'ಮೈಸೂರಿಗೆ ಮೂರು ನಾಮ ಹಾಕಿದ ಬಜೆಟ್‌'

By Kannadaprabha NewsFirst Published Mar 6, 2020, 2:12 PM IST
Highlights

ಹಳೇ ಮೈಸೂರು ಭಾಗದ 8 ಜಿಲ್ಲೆಗಳಿಗೂ ಶೂನ್ಯಯೋಜನೆ ಘೋಷಿಸಿರುವ ಸಿಎಂ ಬಿ.ಎಸ್‌. ಯಡಿಯೂರಪ್ಪ ಮೈಸೂರು ಜಿಲ್ಲೆ ಮತ್ತು ನಗರಕ್ಕೆ ಕನಿಷ್ಠ 3 ಕೋಟಿ ರು. ಯೋಜನೆ ಯನ್ನೂ ಘೋಷಿಸದೇ ಮೂರು ನಾಮ ಹಾಕಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಟೀಕಿಸಿದ್ದಾರೆ.

ಮೈಸೂರು(ಮಾ.06): ಹಳೇ ಮೈಸೂರು ಭಾಗದ 8 ಜಿಲ್ಲೆಗಳಿಗೂ ಶೂನ್ಯಯೋಜನೆ ಘೋಷಿಸಿರುವ ಸಿಎಂ ಬಿ.ಎಸ್‌. ಯಡಿಯೂರಪ್ಪ ಮೈಸೂರು ಜಿಲ್ಲೆ ಮತ್ತು ನಗರಕ್ಕೆ ಕನಿಷ್ಠ 3 ಕೋಟಿ ರು. ಯೋಜನೆ ಯನ್ನೂ ಘೋಷಿಸದೇ ಮೂರು ನಾಮ ಹಾಕಿದ್ದಾರೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಟೀಕಿಸಿದ್ದಾರೆ.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಸಲದ ಬಜೆಟ್‌ನಲ್ಲಿ ಮೈಸೂರು ಜಿಲ್ಲೆಗೆ ಕೇವಲ ಎರಡು ಯೋಜನೆ ಘೋಷಿಸಿದ್ದಾರೆ. ಮಂಡ್ಯದಲ್ಲಿ ಹೊಸ ಸಚಿವರು ಮತ್ತು ಸಿಎಂ ಇದ್ದರೂ ಒಂದೇ ಒಂದು ರುಗಳನ್ನೂ ಘೋಷಿಸಿಲ್ಲ. ರಾಮನಗರ ಜಿಲ್ಲೆ ಹೊರತುಪಡಿಸಿದರೆ ಮೈಸೂರು, ಚಾಮರಾಜನಗರ, ಹಾಸನ, ಕೊಡಗು, ಮಂಡ್ಯ ಜಿಲ್ಲೆಗಳನ್ನು ಕಡೆಗಣಿಸಲಾಗಿದೆ. ಈ ಸಲದ ಬಜೆಟ್‌ ಶಿವಮೊಗ್ಗ, ಹುಬ್ಬಳ್ಳಿ- ಧಾರವಾಡ, ಬೆಂಗಳೂರು ನಗರಕ್ಕೆ ಮಾತ್ರ ಸೀಮಿತವಾಗಿದೆ ಎಂದು ಹರಿಹಾಯ್ದರು.

ಸಚಿವರು, ಸಂಸದರಿಂದ ಪ್ರತಿದಿನ ರೈಲು

2020-21ನೇ ಸಾಲಿನ ಬಜೆಟ್‌ನಲ್ಲಿ ಮೈಸೂರಿಗೆ ಹಣದ ಹೊಳೆ ಹರಿಸುವುದಾಗಿ ರೈಲಿನ ಮೇಲೆ ರೈಲು ಬಿಟ್ಟಜಿಲ್ಲಾ ಉಸ್ತುವಾರಿ ಸಚಿವ ವಿ. ಸೋಮಣ್ಣ, ಸಂಸದ ಪ್ರತಾಪ್‌ ಸಿಂಹ, ಸಂಕಟ ಬಂದಾಗ ಎಕ್ಸೆಲ್‌ ಪ್ಲಾಂಟ್‌ ಎನ್ನುವ ರಾಮದಾಸ್‌ ಈಗ ಮೈಸೂರಿನ ಜನತೆಗೆ ಉತ್ತರ ನೀಡಬೇಕು. ಚಾಮುಂಡಿಬೆಟ್ಟಕ್ಕೆ ಚಿನ್ನದ ರಥ ತರುತ್ತೇನೆ ಎಂದಿದ್ದರು. ವಿಮಾನ ನಿಲ್ದಾಣಕ್ಕೆ ರನ್‌ವೇ ವಿಸ್ತರಣೆಗೆ 150 ಎಕರೆ ಕೊಡಿಸುತ್ತೇನೆ ಎಂದಿದ್ದರು. ಮೈಸೂರು- ಕುಶಾಲನಗರಕ್ಕೆ ರೈಲು ಬಿಡುವುದಾಗಿ ಈಗಲೂ ರೈಲು ಬಿಡುತ್ತಿದ್ದಾರೆ ಎಂದು ವ್ಯಂಗ್ಯ ಮಾಡಿದರು.

ಸಿದ್ದರಾಮಯ್ಯ 3800 ಕೋಟಿ ರು. ನೀಡಿದ್ದರು:

ಹಿಂದಿನ ಸಿದ್ದರಾಮಯ್ಯ ಸರ್ಕಾರವಿದ್ದಾಗ 5 ವರ್ಷದಲ್ಲಿ ಮೈಸೂರು ನಗರವೊಂದಕ್ಕೆ 3800 ಕೋಟಿ ರು. ಅನುದಾನ ನೀಡಿದ್ದರು. ಜಿಲ್ಲಾಧಿಕಾರಿ ಕಚೇರಿ, ಜಯದೇವ ಆಸ್ಪತ್ರೆ, ಜಿಲ್ಲಾಸ್ಪತ್ರೆ, ಮಹಾರಾಣಿ ಕಾಲೇಜು ನಿರ್ಮಿಸಿದರು. ಈಗಿನ ಸರ್ಕಾರದಲ್ಲಿ ಮೈಸೂರು ನಗರಕ್ಕೆ 2.80 ಕೋಟಿ ಘೋಷಿಸಿ ನಾಚಿಕೆ ಬಿಟ್ಟವರಾಗಿದ್ದಾರೆ. ಇನ್ನು ಮುಂದಾದರೂ ಮೈಸೂರಿನ ಜನತೆ ಬಿಜೆಪಿಗರ ಸುಳ್ಳು ಮಾತುಗಳಿಗೆ ಮರುಳಾಗದೆ ಅಭಿವೃದ್ಧಿ ಮಾಡುವವರ ಪರ ಚಿಂತಿಸಬೇಕಾಗಿದೆ ಎಂದು ಮನವಿ ಮಾಡಿದರು.

ಮೈಸೂರು ನಗರ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಆರ್‌. ಮೂರ್ತಿ, ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ, ರಾಮಪ್ಪ ಹಾಜರಿದ್ದರು.

ಭೈರಪ್ಪನವರ ಊರಿಗೆ ದುಡ್ಡು ಯಾಕೆ?

ಸದಾ ಬಿಜೆಪಿಯನ್ನು ಹೊಗಳಿಕೊಂಡಿರುವ ಸಾಹಿತಿ ಡಾ.ಎಸ್‌.ಎಲ್‌. ಭೈರಪ್ಪನವರ ಹುಟ್ಟೂರಿಗೆ 5 ಕೋಟಿ ರು. ಯಾಕೆ? ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌. ದೊರೆಸ್ವಾಮಿಯವರನ್ನು ನಿಂದಿಸುವ ಬಿಜೆಪಿಗರು ತಮ್ಮನ್ನು ಹೊಗಳುವವರಿಗೆ ಸಾರ್ವಜನಿಕರ ಹಣ ಯಾಕೆ ನೀಡುತ್ತಿದ್ದಾರೆ. ಭೈರಪ್ಪವರ ಸಾಧನೆ ಏನು? ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಪ್ರಶ್ನಿಸಿದ್ದಾರೆ.

 

ಈ ಬಜೆಟ್‌ನಲ್ಲಿ ಆಹಾರ ಇಲಾಖೆಗೆ ಶೇ. 1 ರಷ್ಟುಅನುದಾನ ಮೀಸಲಿಟ್ಟಿದ್ದಾರೆ. ಅನ್ನಭಾಗ್ಯಕ್ಕಾಗಿಯೇ 2800 ಕೋಟಿ ಬೇಕು. ಈಗ 1600 ಕೋಟಿ ನೀಡಿರುವುದನ್ನು ನೋಡಿದರೆ ಮುಂದಿನ ದಿನಗಳಲ್ಲಿ ಅನ್ನಭಾಗ್ಯ ನಿಲ್ಲಿಸಿದರೂ ಅಚ್ಚರಿಯಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್‌ ಹೇಳಿದ್ದಾರೆ.

ಹಸಿರು ಶಾಲು ಹಾಕಿಕೊಂಡು ಬಜೆಟ್‌ ಮಂಡಿಸಿದ ಯಡಿಯೂರಪ್ಪನವರ ಸಾಲ ಮನ್ನಾ ಮಾಡಲಿಲ್ಲ. ಬಿಜೆಪಿಗರ ಮನೆ ದೇವರೇ ಸುಳ್ಳು. ಅದನ್ನೇ ಹೇಳಿಕೊಂಡು ತಿರುಗಾಡುವುದರಲ್ಲಿ ನಿಸ್ಸೀಮರು ಎಂದು ಕೆಪಿಸಿಸಿ ವಕ್ತಾರೆ ಮಂಜುಳಾ ಮಾನಸ ತಿಳಿಸಿದ್ದಾರೆ.

click me!