ಬೋರ್‌ವೆಲ್‌ ಕೊರೆಯಲು ಇನ್ಮುಂದೆ ಅನುಮತಿ ಇಲ್ಲ

By Kannadaprabha NewsFirst Published Sep 22, 2019, 9:37 AM IST
Highlights

ಇನ್ಮುಂದೆ ಬೋರ್ ವೆಲ್ ಕೊರೆಸಲು ಅನುಮತಿ ಸಿಗುವುದಿಲ್ಲ. ಕಾರಣ ಏನು ?

ಬೆಂಗಳೂರು [ಸೆ.22]:  ಇನ್ನು ಮುಂದೆ ಬಿಬಿಎಂಪಿ ವ್ಯಾಪ್ತಿಯಲ್ಲಿ ನಿವೇಶನಗಳಲ್ಲಿ ಬೋರ್‌ವೆಲ್‌ ಕೊರೆಸಲು ಅನುಮತಿ ನೀಡದಿರಲು ‘ರಾಜ್ಯ ಅಂತರ್ಜಲ ಪ್ರಾಧಿಕಾರ’ ರಚಿತ ಬಿಬಿಎಂಪಿ ಸಮಿತಿಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ.

ನಗರದಲ್ಲಿ ಅಂತರ್ಜಲ ಮಟ್ಟಕುಸಿಯುವುದನ್ನು ತಪ್ಪಿಸುವ ಉದ್ದೇಶದಿಂದ ಈ ನಿರ್ಣಯ ಕೈಗೊಳ್ಳಲಾಗಿದೆ. ನಿವೇಶನಗಳಲ್ಲಿ ಬೋರ್‌ವೆಲ್‌ ಕೊರೆಸಿಕೊಂಡು ಬಳಿಕ ಆ ನೀರನ್ನು ಕಟ್ಟಡ ನಿರ್ಮಾಣ ಕಾಮಗಾರಿಗೆ ಬಳಸುವುದರಿಂದ ಅಂತರ್ಜಲ ಕಡಿಮೆಯಾಗುತ್ತದೆ. ಹಾಗಾಗಿ ಇನ್ನು ಮುಂದೆ ನಿವೇಶನಗಳಲ್ಲಿ ಹಾಗೂ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ಬೋರ್‌ವೆಲ್‌ ಕೊರೆಸಲು ಅನುಮತಿ ನೀಡದಿರಲು ತೀರ್ಮಾನಿಸಲಾಗಿದೆ. ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ ನೀರು ಅಗತ್ಯವಿದ್ದಲ್ಲಿ ಜಲಮಂಡಳಿ ಸಂಸ್ಕರಿಸಿದ ತಾಜ್ಯ ನೀರನ್ನು ಉಪಯೋಗಿಸಬಹುದು.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಪಾಲಿಕೆ ವ್ಯಾಪ್ತಿಯಲ್ಲಿ ಹೊಸದಾಗಿ ಬೋರ್‌ವೆಲ್‌ ಕೊರೆಯಲು ರಾಜ್ಯ ಅಂತರ್ಜಲ ಪ್ರಾಧಿಕಾರ ರಚಿತ ಬಿಬಿಎಂಪಿ ಸಮಿತಿಯಿಂದ ಕಡ್ಡಾಯವಾಗಿ ಅನುಮತಿ ಪಡೆಯಬೇಕು. ಈ ಸಮಿತಿಯಲ್ಲಿ ಜಲಮಂಡಳಿಯ ಪ್ರಧಾನ ಮುಖ್ಯ ಎಂಜಿನಿಯರ್‌ ಅಧ್ಯಕ್ಷರಾಗಿದ್ದು, ಬಿಬಿಎಂಪಿ, ಪೊಲೀಸ್‌ ಇಲಾಖೆ, ಬೆಸ್ಕಾಂ, ಅಂತರ್ಜಲ ಪ್ರಾಧಿಕಾರ, ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಸದಸ್ಯರಾಗಿದ್ದಾರೆ. ಒಂದು ವೇಳೆ ನಗರದಲ್ಲಿ ಅನಧಿಕೃತವಾಗಿ ಬೋರ್‌ವೆಲ್‌ ಕೊರೆಯುವುದು ಕಂಡು ಬಂದಲ್ಲಿ ಈ ಮೇಲ್ಕಂಡ ಇಲಾಖೆಗಳಿಗೆ ದೂರು ನೀಡಬಹುದು. ಕಟ್ಟಡದ ಮಾಲಿಕ, ಬೋರ್‌ವೆಲ್‌ ಡ್ರಿಲ್ಲಿಂಗ್‌ ಏಜೆನ್ಸಿ ವಿರುದ್ಧ ಕಾನೂನು ರೀತಿ ಕ್ರಮ ಕೈಗೊಳ್ಳಲಾಗುವುದು ಎಂದು ಜಲಮಂಡಳಿ ಪ್ರಕಟಣೆ ತಿಳಿಸಿದೆ.

click me!