಚನ್ನಗಿರಿ [ಜ.23]: ತಾಲೂಕಿನಲ್ಲಿ ಭದ್ರ ನೀರು ಹರಿಯುತ್ತಿದ್ದು, ಈ ನಾಲೆಗೆ ರೈತರು ಮೋಟಾರು ಅಳವಡಿಸಿದ್ದು ಇವುಗಳ ತೆರವು ಕಾರ್ಯಾಚರಣೆ ಮುಂದಿನ 2 ದಿನಗಳಿಂದ ಆರಂಭಿಸಲು ನಿರ್ಧರಿಸಲಾಗಿದೆ ಎಂದು ಬೆಸ್ಕಾಂ ಅಭಿಯಂತರ ನಾಗರಾಜ್ ಹೇಳಿದರು. ತಾಪಂ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಕೊನೆಯ ಭಾಗದ ರೈತರು ನಮಗೆ ಭದ್ರಾ ನಾಲೆಯ ನೀರು ಹರಿಯುತ್ತಿಲ್ಲ ಡ್ಯಾಂ ನಿಂದ ಬರುವ ನೀರು ಅಲ್ಲಿಯೇ ಸೋರಿ ಹೋಗುತ್ತದೆ ಎಂದು ಉಚ್ಚ ನ್ಯಾಯಾಲಯದ ಮೊರೆ ಹೋದ ಹಿನ್ನಲೆ ಉಚ್ಚ ನ್ಯಾಯಾಲಯ ಕಟ್ಟು ನಿಟ್ಟಾಗಿ ಚಾನಲ್‌ಗಳಿಗೆ ಹಾಕಿದ ಮೋಟಾರುಗಳನ್ನು ತೆಗೆಸಲು ಆದೇಶಿಸಿತ್ತು. ಅದರಂತೆ ಪೊಲೀಸ್, ನೀರಾವರಿ, ಕಂದಾಯ ಇಲಾಖೆ ಅಧಿಕಾರಿಗಳನ್ನು ಒಳಗೊಂಡು ಮೋಟಾರು ತೆರವುಗೊಳಿಸುವ ಕಾರ್ಯಚರಣೆ ನಡೆಸಲಾಗುವುದು ಎಂದು ಹೇಳಿದರು.
ತಾಲೂಕಿನಲ್ಲಿರುವ ಸರ್ಕಾರಿ ಆಸ್ಪತ್ರೆಗಳಲ್ಲಿ ದಾದಿಯರಾಗಲಿ, ವೈದ್ಯರಾಗಲಿ ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ರಾತ್ರಿ ಪಾಳಯದಲ್ಲಿ ವೈದ್ಯರೆ ಇರುವುದಿಲ್ಲ. ಈ ವಿಷಯವನ್ನು ಪ್ರತಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಕೇಳಿದರೂ ಸಹಾ ಸಬೂಬು ಉತ್ತರ ನೀಡುತ್ತೀರಿ ಇಂತಹ ಹಾರಿಕೆ ಉತ್ತರ ನೀಡಬಾರದು ಆಸ್ಪತ್ರೆಗಳ ವ್ಯವಸ್ಥೆಯನ್ನು ಸರಿಪಡಿಸಿರಿ ಎಂದು ಸಭೆಯ ಅಧ್ಯಕ್ಷತೆ ವಹಿಸಿದ್ದ ತಾಪಂ ಅಧ್ಯಕ್ಷೆ ಉಷಾಶಶಿಕುಮಾರ್, ಉಪಾಧ್ಯಕ್ಷೆ ಗಾಯಿತ್ರಿ ಅಣ್ಣಪ್ಪ ತಾ. ವೈದ್ಯಾಧಿಕಾರಿ ಡಾ.ಪ್ರಭುರನ್ನು ತರಾಟೆಗೆ ತೆಗೆದುಕೊಂಡರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಕೆ.ಟಿ. ನಿಂಗಪ್ಪ ಮಾಹಿತಿ ನೀಡುತ್ತಾ ತಾಲೂಕಿನ ಶಾಲೆಗಳಲ್ಲಿ ಬಿಸಿಊಟ ತಯಾರಿಸುತ್ತಿರುವ 18ರಿಂದ 40ವರ್ಷದ ಒಳಗಿನವರಿಗೆ ಕಾರ್ಮಿಕ ಇಲಾಖೆಯಿಂದ ಪಿಂಚಣಿ ಸೌಲಭ್ಯ ನೀಡಲು ಸರ್ಕಾರದಿಂದ ಅದೇಶ ಬಂದಿದ್ದು ಅದನ್ನು ಫೆಬ್ರವರಿ ತಿಂಗಳಿನಿಂದ ಅನುಷ್ಠಾನ ಮಾಡಲಾಗುತ್ತಿದೆ ಎಂದು ಹೇಳಿದರು.
ಕೃಷಿ ಇಲಾಖೆ ಅಧಿಕಾರಿ ಕುಮಾರ್ ಮಾಹಿತಿ ನೀಡಿದ ನಂತರ ತಾಪಂ ಕಾರ್ಯನಿರ್ವಾಣಾಧಿಕಾರಿ ಪ್ರಕಾಶ್ ನಿಮ್ಮ ಇಲಾಖೆಯ ಪ್ರಗತಿ ವಿಚಾರ ಸಾಕು ಸರ್ಕಾರದಿಂದ ರೈತರ ಶ್ರೇಯೋಭಿವೃದ್ಧಿಗಾಗಿ ಹಲವಾರು ಯೋಜನೆಗಳು ಬಂದಿದ್ದು, ಅಂತಹ ರೈತಾಪಿ ಜನರಿಗೆ ಯೋಜನೆಗಳನ್ನು ಜಾರಿಗೆ ಮಾಡದೆ ನಿರ್ಲಕ್ಷ್ಯ ವಹಿಸುವುದು ಸರಿಯಲ್ಲ. ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್ ಮಲ್ಲಾಡದ್ ತಾಪಂ ಸಾಮಾನ್ಯ ಸಭೆಗಾಗಲಿ, ಕೆಡಿಪಿ ಸಭೆಗಾಗಲಿ ಬರುತ್ತಿಲ್ಲ ಎಂದು ಇಒ ಪ್ರಕಾಶ್ ಕೃಷಿ ಅಧಿಕಾರಿಯನ್ನು ತರಾಟೆಗೆ ತೆಗೆದುಕೊಂಡರು.
ಎನ್‌ಆರ್‌ಇಜಿ ಯೋಜನೆಯಲ್ಲಿ ರೈತರುಗಳಿಗೆ ಬೇಕಾದ ಕೃಷಿ ಹೊಂಡಗಳ ನಿರ್ಮಾಣ, ಇಂಗುಗುಂಡಿ, ಬದು ನಿರ್ಮಾಣ ಇಂತಹ ಕೆಲಸಗಳನ್ನು ಮಾಡಿಸಲು ಅವಕಾಶಗಳಿದ್ದರೂ ಅವುಗಳನ್ನು ಮಾಡಿಸುತ್ತಿಲ್ಲ. ಈಗಾದರೆ ಇಲಾಖೆಯ ಕೆಲಸಗಳನ್ನು ಹೇಗೆ ಮಾಡುತ್ತೀರಿ ಎಂದು ಕೃಷಿ ಅಧಿಕಾರಿಯನ್ನು ಪ್ರಶ್ನಿಸಿದರು.
ದಶಕದ ಕನಸು : ದಾವಣಗೆರೆ ನೇರ ರೈಲ್ವೆ ಮಾರ್ಗಕ್ಕೆ ಒತ್ತಾಯ...
ಜಲಾನಯನ ಇಲಾಖೆ ಕೃಷಿ ಇಲಾಖೆಗೆ ಸೇರ್ಪಡೆಗೊಂಡಿದ್ದು, ತಾಲೂಕಿನ ಯಾವ ಪ್ರದೇಶಗಳನ್ನು ಆಯ್ಕೆ ಮಾಡಿಕೊಂಡಿದ್ದೀರಿ 2018-19ರಲ್ಲಿ ಬಂದ ಅನುದಾನ ಎಷ್ಟುಎಂದು ಕೃಷಿ ಅಧಿಕಾರಿಗೆ ಇಒ ಕೇಳಿದರೆ ಉತ್ತರ ಹೇಳಲು ತಡ ಬಡಿಸಿದರು.
'ಮುಸ್ಲಿಮರ ಬೆಂಬಲ ಬೇಡ, ಹೊನ್ನಾಳಿ-ನ್ಯಾಮತಿ ಕೇಸರಿಮಯ ಮಾಡ್ತೀನಿ!...
ಇನ್ನು ಮುಂದೆ ಪ್ರತಿ ತಿಂಗಳ 5ನೇ ತಾರೀಖು ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನ ಸಭೆ ನಡೆಯಲಿದ್ದು, ಆ ಸಭೆಗೆ ಯಾರು ತಪ್ಪಿಸಿಕೊಳ್ಳಬಾರದು ಅಧಿಕಾರಿಗಳ ಬದಲಿಗೆ ಬೇರೆ ನೌಕರರನ್ನು ಕಳಿಸಬೇಡಿ ಇದು ಕಟ್ಟೆಚ್ಚರದ ಆದೇಶ ಎಂದು ಇಒ ಪ್ರಕಾಶ್ ಅಧಿಕಾರಿಗಳಿಗೆ ತಿಳಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಕೆಂಚಪ್ಪ ಹಾಜರಿದ್ದು, ಅಧಿಕಾರಿಗಳ ಆಡಳಿತದ ಬಗ್ಗೆ ಸಲಹೆ-ಸೂಚನೆ ನೀಡಿದರು.