ಬೆಂಗಳೂರು [ಜ.14]:  ಕಾಂಗ್ರೆಸ್‌ ಹೈಕಮಾಂಡ್‌ ನಿಜಕ್ಕೂ ಯಾರು? ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿಯೋ ಅಥವಾ ಅಧ್ಯಕ್ಷ ಸ್ಥಾನದಲ್ಲಿ ಇಲ್ಲದಿದ್ದರೂ ನಿರ್ಣಾಯಕ ನಿರ್ಧಾರಗಳನ್ನು ಈಗಲೂ ತೆಗೆದುಕೊಳ್ಳುತ್ತಿರುವ ರಾಹುಲ್‌ ಗಾಂಧಿಯೋ?

"

ಈ ಪ್ರಶ್ನೆಗೆ ಉತ್ತರ ಕೆಪಿಸಿಸಿ ಅಧ್ಯಕ್ಷ ಯಾರು ಆಗುತ್ತಾರೆ ಎಂಬ ಮತ್ತೊಂದು ಪ್ರಶ್ನೆಗೆ ತಳಕು ಹಾಕಿಕೊಂಡಿದೆ.

ಚೋದ್ಯವೆನಿಸಿದರೂ ಇದು ನಿಜ. ಈ ಹುದ್ದೆಗಾಗಿ ತೀವ್ರ ಪ್ರಯತ್ನ ನಡೆಸಿರುವ ಡಿ.ಕೆ.ಶಿವಕುಮಾರ್‌ ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ ಅದು ನೇರವಾಗಿ ಸೋನಿಯಾ ಗಾಂಧಿ ಮತ್ತು ಎಐಸಿಸಿಯ ಹಿರಿಯ ನಾಯಕರ ಆಶೀರ್ವಾದದ ಪರಿಣಾಮ ಎಂದೇ ನಿರ್ಧರಿಸಬೇಕಾಗುತ್ತದೆ. ಒಂದು ವೇಳೆ ಶಿವಕುಮಾರ್‌ಗೆ ಹುದ್ದೆ ತಪ್ಪಿದರೆ ರಾಹುಲ್‌ ಗಾಂಧಿ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಿದ್ದು ಫಲ ನೀಡಿದೆ ಎಂದೇ ತೀರ್ಮಾನಿಸಬೇಕಾಗುತ್ತದೆ.

ಈ ಮಟ್ಟಕ್ಕೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಲಾಬಿ ಮುಟ್ಟಿದೆ. ಪ್ರಬಲ ಆಕಾಂಕ್ಷಿ ಶಿವಕುಮಾರ್‌ ಅವರು ಸೋನಿಯಾ ಗಾಂಧಿ ಅವರನ್ನು ಗುರಿಯಾಗಿಸಿಕೊಂಡು ಲಾಬಿ ನಡೆಸಿದ್ದಾರೆ. ಶಿವಕುಮಾರ್‌ ಸದರಿ ಹುದ್ದೆಗೇರದಂತೆ ತಡೆಯಲು ಯತ್ನಿಸುತ್ತಿರುವ ಶಕ್ತಿಗಳು ರಾಹುಲ್‌ ಗಾಂಧಿ ಅವರ ಆಸರೆ ಪಡೆದಿವೆ ಎನ್ನುತ್ತವೆ ಉನ್ನತ ಮೂಲಗಳು.

ಶಿವಕುಮಾರ್‌ ಬಗ್ಗೆ ಅನುಕಂಪ ಹೊಂದಿರುವ ಸೋನಿಯಾ ಗಾಂಧಿ ಹಾಗೂ ಎಐಸಿಸಿಯ ಹಿರಿಯ ಕಾಂಗ್ರೆಸ್ಸಿಗರಿಗೆ ಪಕ್ಷಕ್ಕಾಗಿ ಜೈಲುವಾಸ ಅನುಭವಿಸಿದ ಹಾಗೂ ಬಿಜೆಪಿಯನ್ನು ಎದುರುಹಾಕಿಕೊಂಡ ಶಿವಕುಮಾರ್‌ ತ್ಯಾಗವನ್ನು ಗುರುತಿಸಬೇಕು ಎಂಬ ಮನಸ್ಸಿದೆ ಎನ್ನಲಾಗುತ್ತಿದೆ. ಆದರೆ, ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಹಿರಿಯ ಕಾಂಗ್ರೆಸ್‌ ನಾಯಕರಿಗೆ ಇದು ಪಥ್ಯವಾಗುತ್ತಿಲ್ಲ. ಸಿದ್ದರಾಮಯ್ಯ ಅವರು ನೇರವಾಗಿ ಅಖಾಡಕ್ಕೆ ಇಳಿದಿದ್ದು, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿರುವ ಈ ಅವಧಿಯಲ್ಲಿ ಒಕ್ಕಲಿಗರೊಬ್ಬರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡುವುದು ಸರಿಯಲ್ಲ. ಬದಲಾಗಿ, ಲಿಂಗಾಯತರಿಗೆ (ಎಂ.ಬಿ.ಪಾಟೀಲ್‌) ಹುದ್ದೆ ನೀಡಬೇಕು ಎಂದು ಲಾಬಿ ನಡೆಸಿದ್ದಾರೆ. ಸಿದ್ದರಾಮಯ್ಯ ಅವರ ಈ ಆಗ್ರಹಕ್ಕೆ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌ ಸಹ ಒತ್ತಾಸೆಯಾಗಿ ನಿಂತಿದ್ದಾರೆ ಎನ್ನಲಾಗುತ್ತಿದೆ. ಈ ತಂಡ ನೇರವಾಗಿ ರಾಹುಲ್‌ ಗಾಂಧಿ ಅವರನ್ನು ಈ ವಿಚಾರಕ್ಕೆ ಎಳೆದು ತಂದಿದೆ ಎನ್ನಲಾಗುತ್ತಿದೆ.

ಡಿಕೆಶಿಗೆ ಇನ್ನಷ್ಟುನಾಯಕರ ವಿರೋಧ:

ಸಿದ್ದರಾಮಯ್ಯ ಮಾತ್ರವಲ್ಲದೆ ಕಾಂಗ್ರೆಸ್‌ನ ಇನ್ನೂ ಕೆಲ ನಾಯಕರು ಸಹ ಶಿವಕುಮಾರ್‌ ಅವರಿಗೆ ಕೆಪಿಸಿಸಿ ಹುದ್ದೆಯನ್ನು ಪರಿಪೂರ್ಣವಾಗಿ ನೀಡಲು ಆಕ್ಷೇಪವೆತ್ತಿದ್ದಾರೆ ಎನ್ನಲಾಗುತ್ತಿದೆ. ಕೆಪಿಸಿಸಿಗೆ ಸಮಾನಾಂತರ ಹುದ್ದೆಗಳನ್ನು ಸೃಷ್ಟಿಸಿ ಅನಂತರ ಅಧ್ಯಕ್ಷ ಹುದ್ದೆಯನ್ನು ಶಿವಕುಮಾರ್‌ ಅವರಿಗೆ ನೀಡಿದರೆ ಈ ನಾಯಕರಿಗೆ ಅಭ್ಯಂತರವಿಲ್ಲ. ಇದಾಗದೇ ಸಂಪೂರ್ಣ ಅಧಿಕಾರದೊಂದಿಗೆ ಕೆಪಿಸಿಸಿ ಅಧ್ಯಕ್ಷ ಹುದ್ದೆಯನ್ನು ಶಿವಕುಮಾರ್‌ಗೆ ನೀಡಿದರೆ ತಾವು ತಟಸ್ಥರಾಗುವ ಸೂಚನೆಯನ್ನು ಈ ನಾಯಕರು ಸೋನಿಯ ಗಾಂಧಿ ಹಾಗೂ ರಾಹುಲ್‌ ಗಾಂಧಿ ಅವರಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಹುದ್ದೆಯ ಪೈಪೋಟಿ ಶಿಖರಾಗ್ರ ಮುಟ್ಟಿದೆ. ಏಕಮುಖ ನಿರ್ಧಾರ ಕೈಗೊಂಡರೆ ಅದರಿಂದ ಪಕ್ಷಕ್ಕೆ ಭಾರಿ ಹಿನ್ನಡೆ ಉಂಟಾಗಬಹುದು ಎಂಬ ಕಾರಣಕ್ಕೆ ಹೈಕಮಾಂಡ್‌ ಇದೀಗ ಹಿರಿಯ ನಾಯಕರಿಗೆ ಬುಲಾವ್‌ ನೀಡಿ ನೇರಾನೇರ ಅಭಿಪ್ರಾಯ ಪಡೆಯಲು ಮುಂದಾಗಿದೆ. ಇದರ ಭಾಗವಾಗಿಯೇ ಸಿದ್ದರಾಮಯ್ಯ ಅವರು ಮಂಗಳವಾರ ದೆಹಲಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಭೇಟಿ ಮಾಡಲಿದ್ದಾರೆ. ಅನಂತರ ಡಿ.ಕೆ. ಶಿವಕುಮಾರ್‌ ಸಹ ದೆಹಲಿಗೆ ತೆರಳಿ ಹಿರಿಯ ನಾಯಕರನ್ನು ಭೇಟಿ ಮಾಡುವ ಯೋಜನೆ ಹೊಂದಿದ್ದಾರೆ.

ಡಿಕೆಶಿ ರಾಜಕೀಯ ಅವನತಿ ಶುರು: 'ಯೋಗಿ' ಭವಿಷ್ಯ ನುಡಿದ್ರು!...

ತಮ್ಮ ಆರೋಗ್ಯದ ಸಂಬಂಧ ಜ.15ರ ನಂತರ ವಿದೇಶ ಪ್ರವಾಸಕ್ಕೆ ತೆರಳಲಿರುವ ಸೋನಿಯಾ ಗಾಂಧಿ ಅವರು ಅಷ್ಟರೊಳಗೆ ಈ ಬಗ್ಗೆ ನಿರ್ಧಾರ ಕೈಗೊಳ್ಳಲು ಕಾಂಗ್ರೆಸ್‌ ನಾಯಕರನ್ನು ಆಹ್ವಾನಿಸಿದ್ದಾರೆ. ಹಿರಿಯ ನಾಯಕರೊಂದಿಗೆ ಚರ್ಚೆ ವೇಳೆ ಒಮ್ಮತ ಅಥವಾ ಎಲ್ಲರೂ ಒಪ್ಪುವ ಪರಿಹಾರ ಕಂಡುಬಂದರೆ ಶೀಘ್ರವೇ ಕೆಪಿಸಿಸಿ ಅಧ್ಯಕ್ಷ ಹುದ್ದೆಗೆ ಹೊಸಬರ ನೇಮಕ ಘೋಷಣೆ ಹೊರ ಬೀಳಲಿದೆ. ಪರಿಹಾರ ಕಂಡುಬರದ ಪಕ್ಷದಲ್ಲಿ ಮತ್ತೆ ಅನಿರ್ದಿಷ್ಟಅವಧಿಗೆ ಮುಂದೂಡಿಕೆ (ಬಹುಶಃ ಫೆಬ್ರವರಿಗೆ) ಕಾಣಬಹುದು ಎನ್ನಲಾಗುತ್ತಿದೆ.

ಕೈಗೆ ಬಂದಿದ್ದ ತುತ್ತು ಈಗ ಅತಂತ್ರ:

ಕೆಪಿಸಿಸಿ ಅಧ್ಯಕ್ಷ ಹುದ್ದೆಗೇರಲು ಪ್ರಬಲ ಲಾಬಿ ನಡೆಸಿರುವ ಡಿ.ಕೆ.ಶಿವಕುಮಾರ್‌ ಅವರಿಗೆ ಇನ್ನೇನು ಅಧ್ಯಕ್ಷ ಹುದ್ದೆ ಗಿಟ್ಟಿಯೇಬಿಟ್ಟಿತು ಎಂಬ ಪರಿಸ್ಥಿತಿ ಕಾಂಗ್ರೆಸ್‌ನಲ್ಲಿತ್ತು.

ಪಕ್ಷದ ಪರ ನಿಂತಿದ್ದಕ್ಕೆ ಬಿಜೆಪಿಯ ಅವಕೃಪೆಗೆ ಸಿಲುಕಿ ಕಾರಾಗೃಹ ವಾಸ ಅನುಭವಿಸಿದ ಅನುಕಂಪ ಹಾಗೂ ರಾಜ್ಯ ಕಾಂಗ್ರೆಸ್‌ಗೆ ಪ್ರಬಲ ಸಂಘಟಕನೊಬ್ಬನ ಅಗತ್ಯವಿದೆ ಎಂಬ ಕಾರಣಕ್ಕೆ ಈ ಸಾಮರ್ಥ್ಯವುಳ್ಳ ಶಿವಕುಮಾರ್‌ ಆಯ್ಕೆ ಸುಲಲಿತ ಎಂದೇ ಭಾವಿಸಲಾಗಿತ್ತು. ಡಿ.ಕೆ.ಶಿವಕುಮಾರ್‌ ಪಕ್ಷದ ಮನುಷ್ಯ ಎಂದು ಅಧಿನಾಯಕಿ ಸೋನಿಯಾ ಗಾಂಧಿ ಅವರ ಬಳಿ ಲಾಬಿ ನಡೆಸಲು ಎಐಸಿಸಿಯ ಹಿರಿಯ ಪ್ರಭಾವಿಗಳ ದಂಡೇ ಬೆಂಬಲಕ್ಕೆ ನಿಂತಿತ್ತು. ಹಿರಿಯ ನಾಯಕರಾದ ಅಶೋಕ್‌ ಗೆಹ್ಲೋಟ್‌, ಗುಲಾಂ ನಬಿ ಆಜಾದ್‌, ಅಂಬಿಕಾ ಸೋನಿ, ಕಮಲನಾಥ್‌ ಹಾಗೂ ಸೋನಿಯಾ ಗಾಂಧಿ ಅವರ ರಾಜಕೀಯ ಸಲಹೆಗಾರರಂತಿರುವ ಅಹ್ಮದ್‌ ಪಟೇಲ್‌ ಅವರು ಶಿವಕುಮಾರ್‌ ಪರ ಲಾಬಿ ನಡೆಸಿದ್ದರು.

ಈ ಹಂತದಲ್ಲಿ ಶಿವಕುಮಾರ್‌ಗೆ ಹೈಕಮಾಂಡ್‌ನಲ್ಲಿ ವಿರುದ್ಧವಾಗಿ ನಿಂತವರು ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್‌. ರಾಜ್ಯದಲ್ಲಿ ಸಿದ್ದರಾಮಯ್ಯ ತಂಡದೊಂದಿಗೆ ಆಪ್ತರಾಗಿರುವ ಕೆ.ಸಿ.ವೇಣುಗೋಪಾಲ್‌ ಶಿವಕುಮಾರ್‌ ಅಧ್ಯಕ್ಷರಾದರೆ ರಾಜ್ಯ ಕಾಂಗ್ರೆಸ್‌ಗೆ ಪ್ರಯೋಜನಕ್ಕಿಂತ ಅಪಾಯ ಹೆಚ್ಚು ಎಂದು ರಾಹುಲ್‌ ಗಾಂಧಿ ಅವರಿಗೆ ಮನದಟ್ಟು ಮಾಡುವ ಪ್ರಯತ್ನ ನಡೆಸಿದ್ದರು ಎಂದು ಹೇಳಲಾಗುತ್ತಿದೆ. ಒಕ್ಕಲಿಗ ಸಮುದಾಯದ ಶಿವಕುಮಾರ್‌ ಅವರು ಜೆಡಿಎಸ್‌ ನಾಯಕರೊಂದಿಗೆ ಈಗಾಗಲೇ ಉತ್ತಮ ಸಂಬಂಧ ಹೊಂದಿದ್ದಾರೆ. ಹೀಗಾಗಿ ಒಕ್ಕಲಿಗರ ಪ್ರಾಬಲ್ಯದ ಜಿಲ್ಲೆಗಳಲ್ಲಿ ಕಾಂಗ್ರೆಸ್‌ಗೆ ಪ್ರಯೋಜನವಾಗುವುದಿಲ್ಲ. ಅಲ್ಲದೆ, ಹಲವು ಪ್ರಕರಣಗಳು ಇನ್ನೂ ಬಾಕಿಯಿವೆ. ಶಿವಕುಮಾರ್‌ ಅಧ್ಯಕ್ಷರಾದರೆ ಈ ಪ್ರಕರಣಗಳನ್ನು ಮುಂದಿಟ್ಟುಕೊಂಡು ಬಿಜೆಪಿ ಸರ್ಕಾರ ಕಾಂಗ್ರೆಸ್‌ಗೆ ಮುಜುಗರ ತರುವಂತಹ ಪರಿಸ್ಥಿತಿ ನಿರ್ಮಾಣ ಮಾಡಬಹುದು. ಇಂತಹ ಪರಿಸ್ಥಿತಿಗೆ ಕಾಂಗ್ರೆಸ್‌ ಸಿಲುಕುವುದು ಬೇಡ ಎಂದು ವಾದ ಮುಂದಿಟ್ಟಿದ್ದಾರೆ ಎನ್ನಲಾಗುತ್ತಿದೆ.

ಹೀಗಾಗಿ, ಕೆಪಿಸಿಸಿಗೆ ಸಂಬಂಧಿಸಿದ ವಿಚಾರಗಳಿಂದ ದೂರವಿದ್ದ ರಾಹುಲ್‌ ಗಾಂಧಿ ಇದೀಗ ಈ ವಿಚಾರದಲ್ಲಿ ಮಧ್ಯಪ್ರವೇಶ ಮಾಡಲು ಆರಂಭಿಸಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿಯೇ ಕಳೆದ ಬಾರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡದಿದ್ದ ಎಐಸಿಸಿ ಅಧ್ಯಕ್ಷ ಸೋನಿಯಾ ಗಾಂಧಿ ಅವರು ಈ ಬಾರಿ ಖುದ್ದಾಗಿ ಆಹ್ವಾನ ನೀಡಿ ಸಿದ್ದರಾಮಯ್ಯ ಅವರ ಅಭಿಪ್ರಾಯ ಪಡೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.