* ವಿಜಯಪುರ ಜಿಲ್ಲೆಯಲ್ಲಿ 167 ಬ್ಲ್ಯಾಕ್ ಫಂಗಸ್, ಇಬ್ಬರ ಸಾವು
* 15 ಜನರಿಗೆ ಒಂದು ಕಣ್ಣು, ಒಬ್ಬನಿಗೆ ಎರಡೂ ಕಣ್ಣುಗಳಿಗೆ ಹಾನಿ
* ಬ್ಲ್ಯಾಕ್ ಫಂಗಸ್ ಕಾಯಿಲೆ ತೀವ್ರಗೊಂಡು ಕಣ್ಣು, ಮೆದುಳಿಗೆ ಹರಡಿದರೆ ಜೀವ ಹಾನಿ
ರುದ್ರಪ್ಪ ಆಸಂಗಿ
ವಿಜಯಪುರ(ಜೂ.16): ಕೊರೋನಾ ರೂಪಾಂತರಿ ಎರಡನೇ ಅಲೆ ಜಿಲ್ಲೆಯಲ್ಲಿ ಹಲವಾರು ಜೀವಗಳನ್ನು ಬಲಿ ಪಡೆದು ಸಾಕಷ್ಟು ಜನರನ್ನು ಘಾಸಿ ಮಾಡಿದ್ದರ ಬೆನ್ನಲ್ಲೇ ಬ್ಲ್ಯಾಕ್ ಫಂಗಸ್ ಜಿಲ್ಲೆಯಲ್ಲಿ ರುದ್ರನರ್ತನ ನಡೆಸಿ ದೃಷ್ಟಿಕಸಿದುಕೊಂಡು ಅವರ ಬದುಕನ್ನು ಅಂಧಕಾರಕ್ಕೆ ದೂಡಿದೆ.
undefined
ಕೊರೋನಾ ಮಹಾಮಾರಿ ಹೊಡೆತಕ್ಕೆ ಝರ್ಜರಿತರಾಗಿದ್ದ ಜನ ಇನ್ನೇನು ಚೇತರಿಸಿಕೊಳ್ಳುತ್ತಿದ್ದೇವೆ ಎಂಬ ಸಮಾಧಾನದ ನಿಟ್ಟುಸಿರು ಬಿಡುವ ಮುನ್ನವೇ ಬ್ಲ್ಯಾಕ್ ಫಂಗಸ್ ದಾಳಿಯಿಟ್ಟು ಜನರ ಕಣ್ಣು, ಮೆದುಳು ಮತ್ತಿತರ ಅಂಗಾಂಗಗಳಿಗೆ ಲಗ್ಗೆಯಿಟ್ಟು ಜನರು ಕಣ್ಣೀರಿನಲ್ಲಿ ಕೈ ತೊಳೆಯುವಂತೆ ಮಾಡಿದೆ.
15 ಜನರಿಗೆ ದೃಷ್ಟಿದೋಷ:
ಜಿಲ್ಲೆಯಲ್ಲಿ ಬ್ಲ್ಯಾಕ್ ಫಂಗಸ್ ರೋಗದಿಂದ 15 ಜನರು ಒಂದು ಕಣ್ಣು ಹಾಗೂ ಒಬ್ಬರು ಎರಡೂ ಕಣ್ಣನ್ನು ಕಳೆದುಕೊಂಡು ಅಂಧಕಾರದಲ್ಲಿ ಬದುಕು ಸಾಗಿಸುವ ಹೀನಾಯ ಸ್ಥಿತಿಗೆ ತಲುಪಿಸಿದೆ. ಇನ್ನು 23 ರೋಗಿಗಳ ಮೆದುಳಿಗೆ ಘಾಸಿ ಮಾಡಿ ಅವರು ಸಾವು ಬದುಕಿನ ಮಧ್ಯೆ ಹೋರಾಟ ಮಾಡುವಂತೆ ಮಾಡಿದೆ. ವಿವಿಧ ಆಸ್ಪತ್ರೆಯಲ್ಲಿ ಮೆದುಳಿನ ಸಮಸ್ಯೆ ಉಂಟಾಗಿ ಈ ರೋಗಿಗಳು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದಲ್ಲದೆ 41 ಮಂದಿಯ ಕಣ್ಣುಗಳಲ್ಲಿ ಊತ ಕಾಣಿಸಿಕೊಂಡಿದೆ. ಈ ರೋಗಿಗಳಿಗೆ ದೃಷ್ಟಿದೋಷ ತೊಂದರೆಯಿಲ್ಲ. ಬ್ಲ್ಯಾಕ್ ಫಂಗಸ್ ತನ್ನ ಕಬಂಧ ಬಾಹುವಿನಿಂದ ಬಿಗಿದಪ್ಪಿಕೊಂಡು ಜೀವನವನ್ನು ನರಕ ಸದೃಶ್ಯ ಮಾಡಿದೆ.
ಬ್ಲ್ಯಾಕ್ ಫಂಗಸ್ ಭಾರೀ ಏರಿಕೆ: 3 ವಾರದಲ್ಲಿ 2,100 ಬಲಿ!
167 ಬ್ಲ್ಯಾಕ್ ಫಂಗಸ್ ಪ್ರಕರಣ:
ಜಿಲ್ಲೆಯಲ್ಲಿ ಇದುವರೆಗೆ 167 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಪತ್ತೆಯಾಗಿದ್ದು, ಈ ಪೈಕಿ ಇಬ್ಬರು ಸಾವಿಗೀಡಾಗಿದ್ದಾರೆ. ಸದ್ಯ ಜಿಲ್ಲೆಯಲ್ಲಿ 78 ಬ್ಲ್ಯಾಕ್ ಫಂಗಸ್ ಪ್ರಕರಣಗಳು ಸಕ್ರಿಯವಾಗಿದ್ದು, ಇಲ್ಲಿನ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 167 ಬ್ಲ್ಯಾಕ್ ಫಂಗಸ್ ಪ್ರಕರಣಗಳ ಪೈಕಿ 26 ರೋಗಿಗಳನ್ನು ಬೇರೆ ಜಿಲ್ಲೆಯ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ರವಾನಿಸಲಾಗಿದ್ದು, 79 ರೋಗಿಗಳು ಚೇತರಿಸಿಕೊಂಡು, ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ನಗರದ ಜಿಲ್ಲಾಸ್ಪತ್ರೆ ಹಾಗೂ ಬಿಎಲ್‌ಡಿಇ ಆಸ್ಪತ್ರೆ ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಬ್ಲ್ಯಾಕ್ ಫಂಗಸ್ ರೋಗಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ.
ಕೊರೋನಾ ಸೋಂಕಿನಿಂದ ಹೆಚ್ಚಿದ ಬ್ಲ್ಯಾಕ್ ಫಂಗಸ್:
ಬ್ಲ್ಯಾಕ್ ಫಂಗಸ್ ಕಾಯಿಲೆ ಹೊಸದಲ್ಲ. ಮೊದಲಿನಿಂದಲೂ ಈ ಕಾಯಿಲೆ ಇತ್ತು. ಕೆಲವು ಸಕ್ಕರೆ ಕಾಯಿಲೆ ಇರುವವರಿಗೆ ಅಪರೂಪಕ್ಕೊಮ್ಮೆ ಕಾಣಿಸಿಕೊಳ್ಳುತ್ತಿತ್ತು. ಆದರೆ ಈಗ ಕೊರೋನಾದಿಂದಲೇ ಬ್ಲ್ಯಾಕ್ ಫಂಗಸ್ ಮಿತಿ ಮೀರಿ ಹೆಚ್ಚಳವಾಗಿದೆ. ಕೊರೋನಾ ಸೋಂಕಿನಿಂದ ಬಳಲಿ, ಚಿಕಿತ್ಸೆ ಪಡೆದ ವೇಳೆ, ಸ್ಟೈರಾಯಿಡ್ ಚುಚ್ಚು ಮದ್ದು, ಆಕ್ಸಿಜನ್ ಸೇರಿದಂತೆ ಇತರೆ ಚಿಕಿತ್ಸೆ ಪಡೆದು ರೋಗ ನಿರೋಧ ಶಕ್ತಿ ಕಡಿಮೆಯಾದವರಲ್ಲಿ ಹಾಗೂ ಮಧುಮೇಹಿಗಳು ಹೆಚ್ಚಾಗಿ ಬ್ಲ್ಯಾಕ್ ಫಂಗಸ್ ರೋಗಕ್ಕೆ ತುತ್ತಾಗುತ್ತಿದ್ದಾರೆ.
ಆರಂಭಿಕ ಹಂತದಲ್ಲಿದ್ದಾಗ ಚಿಕಿತ್ಸೆ ಪಡೆದರೆ ಬ್ಲ್ಯಾಕ್ ಫಂಗಸ್‌ನಿಂದ ಜೀವಕ್ಕೆ ಆಗಲಿ, ಶರೀರದ ಯಾವುದೇ ಅಂಗಾಂಗಕ್ಕಾಗಲಿ ಬಾಧಕವಾಗುವುದಿಲ್ಲ. ಆದರೆ ಕಾಯಿಲೆ ತೀವ್ರಗೊಂಡು ಕಣ್ಣು, ಮೆದುಳಿಗೆ ಹರಡಿದರೆ ಜೀವ ಹಾನಿ ಸಂಭವಿಸಬಹುದಾಗಿದೆ.
ಬ್ಲ್ಯಾಕ್ ಫಂಗಸ್ ರೋಗ ಹೊಸದಲ್ಲ. ಮೊದಲಿನಿಂದಲೂ ಈ ರೋಗ ಇತ್ತು. ಆದರೆ ಇಷ್ಟೊಂದು ತೀವ್ರತೆ ಕಂಡದ್ದು ಇದೇ ಮೊದಲ ಸಲ. ರೋಗದ ಲಕ್ಷಣಗಳು ಕಂಡು ಬಂದರೆ ತಕ್ಷಣ ಚಿಕಿತ್ಸೆ ಪಡೆದರೆ ಖಂಡಿತವಾಗಿಯೂ ಈ ರೋಗದಿಂದ ಕಣ್ಣು, ಪ್ರಾಣ ಉಳಿಸಿಕೊಳ್ಳಬಹುದಾಗಿದೆ ಎಂದು ವಿಜಯಪುರ ಜಿಲ್ಲಾ ಶಸ್ತ್ರ ಚಿಕಿತ್ಸಕ ಶರಣಪ್ಪ ಕಟ್ಟಿ ತಿಳಿಸಿದ್ದಾರೆ.