ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಕೊಡಗು ಸೇರಿದಂತೆ ದೇಶದಾದ್ಯಂತ ವಿಸ್ತರಣೆಗೆ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ಆಗ್ರಹ| ಧಾರ್ಮಿಕ ನಂಬಿಕೆಗೆ ಪೂರಕವಾದ ಗೋವಧೆ ನಿಷೇಧ ಕಾಯ್ದೆಯನ್ನು ಜಾರಿಗೆ ಆಗ್ರಹ| ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆಯನ್ನು ಕೊಡಗು ಸೇರಿದಂತೆ ದೇಶದಾದ್ಯಂತ ವಿಸ್ತರಿಸಬೇಕು| ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಸವಾಲೊಡ್ಡುತ್ತಿರುವ ನುಸುಳುಕೋರರನ್ನು ದೇಶದಿಂದ ಹೊರದಬ್ಬಬೇಕು|
ಮಡಿಕೇರಿ: (ಸೆ.22) ರಾಷ್ಟ್ರೀಯ ನಾಗರಿಕ ನೋಂದಣಿಯನ್ನು ಕೊಡಗು ಸೇರಿದಂತೆ ದೇಶದಾದ್ಯಂತ ವಿಸ್ತರಿಸಬೇಕು ಎಂದು ಆಗ್ರಹಿಸಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ, ಧಾರ್ಮಿಕ ನಂಬಿಕೆಗೆ ಪೂರಕವಾದ ಗೋವಧೆ ನಿಷೇಧ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ಆಗ್ರಹಿಸಿದೆ.
ಶನಿವಾರ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿಎನ್‌ಸಿ ಅಧ್ಯಕ್ಷ ಎನ್.ಯು. ನಾಚಪ್ಪ, ರಾಷ್ಟ್ರೀಯ ನಾಗರಿಕ ನೋಂದಣಿ ಕಾಯ್ದೆಯನ್ನು ಕೊಡಗು ಸೇರಿದಂತೆ ದೇಶದಾದ್ಯಂತ ವಿಸ್ತರಿಸಬೇಕು. ಆ ಮೂಲಕ ದೇಶದ ಭದ್ರತೆ ಮತ್ತು ಸಾರ್ವಭೌಮತ್ವಕ್ಕೆ ಸವಾಲೊಡ್ಡುತ್ತಿರುವ ನುಸುಳುಕೋರರನ್ನು ದೇಶದಿಂದ ಹೊರದಬ್ಬಬೇಕು ಎಂದು ಆಗ್ರಹಿಸಿದರು.
undefined
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಕೊಡವರು ಗೋವನ್ನು ಅತ್ಯಂತ ಪೂಜ್ಯ ಭಾವದಿಂದ ಕಾಣುತ್ತಿದ್ದು, ಕೊಡವರ ಧಾರ್ಮಿಕ ನಂಬಿಕೆಯನ್ನು ಗೌರವಿಸಿ ಕೊಡಗಿನ ಕಮಿಷನರ್ ಆಗಿದ್ದ ಕರ್ನಲ್ ಫ್ರೇಸರ್ 1835ರಲ್ಲೇ ಗೋರಕ್ಷಣೆ ಕಾಯ್ದೆಯನ್ನು ಕೊಡಗಿನಲ್ಲಿ ಜಾರಿಗೆ ತಂದಿದ್ದರು. ಆದರೆ ಪ್ರಸಕ್ತ ಕೊಡವರ ಧಾರ್ಮಿಕ ಭಾವನೆಗಳಿಗೆ ಘಾಸಿಯುಂಟು ಮಾಡುವ ಗೋವಧೆ ಜಿಲ್ಲೆಯಲ್ಲಿ ಎಗ್ಗಿಲ್ಲದೆ ಸಾಗಿದ್ದು, ಸರ್ಕಾರ ಕೂಡಲೇ ಗೋರಕ್ಷಣೆ ಮತ್ತು ಗೋವಧೆ ನಿಷೇಧ ಕಾಯ್ದೆಯನ್ನು ಅನುಷ್ಠಾನಕ್ಕೆ ತರಬೇಕು ಎಂದು ಆಗ್ರಹಿಸಿದರು.
ಕೊಡವ ಬುಡಕಟ್ಟು ಜನಾಂಗದ ಪ್ರಮುಖ ಮೂರು ಹಕ್ಕೊತ್ತಾಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸಂವಿಧಾನ ತಿದ್ದುಪಡಿಗೆ ಮುಂದಾಗಬೇಕು ಎಂದು ಒತ್ತಾಯಿಸುವ ಸಲುವಾಗಿ ಸೆ.23ರಂದು ಸಿಎನ್‌ಸಿ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಸತ್ಯಾಗ್ರಹ ನಡೆಸಲಾಗುವುದು. ವಿವಿಧ ಬೇಡಿಕೆಗಳನ್ನೊಳಗೊಂಡ ಮನವಿಯನ್ನು ಜಿಲ್ಲಾಡಳಿತದ ಮೂಲಕ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಷಾ, ರಾಷ್ಟ್ರಪತಿ, ಉಪರಾಷ್ಟ್ರಪತಿ ಹಾಗೂ ಕರ್ನಾಟಕದ ಮುಖ್ಯಮಂತ್ರಿಗಳಿಗೆ ರವಾನಿಸಲಿದ್ದೇವೆ ಎಂದು ನಾಚಪ್ಪ ಹೇಳಿದರು.
ಕೊಡವರ ಭೂ ರಾಜಕೀಯ ಆಶೋತ್ತರವಾದ ಸ್ವಾಯತ್ತ ಕೊಡವ ಲ್ಯಾಂಡ್ ಅನ್ನು ಸಂವಿಧಾನದ 371ನೇ ವಿಧಿ ಮತ್ತು 6ನೇ ಶೆಡ್ಯೂಲ್ ಅನ್ವಯ ನೀಡಲು ಸಂವಿಧಾನ ತಿದ್ದುಪಡಿಗೆ ಮುಂದಾಗಬೇಕು. ಅಲ್ಲದೆ ಕೊಡವ ಬುಡಕಟ್ಟು ಕುಲವನ್ನು ಸಂವಿಧಾನದ 340/342 ವಿಧಿ ಪ್ರಕಾರ ಶೆಡ್ಯೂಲ್ ಲಿಸ್ಟ್‌ಗೆ ಸೇರಿಸಿ ರಾಜ್ಯಾಂಗ ಖಾತ್ರಿ ನೀಡಬೇಕು ಎಂದು ಒತ್ತಾಯಿಸಿದರು.
ವಿವಿಧತೆಯನ್ನು ಏಕತೆಯನ್ನು ಸಾರುವ ಭಾರತದ ಸಂಸ್ಕೃತಿಯಲ್ಲಿ ಪ್ರತಿ ಜನಾಂಗದ ಸಂಸ್ಕೃತಿಯೂ ಉಳಿಯುವ ಅಗತ್ಯವಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕೊಡವ ಸಂಸ್ಕೃತಿಯನ್ನು ಆಕ್ರಮಿಸಲು ಕೆಲವು ಶಕ್ತಿಗಳು ಮುಂದಾಗಿದ್ದು, ಆ ಮೂಲಕ ಕೊಡವರಿಗೆ ಪರವಾನಗಿ ಇಲ್ಲದೆ ಕೋವಿ ಹೊಂದುವ ವಿಶೇಷ ಹಕ್ಕನ್ನು ಇಲ್ಲದಂತೆ ಮಾಡಲು ಪ್ರಯತ್ನಿಸುತ್ತಿದ್ದಾರೆ. ಆದರೆ ಈ ಹಕ್ಕನ್ನು ಅಬಾಧಿತವಾಗಿ ಶಾಶ್ವತವಾಗಿ ಮುಂದುವರಿಸುವ ನಿಟ್ಟಿನಲ್ಲಿ ಇಂಡಿಯನ್ ಶಸ್ತ್ರಾಸ್ತ್ರ ಕಾಯ್ದೆಗೆ ತಿದ್ದುಪಡಿಯನ್ನು ಕೇಂದ್ರ ಸರ್ಕಾರ ಮಾಡಬೇಕು ಎಂದು ಆಗ್ರಹಿಸಿದರು.