
ಬೆಂಗಳೂರು (ಆ.28): ಕಂಪನಿಯೊಂದರ ನಿಜವಾದ ಸಂಸ್ಕೃತಿ (Corporate Culture) ಹೇಗಿದೆ ಎಂದು ತಿಳಿಯಬೇಕೇ? ಹಾಗಿದ್ದರೆ ಅಲ್ಲಿ ಕೆಲಸ ಮಾಡುವ ಉದ್ಯೋಗಿಗಳನ್ನಷ್ಟೇ ಅಲ್ಲ, ಅಲ್ಲಿಗೆ ಉದ್ಯೋಗಿಗಳನ್ನು ಡ್ರಾಪ್ ಮಾಡಲು ಬರುವ ಚಾಲಕರನ್ನೂ ಕೇಳಿ ನೋಡಬೇಕು! ಬೆಂಗಳೂರಿನ ಗೂಗಲ್ 'ಅನಂತ' (Google Ananta) ಕಚೇರಿಯ ಬಗ್ಗೆ ಕ್ಯಾಬ್ ಚಾಲಕರೊಬ್ಬರು ಹಂಚಿಕೊಂಡಿರುವ ಅನುಭವ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದ್ದು, ನೆಟ್ಟಿಗರ ಮೆಚ್ಚುಗೆಗೆ ಪಾತ್ರವಾಗಿದೆ.
ಬೆಂಗಳೂರು ಮೂಲದ ಲೇಖಕಿ ಹಾಗೂ ಕೋಚ್ ತನ್ಯಾ ಮಾಥುರ್ ಭಟ್ಟಾಚಾರ್ಯ ಅವರು ತಮ್ಮ ಲಿಂಕ್ಡ್‌ಇನ್ (LinkedIn) ಖಾತೆಯಲ್ಲಿ "ಕಂಪನಿಯ ಸಂಸ್ಕೃತಿ ತಿಳಿಯಬೇಕಿದ್ದರೆ ಚಾಲಕರನ್ನು ಕೇಳಿ" ಎಂಬ ಶೀರ್ಷಿಕೆಯಡಿಯಲ್ಲಿ ಈ ಪ್ರಸಂಗವನ್ನು ಹಂಚಿಕೊಂಡಿದ್ದಾರೆ.
ತನ್ಯಾ ಅವರು ಇತ್ತೀಚೆಗೆ ಗೂಗಲ್ ಕಚೇರಿಗೆ ಭೇಟಿ ನೀಡಿದ್ದಾಗ, ಅವರಿಗೆ ಶರತ್ ಎಂಬುವವರ ಕ್ಯಾಬ್ ವ್ಯವಸ್ಥೆ ಮಾಡಿದ್ದರು. ಕಾರ್ಯಕ್ರಮವೊಂದರ ನಂತರ ಮಧ್ಯಾಹ್ನ 11:30ಕ್ಕೆ ವಾಪಸಾಗುವುದಾಗಿ ತನ್ಯಾ ಚಾಲಕ ಶರತ್‌ಗೆ ತಿಳಿಸಿದ್ದರು. ಆದರೆ ಕಚೇರಿಯ ಮಾಸ್ಟರ್‌ಕ್ಲಾಸ್ ಮತ್ತು ಊಟದ ಕಾರಣದಿಂದಾಗಿ ಅವರು ವಾಪಸಾಗಲು ಮಧ್ಯಾಹ್ನ 12:30 ದಾಟಿತ್ತು. ಚಾಲಕನನ್ನು ಕಾಯಿಸಿದ್ದಕ್ಕಾಗಿ ತನ್ಯಾ ಕ್ಷಮೆ ಯಾಚಿಸಿದಾಗ, ಚಾಲಕ ಶರತ್ ನೀಡಿದ ಉತ್ತರ ಅವರಿಗೆ ಅಚ್ಚರಿ ತಂದಿತು. ಮೇಡಂ, ನೀವು ತಡ ಮಾಡಿದ್ದಕ್ಕೆ ಧನ್ಯವಾದಗಳು! ನನಗೆ ಗೂಗಲ್ ಕಚೇರಿಗೆ ಬರುವುದೆಂದರೆ ತುಂಬಾ ಇಷ್ಟ ಎಂದು ಶರತ್ ಹೇಳಿದ್ದಾರೆ.
ಕಾರಣ ಏನೆಂದು ವಿಚಾರಿಸಿದಾಗ ಶರತ್, ಗೂಗಲ್ ಆವರಣದಲ್ಲಿ ಚಾಲಕರಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಬಿಚ್ಚಿಟ್ಟರು. "ಗೂಗಲ್ ಕಚೇರಿಯ ಬೇಸ್‌ಮೆಂಟ್‌ನಲ್ಲಿ ಕ್ಯಾಬ್‌ಗಳಿಗೆ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಇದೆ. ಅಲ್ಲಿ ಚಾಲಕರಿಗೆ ಚಹಾ, ಕಾಫಿ, ತಿಂಡಿ ಮತ್ತು 3 ಬಾರಿಯ ಬಫೆ (Buffet) ಊಟದ ವ್ಯವಸ್ಥೆ ಮಾಡಲಾಗುತ್ತದೆ. ಇಲ್ಲಿನ ಊಟ ತುಂಬಾ ರುಚಿಯಾಗಿರುತ್ತದೆ, ನಾನು ಬೆಳಗ್ಗಿನ ಉಪಹಾರ ಇಲ್ಲೇ ಮಾಡಿದೆ. ನೀವು ತಡ ಮಾಡಿದ್ದರಿಂದ ನನಗೆ ಬೇಗನೇ ಮಧ್ಯಾಹ್ನದ ಊಟ ಮಾಡಲು ಸಮಯ ಸಿಕ್ಕಿತು" ಎಂದು ಶರತ್ ಸಂತಸದಿಂದ ಹಂಚಿಕೊಂಡಿದ್ದಾರೆ.
ಚಾಲಕರ ಜೊತೆ ಗೂಗಲ್ ನಡೆದುಕೊಳ್ಳುವ ರೀತಿಯನ್ನು ಶರತ್ ಶ್ಲಾಘಿಸಿದ್ದಾರೆ. ಗೂಗಲ್‌ನಲ್ಲಿ ಆಹಾರ ವ್ಯರ್ಥ ಮಾಡಬೇಡಿ, ನಿಮಗೆ ಎಷ್ಟು ಬೇಕೋ ಅಷ್ಟೇ ತಟ್ಟೆಗೆ ಹಾಕಿಕೊಳ್ಳಿ ಎಂದು ಹೇಳುತ್ತಾರೆ. ಆದರೆ ಎಷ್ಟು ಬಾರಿ ಬೇಕಾದರೂ ಮತ್ತೆ ಹೋಗಿ ಊಟ ಪಡೆದುಕೊಳ್ಳಲು ನಮಗೆ ಸಂಪೂರ್ಣ ಸ್ವಾತಂತ್ರ್ಯವಿದೆ. ಇತರ ಕೆಲವು ಕಂಪನಿಗಳು ಹೊರಗೆ ಊಟ ಮಾಡಲು ಅಲ್ಪಸ್ವಲ್ಪ ಭತ್ಯೆ ಕೊಡುತ್ತವೆ, ಆದರೆ ಗೂಗಲ್ ಅತ್ಯುತ್ತಮ. ಇಲ್ಲಿ ನಾವು ಅತಿಥಿಗಳಂತೆ ಭಾಸವಾಗುತ್ತೇವೆ" ಎಂದು ಚಾಲಕ ಶರತ್ ಹೆಮ್ಮೆಯಿಂದ ಹೇಳಿದ್ದಾರೆ.
ಚಾಲಕನ ಮಾತುಗಳು ತಮ್ಮ ಮೇಲೆ ಬೀರಿದ ಪ್ರಭಾವದ ಬಗ್ಗೆ ಬರೆದಿರುವ ತನ್ಯಾ, ಒಂದು ಸಂಸ್ಥೆಯ ಹೈಟೆಕ್ ಕಚೇರಿಯ ಸೌಂದರ್ಯವನ್ನು ಯಾರು ಬೇಕಾದರೂ ಮೆಚ್ಚಬಹುದು. ಆದರೆ ಆ ಸಂಸ್ಥೆಯ ನಿಜವಾದ ಸಂಸ್ಕೃತಿ ಮತ್ತು ಮೌಲ್ಯ ಏನೆಂಬುದು ಅದರ ಬೇಸ್‌ಮೆಂಟ್ ಪಾರ್ಕಿಂಗ್‌ನಲ್ಲಿ ತಿಳಿಯುತ್ತದೆ. ಕೇವಲ ನಿಮ್ಮ ಗೋಡೆಗಳ ಮೇಲಿರುವ ಸಾಲುಗಳು ಸಂಸ್ಥೆಯ ಸಂಸ್ಕೃತಿಯಾಗುವುದಿಲ್ಲ; ನಿಮ್ಮ ಕಚೇರಿಯ ಬಾಗಿಲು ತುಳಿಯದ, ಪ್ರತ್ಯಕ್ಷವಾಗಿ ನಿಮಗಾಗಿ ಕೆಲಸ ಮಾಡದ ವ್ಯಕ್ತಿಗಳನ್ನು ನೀವು ಹೇಗೆ ನಡೆಸಿಕೊಳ್ಳುತ್ತೀರಿ ಎಂಬುದರ ಮೇಲೆ ಅದು ನಿರ್ಧಾರವಾಗುತ್ತದೆ" ಎಂದು ಪೋಸ್ಟ್‌ನಲ್ಲಿ ಉಲ್ಲೇಖಿಸಿದ್ದಾರೆ.