ರೈತರ ಜೀವಕ್ಕೆ ಗ್ಯಾರಂಟಿ ಕೊಡಿ: ರಾಜ್ಯ ಸರ್ಕಾರದ ವಿರುದ್ಧ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ

Published : Apr 25, 2026, 05:48 PM IST
Nikhil kumaraswamy

ಸಾರಾಂಶ

ಸರ್ಕಾರ ಗ್ಯಾರಂಟಿ ಕೊಡುತ್ತದೆ ಆದರೆ, ರೈತರಿಗೆ ಬೆಳೆ ಗ್ಯಾರಂಟಿ ಇಲ್ಲವಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದು ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ಚನ್ನಪಟ್ಟಣ (ಏ.25): ಸರ್ಕಾರ ಗ್ಯಾರಂಟಿ ಕೊಡುತ್ತದೆ ಆದರೆ, ರೈತರಿಗೆ ಬೆಳೆ ಗ್ಯಾರಂಟಿ ಇಲ್ಲವಾಗಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿಗೆ ರೈತರ ಬಗ್ಗೆ ಕಾಳಜಿಯೇ ಇಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

ತಾಲೂಕಿನ ಬಿ.ವಿ.ಹಳ್ಳಿ ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಸಂಕಷ್ಟಕ್ಕೀಡಾಗಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಭೇಟಿ ಮಾಡಿ ಮಾತನಾಡಿದ ಅವರು, ಕಳೆದ ಹಲವು ವರ್ಷಗಳಿಂದ ರಾಮನಗರ ಜಿಲ್ಲೆಯಲ್ಲಿ ಕಾಡಾನೆ ಸಮಸ್ಯೆ ತಾಂಡವವಾಡುತ್ತಿದೆ. ಜಿಲ್ಲೆಗೆ 120 ಕಿಲೋ ಮೀಟರ್‌ ರೈಲ್ವೆ ಬ್ಯಾರಿಕೇಡ್ ಬೇಕಿದೆ. ಆದರೆ ಬಜೆಟ್‌ನಲ್ಲಿ ಕಾಡಾನೆ ನಿಯಂತ್ರಣಕ್ಕೆ ಕೊಟ್ಟಿರುವ ಹಣ ಯಾವುದಕ್ಕೂ ಸಾಲದಾಗಿದೆ. ಸರ್ಕಾರ ಇಡೀ ರಾಜ್ಯಕ್ಕೆ ಮೀಸಲಿಟ್ಟಿರುವುದು ಕೇವಲ 260 ಕೋಟಿ ರು. ಮಾತ್ರ ಎಂದು ತಿಳಿಸಿದರು.

ಕಾಡಾನೆ ಹಾವಳಿ ನಿಯಂತ್ರಿಸುವಲ್ಲಿ ಸ್ಥಳೀಯ ಶಾಸಕರು ಅಸಹಾಯಕರಾಗಿದ್ದಾರೆ. ಅರಣ್ಯ ಸಚಿವರನ್ನು ಇಲ್ಲಿಗೆ ಕರೆತರುವ ಕೆಲಸ ಆಗಿಲ್ಲ. ಈ ಜಿಲ್ಲೆಯನ್ನು ಸ್ವತಃ ಉಪ ಮುಖ್ಯಮಂತ್ರಿಗಳೇ ಪ್ರತಿನಿಧಿಸುತ್ತಿದ್ದರೂ ರೈತರಿಗೆ ರಕ್ಷಣೆ ಸಿಕ್ಕಿಲ್ಲ. ಆದರೆ ಕೇಂದ್ರ ಸಚಿವರಾದ ಕುಮಾರಸ್ವಾಮಿ ಅವರು ಕೇಂದ್ರ ಅರಣ್ಯ ಸಚಿವರನ್ನು ಕರೆಸಿ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ಬೆಳೆ ಗ್ಯಾರಂಟಿ ಇಲ್ಲ

ರಾಜ್ಯ ಸರ್ಕಾರದ ಅರಣ್ಯ ಸಚಿವರನ್ನು ಇಲ್ಲಿಗೆ ಕರೆತರುವ ಕೆಲಸ ಆಗುತ್ತಿಲ್ಲ. ಇಲ್ಲಿಗೆ ಬಂದು ರೈತರ ಕಷ್ಟ ಕೇಳುವ ಸೌಜನ್ಯವೂ ಸಚಿವರಿಗೆ ಇಲ್ಲ. ನಿತ್ಯ ರೈತರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಸರ್ಕಾರ 'ಗ್ಯಾರಂಟಿಗಳನ್ನು ಕೊಡುತ್ತಿದ್ದೇವೆ' ಎನ್ನುತ್ತದೆ, ಆದರೆ ಅನ್ನದಾತರಿಗೆ ಯಾವ ಗ್ಯಾರಂಟಿಯೂ ಇಲ್ಲ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ ಈ ಸಮಸ್ಯೆಗಳ ಬಗ್ಗೆ ಗಮನಹರಿಸಲು ಸಮಯವೇ ಇಲ್ಲ ಎಂದು ಕಿಡಿಕಾರಿದರು.

ರೈತರ ಈ ನ್ಯಾಯಯುತ ಹೋರಾಟಕ್ಕೆ ಪಕ್ಷತೀತವಾಗಿ ನಮ್ಮ ಸಂಪೂರ್ಣ ಬೆಂಬಲವಿದೆ. ಈ ಸರ್ಕಾರಕ್ಕೆ ರೈತರ ಕುರಿತು ಕಿಂಚಿತ್ತು ಕಾಳಜಿ ಇದ್ದರೆ ಈ ಕೂಡಲೇ ಎಚ್ಚೆತ್ತು ಕಾಡಾನೆಗಳ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಆಗ್ರಹಿಸಿದರು. ಇದೇ ವೇಳೆ ರೈತರು ಕಾಡಾನೆ ದಾಳಿಯಿಂದ ಆಗುತ್ತಿರುವ ಸಮಸ್ಯೆ ಹಾಗೂ ಹಾನಿ ಕುರಿತು ಅಳಲುತೋಡಿಕೊಂಡರು.

PREV
Read more Articles on
click me!

Recommended Stories

ಶಿರಸಿ: ಮಂಟಪದಿಂದ ವಧು ನಾಪತ್ತೆ, MBBS ವಿದ್ಯಾರ್ಥಿ ಜತೆ ಪರಾರಿ ಶಂಕೆ, ಕ್ವಿಂಟಾಲ್‌ಗಟ್ಟಲೆ ನಾನ್‌ವೆಜ್ ಊಟ ವೇಸ್ಟ್
ಯುವಕರ ಹೊಸ ಭವಿಷ್ಯ ಬರೆಯಲಿದೆ ಪ್ರಾಕ್ಸಿನ್ ಟೆಕ್ ಕಂಪನಿ ಮತ್ತು ದಾಂಡೇಲಿ ಜಿಟಿಟಿಸಿ ಒಪ್ಪಂದ!