ಜೆಡಿಎಸ್‌ ಏಕಾಂಗಿ ಸ್ಪರ್ಧೆಗೆ ಸಜ್ಜು : ಶೇ.50ರಷ್ಟು ಟಿಕೆಟ್‌ ಮಹಿಳೆಯರಿಗೆ

By Kannadaprabha News  |  First Published Jan 14, 2020, 8:34 AM IST

ಯಾವುದೇ ರೀತಿ ಮೈತ್ರಿ ಇಲ್ಲದೇ ಜೆಡಿಎಸ್ ಏಕಾಂಗಿಯಾಗಿ ಚುನಾವಣೆಗೆ ಸ್ಪರ್ಧೆ ಮಾಡಲು ಸಜ್ಜಾಗುತ್ತಿದ್ದು, ಇನ್ನೊಂದು ಮಹತ್ವದ ನಿರ್ಧಾರವನ್ನೂ ಜೆಡಿಎಸ್ ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. 


ಬೆಂಗಳೂರು [ಜ.14]:  ಮುಂಬರುವ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯಲ್ಲಿ ಎಲ್ಲಾ ವಾರ್ಡ್‌ಗಳಲ್ಲಿಯೂ ಏಕಾಂಗಿಯಾಗಿ ಸ್ಪರ್ಧಿಸಲು ಜೆಡಿಎಸ್‌ ನಿರ್ಧರಿಸಿದ್ದು, ಸಂಕ್ರಾಂತಿ ಹಬ್ಬದ ಬಳಿಕ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲು ತೀರ್ಮಾನಿಸಲಾಗಿದೆ.

ಪಕ್ಷದ ಕಚೇರಿಯಲ್ಲಿ ವರಿಷ್ಠ ಎಚ್‌.ಡಿ.ದೇವೇಗೌಡ ಅಧ್ಯಕ್ಷತೆಯಲ್ಲಿ ನಡೆದ ಬಿಬಿಎಂಪಿ ಚುನಾವಣಾ ಪೂರ್ವಭಾವಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಬಿಬಿಎಂಪಿಯ ಎಲ್ಲಾ 198 ವಾರ್ಡ್‌ಗಳಲ್ಲಿಯೂ ಜೆಡಿಎಸ್‌ ಏಕಾಂಗಿಯಾಗಿ ಸ್ಪರ್ಧಿಸುವುದು, ಶೇ.50ರಷ್ಟುಟಿಕೆಟ್‌ಗಳನ್ನು ಮಹಿಳೆಯರಿಗೆ ನೀಡುವುದು, ಮಹಿಳೆಯರು ಸಹ ಪಕ್ಷದ ಸಂಘಟನೆಗೆ ಹೆಚ್ಚಿನ ಒತ್ತು ನೀಡಬೇಕು ಎಂಬುದ ಬಗ್ಗೆ ಸಭೆಯಲ್ಲಿ ಕೈಗೊಂಡ ಪ್ರಮುಖ ನಿರ್ಧಾರಗಳಾಗಿವೆ.

Tap to resize

Latest Videos

ಬಿಬಿಎಂಪಿ ಚುನಾವಣೆಗೆ ಈಗಿನಿಂದಲೇ ಪ್ರತಿ ವಾರ್ಡ್‌ಗಳಲ್ಲಿ ಒಗ್ಗಟ್ಟಾಗಿ ಪಕ್ಷ ಸಂಘಟನೆ ಮಾಡಬೇಕು. ಟಿಕೆಟ್‌ ಯಾರಿಗೆ ನೀಡಬೇಕು ಎಂಬುದನ್ನು ಎಲ್ಲರೂ ಕುಳಿತು ಚರ್ಚಿಸಿ, ಗೆಲ್ಲುವ ವ್ಯಕ್ತಿಗೆ ಟಿಕೆಟ್‌ ಕೊಡಲಾಗುವುದು. ಪ್ರತಿ ವಾರ್ಡ್‌ ಅಧ್ಯಕ್ಷರು ಸಭೆಗಳನ್ನು ಮಾಡಿ ಪಕ್ಷ ಸಂಘಟನೆಗಳನ್ನು ಪ್ರಾರಂಭ ಮಾಡಬೇಕು. ತಮ್ಮ ವಾರ್ಡ್‌ಗಳಲ್ಲಿ ಮಾಡಿದ ಸಂಘಟನೆ ಬಗ್ಗೆ ಪಕ್ಷದ ಕಚೇರಿಗೆ ಪ್ರತಿ ವಾರ ವರದಿ ನೀಡಬೇಕು ಎಂದು ಸಭೆಯಲ್ಲಿ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ರಾಮನಗರದಲ್ಲಿ ಬಿಜೆಪಿಗೆ ಕಮಲ ಅರಳಿಸಲು ಸುವರ್ಣಾವಕಾಶ?...

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಪಕ್ಷದ ಬೆಂಗಳೂರು ಮಹಾನಗರ ಅಧ್ಯಕ್ಷ ಆರ್‌.ಪ್ರಕಾಶ್‌ ಮಾತನಾಡಿ, ಮುಂಬರುವ ಬಿಬಿಎಂಪಿ ಚುನಾವಣೆ ಸಿದ್ಧತೆ, ಪಕ್ಷ ಸಂಘಟನೆ ಸೇರಿದಂತೆ ಕಾರ್ಯಕ್ರಮಗಳನ್ನು ನಗರದಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಸಂಕ್ರಾಂತಿ ಹಬ್ಬದ ನಂತರ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಪಾದಯಾತ್ರೆ ಹಮ್ಮಿಕೊಳ್ಳಲಾಗುವುದು. ಪಕ್ಷದ ವರಿಷ್ಠರ ನಿರ್ದೇಶನದಂತೆ ಪ್ರತಿ ವಾರ್ಡ್‌ನಲ್ಲಿಯೂ ಪಕ್ಷದ ಕಚೇರಿಯನ್ನು ಆರಂಭಿಸಲಾಗುವುದು ಎಂದು ಹೇಳಿದರು.

KPCCಗೆ ಡಿಕೆಶಿ ನೇಮಕ : ಸೋನಿಯಾ v/s ರಾಹುಲ್‌ ಬಣ!...

ಕೇರಳದಲ್ಲಿ ಜೆಡಿಎಸ್‌ ಕಾರ್ಯಕರ್ತರು ನಡೆಸಿದ ಪಾದಯಾತ್ರೆ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಅದೇ ರೀತಿ ನಗರದ ಎಲ್ಲಾ ವಿಧಾನಸಭಾ ಕ್ಷೇತ್ರದಲ್ಲಿಯೂ ಪಾದಯಾತ್ರೆ ನಡೆಸುವ ಮೂಲಕ ಪಕ್ಷ ಸಂಘಟನೆಯನ್ನು ಚುರುಕುಗೊಳಿಸಲಾಗುವುದು. ಸದ್ಯಕ್ಕೆ ಯಾವುದೇ ಚುನಾವಣೆ ಇಲ್ಲದಿರುವುದರಿಂದ ಬಿಬಿಎಂಪಿ ಚುನಾವಣೆಗೆ ಸಿದ್ಧತೆಗೆ ಆದ್ಯತೆ ನೀಡಲಾಗುತ್ತಿದೆ. ಸ್ಥಳೀಯ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಪಡೆದು ಬಿಬಿಎಂಪಿ ಚುನಾವಣೆ ಅಭ್ಯರ್ಥಿಗಳನ್ನು ಈಗಿನಿಂದಲೇ ಗುರುತಿಸುವ ಕೆಲಸ ಮಾಡಲಾಗುವುದು ಎಂದರು.

click me!