ಕುಷ್ಟಗಿಯಲ್ಲಿಲ್ಲ ಬಸ್‌ ತಂಗುದಾಣ, ಪ್ರಯಾಣಿಕರ ಪರದಾಟ

By Suvarna NewsFirst Published Dec 13, 2019, 7:24 AM IST
Highlights

ಮಳೆ, ಬಿಸಿಲಿನಲ್ಲಿಯೇ ಬಸ್‌ಗಾಗಿ ಕಾಯುವ ಅನಿವಾರ್ಯತೆ|ಸಂಸದರ ಭರವಸೆ ಈಡೇರಿಲ್ಲ|ಶಾಸಕರು ಕಾಳಜಿ ವಹಿಸಲಿ|ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಬಸ್‌ ತಂಗುದಾಣ ಇದ್ದರೂ ಕುಷ್ಟಗಿಯಲ್ಲಿ ಮಾತ್ರ ಇಲ್ಲದಿರುವುದು ಅಚ್ಚರಿಯ ಸಂಗತಿ|

ಕುಷ್ಟಗಿ(ಡಿ.13): ಪಟ್ಟಣವು ದಿನದಿಂದ ಬೆಳೆಯುತ್ತಲೇ ಇದೆ. ಆದರೆ ಸಾರ್ವಜನಿಕರಿಗೆ ಸೌಲಭ್ಯಗಳು ಮಾತ್ರ ಅಷ್ಟಕಷ್ಟೆ ಎಂಬುದಕ್ಕೆ ಪಟ್ಟಣದಲ್ಲಿ ಒಂದೇ ಒಂದು ಸಾರ್ವಜನಿಕ ಬಸ್‌ ತಂಗುದಾಣ ಇಲ್ಲದಿರುವುದೇ ಇದಕ್ಕೆ ನಿದರ್ಶನವಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ 

ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿಯೂ ಬಸ್‌ ತಂಗುದಾಣ ಇದ್ದರೂ ಕುಷ್ಟಗಿಯಲ್ಲಿ ಮಾತ್ರ ಇಲ್ಲದಿರುವುದು ಅಚ್ಚರಿಯ ಸಂಗತಿ. ನಿತ್ಯ ಸಾವಿರಾರು ಸಂಖ್ಯೆಯ ಪ್ರಯಾಣಿಕರು ಪ್ರಮುಖ ರಸ್ತೆಗಳ ಅಕ್ಕಪಕ್ಕದಲ್ಲಿ ನಿಂತುಕೊಂಡೆ ಪ್ರಯಾಣ ಬೆಳೆಸುವ ವ್ಯವಸ್ಥೆ ಮುಂದುವರಿದಿದೆ.ಗ್ರಾಮೀಣ ಪ್ರದೇಶಗಳಿಗೆ ತೆರಳುವ ಪ್ರಯಾಣಿಕರು ಮತ್ತು ಶಾಲಾ ಮಕ್ಕಳು, ಅಂಗವಿಕಲರು ಬಿಸಿಲು, ಮಳೆಯಲ್ಲಿಯೇ ತೊಯ್ದುಕೊಂಡು ನಡು ರಸ್ತೆಯಲ್ಲಿ ನಿಂತುಕೊಂಡು ಪ್ರಯಾಣಿಸುವ ಪರಿಸ್ಥಿತಿ ಇಲ್ಲಿನ ಜನತೆಗೆ ತಪ್ಪುತ್ತಿಲ್ಲ.

ಸಂಸದರ ಭರವಸೆ ಈಡೇರಿಲ್ಲ:

ಸಂಗಣ್ಣ ಕರಡಿ ಸಂಸದರಾಗಿ ಪ್ರಥಮ ಬಾರಿಗೆ ಪಟ್ಟಣಕ್ಕೆ ಬಂದಾಗ ಪಟ್ಟಣದ ಬಸವೇಶ್ವರ ವೃತ್ತ ಸೇರಿದಂತೆ ಇತರೆ ಕಡೆಗಳಲ್ಲಿ ಸಂಸದರ ಅನುದಾನದಲ್ಲಿ ತಂಗುದಾಣ ನಿರ್ಮಿಸುವ ಭರವಸೆ ನೀಡಿದರು. ಆದರೆ ಸಂಸದರ ಭರವಸೆ ಇನ್ನೂ ಹಾಗೆಯೇ ಉಳಿದಿದೆ. ಜತೆಗೆ ಪ್ರಯಾಣಿಕರು ಮತ್ತು ಶಾಲೆ, ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ನಿತ್ಯ ನಡುರಸ್ತೆಗಳಲ್ಲಿಯೇ ಬಸ್‌ಗಳಿಗಾಗಿ ಕಾಯುವ ಅನಿವಾರ್ಯತೆ ಮಾತ್ರ ತಪ್ಪುತ್ತಿಲ್ಲ.

ಶಾಸಕರು ಕಾಳಜಿ ವಹಿಸಲಿ:

ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಅವರು ಈ ಕ್ಷೇತ್ರದಲ್ಲಿ ಎರಡು ಬಾರಿ ಆಯ್ಕೆಯಾಗಿ ಶಾಸಕರಾಗಿದ್ದು, ಅವರು ಈ ಬಗ್ಗೆ ಇಲ್ಲಿಯವರೆಗೂ ಸಮಸ್ಯೆ ಕುರಿತು ಚಕಾರ ಎತ್ತುತ್ತಿಲ್ಲ. ಇನ್ನಾದರೂ ಶಾಸಕರು ಪಟ್ಟಣಕ್ಕೆ ಅತಿ ಅಗತ್ಯವಿರುವ ಬಸ್‌ ತಂಗುದಾಣವನ್ನು ನಿರ್ಮಿಸಲು ಮುಂದಾಗಬೇಕೆಂಬುದು ಸಾರ್ವಜನಿಕರ ಆಗ್ರಹವಾಗಿದೆ.(ಸಾಂದರ್ಭಿಕ ಚಿತ್ರ)
 

click me!