ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುವ ವಾಹನ ಸವಾರರರ ತೀವ್ರ ಆತಂಕಕ್ಕೆ ಕಾರಣವಾಗಿದ್ದ, ಸುರತ್ಕಲ್ ಟೋಲ್ ಶುಲ್ಕವನ್ನು ಹೆಜಮಾಡಿ ಟೋಲ್‌ನಲ್ಲಿ ಸಂಗ್ರಹಿಸುವ ವ್ಯವಸ್ಥೆ ಜಾರಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ.
ಕಾಪು (ಡಿ.2) : ಇಲ್ಲಿನ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಚರಿಸುವ ವಾಹನ ಸವಾರರರ ತೀವ್ರ ಆತಂಕಕ್ಕೆ ಕಾರಣವಾಗಿದ್ದ, ಸುರತ್ಕಲ್ ಟೋಲ್ ಶುಲ್ಕವನ್ನು ಹೆಜಮಾಡಿ ಟೋಲ್‌ನಲ್ಲಿ ಸಂಗ್ರಹಿಸುವ ವ್ಯವಸ್ಥೆ ಜಾರಿಯನ್ನು ಸದ್ಯಕ್ಕೆ ಮುಂದೂಡಲಾಗಿದೆ.
ಬಹಳ ಹೋರಾಟದ ನಂತರ ಅವೈಜ್ಞಾನಿಕವಾಗಿದ್ದ ಸುರತ್ಕಲ್ ಟೋಲ್ ರದ್ದಾಗಿದ್ದು, ಒಂದೆಡೆ ಈ ಟೋಲ್‌ನಲ್ಲಿ ಶುಲ್ಕ ಪಾವತಿಸಿ ಹೈರಾಣಾಗಿದ್ದ ರಾ.ಹೆ. ವಾಹನ ಸವಾರರು ಸಂತಸಪಡುವಷ್ಟರಲ್ಲಿಯೇ ಈ ಟೋಲ್‌ನ ಶುಲ್ಕಗಳನ್ನು ವಿಲೀನಗೊಳಿಸಿ, ಹೆಜಮಾಡಿ ಟೋಲ್‌ನಲ್ಲಿ ದುಪ್ಪಟ್ಟು ಶುಲ್ಕವನ್ನು ಸಂಗ್ರಹಿಸಲಾಗುವುದು ಎಂಬ ಸುದ್ದಿ ಅವರ ಸಂತಸವನ್ನು ಕಸಿದುಕೊಂಡಿತ್ತು, ಬಾಣಲೆಯಿಂದ ಜಾರಿ ಬೆಂಕಿಗೆ ಬಿದ್ದಂತೆ ಅವರ ಪರಿಸ್ಥಿತಿಯಾಗಿತ್ತು.
ಸುರತ್ಕಲ್ ಟೋಲ್ ಸಮಸ್ಯೆ ಪರಿಹಾರಕ್ಕೆ ಗಡ್ಕರಿ ಭೇಟಿಯಾದ ಶಾಸಕ ರಘುಪತಿ ಭಟ್
ಕೇಂದ್ರ ಸರ್ಕಾರ ಈ ಟೋಲ್‌ಗಳನ್ನು ಒಂದುಗೂಡಿಸುವ ಷರತ್ತಿನಂತೆ ಸುರತ್ಕಲ್ ಟೋಲನ್ನು ಮುಚ್ಚುವುದಕ್ಕೆ ಒಪ್ಪಿತ್ತು. ಆದರೆ ಇದನ್ನು ಆಡಳಿತ ಪಕ್ಷದ ನಾಯಕರು, ಸಾರ್ವಜನಿಕರ ವಿರೋಧದ ಭಯದಿಂದ ಮುಚ್ಚಿಟ್ಟಿದ್ದು, ಇದೀಗ ಕೇಂದ್ರ ಸರ್ರಾರವು ರಾಜ್ಯಪತ್ರದ ಮೂಲಕ ಈ ಷರತನ್ನು ಬಹಿರಂಗಗೊಳಿಸಿದೆ. ಇದು ಮತ್ತೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಒಂದೆಡೆ ಬಿಜೆಪಿ ನಾಯಕರು ಕೇವಲ ಟೋಲ್ ಮುಚ್ಚಿದ್ದು ತಮ್ಮ ಸಾಧನೆ ಎಂದು ಬೀಗುತ್ತಿದ್ದಾರೆ. ಇನ್ನೊಂದೆಡೆ ಈ ಟೋಲ್ ವಿರುದ್ಧ ಧರಣಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಮತ್ತು ಇತರ ಸಂಘಟನೆಗಳ ನಾಯಕರು ಇದು ತಮ್ಮ ಸಾಧನೆ ಎಂದು ಕಾಲರ್ ಏರಿಸಿಕೊಳ್ಳುತ್ತಿದ್ದಾರೆ.
ಮಾಹಿತಿ ಪ್ರಕಾರ ಡಿ.1ರ ಮಧ್ಯರಾತ್ರಿಯಿಂದಲೇ ಹೆಜಮಾಡಿಯಲ್ಲಿ ಹೆಚ್ಚುವರಿ ಟೋಲ್ ಶುಲ್ಕ ಸಂಗ್ರಹ ಆರಂಭವಾಗಬೇಕಾಗಿತ್ತು. ಆದರೆ ಸರ್ಕಾರದಿಂದ ಹೆಚ್ಚುವರಿ ಟೋಲ್ ಸಂಗ್ರಹಕ್ಕೆ ದಿನ ನಿಗದಿಯಾಗಿಲ್ಲ. ಬಹುಶಃ, ಪ್ರತಿಭಟನೆಯ ಸಾಧ್ಯತೆ ಹಿನ್ನೆಲೆಯಲ್ಲಿ ಸದ್ಯಕ್ಕೆ ಹೆಚ್ಚುವರಿ ಟೋಲ್ ಸಂಗ್ರಹ ಮುಂದಕ್ಕೆ ಹೋಗಿದೆ. ಆದರೆ ವಾಹವ ಸವಾರರ ತಲೆ ಮೇಲಿನ ತೂಗುಗತ್ತಿ ಮಾತ್ರ ರದ್ದಾಗಿಲ್ಲ.
ವಿಲೀನ ಆಗುತ್ತದೆ, ದಿನ ನಿಗದಿಯಾಗಿಲ್ಲ: ಡಿಸಿ
ಸುರತ್ಕಲ್ ಮತ್ತು ಹೆಜಮಾಡಿ ಟೋಲ್ ಶುಲ್ಕ ವಿಲೀನದ ಬಗ್ಗೆ ಕೇಂದ್ರ ಸರ್ಕಾರ ಗಜೆಟ್ ನೋಟಿಫಿಕೇಶನ್ ಮಾಡಿದೆ. ಆದರೆ ಯಾವಾಗಿನಿಂದ ಎಂಬುದು ಇನ್ನೂ ದಿನ ನಿಗದಿಯಾಗಿಲ್ಲ. ಮುಂದಿನ ಸಭೆಯ ನಂತರ ಈ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೂರ್ಮ ರಾವ್ ತಿಳಿಸಿದ್ದಾರೆ.
ಪ್ರತಿಭಟನೆ ಹೆಸರಲ್ಲಿ ಆಸ್ತಿ ಹಾನಿ ಸಲ್ಲದು
ಟೋಲ್ ಬಗ್ಗೆ, ಪ್ರತಿಭಟನೆಗೆ ಪ್ರಜಾಪ್ರಭುತ್ವದಲ್ಲಿ ಅವಕಾಶ ಇದೆ. ಆದರೆ ರಾಹೆಯಲ್ಲಿ ವಾಹನ ಸಂಚಾರಕ್ಕೆ ಅಡ್ಡಿ ಮಾಡಿದರೆ, ಆಸ್ತಿಗಳಿಗೆ ಹಾನಿಮಾಡಿದರೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ. ಜನರಲ್ಲಿ ಮನವಿ ದೂರುಗಳಿದ್ದರೆ ಟೋಲ್ ಗೇಟ್ ಅಭಿವೃದ್ಧಿ ಸಮಿತಿಯಲ್ಲಿ ನೀಡಬಹುದಾಗಿದೆ ಎಂದು ಎಸ್ಪಿ ಅಕ್ಷಯ್ ಮಚಿಂದ್ರ ತಿಳಿಸಿದ್ದಾರೆ.
Mangaluru News: ರದ್ದಾದ Suratkal Tollgate; ಹೆಜಮಾಡಿಯಲ್ಲಿ ವಸೂಲಿ!
5ರಂದು ಸಭೆ: ಕೇಂದ್ರ ಸಚಿವ ಗಡ್ಕರಿ ಭರವಸೆ
ಶಾಸಕ ರಘುಪತಿ ಭಟ್ ದೆಹಲಿಯಲ್ಲಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾಗಿ, ಸುರತ್ಕಲ್ ಟೋಲ್ ಶುಲ್ಕವನ್ನು ಹೆಜಮಾಡಿ ಟೋಲ್ ಜೊತೆ ವಿಲೀನ ಮಾಡಿದ್ದು ಅವೈಜ್ಞಾನಿಕ, ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಇದಕ್ಕೆ ಸಚಿವರು ಡಿ.5ರಂದು ರಾ.ಹೆ. ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳ ಸಭೆ ನಡೆಸುವುದಾಗಿ ಭರವಸೆ ನೀಡಿದ್ದಾರೆ ಎಂದು ಭಟ್ ತಿಳಿಸಿದ್ದಾರೆ.