ನಂದಿಬೆಟ್ಟಕ್ಕೆ ಸಾವಿರಾರು ಪ್ರವಾಸಿಗರು ಭೇಟಿ ನೀಡಿದರೂ ಅಭಿವೃದ್ಧಿ ಮಾತ್ರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಆಗುತ್ತಿದೆ.ಹೆಚ್ಚು ಪ್ರವಾಸಿಗರು ಭೇಟಿ ನೀಡುತ್ತಿದ್ದರೂ ಅಭಿವೃದ್ಧಿ ಕಾರ್ಯಗಳು ಮಾತ್ರ ನಡೆಯುತ್ತಿಲ್ಲ.
ವರದಿ : ಕಾಗತಿ ನಾಗರಾಜಪ್ಪ
ಚಿಕ್ಕಬಳ್ಳಾಪುರ (ಸೆ.27): ಬ್ರಹ್ಮಗಿರಿ, ಗೋವರ್ಧನ ಗಿರಿ, ಸ್ಕಂದಗಿರಿ, ನಂದಿಬೆಟ್ಟ, ಅವುಲಬೆಟ್ಟ, ಆದಿನಾರಾಯಣ ಬೆಟ್ಟ, ಕಳವಾರ ದುರ್ಗ, ಮುರಗಮಲ್ಲ, ಕೈವಾರ, ಅಂಬಾಜಿದುರ್ಗ, ಒಡೆಯನ ಕೆರೆ, ತಲಕಾಯಲಬೆಟ್ಟ, ವಿದುರಾಶ್ವತ್ಥ, ಶ್ರೀನಿವಾಸ ಸಾಗರ, ಅಮಾನಿ ಬೈರಸಾಗರ, ಗುಡಿಬಂಡೆ ಕೋಟೆ ಹೀಗೆ ಸಾಲು ಸಾಲು ಬೆಟ್ಟ, ಗುಡ್ಡ, ಕೆರೆ, ಗಿರಿವನಗಳ ಸಾಲು ಇರುವ ಬಯಲು ಸೀಮೆಯ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ವಿಫುಲವಾದ ಅವಕಾಶಗಳು ತೆರೆದುಕೊಂಡರೂ ಅಭಿವೃದ್ಧಿ ಮಾತ್ರ ಶೂನ್ಯ.
ಹೌದು, ಜಿಲ್ಲೆ ಬರದನಾಡಾದರೂ ಪ್ರವಾಸಿ ತಾಣಗಳಿಗೆ ಬರ ಇಲ್ಲ. ಜಿಲ್ಲೆಯಲ್ಲಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಐತಿಹಾಸಿಕವಾದ 13 ಪ್ರವಾಸಿ ತಾಣಗಳು ಸೇರಿ ಒಟ್ಟು 72 ಪ್ರವಾಸಿಗಳ ತಾಣಗಳು ಇವೆ. ಬೋಟಿಂಗ್ ಮಾಡುವ ವಿಶಾಲವಾದ ಕೆರೆಗಳು ಇವೆ. ಚಾರಣ ಪ್ರಿಯರಿಗೆ ಸ್ಕಂದಗಿರಿ ಬೆಟ್ಟವಿದೆ. ಪ್ರಕೃತಿ ಸೌಂದರ್ಯ ಸವಿಯಕ್ಕೆ ನಂದಗಿರಿ ಇದೆ. ಆದರೆ ಅಧಿಕಾರ ಶಾಹಿಯ ನಿರ್ಲಕ್ಷ್ಯ, ಅಕ್ರಮ ಗಣಿಗಾರಿಕೆ ಸ್ಫೋಟಕ್ಕೆ ಈಗ ಜಿಲ್ಲೆಯ ಪ್ರವಾಸಿ ತಾಣಗಳ ಸೌಂದರ್ಯಕ್ಕೆ ಘಾಸಿ ಆಗಿ ಪ್ರವಾಸಿ ತಾಣಗಳು ಮೂಲ ಸೌಕರ್ಯ ಕೊರತೆಯಿಂದ ಸೊರಗುತ್ತಿವೆ. ವಿಪರ್ಯಾಸವೆಂದರೆ ಜಿಲ್ಲೆಯ ಪ್ರವಾಸಿ ತಾಣಗಳ ಬಳಿ ಗೈಡ್‌ಗಳ ಇಲ್ಲದೇವಾಗಿದ್ದು ಭದ್ರತೆಗೆ ಇರುವ ಗೃಹ ರಕ್ಷಕರೇ ಪ್ರವಾಸಿ ಮಿತ್ರರರಾಗಿದ್ದಾರೆ.
ನಂದಿಬೆಟ್ಟಕ್ಕೆ ಹೋದೋರು ಈ ಜಾಗ ಮಿಸ್ ಮಾಡದಿರಿ! ಅಚ್ಚರಿ ಪಡೋದು ಖಚಿತ .
ಜಿಲ್ಲೆಯಲ್ಲಿ 72 ಪ್ರವಾಸಿ ತಾಣಗಳ ಜೊತೆಗೆ ಚಿಂತಾಮಣಿ, ಗೌರಿಬಿದನೂರು ಹಾಗೂ ಬಾಗೇಪಲ್ಲಿ ಸೇರಿ 3 ರೆಸಾರ್ಟ್, ಗೌರಿಬಿದನೂರಿನ ದಂಡಿಗಾನಹಳ್ಳಿ, ಚಿಕ್ಕಬಳ್ಳಾಪುರದ ರಂಗಸ್ಥಳ ಹಾಗೂ ಗೌರಿಬಿದನೂರಿನ ಗೊಲ್ಲಜಹಳ್ಳಿ ಸೇರಿ 3 ಹೋಮ್ ಸ್ಟೇಗಳು ಇವೆ. ನಿತ್ಯ ಸಾವಿರಾರು ಪ್ರವಾಸಿಗರು ಈ ಸ್ಥಳಗಳಿಗೆ ಬಂದು ಹೋಗುತ್ತಾರೆ. ಆದರೆ ರಾಜ್ಯದ ಗಮನ ಸೆಳೆಯುವ ದಿಕ್ಕಿನಲ್ಲಿ ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ ಕುಂಠಿತವಾಗಿದೆ. ಶತಮಾನಗಳ ಭವ್ಯ ಸಂಸ್ಕೃತಿ, ಪರಂಪರೆ ಇರುವ ನಂದಿ ಬೋಗನಂದೀಶ್ವರ ದೇಗುಲದ ಜೀರ್ಣೋದ್ಧಾರ ನೆನಗುದಿ ಬಿದ್ದಿದೆ. ವರ್ಷದ ಹಿಂದೆ ಶಾಸಕರಾಗಿದ್ದ ಸುಧಾಕರ್ ಬೆಟ್ಟಕ್ಕೆ ಗುಣಮಟ್ಟದ ರಸ್ತೆ ಹಾಕಿಸಿದ್ದ ಪ್ರವಾಸಿಗರಲ್ಲಿ ಒಂದಿಷ್ಟುಹರ್ಷ ತಂದಿದೆ. ಉಳಿದಂತೆ ಗಿರಿಧಾಮದಲ್ಲಿ ಆಗಬೇಕಾದ ಅಭಿವೃದ್ಧಿ ಚಟವಟಿಕೆಗಳು ವೇಗ ಪಡೆದಿಲ್ಲ.
ಜಿಲ್ಲೆಯ ಟಾಪ್ 13 ಪ್ರವಾಸಿ ತಾಣಗಳು
ಚಿಕ್ಕಬಳ್ಳಾಪುರದ ನಂದಿ, ನಂದಿ ಗಿರಿಧಾಮ, ರಂಗಸ್ಥಳ, ಮುದ್ದೇನಹಳ್ಳಿಯ ಸರ್.ಎಂ.ವಿಶ್ವೇಶ್ವರಯಯ್ಯ ಜನ್ಮ ಸ್ಥಳ, ಸೆಲ್ಫಿ ಸ್ಪಾಟ್ ಅವುಲುಬೆಟ್ಟ, ಗೌರಿಬಿದನೂರು ತಾಲೂಕಿನ ವಿದುರಾಶ್ವತ್ಥ, ಮಂಚೇನಹಳ್ಳಿ ಹೋಬಳಿಯ ಮಿನಕನಗುರ್ಕಿ, ಬಾಗೇಪಲ್ಲಿ ತಾಲೂಕಿನ ದೇವರಗುಡಿಪಲ್ಲಿ (ಗಡಿದಂ), ಚಿಂತಾಮಣಿ ತಾಲೂಕಿನ ಕೈವಾರ, ಮುರಗಮಲ್ಲ, ಗುಡಿಬಂಡೆ ತಾಲೂಕಿನ ಆದಿನಾರಾಯಣಬೆಟ್ಟ, ಬೈರಸಾಗರ, ಹಾಗೂ ಶಿಡ್ಲಘಟ್ಟತಾಲೂಕಿನ ತಲಕಾಯಲಬೆಟ್ಟ.
ಆಗಸ್ಟ್ ವರೆಗೂ 11,33,534 ಪ್ರವಾಸಿಗರು ಬೇಟಿ
ಈ ವರ್ಷದಲ್ಲಿ ಜನವರಿಯಿಂದ ಕಳೆದ ಆಗಸ್ಟ್ ಅಂತ್ಯದವರೆಗೂ ಜಿಲ್ಲೆಗೆ ಬರೋಬ್ಬರಿ 11,33,534 ಮಂದಿ ಪ್ರವಾಸಿಗರ ಜಿಲ್ಲೆಯ ಐತಿಹಾಸಿಕವಾದ ಪ್ರವಾಸಿ ಪ್ರೇಕ್ಷಣೀಯ ಸ್ಥಳಗಳಿಗೆ ಬೇಟಿ ನೀಡಿದ್ದಾರೆ. ಆ ಪೈಕಿ ವಿಶ್ವ ವಿಖ್ಯಾತ ನಂದಿಗಿರಿಧಾಮಕ್ಕೆ 2,02000 ಸಾವಿರ ಮಂದಿ ಪ್ರವಾಸಿಗರು ಬೇಟಿ ನೀಡಿದ್ದಾರೆ. 50 ಮಂದಿ ವಿದೇಶಿ ಪ್ರವಾಸಿಗಿರಿ ಗಿರಿಧಾಮದ ಸೌಂದರ್ಯ ಸವಿದಿದ್ದಾರೆ. ಲಾಕ್‌ಡೌನ್ ಪರಿಣಾಮ ಪ್ರವಾಸಿಗರ ಬೇಟಿ ಕಡಿಮೆ ಆಗಿರುವುದು ಎದ್ದು ಕಾಣುತ್ತಿದೆ. ರಂಗಸ್ಥಳಕ್ಕೆ 73,230, ವಿದುರಾಶ್ವತ್ಥಕ್ಕೆ 1,33,602, ಸರ್‌ಎಂವಿ ಜನ್ಮ ಸ್ಥಳ ಮುದ್ದೇನಹಳ್ಳಿಗೆ 1,15,042, ನಂದಿ ಗ್ರಾಮಕ್ಕೆ 19,5680, ಮಿಣಕನಗುರ್ಕಿ 20,450, ದೇವರಗುಡಿಯಪ್ಪ 29,700, ಕೈವಾರ 1,44,060, ಮುರಗಮಲ್ಲ 1,46,300, ಆದಿನಾರಾಯಣಬೆಟ್ಟ22,360, ಬೈರಸಾಗರ 8,454, ಅವುಲಬೆಟ್ಟ16,406 ತಲಕಾಯಲಬೆಟ್ಟ34,200 ಸೇರಿ ಇಟ್ಟು 11,33,534 ಮಂದಿ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡಿದ್ದಾರೆ.
ಜಿಲ್ಲೆಯಲ್ಲಿ 72 ಪ್ರವಾಸಿ ತಾಣಗಳು ಇವೆ. ಪ್ರತಿ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ಪ್ರವಾಸಿಗರು ಬಂದು ಹೋಗುತ್ತಾರೆ. ವಿಶೇಷವಾಗಿ ನಂದಿಗಿರಿಧಾಮ ಸಮಗ್ರ ಅಭಿವೃದ್ಧಿಗೆ ಪಾರ್ಕಿಂಗ್, ಶೆಲ್ಟರ್, ದೇಗುಲ ಅಭಿವೃದ್ಧಿ ಸೇರಿ ಮೂಲ ಸೌಕರ್ಯಗಳಿಗೆ 10 ಕೋಟಿ ಅನುದಾನ ಬಿಡುಗಡೆ ಆಗಿದೆ. ಕಾಮಗಾರಿಗಳಿಗೆ ಚಾಲನೆ ಸಿಗಬೇಕಿದೆ.
ಜಿತೇಂದ್ರನಾಥ್, ಸಹಾಯಕ ನಿರ್ದೇಶಕರು, ಪ್ರವಾಸೋದ್ಯಮ ಇಲಾಖೆ.