
ಗಂಗಾವತಿ(ಮೇ.06): 42 ದಿನಗಳಿಂದ ಕಂಗೆಟ್ಟಿದ್ದ ಮದ್ಯ ಪ್ರಿಯರಿಗೆ ಸೋಮವಾರದಿಂದ ಮದ್ಯ ಮಾರಾಟ ಆರಂಭಿಸಿರುವುದು ಖುಷಿ ಕೊಟ್ಟಿದೆ. ಆದರೆ ಗಂಗಾವತಿಯ ಕೆಲ ಅಂಗಡಿಗಳಲ್ಲಿ ಮಾರಾಟ ಆರಂಭದ ಎರಡನೇ ದಿನಕ್ಕೆ ಮದ್ಯ ಖಾಲಿಯಾಗಿರುವುದು ನಿರಾಸೆ ಮೂಡಿಸಿದೆ.
ನಗರದ ಜುಲೈ ನಗರದಲ್ಲಿರುವ ಎಂಎಸ್‌ಐಎಲ್ ಮದ್ಯದ ಅಂಗಡಿಯಲ್ಲಿ ನೂಕು ನುಗ್ಗಲು ನಡುವೆ ಮದ್ಯ ಮಾರಾಟ ನಡೆದರೆ ಕೆಲ ಸಿಎಲ್-2 ಮದ್ಯದ ಅಂಗಡಿಗಳಲ್ಲಿ ಮದ್ಯ ಸ್ಟಾಕ್ ಇಲ್ಲದ ಕಾರಣ ನಿರಾಸೆ ಉಂಟಾಗಿದೆ. ನಗರದಲ್ಲಿ 15 ಸಿಎಲ್-2 ಮದ್ಯದ ಅಂಗಡಿಗಳಿದ್ದು, 4 ಎಂಎಸ್‌ಐಎಲ್ ಸರಕಾರಿ ಅಂಗಡಿಗಳಿವೆ. ಬಿಸಿಲಿನ ಧಗೆ ಮಧ್ಯೆ ಯುವಕರು, ವೃದ್ಧರು ಸಹ ಮದ್ಯ ಖರೀದಿಸಲು ಸರತಿ ಸಾಲಿನಲ್ಲಿ ನಿಂತಿದ್ದರು.
ಎಣ್ಣೆ ಖರೀದಿಸಲು ಸರ್ಕಾರಿ ವಾಹನವನ್ನೇ ಬಾರ್‌ಗೆ ತಂದ ಕುಡುಕ..!
ಪೊಲೀಸ್ ಬಿಗಿ ಭದ್ರತೆ
ಸರಕಾರಿ ಸ್ವಾಮ್ಯದ ಎಂಎಸ್‌ಐಲ್ ಮದ್ಯದ ಅಂಗಡಿ ಮುಂದೆ ಪೊಲೀಸ್ ತುಕಡಿಗಳಿದ್ದು, 15ಕ್ಕೂ ಹೆಚ್ಚು ಪೊಲೀಸರು ಬಿಗಿ ಭದ್ರತೆ ನೀಡಿದ್ದಾರೆ. ಅಬಕಾರಿ ಇಲಾಖೆಯ ಸಿಬ್ಬಂದಿಗಳು ಸಹ ಕರ್ತವ್ಯದಲ್ಲಿದ್ದಾರೆ. ಗುಂಪು ಗುಂಪಾಗಿ ಜನರು ನಿಂತಿದ್ದರಿಂದ ಪೊಲೀಸರು ಚದುರಿಸಿದ್ದಾರೆ. ಬಹುತೇಕ ಮದ್ಯದ ಅಂಗಡಿಗಳ ಮುಂದೆ ಹೋಂ ಗಾರ್ಡ್‌ಗಳು ಕೆಲಸದಲ್ಲಿ ತೊಡಗಿದ್ದಾರೆ.
ಎಂಆರ್‌ಪಿ ದರ ನಿರ್ಲಕ್ಷ್ಯ
ಕೆಲ ಮದ್ಯದ ಅಂಗಡಿಗಳಲ್ಲಿ ಎಂಆರ್‌ಪಿ ದರದಲ್ಲಿ ಮದ್ಯ ಮಾರಾಟ ಮಾಡದೆ ಮನ ಬಂದಂತೆ ಮದ್ಯ ಮಾರಾಟ ಮಾಡಿದ್ದಾರೆಂಬ ಅರೋಪ ಕೇಳಿ ಬರುತ್ತದೆ. ಕೆಲವರು ಹೆಚ್ಚಿನ ಹಣ ನೀಡಿ ಮದ್ಯ ಖರೀದಿಸಿದ್ದರೆ, ಗ್ರಾಮೀಣ ಪ್ರದೇಶದಿಂದ ಬಂದಂತ ಜನರು ಹಣ ಹೆಚ್ಚಿಗೆ ನೀಡಿ ಖರೀದಿಸಿದ್ದಾರೆ. ಸಿಎಲ್-2 ಕೆಲ ಅಂಗಡಿಗಳಲ್ಲಿ ಹೆಚ್ಚಿನ ದರದಲ್ಲಿ ಮಾರಾಟ ನಡೆಸಿದ್ದಾರೆ. ಈ ಹಿಂದೆ ಎಂಆರ್‌ಪಿ ದರದಲ್ಲಿ ಮದ್ಯ ಮಾರಾಟ ಮಾಡದ ಕಾರಣ ಅಬಕಾರಿ ಇಲಾಖೆಯವರು ಕೆಲವೊಂದು ಅಂಗಡಿಗಳನ್ನು ರದ್ದುಪಡಿಸಿದ್ದ ಉದಾಹರಣೆಗಳಿವೆ.
ಗ್ರಾಮೀಣ ಪ್ರದೇಶದಿಂದ ಬಂದಿದ್ದ ನಮಗೆ ಮದ್ಯ ಸಿಗದೆ ನಿರಾಸೆಯಾಗಿದ್ದೇವೆ. ಕೆಲ ಅಂಗಡಿಗಳಲ್ಲಿ ಎಂಆರ್‌ಪಿ ದರಕ್ಕಿಂತ ಅಧಿಕ ಮೊತ್ತ ಪಡೆಯುತ್ತಿದ್ದಾರೆ. ಸರಕಾರಿ ಸ್ವಾಮ್ಯದ ಎಂಎಸ್‌ಐಎಲ್‌ಗೆ ಹೋದರೆ ಬಿಸಿಲಿನಲ್ಲಿ ಸಾಲು ಸಾಲಾಗಿ ನಿಲ್ಲಬೇಕಾಗಿದೆ. ಕೆಲವರಿಗೆ ಮದ್ಯ ಮಾರಾಟಗಾರರು ಹೊರಗೆ ಬಂದುಕೊಡುತ್ತಾರೆ. ಆದರೆ ನಾವು ಮಾತ್ರ ಸಾಲಾಗಿ ನಿಲ್ಲುವ ಪರಿಸ್ಥಿತಿ ಬಂದಿದೆ ಎಂದು ರಾಮಪ್ಪ ಕಂಬಾಳಿ ಕಲ್ಗುಡಿ ಎಂಬುವರು ಹೇಳಿದ್ದಾರೆ.