
ಹಾವೇರಿ(ಸೆ.15): ಕೋವಿಡ್-19 ಸಾಂಕ್ರಾಮಿಕ ರೋಗ ನಿಯಂತ್ರಿಸುವ ಹಿನ್ನೆಲೆಯಲ್ಲಿ ಸರ್ಕಾರದ ಹೊಸ ಮಾರ್ಗಸೂಚಿಗಳನ್ನು ಜಿಲ್ಲಾದ್ಯಂತ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಲಾಗಿದ್ದು, ಸೆ. 27ರವರೆಗೆ ರಾತ್ರಿ 9ರಿಂದ ಬೆಳಗ್ಗೆ 5 ಗಂಟೆವರೆಗೆ ರಾತ್ರಿ ಕರ್ಫ್ಯೂ ಜಾರಿಗೊಳಿಸಿ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಆದೇಶ ಹೊರಡಿಸಿದ್ದಾರೆ.
ಮಾರ್ಗಸೂಚಿ:
ಸಾರ್ವಜನಿಕರ ಓಡಾಟವನ್ನು ನಿತ್ಯ ರಾತ್ರಿ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಅತ್ಯಾವಶ್ಯಕ ಹಾಗೂ ತುರ್ತು ಸಂದರ್ಭಗಳನ್ನು ಹೊರತುಪಡಿಸಿ ಸಂಪೂರ್ಣ ನಿಷೇಧಿಸಿದೆ. ತುರ್ತು ಚಿಕಿತ್ಸೆಗಾಗಿ ಸಂಚರಿಸಬೇಕಾದ ಅಗತ್ಯವಿರುವ ರೋಗಿಗಳು ಮತ್ತು ಅವರ ಪರಿಚಾರಕರು, ವ್ಯಕ್ತಿಗಳಿಗೆ ಸಂಚರಿಸಲು ಅನುಮತಿ ಇರುತ್ತದೆ. ರಾತ್ರಿ ವೇಳೆ ಕಾರ್ಯನಿರ್ವಹಿಸುವ ಅಗತ್ಯವಿರುವಂತಹ ಎಲ್ಲಾ ಕೈಗಾರಿಕೆಗಳು, ಕಂಪನಿಗಳಿಗೆ ಕಾರ್ಯನಿರ್ವಹಿಸಲು ಅನುಮತಿ ಇರುತ್ತದೆ. ಅಂತಹ ಸಂಸ್ಥೆಗಳ ನೌಕರರ ಸಂಚಾರಕ್ಕೆ, ಅವರ ಸಂಬಂಧಪಟ್ಟಸಂಸ್ಥೆ, ಕಂಪನಿ ನೀಡಿದ ಅಧಿಕೃತ ಗುರುತಿನ ಚೀಟಿ ಹೊಂದಿಕೊಂಡು ಪ್ರಯಾಣಿಸಲು ಅನುಮತಿಸಲಾಗಿದೆ. ದೂರವಾಣಿ ಸಂಪರ್ಕ ಮತ್ತು ಅಂತರ್ಜಾಲ ಸೇವೆ ಒದಗಿಸುವ ಸಂಸ್ಥೆಗಳ ನೌಕರರು ಮತ್ತು ವಾಹನಗಳ ಸಂಚಾರಕ್ಕೆ ಅವರ ಸಂಬಂಧಪಟ್ಟ ಸಂಸ್ಥೆ, ಕಂಪನಿ ನೀಡಿದ ಅಧಿಕೃತ ಗುರುತಿನ ಚೀಟಿ ಹೊಂದಿಕೊಂಡು ಪ್ರಯಾಣಿಸಲು ಅನುಮತಿಸಲಾಗಿದೆ.
ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಸೇವೆಗಳ ಕಂಪನಿಗಳು, ಸಂಸ್ಥೆಯ ಅತ್ಯಾವಶ್ಯಕ ಸಿಬ್ಬಂದಿ, ನೌಕರರು ಮಾತ್ರ ಕಚೇರಿಯಿಂದ ಕಾರ್ಯ ನಿರ್ವಹಿಸಬೇಕು. ಉಳಿದ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಬೇಕು. ಔಷಧ ಮಳಿಗೆಗಳು ಸೇರಿದಂತೆ ವೈದ್ಯಕೀಯ, ತುರ್ತು ಮತ್ತು ಅತ್ಯಾವಶ್ಯಕ ಸೇವೆಗಳು ಪೂರ್ಣ ಪ್ರಮಾಣದಲ್ಲಿ ಕಾರ್ಯ ನಿರ್ವಹಿಸಲಿವೆ. ಇತರ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಿದೆ.
ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಬಿಗಿ, ರಾತ್ರಿ 9 ರೊಳಗೆ ಅಂಗಡಿ ಮುಂಗಟ್ಟು ಬಂದ್
ಖಾಲಿ ವಾಹನಗಳು ಸೇರಿದಂತೆ ಟ್ರಕ್‌ಗಳು, ಸರಕು ಸಾಗಣೆ ವಾಹನಗಳು ಅಥವಾ ಯಾವುದೇ ಸರಕು ಸಾಗಣೆ ವಾಹನಗಳ ಮೂಲಕ ಎಲ್ಲಾ ಬಗೆಯ ಸರಕುಗಳನ್ನು ಸಾಗಿಸುವುದಕ್ಕೆ ಯಾವುದೇ ನಿರ್ಬಂಧ ಇರುವುದಿಲ್ಲ. ಇ-ವಾಣಿಜ್ಯ ಕಂಪನಿಗಳಿಂದ ಸರಕುಗಳ ಹೋಮ್ ಡೆಲಿವರಿಗೆ ಮತ್ತು ಅವುಗಳ ಕಾರ್ಯಾಚರಣೆಗಳಿಗೆ ಅನುಮತಿಸಿದೆ.
ಬಸ್ಸು ಮತ್ತು ರೈಲು ಪ್ರಯಾಣಕ್ಕೆ ಅನುಮತಿಸಿದೆ. ರೈಲು ಮತ್ತು ರಸ್ತೆ ಮೂಲಕ ಪ್ರಯಾಣಿಕರ ಸಂಚಾರಕ್ಕೆ ಅನುಕೂಲವಾಗಲು ಬಸ್ ಟರ್ಮಿನಲ್ ಬಸ್ ನಿಲ್ದಾಣಗಳು ಮತ್ತು ರೈಲ್ವೆ ನಿಲ್ದಾಣಗಳಿಗೆ ಹೋಗಿ ಬರುವುದಕ್ಕೆ ಸಾರ್ವಜನಿಕ ಸಾರಿಗೆ ವಾಹನಗಳು, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ಅಧಿಕೃತ ಪ್ರಯಾಣದ ದಾಖಲೆ ಅಥವಾ ಟಿಕೆಟ್‌ನ್ನು ಪ್ರದರ್ಶಿಸಿದ ನಂತರವೇ ಅಂತಹ ಸಂಚಾರಕ್ಕೆ ಅನುಮತಿ ನೀಡಲಾಗುವುದು.
ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಪಾಡುವುದು ಹಾಗೂ ವೈಯಕ್ತಿಕ ಮತ್ತು ಸಾಮಾಜಿಕ ಸ್ವಚ್ಛತೆಯನ್ನು ಕಟ್ಟು ನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಧರಿಸದೆ ಓಡಾಡುವವರಿಗೆ ದಂಡ ವಿಧಿಸಲಾಗುವುದು. ಸಾರ್ವಜನಿಕರಲ್ಲಿ ಸಾಮಾಜಿಕ ಅಂತರವನ್ನು ಕಾಪಾಡುವ ದೃಷ್ಟಿಯಿಂದ ಜಿಲ್ಲೆಯಾದ್ಯಂತ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ಜಾರಿಯಲ್ಲಿರುತ್ತದೆ. ಯಾವುದೇ ವ್ಯಕ್ತಿಯು ಈ ನಿರ್ದೇಶನಗಳನ್ನು ಪಾಲಿಸಲು ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ 2005ರ ಕಲಂ 51 ರಿಂದ 60 ಹಾಗೂ Pಅ ಕಲಂ 188 ರನ್ವಯ ದಂಡನೆಗೆ ಅರ್ಹರಾಗುತ್ತಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.