ನಂದಿ ಬೆಟ್ಟ ರಸ್ತೆ ತಾತ್ಕಾಲಿಕ ದುರಸ್ತಿ : ಪ್ರವಾಸಿಗರಿಗೆ ಪ್ರವೇಶ ಇಲ್ಲ

By Kannadaprabha News  |  First Published Aug 27, 2021, 2:57 PM IST
  • ವ್ಯಾಪಕ ಮಳೆಯಿಂದ ಭೂ ಕುಸಿತಕ್ಕೆ ಸಾಕ್ಷಿಯಾಗಿದ್ದ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮ
  • ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತಾತ್ಕಲಿಕವಾಗಿ ಗಿರಿಧಾಮಕ್ಕೆ ಹೋಗಿ ಬರಲು ರಸ್ತೆ ದುರಸ್ತಿ

 ಚಿಕ್ಕಬಳ್ಳಾಪುರ (ಆ.27):  ವ್ಯಾಪಕ ಮಳೆಯಿಂದ ಭೂ ಕುಸಿತಕ್ಕೆ ಸಾಕ್ಷಿಯಾಗಿದ್ದ ಜಿಲ್ಲೆಯ ವಿಶ್ವ ವಿಖ್ಯಾತ ನಂದಿಗಿರಿಧಾಮದಲ್ಲಿ ಗುಡ್ಡೆ ಹಾಗೂ ಬಂಡೆ ಕುಸಿತಕ್ಕೆ ಕೊಚ್ಚಿ ಹೋಗಿದ್ದ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ತಾತ್ಕಲಿಕವಾಗಿ ಗಿರಿಧಾಮಕ್ಕೆ ಹೋಗಿ ಬರಲು ರಸ್ತೆ ದುರಸ್ತಿಗೊಳಿಸಿದ್ದಾರೆ.

ಕಳೆದ ಮಂಗಳವಾರ ರಾತ್ರಿ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಯಿಂದ ಮೊದಲ ಬಾರಿಗೆ ನಂದಿಗಿರಿಧಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಗಿರಿಧಾಮಕ್ಕೆ ವಾರಾಂತ್ಯದಲ್ಲಿ ಬರುವ ಸಾವಿರಾರು ಪ್ರವಾಸಿಗರು ಭೂ ಕುಸಿತದಿಂದಾಗಿ ಸುರಕ್ಷತೆ ಬಗ್ಗೆ ಅನುಮಾನಪಡುವಂತಾಗಿದೆ.

Tap to resize

Latest Videos

ನಂದಿ ಬೆಟ್ಟ ಮಾರ್ಗದಲ್ಲಿ ಭಾರಿ ಭೂ ಕುಸಿತ : ಸಂಚಾರ ಸಂಪೂರ್ಣ ಬಂದ್

ಎರಡು ದಿನ ಕಗ್ಗತ್ತಲ್ಲಲ್ಲಿ ಗಿರಿಧಾಮ :  ಮಳೆಯ ಅಬ್ಬರಕ್ಕೆ ಒಂದಡೆ ಗುಡ್ಡೆ ಕುಸಿತವಾಗಿ ರಸ್ತೆ ಕಿತ್ತು ಹೋಗಿ ಸಂಪರ್ಕ ಕಡಿದು ಹೋದರೆ ಗಿರಿಧಾಮದಲ್ಲಿ ವಿದ್ಯುತ್‌ ಪೂರೈಕೆ ಮಾಡುವ ವಿದ್ಯುತ್‌ ಕಂಬಗಳು ನೆಲಕ್ಕುರುಳಿ ವಿದ್ಯುತ್‌ ಸ್ಥಗಿತಗೊಂಡಿತ್ತು. ಹೀಗಾಗಿ ಎರಡು ದಿನಗಳಿಂದ ನಂದಿಗಿರಿಧಾಮ ಕಗ್ಗತ್ತಲಿನಲ್ಲಿ ಇರಬೇಕಾಯಿತು. ಗುರುವಾರ ಮಧ್ಯಾಹ್ನದ ವೇಳೆಗೆ ದುರಸ್ತಿ ಕಾರ್ಯ ನಡೆದು ಗಿರಿಧಾಮಕ್ಕೆ ವಿದ್ಯುತ್‌ ಸಂಪರ್ಕ ಕಲ್ಪಿಸಲಾಗಿದೆ.

ಸದ್ಯಕ್ಕೆ ಭೂ ಕುಸಿತದಿಂದ ಹಾಳಾಗಿದ್ದ ರಸ್ತೆಯನ್ನು ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ದುರಸ್ತಿಗೊಳಿಸಿದ್ದಾರೆ. ಈಗಾಗಲೇ ರಸ್ತೆ ನಿರ್ಮಾಣದ ಬಗ್ಗೆ ಸ್ಥಳದಿಂದ ಜಿಪಿಎಸ್‌ ಪೋಟೋ ತೆಗೆದು ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ. ರಸ್ತೆ ಸಮರ್ಪಕವಾಗಿ ನಿರ್ಮಾಣ ಆಗುವವರೆಗೂ ಪ್ರವಾಸಿಗರಿಗೆ ಪ್ರವೇಶ ಎಲ್ಲ ಎಂದು ನಂದಗಿರಿಧಾಮ ವಿಶೇಷ ಅಧಿಕಾರಿ ಗೋಪಾಲ್‌  ಸ್ಪಷ್ಟಪಡಿಸಿದರು.

ನಂದಿಬೆಟ್ಟಕ್ಕೆ ಕಲ್ಲುಗಣಿಗಾರಿಕೆ ಘಾಸಿ :  ನಂದಿ ಗಿರಿಧಾಮದ ಸುತ್ತಲೂ ಅಧಿಕೃತ ಕಲ್ಲು ಗಣಿಗಾರಿಕೆ ಎಗ್ಗಿಲ್ಲದೇ ನಡೆಯುತ್ತಿರುವುದು ಗಿರಿಧಾಮದ ಸುರಕ್ಷತೆಗೆ ಧಕ್ಕೆ ಮಾಡುತ್ತಿದೆ. ನಂದಿ ಸಮೀಪ ಕಣಿವೆ ಪ್ರದೇಶದಲ್ಲಿ ಗುಡ್ಡೆ ಕುಸಿತ ಸಾಮಾನ್ಯವಾಗಿತ್ತು. ಆದರೆ ನಂದಿಗಿರಿಧಾಮದಲ್ಲಿ ಭೂ ಕುಸಿತವಾಗಿರುವುದು ಆತಂಕಕ್ಕೆ ಕಾರಣವಾಗಿದೆ.

ಕಲ್ಲು ಗಣಿಕೆಯ ಅಬ್ಬರವೇ ಇದಕ್ಕೆ ಕಾರಣ ಎಂಬ ಆರೋಪ, ಟೀಕೆ, ಟಿಪ್ಪಣಿಗಳು ವ್ಯಕ್ತವಾಗಿದ್ದು ಪ್ರವಾಸಿಗರ ಸುರಕ್ಷತೆ ಜೊತೆಗೆ ಗಿರಿಧಾಮ ಅಭಿವೃದ್ದಿ ದೃಷ್ಟಿಯಿಂದ ಬೆಟ್ಟದ ಸುತ್ತಲೂ ನಡೆಯುವ ಕಲ್ಲು ಗಣಿಗಾರಿಕೆಗೆ ಬ್ರೇಕ್‌ ಹಾಕಬೇಕೆಂಬ ಕೂಗು ಎದ್ದಿದ್ದು ಅದಕ್ಕೆ ಸರ್ಕಾರ ಯಾವ ರೀತಿ ಸ್ಪಂದಿಸುತ್ತೆ ಎಂಬುದನ್ನು ಕಾದು ನೋಡಬೇಕಿದೆ.

click me!