* ಕಲಬುರಗಿ 45 ವರ್ಷಗಳ ಹಿಂದೆ ಎಲ್ಲಿತ್ತೋ ಇಂದೂ ಅಲ್ಲೇ ಇದೆ
* ಆಳುವ ರಾಜಕಾರಣಿಗಳ ಗುತ್ತಿಗೆದಾರ ಸ್ನೇಹಿ ನೀತಿಯಿಂದ ಜಿಲ್ಲೆಗೆ ಈ ದುರ್ಗತಿ
* ಕಲಬುರಗಿ ವಿಷನ್-2050 ಮೊದಲ ಸಭೆಯಲ್ಲಿ ವಿಷಯ ತಜ್ಞರ ಖಾರ ಅಭಿಮತ
ಕಲಬುರಗಿ(ಜೂ.16): ವಿಮಾನ ಬಂತು, ರೈಲು- ರಸ್ತೆ ಜಾಲವಂ ತೂ ಇದ್ದೇ ಇದೆ, 4 ವಿವಿ, 4 ಮೆಡಿಕಲ್ ಕಾಲೇಜುಗಳಿರುವ ಪ್ರಗತಿಯತ್ತ ದಾಪುಗಾಲು ಹಾಕುತ್ತಿದೆ ಎಂದು ನೀವೇನಾದರೂ ತಿಳಿದಿದ್ದರೆ ಅದು ಶುದ್ಧ ತಪ್ಪು ಎನ್ನುತ್ತಿದ್ದಾರೆ ವಿಷಯ ತಜ್ಞರು!
ಕಲಬುರಗಿ ಮೇಲ್ನೋಟಕ್ಕೆ ಪ್ರಗತಿಯಾಗುತ್ತಿದೆ ಎಂದು ಕಂಡರೂ ಮಾನವಾಭಿವೃದ್ಧಿ, ಸಮಗ್ರ ಪ್ರಗತಿ ಸೂಚ್ಯಂಕ ಸೇರಿದಂತೆ ಹಲವಾರು ಮಾನದಂಡಗಳಲ್ಲಿ ಕಲಬುರಗಿ ಲೆಕ್ಕಕ್ಕೇ ಇಲ್ಲವಂತೆ! ಹಿಂದುಳಿದ ಜಿಲ್ಲೆ ಹಣೆಪಟ್ಟಿ ಕಳಚಿ ಹಾಕಬೇಕೆಂದು ಉಸ್ತುವಾರಿ ಸಚಿವ ಹಮ್ಮಿಕೊಂಡಿರುವ ಕಲಬುರಗಿ ವಿಷನ್- 2050 ಕಾರ್ಯಕ್ರಮ ಅನುಷ್ಟಾನದ ಅಧಿಕಾರಿ, ವಿಷಯ ತಜ್ಞರ ಚೊಚ್ಚಲ ಸಭೆಯಲ್ಲಿ ಮೇಲಿನ ವಿಚಾರ ಸುದೀರ್ಘ ಚರ್ಚೆಗೆ ಬಂದು ಎಲ್ಲರ ಗಮನ ಸೆಳೆದಿದೆ.
ಸಭೆಯಲ್ಲಿ ಮಾತನಾಡಿರುವ ನಿವೃತ್ತ ಹೆಚ್ಚುವರಿ ಮುಖ್ಯಕಾಯದರ್ಶಿ ವಿ. ಬಾಲಸುಬ್ರಹ್ಮಣಿಯನ್ ಕಲಬುರಗಿ ಜಿಲ್ಲೆಯು ಶ್ರೇಯಾಂಕದಲ್ಲಿ 45 ವರ್ಷಗಳ ಹಿಂದೆ ಯಾವ ಸ್ಥಾನದಲ್ಲಿತ್ತೋ ಈಗಲೂ ಅದೇ ಸ್ಥಾನದಲ್ಲಿರುವುದು ಅತ್ಯಂತ ನೋವಿನ ಸಂಗತಿ ಎಂದು ಹೇಳುವ ಮೂಲಕ ಅಧಿಕಾರಿಗಳು, ಆಡಳಿತ- ವಿರೋಧ ಪಕ್ಷಗಳ ಜನನಾಯಕರನ್ನು ಬೆಚ್ಚಿ ಬೀಳಿಸಿದ್ದಾರೆ.
'ಯುಡಿಯೂರಪ್ಪ 'ಸಿಎಂ' ಸ್ಥಾನ ಯೋಗ್ಯ- ಅಯೋಗ್ಯತೆ ಮೇಲೆ ನಿರ್ಧಾರವಾಗಲಿ'
ಗುತ್ತಿಗೆದಾರ ಸ್ನೇಹಿ ನೀತಿಗಳಿಂದ ಕಲಬುರಗಿಗೆ ದುರ್ಗತಿ:
ಆಡಳಿತ ನಡೆಸಿದ ಸರಕಾರಗಳು ಜಿಲ್ಲೆಯ ಅಭಿವೃದ್ಧಿಗೆ ಅಗತ್ಯವಾದ ಯೋಜನೆಗಳನ್ನು ಜಾರಿಮಾಡದೆ ಕೇವಲ ಗುತ್ತಿಗೆದಾರರ ಹಿತ ಕಾಪಾಡುವ ಯೋಜನೆಗಳಿಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದೆ ಈ ಪ್ರದೇಶ ಹಿಂದುಳಿಯಲು ಪ್ರಮುಖ ಕಾರಣವಾಗಿದೆ ಎಂದು ಅಸಮಾಧಾನ ಹೊರಹಾಕಿದರು.
ಜಿಲ್ಲೆ ಅಭಿವೃದ್ಧಿಗೆ ಪ್ರಮುಖ ಕ್ಷೇತ್ರಗಳಾಗಿರುವ ಕೃಷಿ, ಶಿಕ್ಷಣ ಮತ್ತು ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಬೇಕೆಂದು ಬಾಲಸುಬ್ರಹ್ಮಣಿಯನ್ ಜಿಲ್ಲಾಡಳಿತಕ್ಕೆ ಸಲಹೆ ನೀಡಿದರು. ಜಿಲ್ಲೆಯ ವಿಭಜನೆಯ ನಂತರ ಕಲಬುರಗಿ ಜಿಲ್ಲೆಯ ನೀರಾವರಿ ಪ್ರಮಾಣ ಶೇ 11% ಕ್ಕೆ ಇಳಿದಿದೆ. ಇದು ಅಭಿವೃದ್ಧಿಯ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಲ್ಲ. ಒಂದು ವರ್ಷದಲ್ಲಿ ಜಿಲ್ಲೆಗೆ 30 ಇಂಚು ಮಳೆಯಾಗುವುದರಿಂದ ಅಂತರ್ಜಲ ಸಂರಕ್ಷಣೆ ಬಗ್ಗೆ ಗಮನ ಹರಿಸಬೇಕು ಎಂದೂ ಸಲಹೆ ನೀಡಿದರು.
ಸಚಿವ ನಿರಾಣಿ ಮಾತನಾಡಿ ಮುಂದಿನ 30 ವರ್ಷಗಳ ಕಾಲ ಜಿಲ್ಲೆಯ ಒಟ್ಟಾರೆ ಅಭಿವೃದ್ಧಿಗೆ ಪೂರಕವಾಗುವ ಯೋಜನೆ ರೂಪಿಸಬೇಕಿದೆ ಎಂದರೆ ಕಲಬುರಗಿ ಜಿಲ್ಲಾಧಿಕಾರಿ ವಿ ಜ್ಯೋತ್ಸಾ$್ನ ಮಾತನಾಡಿ ಅಧಿಕಾರಿಗಳೊಂದಿಗೆ ಪ್ರಾಥಮಿಕ ಸಭೆಗಳನ್ನು ಈಗಾಗಲೇ ನಡೆಸಲಾಗಿದೆ, ವಲಯವಾರು ಸಮಿತಿಗಳು ಮತ್ತು ಉಪಸಮಿತಿಗಳನ್ನು ರಚಿಸಲಾಗಿದೆ. ಅಲ್ಪಾವಧಿ, ಮಧ್ಯಮಾವಧಿ ಹಾಗೂ ದೀರ್ಘಾವಧಿ ಗುರಿಗಳತ್ತ ಕೆಲಸ ಮಾಡುವ ಬಗ್ಗೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಬಾಲಸುಬ್ರಹ್ಮಣಿಯನ್ ಪ್ರಕಾರ ಕಲಬುರಗಿ ಹಿಂದುಳಿಯಲು ಇವೆಲ್ಲ ಕಾರಣ
1) ರೇಷ್ಮೆ ಬೇಸಾಯ ಹಳೆ ಮೈಸೂರು ಪ್ರಾಂತ್ಯಕ್ಕೆ ಹೋಲಿಸಿದರೆ ಇಲ್ಲಿ ಶೂನ್ಯ. 1ಎಕರೆಯಲ್ಲಿ ರೇಷ್ಮೆ ಬೆಳೆಯಿಂದ 50 ಸಾರು ಲಾಭ, ಇದಕ್ಕೆ ಕಲಬುರಗಿ ತೆರೆದುಕೊಳ್ಳಬೇಕು
2) ಆರೋಗ್ಯ ಕ್ಷೇತ್ರದ ಅವ್ಯವಸ್ಥೆ, ಮಕ್ಕಳಲ್ಲಿ ಹೆಚ್ಚಾಗಿರುವ ಅಪೌಷ್ಟಿಕತೆಯೂ ಜಿಲ್ಲೆಯ ಹಿಂದುಳಿದಿರುವಿಕೆಗೆ ಮುಖ್ಯ ಕಾರಣ
3) ಶಾಲೆಗಳಲ್ಲಿ ಮಧ್ಯಾಹ್ನ ಬಿಸಿ ಉಟದ ಅಡಿಯಲ್ಲಿ ಹೆಚ್ಚಿನ ಪೌಷ್ಠಿಕಾಂಶವುಳ್ಳ ಆಹಾರವನ್ನು ನೀಡುವತ್ತ ಗಮನಹರಿಸಬೇಕು
4) ವಿಷನ್-2050 ರ ಪರಿಣಾಮಕಾರಿ ಅನುಷ್ಠಾನ, ಉಸ್ತುವಾರಿಗಾಗಿ ಪೂರ್ಣಪ್ರಮಾಣದ ಕಚೇರಿ, ಶಾಶ್ವತ ಮೇಲ್ವಿಚಾರಣಾ ಸಮಿತಿ ಇರಬೇಕು
ಜನಪ್ರತಿನಿಧಿಗಳ ವ್ಯಥೆ:
ಜನಪ್ರತಿನಿಧಿಗಳೊಂದಿಗೂ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ನಡೆಸಿದ ಝೂಮ್ ವಿಡಿಯೋ ಕಾನ್ಫೆರೆನ್ಸ್ ಸಂವಾದದಲ್ಲಿ ಸಂಸದ ಡಾ. ಉಮೇಶ್ ಜಾಧವ್ ಮಾತನಾಡಿ, ಬೆಣ್ಣೆತೋರಾ, ಮುಲ್ಲಾಮರಿ ಯೋಜನೆ ಸೇರಿದಂತೆ ಜಿಲ್ಲೆಯಲ್ಲಿ ಎಲ್ಲಾ ಸಂಪನ್ಮೂಲ ಇದ್ದರೂ, ಯಾವುದೇ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಣುತ್ತಿಲ್ಲ ಎಂದು ವಿಷಾದಿಸುತ್ತಲೇ 2 ತಿಂಗಳಲ್ಲಿ ವಿಷನ್-2050 ಕ್ರಿಯಾಯೋಜನೆ ರೂಪಿಸುವ ಮೂಲಕ ಜಿಲ್ಲೆಯನ್ನು ಅಭಿವೃದ್ಧಿಯತ್ತ ಕೊಂಡೊಯ್ಯಬೇಕೆಂದರು.
ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ಮಾತನಾಡಿ, ಡಾ. ನಂಜುಂಡಪ್ಪ ವರದಿ ಸೇರಿದಂತೆ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಕುರಿತಾದ ಎಲ್ಲಾ ವರದಿಗಳನ್ನು ಮೊದಲು ಅಧ್ಯಯನ ಮಾಡಿ ಮಾಹಿತಿ ಕ್ರೂಢೀಕರಿಸಬೇಕು. ನಂತರ ಕಾರ್ಯಕ್ರಮಗಳ ಅನುಷ್ಠಾನಕ್ಕಾಗಿ ಹಣಕಾಸನ್ನು ವಿವಿಧ ಮೂಲಗಳಿಂದ ಸಂಗ್ರಹಿಸುವ ಬಗ್ಗೆ ಗಮನ ಹರಿಸಬೇಕಿದೆ ಎಂದು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ತಿಳಿಸಿದ್ದಾರೆ.