ಬರಿದಾದ ಕೆರೆಗೆ ಜೀವಕಳೆ: ಎತ್ತಿನಹೊಳೆ ವ್ಯರ್ಥ ನೀರೇ ಆಸರೆ; ದೇಣಿಗೆ ಸಂಗ್ರಹಿಸಿ ಕೆರೆ ತುಂಬಿಸಿದ ಎರಡು ಗ್ರಾಮಸ್ಥರು..!

Kannadaprabha News   | Kannada Prabha
Published : Aug 28, 2026, 02:40 PM IST
Lake Project

ಸಾರಾಂಶ

ಚಿಕ್ಕಮಗಳೂರಿನ ಕಬ್ಬಳಿ-ಗುಣಸಾಗರ ಗ್ರಾಮಸ್ಥರು ಸರ್ಕಾರದ ಸಹಾಯವಿಲ್ಲದೆ, ದೇಣಿಗೆ ಸಂಗ್ರಹಿಸಿ ತಮ್ಮೂರಿನ ಕೆರೆಯನ್ನು ತುಂಬಿಸಿದ್ದಾರೆ. ಸಮಾನ ಮನಸ್ಕ ಯುವಕರ ನೇತೃತ್ವದಲ್ಲಿ, ವೇದಾವತಿ ನದಿಯ ಹೆಚ್ಚುವರಿ ನೀರನ್ನು ಪಂಪ್ ಮಾಡಿ, ಕೇವಲ ₹15 ಲಕ್ಷದಲ್ಲಿ ಈ ಯಶಸ್ವಿ ಯೋಜನೆ ಪೂರ್ಣಗೊಳಿಸಿ ಮಾದರಿಯಾಗಿದ್ದಾರೆ.

ವಿಶ್ವನಾಥ ಮಲೇಬೆನ್ನೂರು, ಕನ್ನಡಪ್ರಭ

ಚಿಕ್ಕಮಗಳೂರು: ನದಿ, ಹಳ್ಳ, ಕೆರೆ ನೀರಿನ ವಿಚಾರಕ್ಕೆ ರಾಜ್ಯ-ರಾಜ್ಯದ ನಡುವೆ, ಊರು-ಊರಿನ ನಡುವೆ ಜಗಳ, ಗಲಾಟೆ ಸಾಮಾನ್ಯ. ಆದರೆ, ಎರಡು ಗ್ರಾಮಗಳ ಜನರು ಒಗ್ಗೂಡಿ ತಮ್ಮ ಗ್ರಾಮದ ಜೀವನಾಡಿಯಾದ ಕೆರೆಯನ್ನು ದೇಣಿಗೆ ಸಂಗ್ರಹಿಸಿ ತುಂಬಿಸುವ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದ ಸಾಹಸ ಗಾಧೆಗೆ ಚಿಕ್ಕಮಗಳೂರಿನ ಕಬ್ಬಳಿ-ಗುಣಸಾಗರ ಗ್ರಾಮಗಳು ಸಾಕ್ಷಿಯಾಗಿದೆ.

ಹೌದು, ಕಡೂರು ತಾಲೂಕಿನ ಈ ಎರಡೂ ಗ್ರಾಮಕ್ಕೆ ಜೀವನಾಡಿಯಾದ ಕೆರೆಯನ್ನು ತುಂಬಿದಲು ಗ್ರಾಮಸ್ಥರು ಸರ್ಕಾರದ ನೆರವಿಗೂ ಕಾಯದೇ ತಾವೇ ಕಾಮಗಾರಿ ಕೈಗೊಂಡು ಪೂರ್ಣಗೊಳಿಸಿದ ಪರಿಣಾಮ ಇದೀಗ ಕೆರೆಯಲ್ಲಿ ಭಾರೀ ಪ್ರಮಾಣ ನೀರು ಶೇಖರಣೆಯಾಗಿದೆ.

ಮಳೆ ಕೊರತೆಯಿಂದ ಚಿಕ್ಕಮಗಳೂರಿನ ಹಲವು ಗ್ರಾಮದಲ್ಲಿ ಮಳೆಗಾಲದಲ್ಲೂ ಟ್ಯಾಂಕರ್‌ ಮೂಲಕ ಕುಡಿವ ನೀರು ತರುವ ಪರಿಸ್ಥಿತಿ ಇದೆ. ಇದೇ ರೀತಿ ಮಳೆ ಕೊರತೆ ಮುಂದುವರಿದರೆ ಸಾಕಷ್ಟು ತೊಂದರೆ ಆಗಲಿದೆ ಎಂದು ಎಚ್ಚೆತ್ತ ಸಮಾನ ಮನಸ್ಕರು ಗ್ರಾಮಸ್ಥರ ನೆರವಿನೊಂದಿಗೆ ವೇದಾವತಿ ನದಿಯಲ್ಲಿ ವ್ಯರ್ಥವಾಗಿ ಹರಿಯುತ್ತಿದ್ದ ನೀರನ್ನು ಪಂಪ್‌ ಮಾಡುವ ಮೂಲಕ ಕೆರೆ ತುಂಬಿಸಿದ್ದಾರೆ.

ಸುಮಾರು 60- 70 ಎಕರೆ ವಿಸ್ತೀರ್ಣದ ಕೆರೆಯಲ್ಲಿ ಕಳೆದೊಂದು ವಾರದಿಂದ ನೀರನ್ನು ಪಂಪ್‌ ಮಾಡಲಾಗುತ್ತಿದೆ. ಈಗಾಗಲೇ ಶೇ.40 ರಷ್ಟು ನೀರು ಸಂಗ್ರಹವಾಗಿ ಮುಂದಿನ 15 ದಿನದಲ್ಲಿ ಕೆರೆ ಸಂಪೂರ್ಣ ಭರ್ತಿಯಾಗಲಿದೆ.

ಎತ್ತಿನಹೊಳೆ ವ್ಯರ್ಥ ನೀರೇ ಆಸರೆ

ಕಬ್ಬಳಿ-ಗುಣಸಾಗರ ಕೆರೆಯಿಂದ ಸುಮಾರು 1 ಕಿ.ಮೀ ದೂರದಲ್ಲಿ ವೇದಾವತಿ ನದಿ ಹರಿಯುತ್ತಿದೆ. ಈ ನದಿಗೆ ಹಳೇಬೀಡು ಕೆರೆ ತುಂಬಿಸುವ ಎತ್ತಿನಹೊಳೆ ಯೋಜನೆ ಹೆಚ್ಚುವರಿ ನೀರು ಹರಿಯುತ್ತಿದೆ. ಈ ಹೆಚ್ಚುವರಿ ನೀರನ್ನು ಪಂಪ್‌ ಮಾಡುವ ಮೂಲಕ ಕಬ್ಬಳಿ-ಗುಣಸಾಗರ ಕೆರೆತುಂಬಿಸಲಾಗುತ್ತಿದೆ.

ಯುವ ಸಮಾನ ಮನಸ್ಕರರ ನೇತೃತ್ವ

ಕಬ್ಬಳಿ-ಗುಣಸಾಗರ ಕೆರೆ ತುಂಬಿಸುವ ಯೋಜನೆ ಚಿಂತನೆ ಆರಂಭಗೊಂಡಿದ್ದೇ ಯುವ ನಾಲ್ವರು ಸಮಾನ ಮನಸ್ಕರಿಂದ ಎಂಬುದು ಅಚ್ಚರಿ ಸಂಗತಿ.

ನಾಲ್ವರ ಪೈಕಿ ಒಬ್ಬರು ಮೂರಾರ್ಜಿ ಶಾಲೆಯ ಶಿಕ್ಷಕರು (ಉದಯ್‌ ಕುಮಾರ್‌), ಮತ್ತೊಬ್ಬರು ಬೆಂಗಳೂರಿನಲ್ಲಿ ಖಾಸಗಿ ಸಂಸ್ಥೆಯಲ್ಲಿ ಸಿವಿಲ್‌ ಎಂಜಿನಿಯರ್‌ (ಮಧು ದೊಡ್ಡಮನೆ), ಇನ್ನೊಬ್ಬರು ಬೆಂಗಳೂರಿನಲ್ಲಿ ಕ್ಯಾಬ್‌ ಓಡಿಸುತ್ತಿರುವವರು (ಕುಮಾರಸ್ವಾಮಿ). ಇವರೆಲ್ಲರಿಗೂ ಬೆನ್ನೆಲುಬಾಗಿ ನಿಂತು ಕಾರ್ಯನಿರ್ವಹಿಸುತ್ತಿರುವವರು ಗ್ರಾಮದಲ್ಲಿಯೇ ಕೃಷಿಕನಾಗಿ ಜೀವನ ಸಾಗಿಸುತ್ತಿರುವ (ಜಿ.ಎಸ್‌.ಯತೀಶ್‌) ರೈತ.

ಈ ಎಲ್ಲರೂ ಸ್ಥಳೀಯರೇ. ತಮ್ಮೂರಿನ ಕೆರೆ ತುಂಬಿದರೆ ಕುಡಿವ ನೀರಿನ ಸಮಸ್ಯೆ, ಪಶುಪಕ್ಷಿ, ಜಲಚರಗಳಿಗೆ ಅನುಕೂಲ ವಾಗಲಿದೆ. ಮುಖ್ಯವಾಗಿ ಕೃಷಿ ಜಮೀನಿನ ಕೊಳವೆ ಬಾವಿಗಳ ಅಂತರ್ಜಲ ಮರು ಪೂರ್ಣಗೊಳ್ಳಲಿದೆ ಎಂಬ ಹಿನ್ನೆಲೆಯಲ್ಲಿ ಕೆರೆ ತುಂಬಿಸುವ ಯೋಜನೆ ಶುರು ಮಾಡಿದ್ದರು.

ಕೇವಲ ₹15 ಲಕ್ಷ ಯೋಜನೆ ಪೂರ್ಣ

ಸರ್ಕಾರ ಕೋಟ್ಯಾಂತರ ವೆಚ್ಚದಲ್ಲಿ ಯೋಜನೆ ರೂಪಿಸಿ ಅನುಷ್ಠಾನಗೊಳಿಸಿದರೂ ಒಂದೇ ಒಂದು ಹನಿ ನೀರು ದೊರೆಯದ ಪರಿಸ್ಥಿತಿ ಇದೆ. ಆದರೆ, ಕಬ್ಬಳಿ-ಗುಣಸಾಗರ ಕೆರೆ ತುಂಬಿಸುವ ಯೋಜನೆ ಕೇವಲ ₹15 ಲಕ್ಷ ವೆಚ್ಚದಲ್ಲಿ ಪೂರ್ಣಗೊಳಿ ಸಲಾಗಿದೆ. ಜತೆಗೆ, ಕೆರೆಗೆ ಉತ್ತಮ ಪ್ರಮಾಣದ ನೀರು ಹರಿದು ಬರುತ್ತಿದೆ.

ಈ ₹15 ಲಕ್ಷ ವೆಚ್ಚದಲ್ಲಿ ಪ್ಲಾನಿಂಗ್‌, ಸಿವಿಲ್‌ ಕೆಲಸ, 20 ಅಡಿ ಉದ್ದದ 102 ಪೈಪ್‌, ನೀರೆತ್ತುವ ಪಂಪ್‌, ಪ್ರತ್ಯೇಕ ಟ್ರಾನ್ಸ್‌ ಫಾರಂ ಅಳವಡಿಕೆ ಸೇರಿದಂತೆ ಮೊದಲಾದ ಕಾರ್ಯ ಮಾಡಲಾಗಿದೆ.

₹50 ನಿಂದ ದೇಣಿಗೆ ಸಂಗ್ರಹ

ಕಳೆದ ಒಂದು ವರ್ಷದಿಂದ ನಾಗರಾಳು ಕೆರೆ ಗ್ರಾಮಸ್ಥರೇ ಹಣ ಹಾಕಿ ತುಂಬಿಸಿಕೊಳ್ಳುವ ಯೋಜನೆ ಹಾಕಿಕೊಂಡಿದ್ದರು. ಇದೇ ಮಾದರಿಯಲ್ಲಿ ಕಬ್ಬಳಿ-ಗುಣಸಾಗರ ಕೆರೆ ತುಂಬಿಸಲು ಯೋಜನೆ ಹಾಕಿದ ಸಮಾನ ಮನಸ್ಕರು ಗ್ರಾಮಸ್ಥರ ಬಳಿ ಚರ್ಚಿಸಿದರು. ಇದಕ್ಕೆ ಗ್ರಾಮಸ್ಥರು ಸಹಕಾರದ ಭರವಸೆ ನೀಡಿದರು. ಅಲ್ಲಿಂದ ಯೋಜನೆ ಶುರುವಾಯಿತು. ಬಳಿಕ ಮನೆ ಮನೆಗೆ ತೆರಳಿ ದೇಣಿಗೆ ಸಂಗ್ರಹ ಕಾರ್ಯ ಆರಂಭಿಸಲಾಯಿತು. ಅವರ ಶಕ್ತಿಗೆ ಅನುಸಾರ ₹50 ನಿಂದ ₹50 ಸಾವಿರದ ವರೆಗೆ ದೇಣಿಗೆ ನೀಡಿದ್ದಾರೆ. ಆ ಹಣದಲ್ಲಿ ಯೋಜನೆ ಪೂರ್ಣಗೊಳಿಸಲಾಗಿದೆ ಎಂದು ಉದಯ್‌ ಕುಮಾರ್‌, ಯತೀಶ್‌, ಕುಮಾರಸ್ವಾಮಿ ಹಾಗೂ ಮಧು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿದ್ದಾರೆ.

ನಿರ್ವಹಣೆಗೆ ಕೆರೆ ಅಭಿವೃದ್ಧಿ ಸಂಘ ಸ್ಥಾಪನೆ ಚಿಂತನೆ

ಕೆರೆ ತುಂಬಿಸುವ ಯೋಜನೆ ಸಹಕಾರಗೊಂಡಿದೆ. ಆದರೆ, ಅದನ್ನು ನಿರ್ವಹಣೆ ಮಾಡಬೇಕು ಹಾಗೂ ಶಾಶ್ವತ ನೀರಾವರಿ ವ್ಯವಸ್ಥೆ ಕಲ್ಪಿಸಬೇಕಿದೆ. ಹಾಗಾಗಿ, ಕೆರೆ ಅಭಿವೃದ್ಧಿ ಸಂಘ ಸ್ಥಾಪನೆ ಮಾಡುವ ಚಿಂತನೆ ಇದೆ. ಜತೆಗೆ, ಹಾಲು ಉತ್ಪಾದಕರ ಒಕ್ಕೂಟದ ಮಾದರಿಯಲ್ಲಿ ಕೃಷಿ ಉತ್ಪನ್ನಗಳ ಮಾರಾಟ ಒಕ್ಕೂಟ ರಚನೆ ಮಾಡಿ ರೈತರ ಉತ್ಪನ್ನ ಸಂರಕ್ಷಣೆ ಮಾಡಿ ಬೇಡಿಕೆ ಹೆಚ್ಚಾಗಿರುವ ಸಮಯದಲ್ಲಿ ಮಾರಾಟ ಮಾಡುವ ಮೂಲಕ ಹೆಚ್ಚಿನ ಲಾಭ ರೈತರಿಗೆ ದೊರೆಯುವಂತೆ ಮಾಡ ಬೇಕೆಂಬ ಯೋಜನೆ ಇದೆ ಎಂದು ಸಮಾನಮನಸ್ಕರು ತಿಳಿಸಿದ್ದಾರೆ.

PREV
Read more Articles on
click me!

Recommended Stories

ಗೃಹಪ್ರವೇಶಕ್ಕೆ ಬಂದ ಅತಿಥಿಗಳಿಗೆ ಸರ್ಪ್ರೈಸ್! ಮನೆ ಮುಂದೆ ವಂದೇ ಮಾತರಂ ಪೂರ್ಣ ಗೀತೆಯ ಸೆಲ್ಫಿ ಸ್ಪಾಟ್ ಹಾಕಿಸಿದ ಶಿಕ್ಷಕಿ!
ಟಾರ್ಗೆಟ್ 2028 ಟಾಸ್ಕ್, ಕುಮಾರಸ್ವಾಮಿ-ನಿಖಿಲ್‌ಗೆ ಹೊಸ ಜವಾಬ್ದಾರಿ! JDS ಪಾಳಯದಲ್ಲಿ ಸಂಚಲನ