ಉತ್ತರ ಕರ್ನಾಟಕದ ರಸ್ತೆ ನಿರ್ಮಾ​ಣಕ್ಕೆ 21 ಸಾವಿರ ಕೋಟಿ: ನಿತಿನ್‌ ಗಡ್ಕರಿ

By Kannadaprabha NewsFirst Published Jan 16, 2021, 9:56 AM IST
Highlights

ಕಿತ್ತೂರು ಚೆನ್ನಮ್ಮ ಸರ್ಕಲ್‌ ಫ್ಲೈಓವರ್‌ಗೆ ಶಂಕುಸ್ಥಾಪನೆ ನೆರವೇರಿಸಿದ ಕೇಂದ್ರ ಸಚಿವ ಗಡ್ಕರಿ ಘೋಷಣೆ| 13 ಯೋಜನೆಗಳ 847 ಕಿಮೀ ರಸ್ತೆ ನಿರ್ಮಾಣಕ್ಕೆ 21 ಸಾವಿರ ಕೋಟಿ ಬಿಡುಗಡೆ| ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಯಿಂದ ವಿಳಂಬ| 

ಹುಬ್ಬಳ್ಳಿ(ಜ.16): ಉತ್ತರ ಕರ್ನಾಟಕಕ್ಕೆ ಕೇಂದ್ರ ಸಾರಿಗೆ ಹಾಗೂ ಹೆದ್ದಾರಿ ಸಚಿವ ನಿತಿನ್‌ ಗಡ್ಕರಿ ಭರ್ಜರಿ ಕೊಡುಗೆ ನೀಡಿದ್ದಾರೆ. ಈ ಭಾಗದ 13 ಹೆದ್ದಾರಿಗಳ ನಿರ್ಮಾಣಕ್ಕೆ 21 ಸಾವಿರ ಕೋಟಿ ಬಿಡುಗಡೆ ಮಾಡುವುದಾಗಿ ಘೋಷಣೆ ಸಚಿವರು ಮಾಡಿದ್ದಾರೆ.

ಇಲ್ಲಿನ ಕಿತ್ತೂರು ರಾಣಿ ಚೆನ್ನಮ್ಮ ಸರ್ಕಲ್‌ನಲ್ಲಿ 298 ಕೋಟಿ ಫ್ಲೈಓವರ್‌ ಹಾಗೂ ಕಲಘಟಗಿ ತಾಲೂಕಿನ ದಾಸ್ತಿಕೊಪ್ಪದ ಬಳಿ 24.95 ಕೋಟಿ ವೆಚ್ಚದ ಸೇತುವೆ ನಿರ್ಮಾಣ ಕಾಮಗಾರಿಗೆ ವರ್ಚುವಲ್‌ ಸಂವಾದದ ಮೂಲಕವೇ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ಉತ್ತರ ಕರ್ನಾಟಕದ ವಿವಿಧ ಹೆದ್ದಾರಿಗಳ ನಿರ್ಮಾಣಕ್ಕೆ 21 ಸಾವಿರ ಕೋಟಿ ನೀಡುವುದಾಗಿ ಘೋಷಿಸಿರುವ ಅವರು, ಕೆಲವೊಂದು ಹೆದ್ದಾರಿಗಳ ಅಗಲೀಕರಣ, ಕೆಲವೊಂದು ಹೆದ್ದಾರಿಗಳ ಮೇಲ್ದರ್ಜೆಗೆ ಏರಿಸಿ ರಸ್ತೆ ನಿರ್ಮಾಣ ಮಾಡಲಾಗುತ್ತಿದೆ ಎಂದು ನುಡಿದರು. 21 ಸಾವಿರ ಕೋಟಿ ವೆಚ್ಚದಲ್ಲಿ 13 ಯೋಜನೆ ಕೈಗೆತ್ತಿಕೊಳ್ಳಲಾಗುತ್ತಿದೆ. ಒಟ್ಟು 847 ಕಿಮೀ ರಸ್ತೆ ನಿರ್ಮಾಣ ಇದಾಗಲಿದೆ. ಶೀಘ್ರದಲ್ಲೇ ಕೆಲಸ ಪ್ರಾರಂಭಿಸಲಾಗುವುದು ಎಂದು ವಿವರಿಸಿದರು.

ಭೀಕರ ಅಪಘಾತ: ಶವ ಗುರುತಿಗೆ ಸಾಕ್ಷಿ ನುಡಿದ ನಾಯಿಮರಿ ಟ್ಯಾಟೂ!

ಯಾವ್ಯಾವುದಕ್ಕೆ ಎಷ್ಟು?:

ಹುಬ್ಬಳ್ಳಿ- ಧಾರವಾಡ ಬೈಪಾಸ್‌ 30 ಕಿಮೀಗೆ 1200 ಕೋಟಿ, ಬೆಳಗಾವಿ ರಿಂಗ್‌ ರಸ್ತೆ (3 ಹಂತಗಳಲ್ಲಿ) 69 ಕಿಮೀ ರಸ್ತೆಗೆ 2800 ಕೋಟಿ, ಬೆಳಗಾವಿ- ಹುನಗುಂದ-ರಾಯಚೂರು ಚತುಷ್ಪಥ 325 ಕಿಮೀ ಹೆದ್ದಾರಿಗೆ 12500 ಕೋಟಿ (6 ಹಂತಗಳಲ್ಲಿ), ರಾಷ್ಟ್ರೀಯ ಹೆದ್ದಾರಿ-367ರಲ್ಲಿನ ಅಮಿನಗಡ- ಬಾಣಾಪುರ ದ್ವಿಪಥ ಹೆದ್ದಾರಿ ನಿರ್ಮಾಣ ಮಾಡಲಾಗುವುದು. ಒಟ್ಟು 47 ಕಿಮೀಗೆ 400 ಕೋಟಿ ವಿನಿಯೋಗಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ- 160ರಲ್ಲಿನ ನಿಪ್ಪಾಣಿ- ಚಿಕ್ಕೋಡಿ ಮಧ್ಯೆದಲ್ಲಿ 24 ಕಿಮೀ ಹೆದ್ದಾರಿ ಅಗಲೀಕರಣಕ್ಕೆ 145 ಕೋಟಿ ವಿನಿಯೋಗಿಸಲಾಗುವುದು. ಬೀದರ ನಗರದಿಂದ ತೆಲಂಗಾಣ ಗಡಿ ಪ್ರದೇಶದವರೆಗೆ 20 ಕಿಮೀ ರಸ್ತೆ ನಿರ್ಮಾಣಕ್ಕೆ 120 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗುವುದು. ಸಂಕೇಶ್ವರ-ಮುರಗುಂಡಿ (ಎನ್‌ಎಚ್‌-548ಬಿ) ಮಧ್ಯೆದ 89 ಕಿಮೀ ಹೆದ್ದಾರಿಗೆ . 550 ಕೋಟಿ, ತಿಕೋಟಾ- ಕನಮಾಡಿ ಮಧ್ಯೆದ 24 ಕಿಮೀ ದೂರದ ರಸ್ತೆ ಅಗಲೀಕರಣ ಕಾಮಗಾರಿಗೆ 100 ಕೋಟಿ, ಶಿರೂರು ಕ್ರಾಸ್‌ನಿಂದ ಗದ್ದನಕೇರಿ ಮಧ್ಯೆದ 25 ಕಿಮೀ ದೂರದ ರಸ್ತೆ ಅಗಲೀಕರಣ ಕಾಮಗಾರಿಗೆ 265 ಕೋಟಿ, ನಾಗನಸೂರು- ಇಂಡಿ ಮಧ್ಯೆದ 47 ಕಿಮೀ ರಸ್ತೆ ಅಗಲೀಕರಣಕ್ಕೆ 282 ಕೋಟಿ, ಇಂಡಿ ಕ್ರಾಸ್‌- ವಿಜಯಪುರದವರೆಗಿನ 55 ಕಿಮೀ ರಸ್ತೆ ಅಗಲೀಕರಣಕ್ಕೆ 330 ಕೋಟಿ, ನರಗುಂದ ಮತ್ತು ನವಲಗುಂದ ಎರಡು ನಗರಗಳ ಮಧ್ಯೆದ 12 ಕಿಮೀ ಬೈಪಾಸ್‌ ನಿರ್ಮಾಣಕ್ಕೆ 264 ಕೋಟಿ ಸೇರಿದಂತೆ 847 ಕಿಮೀ ರಸ್ತೆ ಅಭಿವೃದ್ಧಿಗೆ 21 ಸಾವಿರ ಕೋಟಿ ವಿನಿಯೋಗಿಸಲು ಯೋಜನೆ ಸಿದ್ಧಪಡಿಸಲಾಗಿದೆ. ಶೀಘ್ರದಲ್ಲೇ ಈ ಎಲ್ಲ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಭೂಸ್ವಾಧೀನ ಸಮಸ್ಯೆ ಬಗೆಹರಿಸಿ:

ಇದೇ ವೇಳೆ ಹೆದ್ದಾರಿ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆಯಿಂದ ವಿಳಂಬವಾಗುತ್ತಿದೆ. ರಾಜ್ಯ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆಯನ್ನು ಕೊಂಚ ಚುರುಕುಗೊಳಿಸಿ ಭೂಮಿ ನಮಗೆ ಕೊಟ್ಟರೆ ತ್ವರಿತಗತಿಯಲ್ಲಿ ಹೆದ್ದಾರಿಗಳ ನಿರ್ಮಾಣ ಮಾಡಬಹುದು. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ಗಮನ ಹರಿಸಬೇಕು ಎಂದು ಮನವಿ ಮಾಡಿದರು.

ರ್ನಾಟಕ ಅಭಿವೃದ್ಧಿ ಹೊಂದುತ್ತಿರುವ ರಾಜ್ಯಗಳಲ್ಲಿ ಮುಂಚೂಣಿಯಲ್ಲಿದೆ. ಇದು ಸಂತಸಕರ. ಹೆದ್ದಾರಿ ರಸ್ತೆಗಳ ಅಭಿವೃದ್ಧಿಯಲ್ಲಿ ಅಗತ್ಯ ನೆರವು ನೀಡಲಾಗುವುದು ಎಂದು ತಿಳಿಸಿದ ಅವರು, ಸಿಆರ್‌ಎಫ್‌ ರಸ್ತೆಗಳಿಗೆ (ಕೇಂದ್ರ ರಸ್ತೆ ನಿಧಿ) ಕರ್ನಾಟಕ ಕೂಡಲೇ ತನ್ನ ಪಾಲಿನ ಹಣವನ್ನು ಬಿಡುಗಡೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರಿಗೆ ಸೂಚಿಸಿದರು. ಸಾಲ ಮಾಡುವ ಮೂಲಕ ಹಣ ಕ್ರೋಡೀಕರಣ ಮಾಡಿ. ಸಾಲವನ್ನು ಹತ್ತು ವರ್ಷದಲ್ಲಿ ತೀರಿಸಬಹುದು. ಆಗ ಸಿಆರ್‌ಎಫ್‌ ರಸ್ತೆಗಳ ಕಾಮಗಾರಿ ಪೂರ್ಣಗೊಳ್ಳುತ್ತದೆ ಎಂದರು.

ವರ್ಚುವಲ್‌ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಡಿ.ವಿ. ಸದಾನಂದಗೌಡ, ಜನರಲ್‌ ವಿ.ಕೆ. ಸಿಂಗ್‌, ಡಿಸಿಎಂ ಗೋವಿಂದ ಕಾರಜೋಳ, ಕೈಗಾರಿಕೆ ಸಚಿವ ಜಗದೀಶ ಶೆಟ್ಟರ, ವಿಧಾನ ಪರಿಷತ್‌ ಸದಸ್ಯ ಬಸವರಾಜ ಹೊರಟ್ಟಿ, ಶಾಸಕರಾದ ಶಂಕರ ಪಾಟೀಲ ಮುನೆನ್ನಕೊಪ್ಪ, ಅಮೃತ ದೇಸಾಯಿ, ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ, ಜಿಲ್ಲಾಧಿಕಾರಿ ನಿತೀಶ ಪಾಟೀಲ ಉಪಸ್ಥಿತರಿದ್ದರು.
 

click me!