Bengaluru Namma Metro: ಜನಜೀವನ ಸಹಜ ಸ್ಥಿತಿಗೆ ಬಂದ್ರೂ ನಿತ್ಯ 30 ಲಕ್ಷ ನಷ್ಟ..!

By Kannadaprabha NewsFirst Published Dec 27, 2021, 4:46 AM IST
Highlights

*  ಕೋವಿಡ್‌ ಪೂರ್ವದಂತೆ ರೈಲುಗಳ ಸಂಚಾರ
*  ಮೆಟ್ರೋ ಜಾಲ ಸಹ 14 ಕಿ.ಮೀ. ವಿಸ್ತರಣೆ
*  ಮೆಟ್ರೋ ನಿರ್ವಹಣೆಗೆ ಒಂದು ದಿನಕ್ಕೆ ಬೇಕಿದೆ 1 ಕೋಟಿ ರು.
 

ರಾಕೇಶ್‌ ಎನ್‌.ಎಸ್‌.

ಬೆಂಗಳೂರು(ಡಿ.27):  ಲಾಕ್‌ಡೌನ್‌(Lockdown) ತೆರವಾಗಿ ಜನಜೀವನ ಸಹಜ ಸ್ಥಿತಿಗೆ ಬಂದಿದ್ದರೂ ಬೆಂಗಳೂರು ಮೆಟ್ರೋ ನಿಗಮ(BMRCL) ಇನ್ನೂ ನಷ್ಟದಲ್ಲೇ ಸಂಚರಿಸುತ್ತಿದೆ. ಮೆಟ್ರೋದ ಹಿರಿಯ ಅಧಿಕಾರಿಗಳು ತಿಳಿಸುವ ಪ್ರಕಾರ ಮೆಟ್ರೋ ನಿಗಮ ನಿತ್ಯ 30 ಲಕ್ಷ ರು. ನಷ್ಟದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ.

ಕೋವಿಡ್‌(Covid19) ಎರಡನೇ ಅಲೆ ಕಡಿಮೆ ಆಗುತ್ತಿದ್ದಂತೆಯೇ ಜೂನ್‌ 21ಕ್ಕೆ ಮೆಟ್ರೋ ನಿಗಮವು ತನ್ನ ಕಾರ್ಯಾಚರಣೆ ಆರಂಭಿಸಿತ್ತು. ಆ ಬಳಿಕ ವಿವಿಧ ಹಂತದ ಆನ್‌ಲಾಕ್‌(Unlock) ಪ್ರಕ್ರಿಯೆಗಳು ನಡೆಯುತ್ತಿದ್ದಂತೆ ಮೆಟ್ರೋ ತನ್ನ ಸೇವೆಯ ಅವಧಿ ಮತ್ತು ಓಡಾಟದ ಸಂಖ್ಯೆಯನ್ನು ಹೆಚ್ಚಿಸುತ್ತಾ ಬಂದಿತ್ತು. ಇದೀಗ ಕೋವಿಡ್‌ ಪೂರ್ವದಂತೆಯೇ ಮೆಟ್ರೋ ಸೇವೆ ಇದ್ದರೂ, ಮೆಟ್ರೋ ಜಾಲ ಸುಮಾರು 14 ಕಿ.ಮೀ. ಹೆಚ್ಚಳವಾಗಿದ್ದರೂ ಮೊದಲಿನಂತೆ ಪ್ರಯಾಣಿಕರನ್ನು(Passengers) ಸೆಳೆಯಲು ಸಾಧ್ಯವಾಗಿಲ್ಲ.

Bengaluru Metro:ನಮ್ಮ ಮೆಟ್ರೋ ಪ್ರಯಾಣಿಕರಿಗೆ ಗುಡ್‌ನ್ಯೂಸ್

ಬೆಂಗಳೂರು ಮೆಟ್ರೋ(Namma Metro) ಕಾರ್ಯಾಚರಣೆ ವೆಚ್ಚ ಒಂದು ದಿನಕ್ಕೆ 90 ಲಕ್ಷದಿಂದ 1 ಕೋಟಿ ರು. ಆಗಿದೆ. ಆದರೆ, ಮೆಟ್ರೋಗೆ ಸದ್ಯ ಪ್ರತಿದಿನ 70 ಲಕ್ಷ ರು. ಮಾತ್ರ ಪ್ರಯಾಣಿಕರಿಂದ ಸಂಗ್ರಹಿಸಲು ಸಾಧ್ಯವಾಗಿದೆ.
ತಿಂಗಳಿಗೆ 28 ಕೋಟಿ ರು.ನಿಂದ 30 ಕೋಟಿ ರು. ವ್ಯವಹಾರ ನಡೆಸಿದರೆ ಮೆಟ್ರೋದ ಲಾಭ ನಷ್ಟದ ವ್ಯವಹಾರ ಅಷ್ಟರ ಮಟ್ಟಿಗೆ ಸರಿದೂಗುತ್ತದೆ. ಆದರೆ ಮೆಟ್ರೋ ನಿಗಮಕ್ಕೆ ನವೆಂಬರ್‌ ತಿಂಗಳಲ್ಲಿ 20.44 ಕೋಟಿ ರು., ಅಕ್ಟೋಬರ್‌ನಲ್ಲಿ 17.90 ಕೋಟಿ ರು. ಸೆಪ್ಟೆಂಬರ್‌ನಲ್ಲಿ 14.37 ಕೋಟಿ ರು.ಗಳು ಮಾತ್ರ ಪ್ರಯಾಣಿಕರಿಂದ ಬಂದಿದೆ.

ಸದ್ಯ ಮೆಟ್ರೋದಲ್ಲಿ ಪ್ರತಿದಿನ 3.5 ಲಕ್ಷ ಜನ ಪ್ರಯಾಣಿಸುತ್ತಿದ್ದಾರೆ. ನಿತ್ಯ ಪ್ರಯಾಣಿಕರ ಸಂಖ್ಯೆ 4 ಲಕ್ಷಕ್ಕೆ ಏರಿಕೆ ಕಂಡರೆ 90 ಲಕ್ಷಕ್ಕಿಂತ ಹೆಚ್ಚು ಟಿಕೆಟ್‌ ವ್ಯವಹಾರ ಸಾಧ್ಯವಾಗಲಿದೆ. ದಿನನಿತ್ಯ 90 ಲಕ್ಷದಿಂದ 1 ಕೋಟಿ ರು. ತನಕ ಪ್ರಯಾಣಿಕರಿಂದ ಸಂಗ್ರಹಿಸಲು ಸಾಧ್ಯವಾದರೆ ಮೆಟ್ರೋ ಮತ್ತೆ ಲಾಭದ ಹಳಿಗೆ ಮರಳುತ್ತದೆ ಎಂದು ಮೆಟ್ರೋ ನಿಗಮದ ಹಿರಿಯ ಅಧಿಕಾರಿಗಳು ಹೇಳುತ್ತಾರೆ.

ಕೋವಿಡ್‌ ಪೂರ್ವದಲ್ಲಿ ಬೆಂಗಳೂರು ಮೆಟ್ರೋದಲ್ಲಿ ಪ್ರತಿದಿನ 5 ಲಕ್ಷಕ್ಕಿಂತ ಹೆಚ್ಚು ಮಂದಿ ಸಂಚರಿಸುತ್ತಿದ್ದರು. ಸದ್ಯ ಈ ಸಂಖ್ಯೆ ಕುಸಿದಿದೆ. ಸದ್ಯ ಐಟಿ ಸೇರಿದಂತೆ ವಿವಿಧ ಕಂಪೆನಿಗಳಲ್ಲಿ ಚಾಲ್ತಿಯಲ್ಲಿರುವ ವರ್ಕ್ ಫ್ರಂ ಹೋಮ್‌(Work From Home) ವ್ಯವಸ್ಥೆ ಕೊನೆಗೊಂಡರೆ ಮೆಟ್ರೋ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಬಹುದು ಎಂಬ ನಿರೀಕ್ಷೆಯನ್ನು ಮೆಟ್ರೋ ನಿಗಮ ಹೊಂದಿದೆ.

ಟಿಕೆಟ್‌ ಮಾತ್ರ ನಂಬಿದ್ರೆ ಸಾಲದು:

ಆದರೆ, ಬೆಂಗಳೂರು ಮೆಟ್ರೋ ಕೇವಲ ಪ್ರಯಾಣಿಕರಿಂದ ಬರುವ ಆದಾಯಕ್ಕೆ(Revenue) ಮಾತ್ರ ಸೀಮಿತಗೊಳ್ಳದೇ ಅನ್ಯ ಮೂಲಗಳಿಂದಲೂ ಆದಾಯ ಸಂಗ್ರಹಿಸಲು ಕ್ರಿಯಾಶೀಲವಾಗಬೇಕು ಎಂದು ಸಾರಿಗೆ ತಜ್ಞರು ಅಭಿಪ್ರಾಯ ಪಡುತ್ತಾರೆ. ದೇಶದ ಪ್ರಮುಖ ಮೆಟ್ರೋಗಳು ಪ್ರಯಾಣಿಕರೇತರ ಮೂಲಗಳಿಂದ ಆದಾಯ ಸಂಗ್ರಹಿಸುವಲ್ಲಿ ಬೆಂಗಳೂರು ಮೆಟ್ರೋವನ್ನು ಹಿಂದಿಕ್ಕಿವೆ. ಅಂತಾರಾಷ್ಟ್ರೀಯ ಸಂಸ್ಥೆಯೊಂದರ ಅಧ್ಯಯನ ಪ್ರಕಾರ ದೆಹಲಿ ಮೆಟ್ರೋ(ಶೇ.37), ಚೆನ್ನೈ(ಶೇ.16), ಮುಂಬೈ(ಶೇ.14)ರಷ್ಟು ಆದಾಯವನ್ನು ಸಾರಿಗೇತರ ಮೂಲದಿಂದ ಪಡೆಯುತ್ತಿವೆ. ಆದರೆ ನಮ್ಮ ಮೆಟ್ರೋ ಕೇವಲ ಶೇ.9ರಷ್ಟು ಆದಾಯ ಮಾತ್ರ ಸಾರಿಗೇತರ ಮೂಲದಿಂದ ಪಡೆಯುತ್ತಿದೆ.

ಮೆಟ್ರೋ ಫಿಡರ್‌ ಸೇವೆ : ಬಿಎಂಟಿಸಿ ಅವಧಿ ವಿಸ್ತರಣೆ

ಮುಂದಿನ ಎರಡು ವರ್ಷದಲ್ಲಿ ಸಾರಿಗೇತರ ಆದಾಯವನ್ನು ಶೇ.25ಕ್ಕೆ ಏರಿಸಬೇಕು ಎಂಬ ಗುರಿ ಮೆಟ್ರೋ ನಿಗಮ ಇಟ್ಟುಕೊಂಡಿದೆ. ಇದಕ್ಕಾಗಿ ಮೆಟ್ರೋದ ಜಾಗದಲ್ಲಿ ಹೆಚ್ಚು ಹೆಚ್ಚು ರಿಟೇಲ್‌ ಶಾಪ್‌, ಕಾಫಿ ಶಾಪ್‌, ಚಾಕೋಲೇಟ್‌ ಮಳಿಗೆ, ಔಷಧಿ ಅಂಗಡಿ ತೆರೆಯುವ ಯೋಚನೆ ಇಟ್ಟುಕೊಂಡಿದೆ. ಬಿಬಿಎಂಪಿಯು(BBMP) ಹೊರಾಂಗಣ ಜಾಹೀರಾತು ನಿಷೇಧಿಸಿರುವುದು ಮೆಟ್ರೋದ ಆದಾಯಕ್ಕೆ ಹೊಡೆತ ನೀಡಿದೆ. ಆದರೆ ಒಳಾಂಗಣದಲ್ಲಿ ಹೆಚ್ಚೆಚ್ಚು ಜಾಹೀರಾತು ಅಳವಡಿಸುವ ಚಿಂತನೆಯನ್ನು ಮೆಟ್ರೋ ನಿಗಮ ಹೊಂದಿದೆ.

75 ಲಕ್ಷ ರು. ದಂಡ ವಸೂಲಿ

ಮೆಟ್ರೋದಲ್ಲಿ ಕೋವಿಡ್‌ ನಿಯಮ ಉಲ್ಲಂಘಿಸಿ ಮಾಸ್ಕ್‌(Mask) ಧರಿಸದ ಪ್ರಯಾಣಿಕರಿಂದ ಈವರೆಗೆ ಒಟ್ಟು 75 ಲಕ್ಷ ರು.ಗಿಂತ ಹೆಚ್ಚು ದಂಡ ವಸೂಲಿ ಮಾಡಲಾಗಿದೆ ಎಂದು ಮೆಟ್ರೋ ನಿಗಮದ ಕಾರ್ಯಾಚರಣೆ ವಿಭಾಗದ ನಿರ್ದೇಶಕ ಎ.ಎಸ್‌.ಶಂಕರ್‌ ತಿಳಿಸಿದ್ದಾರೆ. ಸಾಮಾಜಿಕ ಅಂತರ(Social Distance) ಪಾಲನೆಗಿಂತಲೂ ಮಾಸ್ಕ್‌ ಧಾರಣೆಗೆ ನಾವು ಒತ್ತು ನೀಡುತ್ತಿದ್ದೇವೆ. ನಾವು ಮಾಸ್ಕ್‌ ಧಾರಣೆ ಮೇಲೆ ನಿಗಾ ಇಡಲು ಎರಡು ತಂಡ ರಚಿಸಿದ್ದೇವೆ. ಹಾಗೆಯೇ ನಿಲ್ದಾಣಗಳಲ್ಲಿಯೂ ಕೆಲ ಸಿಬ್ಬಂದಿಗೆ ದಂಡ ಹಾಕುವ ಅಧಿಕಾರ ನೀಡಿದ್ದೇವೆ ಎಂದು ಹೇಳಿದ್ದಾರೆ.
 

click me!