ಚಿಕ್ಕಬಳ್ಳಾಪುರ (ಡಿ.27): ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿದ ಭೂ ಕಂಪನಕ್ಕೆ (Earthquake) ನಡುಗಿ ಸುಮಾರು 30 ಕ್ಕೂ ಹೆಚ್ಚು ಬಡವರ ಮನೆಗಳು ಬಿರುಕು ಬಿಟ್ಟಿವೆ. ಆದರೆ ಮನೆಗಳಿಗೆ ಹೆಚ್ಚು ಹಾನಿಯಾಗಿಲ್ಲ ಎಂದು ಹೇಳಿ ಪರಿಹಾರ ನೀಡದೇ ಸರ್ಕಾರ ಕೈ ಚೆಲ್ಲಿರುವುದು ಇದೀಗ ಬಡವರು ಮನೆಯ ದುರಸ್ತಿ ಕಾರ್ಯಕ್ಕೆ ಲಕ್ಷ ಲಕ್ಷ ಹಣ ತೆತ್ತಬೇಕಿದ್ದು ಇದರಿಂದ ಬಡವರು ದಿಕ್ಕು ತೋಚದಂತಾಗಿದ್ದಾರೆ.
ಹೌದು, ಭೂ ಕಂಪನ ಸಾಕಷ್ಟುಮನೆಗಳ ಭವಿಷ್ಯವನ್ನು ಅಲುಗಾಡಿಸಿವೆ. ಕೆಲವು ಮನೆಗಳ ಗೋಡೆಗಳು ಬಿರುಕು ಬಿಟ್ಟರೆ ಮತ್ತೆ ಕೆಲ ಮನೆಗಳ ಮೇಲ್ಛಾವಣಿ ಅಲುಗಾಡಿ ಅಪಾಯದ ಮುನ್ಸೂಚನೆ ಕೊಟ್ಟಿವೆ. ಇನ್ನೂ ಕೆಲವು ಮನೆಗಳು ಸಣ್ಣ ಸಣ್ಣ ರಂಧ್ರಗಳು ಕಾಣಿಸಿಕೊಂಡು ದುರಸ್ತಿಗೆ ಎದುರು ನೋಡುತ್ತಿವೆ. ಆದರೆ ಅವುಗಳ ದುರಸ್ತಿ ಕಾರ್ಯಕ್ಕೆ ಸರ್ಕಾರದಿಂದ ನೆರವು ಸಿಗಬಹುದೆಂಬ ಜನರ ನಿರೀಕ್ಷೆ ಹುಸಿಯಾಗಿದೆ.
ಪರಿಹಾರ ನೀಡಲು ಅವಕಾಶ ಇಲ್ಲ
ಭೂ ಕಂಪನದಿಂದ ಅಲುಗಾಡಿದ ಮನೆಗಳು (House) ಶೇ.50 ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಹಾನಿಯಾಗಿದ್ದರೆ ಮಾತ್ರ ಸರ್ಕಾರದ ನಿಯಮಾವಳಿಗಳ ಪ್ರಕಾರ ಪರಿಹಾರ ಕೊಡಲು ಸಾಧ್ಯವಿರುವ ಹಿನ್ನೆಲೆಯಲ್ಲಿ ಭೂ ಕಂಪನದಿಂದ ಬಿರುಕು ಬಿಟ್ಟು ಮನೆಗಳಿಗೆ ಪರಿಹಾರ ಕೊಡಲು ಅವಕಾಶ ಇಲ್ಲದಿರುವುದು ಇದೀಗ ಬಡವರ ಆಕ್ರೋಶಕ್ಕೆ ಕಾರಣವಾಗಿದೆ. ಭೂ ಕಂಪನದಿಂದ ಬಿರುಕು ಬಿಟ್ಟಿರುವ ಮನೆಗಳಿಗೆ ಪರಿಹಾರ ಕೊಡಬೇಕೆಂಬ ಆಗ್ರಹ ಕೇಳಿ ಬರುತ್ತಿದೆ.
ಈಗಾಗಲೇ ಬಿರುಕು ಬಿಟ್ಟಿರುವ ಮನೆಗಳಲ್ಲಿ (House) ವಾಸ ಇರಲು ಭಯಪಟ್ಟು ಕುಟುಂಬಸ್ಥರು ಮನೆಗಳನ್ನು ತೊರೆದಿದ್ದಾರೆ. ಕೆಲವರು ಮನೆ ದುರಸ್ತಿ ಕಾರ್ಯಕ್ಕೆ ಕೈಯಲ್ಲಿ ಹಣ ಇಲ್ಲದೇ ಭವಿಷ್ಯದ ಬಗ್ಗೆ ಚಿಂತನೆ ನಡೆಸಿದ್ದಾರೆ. ಬಹಳಷ್ಟುಮಂದಿ ಸರ್ಕಾರದಿಂದ ನೆರವು ಸಿಗುತ್ತದೆಯೆಂಬ ನಿರೀಕ್ಷೆಯಲ್ಲಿದ್ದಾರೆ. ಆದರೆ ಸರ್ಕಾರದ ನಿಯಮಗಳೇ ಇದೀಗ ಬಡವರ (Poor) ಪರಿಹಾರಕ್ಕೆ ಕುತ್ತು ತಂದಿದ್ದು ಅಲ್ಪವಲ್ಪ ಮನೆಗಳಿಗೆ ಹಾನಿಯಾಗಿದ್ದರೆ ಪರಿಹಾರ ಕೊಡಲು ಸಾಧ್ಯವಿಲ್ಲ ಎನ್ನುವ ಎನ್‌ಡಿಆರ್‌ಎಫ್ ನಿಯಮಗಳು ಬಡವರನ್ನು ಚಿಂತೆಗೀಡು ಮಾಡಿವೆ.
30ಕ್ಕೂ ಹೆಚ್ಚು ಮನೆಗಳಿಗೆ ಹಾನಿ
ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಆರೂರು, ಮಂಡಿಕಲ್ಲು, ಪೆರೇಸಂದ್ರ, ಅಡ್ಡಗಲ್ 4 ಗ್ರಾಪಂ ವ್ಯಾಪ್ತಿಯ 13ಕ್ಕೂ ಹೆಚ್ಚು ಗ್ರಾಮಗಳಲ್ಲಿ ಹಾಗೂ ಚಿಂತಾಮಣಿ ತಾಲೂಕಿನ ಮಿಟ್ಟಹಳ್ಳಿ ಗ್ರಾಪಂ ಸುಮಾರು 4 ನಾಲ್ಕೈದು ಗ್ರಾಮಗಳಲ್ಲಿ ಹಾಗೂ ಬಾಗೇಪಲ್ಲಿ ತಾಲೂಕಿನಲ್ಲಿ ನಲ್ಲಪರೆಡ್ಡಿಪಲ್ಲಿ ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಇತ್ತೀಚೆಗೆ ಭೂ ಕಂಪನ ಆಗಿ 30 ಮನೆಗಳಿಗೆ ಹಾನಿಯಾಗಿದ್ದರೂ ಪರಿಹಾರ ಮಾತ್ರ ಗ್ರಾಮಸ್ಥರಿಗೆ ಮರೀಚಿಕೆಯಾಗಿದೆ.
ಶೇ.50ಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಮನೆಗಳಿಗೆ ಹಾನಿ ಆಗಿದ್ದರೆ ಮಾತ್ರ ಸರ್ಕಾರದಿಂದ ಪ್ರಕೃತಿ ವಿಕೋಪದಡಿ ಪರಿಹಾರ ಸಿಗುತ್ತದೆ. ಭೂ ಕಂಪನದಿಂದ ಮನೆಗಳು ಬಿರುಕು ಬಿಟ್ಟಿವೆ. ಹೆಚ್ಚು ಹಾನಿ ಆಗಿಲ್ಲ. ಆಗಾಗಿ ಪರಿಹಾರ ಕೊಡಲು ಸಾಧ್ಯವಿಲ್ಲ.
ಗಣಪತಿಶಾಸ್ತ್ರೀ, ಚಿಕ್ಕಬಳ್ಳಾಪುರ ತಹಸೀಲ್ದಾರ್.
ಭೂ ಕಂಪನದಿಂದ ಸಾಕಷ್ಟುಮನೆಗಳಿಗೆ ಹಾನಿಯಾಗಿವೆ. ಅವುಗಳಿಗೆ ಸರ್ಕಾರ ಕೂಡಲೇ ಪರಿಹಾರ ಘೋಷಿಸಬೇಕು, ಮನೆ ದುರಸ್ತಿಗೆ ಕನಿಷ್ಠ ತಲಾ ಒಂದು ಮನೆಗೆ 50 ರಿಂದ 1 ಲಕ್ಷ ರು, ಪರಿಹಾರ ನೀಡಬೇಕು. ಇಲ್ಲದೇ ಹೋದರೆ ನಾವು ಹೋರಾಟ ನಡೆಸಬೇಕಾಗುತ್ತದೆ.
ಬಿ.ಎನ್.ಮುನಿಕೃಷ್ಣಪ್ಪ, ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷರು.