ಶುಕ್ರವಾರದಿಂದ ಶ್ರೀ ಹುಲಿಗೆಮ್ಮ ದೇವಿಯ ಜಾತ್ರೆ ಪ್ರಾರಂಭವಾಗಿದ್ದು, ವಾರಗಳ ಕಾಲ ನಡೆಯಲಿದೆ. ನಿತ್ಯವೂ ಲಕ್ಷ, ಲಕ್ಷ ಭಕ್ತರು ಸೇರುತ್ತಾರೆ. ಕೇವಲ ರಾಜ್ಯದ ಭಕ್ತರು ಅಷ್ಟೇ ಅಲ್ಲ, ಅಕ್ಕಪಕ್ಕದ ನಾಲ್ಕಾರು ರಾಜ್ಯದ ಭಕ್ತರು ಆಗಮಿಸುತ್ತಾರೆ. ಆದರೆ, ಇಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಸೋಮರಡ್ಡಿ ಅಳವಂಡಿ
ಕೊಪ್ಪಳ(ಮೇ.25): ಹುಣ್ಣಿಮೆಗೆ ಲಕ್ಷ, ಲಕ್ಷ ಭಕ್ತರು, ವಾರಕ್ಕೊಮ್ಮೆ 50-60 ಸಾವಿರ ಭಕ್ತರು, ಇನ್ನು ಜಾತ್ರೆಯಲ್ಲಿ ಐದಾರು ಲಕ್ಷ ಭಕ್ತರು ಸೇರುವ ತಾಲೂಕಿನ ಹುಲಿಗಿ ಗ್ರಾಮದ ಶ್ರೀ ಹುಲಿಗೆಮ್ಮ ದೇವಸ್ಥಾನ ವ್ಯಾಪ್ತಿಯಲ್ಲಿ ಮೂಲಭೂತ ಸೌಕರ್ಯಗಳೇ ಇಲ್ಲ. ಬರುವ ಲಕ್ಷ, ಲಕ್ಷ ಭಕ್ತರಿಗೆ ಇಲ್ಲಿ ಶೌಚಕ್ಕೆ ಬಯಲೇ ಗತಿ! ಇನ್ನು ಸ್ನಾನಕ್ಕೆ ಗಲೀಜು ನೀರು! ಶುಕ್ರವಾರದಿಂದ ಶ್ರೀ ಹುಲಿಗೆಮ್ಮ ದೇವಿಯ ಜಾತ್ರೆ ಪ್ರಾರಂಭವಾಗಿದ್ದು, ವಾರಗಳ ಕಾಲ ನಡೆಯಲಿದೆ. ನಿತ್ಯವೂ ಲಕ್ಷ, ಲಕ್ಷ ಭಕ್ತರು ಸೇರುತ್ತಾರೆ. ಕೇವಲ ರಾಜ್ಯದ ಭಕ್ತರು ಅಷ್ಟೇ ಅಲ್ಲ, ಅಕ್ಕಪಕ್ಕದ ನಾಲ್ಕಾರು ರಾಜ್ಯದ ಭಕ್ತರು ಆಗಮಿಸುತ್ತಾರೆ. ಆದರೆ, ಇಲ್ಲಿ ಕನಿಷ್ಠ ಮೂಲಭೂತ ಸೌಕರ್ಯಗಳು ಇಲ್ಲದಿರುವುದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
undefined
ಲಕ್ಷಾಂತರ ಭಕ್ತರಿಗೆ ದೇವಸ್ಥಾನದ ವ್ಯಾಪ್ತಿಯಲ್ಲಿ ಇರುವುದೇ 60 ಶೌಚಾಲಯಗಳು. ಅವು ಕೆಲವರಿಗಷ್ಟೇ ಸಾಕು. ಲಕ್ಷ, ಲಕ್ಷ ಭಕ್ತರಿಗೆ ಸಾಲುವುದಿಲ್ಲ. ಹೀಗಾಗಿ ಭಕ್ತರು ಬಯಲಲ್ಲೇ ಶೌಚ ಮಾಡುವುದು ಅನಿವಾರ್ಯ.
ಆಗಿ ಹುಣ್ಣಿಮೆ: ಕೊಪ್ಪಳದ ಹುಲಿಗಿ ದೇಗುಲಕ್ಕೆ 1 ಲಕ್ಷ ಭಕ್ತರು..!
ಶೌಚಕ್ಕೆ ಹೋಗಲು ಕತ್ತಲಾಗಬೇಕು:
ಈ ಜಾತ್ರೆಗೆ ಲಕ್ಷೋಪಲಕ್ಷ ಮಹಿಳೆಯರು ಆಗಮಿಸುತ್ತಾರೆ. ಅದರಲ್ಲೂ ಬಂದ ಬಹುತೇಕ ಭಕ್ತರು ಎರಡು-ಮೂರು ದಿನಗಳ ಕಾಲ ತಂಗುತ್ತಾರೆ. ಅವರೆಲ್ಲರೂ ಬಹುತೇಕವಾಗಿ ಬಯಲಲ್ಲಿಯೇ ವಾಸಿಸುತ್ತಿದ್ದಾರೆ. ಶೆಡ್ ಇದ್ದರೂ, ಹತ್ತಾರು ಸಾವಿರ ಜನರಿಗೆ ಸಾಲುವುದಿಲ್ಲ. ಉಳಿದವರೆಲ್ಲರೂ ದೇವಸ್ಥಾನದ ಸುತ್ತಮುತ್ತ ವಾಸಿಸುತ್ತಿದ್ದಾರೆ. ಹೀಗೆ, ವಾಸಿಸುವ ಮಹಿಳೆಯರು ಬೆಳಗಿನ ಜಾವವೇ ಶೌಚಾಲಯಕ್ಕೆ ಹೋಗುತ್ತಾರೆ. ಹಾಗೊಂದು ವೇಳೆ ಬೆಳಗಾಯಿತು ಎಂದರೆ ಮತ್ತೆ ಕತ್ತಲಾಗುವವರೆಗೂ ಅವರು ಕಾಯಲೇಬೇಕಾದ ದು:ಸ್ಥಿತಿ ಇಲ್ಲಿದೆ. ಅಷ್ಟಾದರೂ ದೇವಸ್ಥಾನ ಸಮಿತಿ ತನಗೂ, ಇದಕ್ಕೂ ಸಂಬಂಧ ಇಲ್ಲ ಎನ್ನುವಂತೆ ಇದೆ.
ಕೊಳಚೆ ನೀರೇ ಗತಿ:
ಇನ್ನು ದೇವಸ್ಥಾನದ ವ್ಯಾಪ್ತಿಯಲ್ಲಿ ಸುಮಾರು 30-40 ಸ್ನಾನಗೃಹಗಳು ಇವೆ. ಲಕ್ಷ, ಲಕ್ಷ ಭಕ್ತರಿಗೆ ಅವು ಸಾಲುವುದಿಲ್ಲ. ಹೀಗಾಗಿ, ಭಕ್ತರು ನದಿಯಲ್ಲಿ ಕೊಳಚೆ ನೀರಿನಲ್ಲಿಯೇ ಸ್ನಾನ ಮಾಡುತ್ತಾರೆ. ಇದರಿಂದ ರೋಗರುಜಿನಗಳು ಹರಡುತ್ತವೆ. ಆದರೂ, ಭಕ್ತರು ವಿಧಿಯಿಲ್ಲದೆ ಸ್ನಾನ ಮಾಡುವ ದೃಶ್ಯ ಮರುಕ ಹುಟ್ಟಿಸುತ್ತದೆ.
ನದಿ ನೀರು ಗಲೀಜು ಇರುವುದರಿಂದ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ, ನದಿಯಲ್ಲಿ ಸ್ನಾನ ಮಾಡಬೇಡಿ, ಕೇವಲ ಸ್ನಾನಗೃಹದಲ್ಲಿ ಮಾತ್ರ ಸ್ನಾನ ಮಾಡಿ ಎಂದು ದೇವಸ್ಥಾನ ಸಮಿತಿ ಕಟ್ಟಾಜ್ಞೆ ಹೊರಡಿಸಿದೆ. ಆದರೆ, ಆಗಮಿಸುವ ಎಲ್ಲ ಭಕ್ತರಿಗೆ ಸ್ನಾನಕ್ಕೆ ವ್ಯವಸ್ಥೆ ಮಾಡುವುದಕ್ಕೆ ಮುತುವರ್ಜಿ ವಹಿಸುವುದಿಲ್ಲ. ಈಗ ಜಾತ್ರೆಯ ನಿಮಿತ್ತ ಒಂದಷ್ಟು ತಾತ್ಕಾಲಿಕ ಶೌಚಾಲಯಗಳು ಮತ್ತು ಸ್ನಾನಗೃಹಗಳ ವ್ಯವಸ್ಥೆ ಮಾಡಿರುವುದಾಗಿ ದೇವಸ್ಥಾನದ ಆಡಳಿತ ಮಂಡಳಿಯವರು ಹೇಳಿಕೊಂಡಿದ್ದಾರೆ. ವಾಸ್ತವದಲ್ಲಿ ಅವು ಯಾವುದಕ್ಕೂ ಸಾಲುವುದಿಲ್ಲ.
ಬ್ಯಾಂಕಿನಲ್ಲಿ ₹65 ಕೋಟಿ:
ದೇವಸ್ಥಾನಕ್ಕೆ ಪ್ರತಿವರ್ಷವೂ 15-16 ಕೋಟಿ ರು. ಆದಾಯ ಬರುತ್ತದೆ. ಸದ್ಯ ಬ್ಯಾಂಕಿನಲ್ಲಿ ಕಳೆದ ಹತ್ತು ವರ್ಷಗಳಿಂದ ಸುಮಾರು ₹65 ಕೋಟಿ ಇದೆ. ವಾರ್ಷಿಕವಾಗಿ ನಾಲ್ಕಾರು ಕೋಟಿ ರು.ವೆಚ್ಚ ಮಾಡುತ್ತಾರೆ. ಇರುವ ಹಣವನ್ನೇ ಬಳಕೆ ಮಾಡಿಕೊಂಡು ಮಾಸ್ಟರ್ ಪ್ಲ್ಯಾನ್ ಮಾಡುವ ಕಾರ್ಯ ನಾಲ್ಕಾರು ವರ್ಷಗಳಿಂದ ಕುಂಟುತ್ತಾ, ತೇವಳುತ್ತಾ ಸಾಗುತ್ತಿರುವುದು ಮಾತ್ರ ನಾಚಿಕೆಗೇಡು.
ಹುಲಿಗಿ ರೈಲ್ವೆ ಮೇಲ್ಸೇತುವೆ ಕಾಮಗಾರಿಗೆ ಬಿಡಿಗಾಸು ನೀಡದ ರಾಜ್ಯ ಸರ್ಕಾರ: ಆರೋಪ
ಹುಲಿಗೆಮ್ಮ ದೇವಸ್ಥಾನದಲ್ಲಿ ಅಧಿಕ ಸಂಖ್ಯೆಯ ಭಕ್ತರು ಸೇರುತ್ತಾರೆ. ಬರುವ ಲಕ್ಷಾಂತರ ಭಕ್ತರಿಗೆ ಮೂಲಭೂತ ಸೌಕರ್ಯಗಳು ಇಲ್ಲ. ಶೌಚಾಲಯ, ಸ್ನಾನಗೃಹಗಳ ಸಮಸ್ಯೆ ಗಂಭೀರವಾಗಿದೆ ಎಂದು ಕೊಪ್ಪಳ ಕೊಪ್ಪಳ ಮಾಜಿ ಅಧ್ಯಕ್ಷ ಟಿ.ಜನಾರ್ದನ ಹುಲಿಗಿ ತಿಳಿಸಿದ್ದಾರೆ.
ಜಾತ್ರೆಯಲ್ಲಿ ಸುಮಾರು ನಾಲ್ಕಾರು ಲಕ್ಷ ಭಕ್ತರು ಸೇರುತ್ತಾರೆ. ನದಿಯಲ್ಲಿ ನೀರು ಇಲ್ಲದಿರುವುದರಿಂದ ಇರುವ ನೀರು ಗಲೀಜು ಆಗಿರುವುದರಿಂದ ಸ್ನಾನ ಮಾಡದಂತೆ ಮನವಿ ಮಾಡಿದ್ದೇವೆ. ತುಂಗಭದ್ರಾ ಜಲಾಶಯದಿಂದ ನೀರು ಬಿಡುಗಡೆಗಾಗಿ ಜಿಲ್ಲಾಧಿಕಾರಿ ಸಂಬಂಧಪಟ್ಟವರಿಗೆ ಪತ್ರ ಬರೆದಿದ್ದಾರೆ ಎಂದು ದೇವಸ್ಥಾನ ಸಮಿತಿ ಆಡಳಿತಾಧಿಕಾರಿ ಅರವಿಂದ ಸುತಗುಂಡಿ ಹೇಳಿದ್ದಾರೆ.