ಮುಖ್ಯಮಂತ್ರಿ ಯಡಿಯೂರಪ್ಪ ಅವರ ತವರು ಜಿಲ್ಲೆ ಶಿವಮೊಗ್ಗದಲ್ಲಿ ಸರ್ಕಾರಿ ವಾಹನ ಒಂದು ನಂಬರ್ ಪ್ಲೇಟ್ ಇಲ್ಲದೇ ಓಡಾಡುತ್ತಿದೆ. ಇದು ಪೊಲೀಸರ ಕಣ್ಣಿಗೆ ಬಿದ್ದಿಲ್ಲವೇ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಶಿವಮೊಗ್ಗ [ಸೆ.12]: ಸಂಚಾರ ನಿಯಮ ಉಲ್ಲಂಘನೆಗೆ ಭಾರೀ ದಂಡ ವಿಧಿಸುವ ಕೇಂದ್ರ ಸರ್ಕಾರದ ಹೊಸ ಕಾಯ್ದೆ ಜಾರಿಯಾದ ಬಳಿಕ ಸಾಕಷ್ಟುಚರ್ಚೆ, ವಿರೋಧದ ಮಾತುಗಳು ಕೇಳಿ ಬರುತ್ತಿದೆ. ಇದರ ನಡುವೆಯೇ ಇಲ್ಲೊಂದು ಸರ್ಕಾರಿ ಇಲಾಖೆಯ ಹೊಸದಾದ ಕಾರೊಂದು ತಾತ್ಕಾಲಿಕ ನೊಂದಣಿ ಸಂಖ್ಯೆಯೇ ಇಲ್ಲದೆ ಓಡಾಡುತ್ತಿದೆ. ಆದರೆ ಇದು ಪೊಲೀಸ್ ಇಲಾಖೆಯ ಗಮನಕ್ಕೆ ಬಂದಿಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿಯೂ ಕೇಳಿ ಬಂದಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರ ನಾಮಫಲಕ ಹೊತ್ತು ಈ ಕಾರಿಗೆ ಮುಂಭಾಗ ಯಾರಿಗೂ ಕಾಣಿಸದಂತೆ ಚಿಕ್ಕದಾಗಿ ತಾತ್ಕಾಲಿಕ ನೋಂದಣಿ ಅಕ್ಷರ ಬರೆಯಲಾಗಿದೆ. ಆದರೆ ಹಿಂಭಾಗ ಏನೂ ಬರೆಯದೆ ಖಾಲಿ ಬಿಡಲಾಗಿದೆ. ಆದರೆ ಅದಕ್ಕಿಂತ ಮೊದಲು ಇಲಾಖೆಯ ಉಪ ನಿರ್ದೇಶಕರ ನಾಮ ಫಲಕ ಮಾತ್ರ ದೊಡ್ಡದಾಗಿ ಅಳವಡಿಸಲಾಗಿದೆ. ಇದು ಕಳೆದ ಕೆಲ ದಿನಗಳಿಂದ ಓಡಾಡುತ್ತಿದ್ದು, ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಬುಧವಾರ ಇದು ನಿಂತಿತ್ತು. ಆಗ ಸಾರ್ವಜನಿಕರು ಈ ಪ್ರಶ್ನೆಯನ್ನು ಮುಂದಿಟ್ಟರು. ಆದರೆ ಇದಕ್ಕೆ ಉತ್ತರಿಸಲು ಅಲ್ಲಿ ಯಾರೂ ಇರಲಿಲ್ಲ.
ಆದರೆ ಈ ಬಗ್ಗೆ ಇದುವರೆಗೆ ಸಾರಿಗೆ ಇಲಾಖೆಯಾಗಲೀ, ಪೊಲೀಸರಾಗಲೀ ಗಮನ ಹರಿಸಿಲ್ಲ. ಕಾನೂನು ಎಲ್ಲರಿಗೂ ಒಂದೇ ಆಗಿದ್ದು, ಸರ್ಕಾರ ಕೂಡ ಇದಕ್ಕೆ ಹೊರತಾಗಿಲ್ಲ ಎನ್ನುವುದು ಸಾರ್ವಜನಿಕರ ಮಾತು.