ಉಪ ಚುನಾವಣೆ : ನಗರದಲ್ಲಿ ನೀತಿ ಸಂಹಿತೆ ಜಾರಿ

By Kannadaprabha NewsFirst Published Sep 22, 2019, 9:21 AM IST
Highlights

ರಾಜ್ಯದಲ್ಲಿ 15 ಕ್ಷೇತ್ರಗಳಿಗೆ ಉಪ ಚುನಾವಣೆ ಘೋಷಣೆಯಾದ ಬೆನ್ನಲ್ಲೇ ಇದೀಗ ಬೆಂಗಳೂರಿನಲ್ಲಿ ನೀರಿ ಸಂಹಿತೆ ಜಾರಿ ಮಾಡಲಾಗಿದೆ. 

ಬೆಂಗಳೂರು [ಸೆ.22]: ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಾದ ಕೆ.ಆರ್‌.ಪುರ, ಮಹಾಲಕ್ಷ್ಮಿ ಲೇಔಟ್‌, ಶಿವಾಜಿನಗರ ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರಕ್ಕೆ ಅ.21ರಂದು ಉಪಚುನಾವಣೆ ನಡೆಯಲಿದ್ದು, ಚುನಾವಣಾ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಇಡೀ ನಗರದಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದರು.

ಶನಿವಾರ ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಬೆಂಗಳೂರು ನಗರ ಜಿಲ್ಲಾ ಚುನಾವಣಾಧಿಕಾರಿ ವ್ಯಾಪ್ತಿಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ತೆರವಾದ ವಿಧಾನಸಭಾ ಸದಸ್ಯರನ್ನು ಚುನಾಯಿಸಲು ಭಾರತೀಯ ಚುನಾವಣಾ ಆಯೋಗ ಚುನಾವಣೆ ಅಧಿಸೂಚನೆ ಹೊರಡಿಸಿದ್ದು, ಅ.21ರಂದು ಮತದಾನ ಪ್ರಕ್ರಿಯೆ ನಡೆಸುವುದಕ್ಕೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಬೆಂಗಳೂರು ನಗರ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣೆ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ ಎಂದು ತಿಳಿಸಿದರು.

ಶಿವಾಜಿನಗರ, ಮಹಾಲಕ್ಷ್ಮೇ ಲೇಔಟ್‌, ಯಶವಂತಪುರ ಹಾಗೂ ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 14,14,144 ಮತದಾರರಿದ್ದಾರೆ. ಅದರಲ್ಲಿ 7,33,647 ಪುರುಷ, 6,80,255 ಮಹಿಳೆ ಹಾಗೂ 242 ಇತರೆ ಮತದಾರರಿದ್ದಾರೆ. ಒಟ್ಟು 1,361 ಮತಗಟ್ಟೆಗಳಿದ್ದು, 6,532 ಅಧಿಕಾರಿ ಸಿಬ್ಬಂದಿ ಚುನಾವಣೆ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.

ನಾಲ್ಕೂ ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣಾಧಿಕಾರಿಗಳನ್ನು ನೇಮಿಸಲಾಗಿದೆ. ಕೆ.ಆರ್‌.ಪುರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವವರು ಹಳೇ ಮದ್ರಾಸ್‌ ರಸ್ತೆಯ ಕೆ.ಆರ್‌.ಪುರ ವಿಭಾಗದ ಕಂದಾಯ ಅಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬೇಕು. ಯಶವಂತಪುರದಿಂದ ಸ್ಪರ್ಧಿಸುವವರು ಕೆಂಗೇರಿ ಉಪನಗರದ ಕರ್ನಾಟಕ ಬ್ಯಾಂಕ್‌ ಕಟ್ಟಡದಲ್ಲಿರುವ ಚುನಾವಣಾಧಿಕಾರಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬೇಕು. ಮಹಾಲಕ್ಷ್ಮೇ ಲೇಔಟ್‌ದಿಂದ ಸ್ಪರ್ಧಿಸುವವರು ನಾಗಪುರದ ಕೇಂಬ್ರಿಡ್ಜ್‌ ಶಾಲೆ ಪಕ್ಕದಲ್ಲಿರುವ ಬಿಬಿಎಂಪಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಬೇಕು. ಶಿವಾಜಿನಗರದಿಂದ ಸ್ಪರ್ಧಿಸುವವರು ಕ್ವೀನ್ಸ್‌ ರಸ್ತೆಯಲ್ಲಿರುವ ಮತದಾರ ನೋಂದಣಾಧಿಕಾರಿ ಕಚೇರಿಯಲ್ಲಿ ಸೆ.30ರೊಳಗೆ ನಾಮಪತ್ರ ಸಲ್ಲಿಕೆ ಮಾಡಬೇಕು ಎಂದು ಹೇಳಿದರು.

ಚುನಾವಣಾ ಪ್ರಕ್ರಿಯೆಗೆ ಮೈಕ್ರೋ ಅಬ್ಸರ್‌ವ​ರ್‍ಸ್, ಮಾದರಿ ನೀತಿ ಸಂಹಿತೆ ಪಾಲನಾ ತಂಡ, ಚುನಾವಣಾ ವೆಚ್ಚದ ಮೇಲೆ ನಿಗಾವಹಿಸುವುದಕ್ಕೆ ಅಕೌಂಟಿಂಗ್‌ ಟೀಂ, ಮತದಾರರ ಮೇಲೆ ಪ್ರಭಾವ ಬೀರುವ ಯಾವುದೇ ಚಟುವಟಿಕೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಶಿಥಿಲಗೊಂಡ ಮತಗಟ್ಟೆಗಳ ಪರಿಶೀಲನೆ

ನಾಲ್ಕು ವಿಧಾನಸಭಾ ಕ್ಷೇತ್ರದಲ್ಲಿರುವ 1,361 ಮತಗಟ್ಟೆಗಳಲ್ಲಿ ಶಿಥಿಲಗೊಂಡ ಹಾಗೂ ಮತದಾನಕ್ಕೆ ಸೂಕ್ತವಾಗಿರದ ಮತಗಟ್ಟೆಗಳನ್ನು ಎರಡು ದಿನದಲ್ಲಿ ಗುರುತಿಸುವುದಕ್ಕೆ ರಾಜ್ಯ ಚುನಾವಣಾಧಿಕಾರಿ ಸೂಚನೆ ನೀಡಿದ್ದಾರೆ. ಅದರಂತೆ ಅಧಿಕಾರಿ ಸಿಬ್ಬಂದಿ ಸೋಮವಾರದೊಳಗೆ ಮತಗಟ್ಟೆಗಳನ್ನು ಪರಿಶೀಲಿಸಿ ಮಾಹಿತಿ ನೀಡಲಿದ್ದಾರೆ. ಜತೆಗೆ ವಿದ್ಯುನ್ಮಾನ ಮತಯಂತ್ರಗಳ ಪರಿಶೀಲನೆ ನಡೆಸಲಾಗುವುದು ಎಂದು ವಿವರಿಸಿದರು.

30ವರೆಗೆ ಅರ್ಜಿ ಸಲ್ಲಿಸಬಹುದು

ಮತದಾರ ಪಟ್ಟಿಗೆ ಹೊಸದಾಗಿ ಸೇರ್ಪಡೆ ಮತ್ತು ಸ್ಥಳ ಬದಲಾವಣೆ ಹಾಗೂ ಇತರೆ ಪರಿಷ್ಕರಣೆಗೆ ಸೆ.30 ವರೆಗೆ ಅರ್ಜಿ ಸಲ್ಲಿಸುವವರ ಹೆಸರುಗಳನ್ನು ಮತದಾರ ಪಟ್ಟಿಗೆ ಸೇರಿಸಿ ಉಪಚುನಾವಣೆಯಲ್ಲಿ ಮತದಾನಕ್ಕೆ ಅವಕಾಶ ನೀಡಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಬಿ.ಎಚ್‌.ಅನಿಲ್‌ಕುಮಾರ್‌ ತಿಳಿಸಿದರು.

ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಅಕ್ಟೋಬರ್ 21ರಂದು ಚುನಾವಣೆ ನಡೆಯಲಿದ್ದು, ಅ.24ಕ್ಕೆ ಮತ ಎಣಿಕೆ ಕಾರ್ಯ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಘೋಷಿಸಿದೆ.

click me!