ಹುಬ್ಬಳ್ಳಿ-ಧಾರವಾಡ: ನಿರಂತರ ಮಳೆಗೆ ಮತ್ತೆ ಪ್ರವಾಹದ ಭೀತಿ..!

By Kannadaprabha News  |  First Published Sep 13, 2022, 6:22 AM IST

ಸೋಯಾ, ಉದ್ದು ಹೆಸರು ಸೇರಿದಂತೆ ಇತರ ಬೆಳೆಗಳು ಕಟಾವಿಗೆ ಬಂದಿವೆ. ಆದರೆ, ಮಳೆ ಎಡಬಿಡದೆ ಸುರಿಯುತ್ತಿರುವ ಕಾರಣ ಬಂದ ಫಸಲು ತೆಗೆಯಲಾಗದೇ ರೈತರು ಪರದಾಡುವಂತಾಗಿದೆ


ಹುಬ್ಬಳ್ಳಿ/ಧಾರವಾಡ(ಸೆ.13): ಕಳೆದ ಒಂದು ವಾರದಿಂದ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತಗೊಂಡಿದ್ದು, ರಸ್ತೆ, ತಗ್ಗು ಪ್ರದೇಶದ ಮನೆಗಳು ಜಲಾವೃತಗೊಂಡಿವೆ. ನಿರಂತರ ಮಳೆಗೆ 2 ದಿನದಲ್ಲಿ ಹುಬ್ಬಳ್ಳಿ ಗ್ರಾಮೀಣ ಹಾಗೂ ನಗರ ವ್ಯಾಪ್ತಿಯಲ್ಲಿ 30ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿದು ಬಿದ್ದಿರುವ ಬಗ್ಗೆ ವರದಿಯಾಗಿದೆ.

ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಇನ್ನು ಕುಂದಗೋಳ, ನವಲಗುಂದ ತಾಲೂಕುಗಳಲ್ಲಿ ಹಳ್ಳಗಳೆಲ್ಲ ಮೈದುಂಬಿ ಹರಿಯುತ್ತಿದ್ದು, ಹಳ್ಳದ ಅಕ್ಕಪಕ್ಕದ ಗ್ರಾಮಗಳಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದೆ.

Tap to resize

Latest Videos

Karnataka Rains: ಮಳೆ ಸಂತ್ರಸ್ತರಿಗೆ ಸಾಂಕ್ರಾಮಿಕ ರೋಗದ ಭೀತಿ..!

ಭಾನುವಾರ ತಡರಾತ್ರಿಯಿಂದ ಸುರಿಯುತ್ತಿರುವ ಮಳೆ ಸೋಮವಾರ ರಾತ್ರಿವರೆಗೂ ಮುಂದುವರಿಯಿತು. ಇದರ ಪರಿಣಾಮ ಮಳೆಯಲ್ಲಿಯೇ ವ್ಯಾಪಾರ ವಹಿವಾಟು ನಡೆಸುವಂತಾಯಿತು. ಕಚೇರಿ, ನಿತ್ಯ ಚಟುವಟಿಕೆಯಲ್ಲಿ ತೊಡಗಿಕೊಳ್ಳುವವರಿಗೆ ಮಳೆ ತೀವ್ರ ಅಡಚಣೆ ಮಾಡಿತು. ಹೀಗಾಗಿ ಮನೆಯಿಂದ ಆಚೆ ಬರುವವರು ಮಳೆಯಿಂದ ರಕ್ಷಿಸಿಕೊಳ್ಳಲು ಜಾಕೇಟ್‌, ಕೊಡೆ ಹಿಡಿದು ಹೋಗುವುದು ಸಹಜವಾಗಿತ್ತು.

ದುರ್ಗದಬೈಲ್‌, ಗಾಂಧಿ ಮಾರ್ಕೆಟ್‌, ಬಟರ್‌ ಮಾರ್ಕೆಟ್‌, ಜನತಾ ಬಜಾರ್‌, ದಾಜಿಬಾನಪೇಟ್‌, ಹಳೇಹುಬ್ಬಳ್ಳಿ ಮಾರ್ಕೆಟ್‌ನಲ್ಲಿ ತಾಡಪಾಲ್‌ ಹೊಚ್ಚಿಕೊಂಡೇ ನಿತ್ಯದ ವ್ಯಾಪಾರ ವಹಿವಾಟು ನಡೆಸಿದರು. ಧಾರಾಕಾರ ಮಳೆಗೆ ತಗ್ಗು ಪ್ರದೇಶದ ರಸ್ತೆಗಳು ಜಲಾವೃತಗೊಂಡ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡಿದರು.

ಇನ್ನು ನಿರಂತರ ಮಳೆಯಿಂದ ತಾರಿಹಾಳದ ಬಸಪ್ಪ ಕಣನಜನವರ ಎಂಬವರ ಮನೆ ಕುಸಿದಿದೆ. ಅದರಂತೆ ಹುಬ್ಬಳ್ಳಿ ಗ್ರಾಮೀಣ ಭಾಗದ ದೇವರಗುಡಿಹಾಳ, ಶಿರಗುಪ್ಪಿ, ಮಂಟೂರ, ನೂಲ್ವಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ 29 ಮನೆಗಳು ಭಾಗಶಃ ಕುಸಿದಿವೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.

Dharwad: ಸರ್ಕಾರದ ಷರತ್ತು, ರೈತರಿಗೆ ಇಕ್ಕಟ್ಟು..!

ಬೆಳೆ ಹಾನಿ:

ಸೋಯಾ, ಉದ್ದು ಹೆಸರು ಸೇರಿದಂತೆ ಇತರ ಬೆಳೆಗಳು ಕಟಾವಿಗೆ ಬಂದಿವೆ. ಆದರೆ, ಮಳೆ ಎಡಬಿಡದೆ ಸುರಿಯುತ್ತಿರುವ ಕಾರಣ ಬಂದ ಫಸಲು ತೆಗೆಯಲಾಗದೇ ರೈತರು ಪರದಾಡುವಂತಾಗಿದೆ. ಹೀಗಾಗಿ ಕೈಗೆ ಬಂದು ತುತ್ತು ಬಾಯಿ ಬರದಂತಾಗಿದೆ. ನವಲಗುಂದ, ಅಣ್ಣಿಗೇರಿ, ಕುಂದಗೋಳಗಳಲ್ಲಿ ಜಿಟಿಜಿಟಿ ಮಳೆ ಮುಂದುವರಿದಿದೆ.

ನಿರಂತರವಾಗಿ ಸುರಿಯುತ್ತಿರುವ ಗ್ರಾಮೀಣ ಭಾಗದಲ್ಲಿ ಎರಡು ದಿನದಲ್ಲಿ 29 ಮನೆಗಳು ಭಾಗಶಃ ಕುಸಿದಿವೆ. ತಲಾಟಿ ಮತ್ತು ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುವ ಮೂಲಕ ಸಮೀಕ್ಷೆ ಕಾರ್ಯ ಮುಂದವರಿಸಿದ್ದಾರೆ ಅಂತ  ಹುಬ್ಬಳ್ಳಿ ಗ್ರಾಮೀಣ ತಹಸೀಲ್ದಾರ್‌ ಪ್ರಕಾಶ ನಾಶಿ ತಿಳಿಸಿದ್ದಾರೆ. 
 

click me!