Bengaluru: ವಸತಿ ಜಾಗದಲ್ಲಿ ಅನಧಿಕೃತ ಅಂಗಡಿಗಳಿದ್ದರೆ ಬಂದ್: ಬಿಬಿಎಂಪಿ

By Govindaraj S  |  First Published Nov 11, 2022, 1:27 PM IST

ನಗರದ ಜನವಸತಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಸೇವೆ ಹೊರತುಪಡಿಸಿ ಯಾವುದೇ ರೀತಿಯ ಅನಧಿಕೃತ ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ಭರವಸೆ ನೀಡಿದೆ. 


ಬೆಂಗಳೂರು (ನ.11): ನಗರದ ಜನವಸತಿ ಪ್ರದೇಶದಲ್ಲಿ ಸಾರ್ವಜನಿಕರಿಗೆ ಅಗತ್ಯವಿರುವ ಸೇವೆ ಹೊರತುಪಡಿಸಿ ಯಾವುದೇ ರೀತಿಯ ಅನಧಿಕೃತ ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಹೈಕೋರ್ಟ್‌ಗೆ ಭರವಸೆ ನೀಡಿದೆ. ನಗರದ ವಿಲ್ಸನ್‌ ಗಾರ್ಡನ್‌ ಜನವಸತಿ ಪ್ರದೇಶದ ರಸ್ತೆ ಮತ್ತು ಪಾದಚಾರಿ ಮಾರ್ಗದ ಮೇಲೆ ಅನಧಿಕೃತವಾಗಿ ತೆರೆದಿರುವ ಹೂವಿನ ಅಂಗಡಿಗಳನ್ನು ತೆರವುಗೊಳಿಸಲು ಬಿಬಿಎಂಪಿಗೆ ಆದೇಶಿಸುವಂತೆ ಕೋರಿ ಸ್ಥಳೀಯ ನಿವಾಸಿಗಳ ಸಂಘ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯನ್ಯಾಯಮೂರ್ತಿ ಪಿ.ಬಿ.ವರಾಳೆ ಅವರ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಬಿಬಿಎಂಪಿ ಪರ ವಕೀಲರು, ಜನವಸತಿ ಪ್ರದೇಶದಲ್ಲಿ ಸಣ್ಣಪುಟ್ಟಅಂಗಡಿಗಳು, ಹಾಲಿನ ಬೂತ್‌ಗಳು, ಸ್ಟೇಷನರಿ ಅಂಗಡಿ, ಬೇಕರಿಗಳು, ಎಸ್‌ಟಿಡಿ ಬೂತ್‌ ಮತ್ತು ಬ್ಯಾಂಕ್‌ ಸೇರಿದಂತೆ ಸಾರ್ವಜನಿಕರಿಗೆ ಅಗತ್ಯವಿರುವ ಇತರೆ ಸೇವೆಗಳಿಗೆ ಮಾತ್ರ ಅವಕಾಶವಿರಲಿದೆ. ಯಾವುದೇ ರೀತಿಯ ಅನಧಿಕೃತ ವಾಣಿಜ್ಯ ವ್ಯವಹಾರಗಳಿಗೆ ಅವಕಾಶ ಕಲ್ಪಿಸುವುದಿಲ್ಲ. ಹಾಗೆಯೇ ವಸತಿ ಪ್ರದೇಶದಲ್ಲಿ ವಾಣಿಜ್ಯ ಚಟುವಟಿಕೆ ನಡೆಸಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿ ಪ್ರಮಾಣ ಪತ್ರ ಸಲ್ಲಿಸಿದರು. 

Tap to resize

Latest Videos

Bengaluru: ಬಿಬಿಎಂಪಿಗೆ 130 ಕೋಟಿ ತೆರಿಗೆ ಮೋಸ!

ಅಲ್ಲದೆ, ಹೈಕೋರ್ಟ್‌ ಆದೇಶದಂತೆ ವಿಲ್ಸನ್‌ ಗಾರ್ಡನ್‌ ವಸತಿ ಪ್ರದೇಶದಲ್ಲಿ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸಿದ್ದು, ಅನಧಿಕೃತವಾಗಿ ತೆರೆಯಲಾಗಿರುವ 101 ಹೂವಿನ ಅಂಗಡಿಗಳ ಪೈಕಿ ಈಗಾಗಲೇ 60 ಅಂಗಡಿ ತೆರವುಗೊಳಿಸಲಾಗಿದೆ. ಉಳಿದ 41 ಅಂಗಡಿಗಳನ್ನು ಮುಂದಿನ ಎರಡು ವಾರಗಳಲ್ಲಿ ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಅಧಿಕಾರಿಗಳು ನ್ಯಾಯಪೀಠಕ್ಕೆ ಭರವಸೆ ನೀಡಿದರು. ಹಾಗೆಯೇ, ಹಿಂದಿನ ಸ್ಥಳೀಯ ಅಧಿಕಾರಿಗಳಿಂದ ಆರು ಹೂವಿನ ಅಂಗಡಿಗಳಿಗೆ ಅನಧಿಕೃತವಾಗಿ ವ್ಯಾಪಾರ ಪರವಾನಗಿ ದೊರೆತಿದೆ. ಅನಧಿಕೃತ ಪರವಾನಗಿ ಮಂಜೂರು ಮಾಡಿದ ಸಂಬಂಧಪಟ್ಟಆರೋಗ್ಯ ಅಧಿಕಾರಿ ವಿರುದ್ಧ ಬಿಬಿಎಂಪಿ ಮುಖ್ಯ ಆಯುಕ್ತರು ಸೂಕ್ತ ಕ್ರಮ ಜರುಗಿಸಲಿದ್ದಾರೆ ಎಂದು ಪ್ರಮಾಣ ಪತ್ರದಲ್ಲಿ ತಿಳಿಸಲಾಗಿದೆ.

ಅದ್ಧೂರಿ ಕೆಂಪೇಗೌಡ ಜಯಂತಿ ಆಚರಣೆಗೆ ಬಿಬಿಎಂಪಿ ನಿರ್ಧಾರ

ವಿಚಾರಣೆ ಡಿ.6ಕ್ಕೆ ಮುಂದೂಡಿಕೆ: ಬಿಬಿಎಂಪಿ ಪ್ರಮಾಣ ಪತ್ರವನ್ನು ಪರಿಗಣಿಸಿದ ನ್ಯಾಯಪೀಠ, ಪರಿಷ್ಕೃತ ಮಾಸ್ಟರ್‌ ಪ್ಲಾನ್‌-2015 ಪ್ರಕಾರ ವಸತಿ ಪ್ರದೇಶದಲ್ಲಿ ಅನುಮತಿ ನೀಡಲಾದ ಚಟುವಟಿಕೆಗಳನ್ನು ಬಿಟ್ಟು ಇತರೆ ಯಾವುದೇ ಚಟುವಟಿಕೆಗಳಿಗೆ ಅನುಮತಿ ಕಲ್ಪಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿತು. ಜತೆಗೆ, ವಿಲ್ಸನ್‌ ಗಾರ್ಡನ್‌ ಬಡಾವಣೆಯಲ್ಲಿರುವ 41 ಅನಧಿಕೃತ ಹೂವಿನ ಅಂಗಡಿ ಮತ್ತು ದಾಸ್ತಾನು ಘಟಕಗಳ ತೆರವು ಕಾರ್ಯಾಚರಣೆ ಪೂರ್ಣಗೊಳಿಸಿ ನ್ಯಾಯಾಲಯಕ್ಕೆ ವರದಿ ಸಲ್ಲಿಸುವಂತೆ ನಿರ್ದೇಶಿಸಿ ವಿಚಾರಣೆಯನ್ನು ಡಿ.6ಕ್ಕೆ ಮುಂದೂಡಿತು.

click me!