Kempegowda International Airport: ಬೆಂಗ್ಳೂರು ಇಂಟರ್‌ನ್ಯಾಷನಲ್‌ ಏರ್‌ಪೋರ್ಟ್‌ಲ್ಲಿ ಅರಣ್ಯ ಘಟಕವೇ ಇಲ್ಲ..!

By Kannadaprabha NewsFirst Published Sep 13, 2022, 7:18 AM IST
Highlights

ರಾಜ್ಯದ ಅರಣ್ಯ ಸಂಪತ್ತು ಏರ್‌ಪೋರ್ಟ್‌ ಮೂಲಕ ವಿದೇಶಕ್ಕೆ ಕಳ್ಳಸಾಗಣೆ, ಪ್ರತಿ ವರ್ಷ 60 ಕೇಸ್‌ ದಾಖಲು, ಸಂಪತ್ತಿನ ಲೂಟಿ ತಡೆಗೆ ಘಟಕ ಅನಿವಾರ್ಯ

ಜಯಪ್ರಕಾಶ್‌ ಬಿರಾದಾರ್‌

ಬೆಂಗಳೂರು(ಸೆ.13):  ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ‘ವಿಶೇಷ ಅರಣ್ಯ ಘಟಕ’ ಸ್ಥಾಪಿಸುವಂತೆ ಅರಣ್ಯ ಇಲಾಖೆಯು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದ ಪ್ರಸ್ತಾವನೆ ಕಳೆದ ನಾಲ್ಕೂವರೆ ವರ್ಷದಿಂದ ಧೂಳು ಹಿಡಿಯುತ್ತಿದೆ.
ವಿಮಾನ ನಿಲ್ದಾಣದಲ್ಲಿ ವಾರ್ಷಿಕ ಸರಾಸರಿ 50ರಿಂದ 60 ಅರಣ್ಯ ಸಂಪನ್ಮೂಲ ಕಳ್ಳಸಾಗಣೆ ಪ್ರಕರಣಗಳು ದಾಖಲಾಗುತ್ತಿವೆ. ರಾಜ್ಯದ ಅರಣ್ಯ ಸಂಪನ್ಮೂಲ ಹಾಗೂ ವನ್ಯಜೀವಿಗಳು ವಿದೇಶ ಹಾಗೂ ಹೊರ ರಾಜ್ಯಗಳಿಗೆ ಕಳ್ಳ ಸಾಗಣೆಯಾಗುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ವಿಶೇಷ ಘಟಕ ಮತ್ತು ಖಾಯಂ ಸಿಬ್ಬಂದಿ ನೇಮಕ ಅವಶ್ಯಕತೆ ಹೆಚ್ಚಿದೆ. ಆದರೆ, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರದ ಜತೆ ಮಾತುಕತೆ ನಡೆಸಿ ಅನುಮತಿ ಕೊಡಿಸಬೇಕಾದ ರಾಜ್ಯ ಸರ್ಕಾರದ ನಿರ್ಲಕ್ಷ್ಯ ಧೋರಣೆಯೇ ಅರಣ್ಯ ಸಂಪತ್ತಿನ ಕಳ್ಳಸಾಗಣೆಗೆ ಅನುಕೂಲ ಮಾಡಿಕೊಟ್ಟಂತಾಗಿದೆ.

ಕಳೆದ ಒಂದು ದಶಕದಿಂದ ವಿಮಾನ ನಿಲ್ದಾಣದಲ್ಲಿ ಅರಣ್ಯ ಸಂಪನ್ಮೂಲಗಳ ಕಳ್ಳಸಾಗಣೆ ಹೆಚ್ಚು ವರದಿ ಅಗುತ್ತಿರುವುದರಿಂದ ಅಲ್ಲೊಂದು ತಜ್ಞರನ್ನೊಳಗೊಂಡ ವಿಶೇಷ ಅರಣ್ಯ ಘಟಕ ಆರಂಭಿಸಲು ಅರಣ್ಯ ಇಲಾಖೆ 2018ರಲ್ಲಿ ನಿರ್ಧರಿಸಿತ್ತು. ಘಟಕ ಸ್ಥಾಪನೆಗೆ ರಾಜ್ಯ ಸರ್ಕಾರದ ಅನುಮತಿ ಜತೆಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ(ಬಿಐಎಎಲ್‌)ದ ಒಪ್ಪಿಗೆ, ವಿಮಾನ ನಿಲ್ದಾಣದಲ್ಲಿ ಸ್ಥಳಾವಕಾಶ, ಸಿಬ್ಬಂದಿ ಸಹಕಾರದ ಅವಶ್ಯಕತೆ ಇದೆ. ಹೀಗಾಗಿ, ಅರಣ್ಯ ಇಲಾಖೆ 2018 ಫೆಬ್ರವರಿಯಲ್ಲಿ ಅರಣ್ಯ ಪಡೆಯ ಅಂದಿನ ಮುಖ್ಯಸ್ಥರಾಗಿದ್ದ ಪುನಾಟಿ ಶ್ರೀಧರ್‌ ಅವರ ನೇತೃತ್ವದಲ್ಲಿ ರಾಜ್ಯ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಆದರೆ, ರಾಜ್ಯ ಸರ್ಕಾರ ಪ್ರಸ್ತಾವನೆಯನ್ನು ಮೂಲೆ ಗುಂಪಾಗಿಸಿದೆ.

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ "ಡಿಜಿಯಾತ್ರೆ" ಆರಂಭ: ಆ್ಯಪ್ ಅಳವಡಿಸಿಕೊಂಡ ದೇಶದ 2ನೇ ವಿಮಾನ ನಿಲ್ದಾಣ

ಸಂಶಯ ಬಂದಾಗಲೆಲ್ಲ ಅರಣ್ಯ ಕಚೇರಿಗೆ ಮೊರೆ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಗೋ ಸೇವೆ ಹಾಗೂ ಪ್ರಯಾಣಿಕರ ಲಗೇಜು ಮೂಲಕ ವನ್ಯಜೀವಿ, ಅದರ ಭಾಗಗಳು, ರಕ್ತಚಂದನ, ಶ್ರೀಗಂಧದಂತಹ ಕಳ್ಳಸಾಗಣೆ ಆಗುತ್ತಿರುತ್ತವೆ. ಸದ್ಯ ವಿಮಾನ ನಿಲ್ದಾಣದ ಭದ್ರತೆ ವಹಿಸಿಕೊಂಡಿರುವ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌) ಸಿಬ್ಬಂದಿಗೆ ಪ್ರಾಣಿಗಳ ಚರ್ಮ, ಉಗುರುಗಳಿಂದ ತಯಾರಿಸಿದ ಉತ್ಪನ್ನಗಳನ್ನು ಗುರುತಿಸುವುದು ಕಷ್ಟವಾಗುತ್ತದೆ. ಈ ಬಗ್ಗೆ ಸಂಶಯ ಬಂದಾಗ ಸಮೀಪದಲ್ಲಿರುವ ಬೆಂಗಳೂರು ಗ್ರಾಮಾಂತರ ವಿಭಾಗದ ದೇವನಹಳ್ಳಿ ವ್ಯಾಪ್ತಿಯ ಅರಣ್ಯ ಇಲಾಖೆ ಕಚೇರಿ ಸಿಬ್ಬಂದಿಯ ಮೊರೆ ಹೋಗುತ್ತಿದ್ದಾರೆ. ಖಚಿತ ಪ್ರಕರಣಗಳಲ್ಲಿ ವಿಮಾನ ನಿಲ್ದಾಣ ಪೊಲೀಸ್‌ ಠಾಣೆ ಸಿಬ್ಬಂದಿಯು ಸಂಪತ್ತನ್ನು ವಶಪಡಿಸಿಕೊಂಡು ಆನಂತರ ಹೆಚ್ಚುವರಿ ತನಿಖೆಗೆ ಅರಣ್ಯ ಇಲಾಖೆಗೆ ವರ್ಗಾಯಿಸುತ್ತಿದ್ದಾರೆ.

ಯಾವೆಲ್ಲಾ ಅರಣ್ಯ ಸಂಪತ್ತು ಕಳ್ಳಸಾಗಣೆ?

ಆನೆ ದಂತದ ತುಂಡು ಹಾಗೂ ಉತ್ಪನ್ನಗಳು, ವನ್ಯ ಪ್ರಾಣಿಗಳ ಚರ್ಮ, ಉಗುರಿನ ಉತ್ಪನ್ನಗಳು, ಶ್ರೀಗಂಧ, ರಕ್ತ ಚಂದನ, ಎರಡು ತಲೆ ಹಾವು, ಸ್ಟಾರ್‌ ಆಮೆ ಸೇರಿ ಹಲವು ಅರಣ್ಯ ಉತ್ಪನ್ನಗಳು ಹೊರ ರಾಜ್ಯ ಹಾಗೂ ವಿದೇಶಗಳಿಗೆ ಅಕ್ರಮ ಸಾಗಣೆ ಆಗುತ್ತಿವೆ.

ಸಂಪತ್ತಿನ ರಕ್ಷಣೆಗೆ ಜಂಟಿ ಕಾರ್ಯಾಚರಣೆ ಅನಿವಾರ್ಯ

ವಿಮಾನ ನಿಲ್ದಾಣದಲ್ಲಿ ವಾರ್ಷಿಕ ಸುಮಾರು 50ರಿಂದ 60 ಅರಣ್ಯ ಸಂಪನ್ಮೂಲ ಕಳ್ಳಸಾಗಣೆ ಪ್ರಕರಣಗಳು ದಾಖಲಾಗುತ್ತಿವೆ. ಅರಣ್ಯ ಇಲಾಖೆಯ ನುರಿತ ಸಿಬ್ಬಂದಿಯು ಸಿಐಎಸ್‌ಎಫ್‌ ಜತೆ ಜಂಟಿಯಾಗಿ ಕಾರ್ಯ ನಿರ್ವಹಿಸಿದರೆ ಸುಲಭವಾಗಿ ಅರಣ್ಯ ಸಂಪನ್ಮೂಲಗಳ ಕಳ್ಳಸಾಗಣೆ ತಡೆಗಟ್ಟಬಹುದು. ಈ ಉದ್ದೇಶದೊಂದಿಗೆ ವಿಶೇಷ ಘಟಕ ಸ್ಥಾಪನೆಗೆ ಪ್ರಸ್ತಾವನೆ ಸಿದ್ಧಪಡಿಸಲಾಗಿತ್ತು ಎಂದು ಅರಣ್ಯ ಇಲಾಖೆ ಉನ್ನತ ಅಧಿಕಾರಿ ತಿಳಿಸಿದರು.
ಪತ್ರ ಬರೆದಿದ್ದೇವೆ.

ಬೆಂಗಳೂರು ಏರ್‌ಪೋರ್ಟ್‌ಗೆ 5 ಹೆಚ್ಚುವರಿ ಮೆಮು ರೈಲು ಸಂಚಾರ

ಸದ್ಯ ಬಿಐಎಎಲ್‌ಗೆ ಪತ್ರ ಬರೆದು ಘಟಕ ಸ್ಥಾಪನೆಗೆ ಉಚಿತವಾಗಿ ಸ್ಥಳಾವಕಾಶ ನೀಡುವಂತೆ ಕೋರಲಾಗಿದೆ. ಸಕಾರಾತ್ಮಕ ಪ್ರತಿಕ್ರಿಯೆ ಬರದಿದ್ದರೆ ಸರ್ಕಾರವೇ ಮಾತುಕತೆ ನಡೆಸುವಂತೆ ಸಂಬಂಧಪಟ್ಟ ಸಚಿವರಿಗೆ ಒತ್ತಾಯಿಸಲಾಗುವುದು. ಒಂದು ವೇಳೆ ಅನುಮತಿ ದೊರೆತರೆ ಅರಣ್ಯ ಉತ್ಪನ್ನ ಹಾಗೂ ವನ್ಯ ಜೀವಿಗಳ ಕುರಿತು ಪರಿಣತಿ ಪಡೆದಿರುವ ಹಾಗೂ ತರಬೇತಿ ಪಡೆದ ಸಿಬ್ಬಂದಿ ನಿಯೋಜನೆ ಮಾಡಲಾಗುತ್ತದೆ. ನಿತ್ಯ ಮೂರು ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಾರೆ ಅಂತ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮಿತ್‌ ಕುಮಾರ್‌ ಸುಭಾಷ್‌ರಾವ್‌ ಪಾಟೀಲ್‌ ತಿಳಿಸಿದ್ದಾರೆ. 

ಅರಣ್ಯ ಘಟಕ ಏಕೆ ಬೇಕು?

*ಏರ್‌ಪೋರ್ಟ್‌ಗೆ ಸಿಐಎಸ್‌ಎಫ್‌ ಸಿಬ್ಬಂದಿ ಭದ್ರತೆ
*ಅರಣ್ಯ ಸಂಪತ್ತಿನಿಂದ ಮಾಡಿದ ಉತ್ಪನ್ನ ಪತ್ತೆ ಕಷ್ಟ
*ಈ ಕಾರಣಕ್ಕಾಗಿ ಶಾಶ್ವತ ಘಟಕ ಸ್ಥಾಪನೆ ಅಗತ್ಯ

click me!