ಉತ್ತರ ಕನ್ನಡ: ರಾತ್ರಿಯಿಡೀ ಗಸ್ತು ತಿರುಗಿ ಹುಬ್ಬೇರುವಂತೆ ಮಾಡಿದ ಮಹಿಳಾ ಪೊಲೀಸ್‌ ಪಡೆ..!

By Girish Goudar  |  First Published Jun 17, 2022, 9:35 PM IST

*    ಪೊಲೀಸ್ ಇಲಾಖೆಯಲ್ಲೂ ಸೇವೆ ಸಲ್ಲಿಸುವ ಮೂಲಕ ತಮ್ಮ ಸಾಮರ್ಥ್ಯ ಪ್ರದರ್ಶಿಸುತ್ತಿರುವ ಮಹಿಳೆಯರು
*  ಮಹಿಳಾ ಪೊಲೀಸ್ ತಂಡವನ್ನೇ ರಾತ್ರಿ ಗಸ್ತಿಗೆ ನಿಯೋಜನೆ ಮಾಡಿರುವುದು ನಿಜಕ್ಕೂ ಮಾದರಿ ಕಾರ್ಯ 
*  ಉತ್ತರ ಕನ್ನಡ ಜಿಲ್ಲೆಯಲ್ಲಿ ಮೊದಲ ಪ್ರಯತ್ನವಾಗಿ ಮಹಿಳಾ ಪೊಲೀಸ್ ಸಿಬ್ಬಂದಿ ರಾತ್ರಿ ಗಸ್ತು ಕಾರ್ಯ 
 


ವರದಿ: ಗಿರೀಶ್ ನಾಯ್ಕ್, ಏಷ್ಯಾನೆಟ್ ಸುವರ್ಣ ನ್ಯೂಸ್, ಕಾರವಾರ

ಉತ್ತರ ಕನ್ನಡ(ಜೂ.17): ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪುರುಷರಿಗೆ ಸರಿಸಮಾನರಾಗಿ ಪೈಪೋಟಿ ನೀಡುತ್ತಿದ್ದಾರೆ. ಪೊಲೀಸ್ ಇಲಾಖೆಯಲ್ಲೂ ಸೇವೆ ಸಲ್ಲಿಸುವ ಮೂಲಕ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಈ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಗೆ ರಾತ್ರಿ ಗಸ್ತಿಗೆ ನಿಯೋಜನೆ ಮಾಡಲಾಗಿದೆ. ಸಂಪೂರ್ಣ ಮಹಿಳಾ ಪೊಲೀಸರ ತಂಡವೇ ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸಂಚಾರ ಸುವ್ಯವಸ್ಥೆಯೊಂದಿಗೆ ಯಾವುದೇ ಕಾನೂನು ಬಾಹಿರ ಕೃತ್ಯಗಳು ನಡೆಯದಂತೆ ಗಸ್ತು ಕೂಡಾ ತಿರುಗುತ್ತಿದ್ದಾರೆ. 

Tap to resize

Latest Videos

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದ ಪಟ್ಟಣದಲ್ಲಿ ಇದೇ ಮೊದಲ ಬಾರಿಗೆ ಸಂಪೂರ್ಣ ಮಹಿಳಾ ಪೊಲೀಸ್ ತಂಡವನ್ನೇ ರಾತ್ರಿ ಗಸ್ತಿಗೆ ನಿಯೋಜನೆ ಮಾಡಲಾಗಿದ್ದು, ನಾವೇನು ಯಾರಿಗೂ ಕಮ್ಮಿಇಲ್ಲ ಎನ್ನುವಂತೆ ಮಹಿಳಾ ಪೊಲೀಸ್ ಸಿಬ್ಬಂದಿ ಧೈರ್ಯದಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದಾರೆ. ಸಾಮಾನ್ಯವಾಗಿ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಯನ್ನು ಠಾಣೆಯಲ್ಲಿ ರಾತ್ರಿ ಕರ್ತವ್ಯಕ್ಕೆ ಮಾತ್ರ ನಿಯೋಜನೆ ಮಾಡುತ್ತಿದ್ದರು. ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಭಟ್ಕಳದಲ್ಲಿ ರಾತ್ರಿ ವೇಳೆ ಮಹಿಳಾ ಪೊಲೀಸರ ಗಸ್ತು ಕಾರ್ಯಕ್ಕೆ ಚಾಲನೆ ನೀಡಲಾಗಿದೆ.

ಶಾಲ್ಮಲಾ ನದಿಯಲ್ಲಿ ಕಾಣೆಯಾಗುತ್ತಿದೆ ಸಹಸ್ರಲಿಂಗಗಳು...!

ಪಿಎಸ್ಐ ಸುಮಾ.ಬಿ ನೇತೃತ್ವದಲ್ಲಿ ತಡರಾತ್ರಿ ವೇಳೆ ರಸ್ತೆಗಿಳಿದ ಮಹಿಳಾ ಪೊಲೀಸ್ ಸಿಬ್ಬಂದಿ, ಆಯಕಟ್ಟಿನ ಸ್ಥಳಗಳಲ್ಲಿ ನಿಂತು ವಾಹನ ತಪಾಸಣೆ ಕಾರ್ಯವನ್ನ ಕೈಗೊಂಡಿದ್ದಾರೆ. ರಸ್ತೆಯಲ್ಲಿ ಓಡಾಡುವ ಸಂಶಯಾಸ್ಪದ ವ್ಯಕ್ತಿಗಳನ್ನು ತಡೆದು ವಿಚಾರಣೆಯನ್ನೂ ನಡೆಸಿದ್ದಾರೆ. ಯಾವುದೇ ಅಳುಕಿಲ್ಲದೇ ಮಹಿಳಾ ಸಿಬ್ಬಂದಿ ತಂಡದೊಂದಿಗೆ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಗಸ್ತು ನಡೆಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ತಡರಾತ್ರಿ 11ರಿಂದ ಬೆಳಗ್ಗೆ 5 ಗಂಟೆಯವರೆಗೂ ನಿದ್ದೆ ಬಿಟ್ಟು ಗಸ್ತು ನಡೆಸಿದ್ದು, ಇದು ಸಮಾಜದ ಇತರೆ ಮಹಿಳೆಯರಿಗೂ ಮಾದರಿಯಾಗಿದೆ ಅಂತಾರೇ ಉತ್ತರ ಕನ್ನಡ ಜಿಲ್ಲೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ ಪೆನ್ನೇಕರ್.

ಇನ್ನು ಜಿಲ್ಲೆಯಲ್ಲಿ ಮೊದಲ ಪ್ರಯತ್ನವಾಗಿ ಈ ಮಹಿಳಾ ಪೊಲೀಸ್ ಸಿಬ್ಬಂದಿ ರಾತ್ರಿ ಗಸ್ತು ಕಾರ್ಯವನ್ನು ಕೈಗೊಳ್ಳಲಾಗಿತ್ತು. ಪಟ್ಟಣ ಹಾಗೂ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಮಹಿಳಾ ಸಿಬ್ಬಂದಿ ತಂಡವನ್ನೇ ರಾತ್ರಿ ಗಸ್ತಿಗೆ ನಿಯೋಜಿಸುವ ಮೂಲಕ ಮಹಿಳಾ ಸಿಬ್ಬಂದಿಯ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಪ್ರತಿಯೊಂದು ಠಾಣೆಯಲ್ಲೂ ಹದಿನೈದು ದಿನಗಳಿಗೊಮ್ಮೆ ಮಹಿಳಾ ಸಿಬ್ಬಂದಿಗೆ ರಾತ್ರಿ ಗಸ್ತಿಗೆ ನಿಯೋಜಿಸಲು ಚಿಂತನೆ ನಡೆಸಲಾಗುತ್ತಿದೆ. ಜತೆಗೆ ಮಹಿಳೆಯರು ಹೆಚ್ಚಾಗಿ ಇಲ್ಲದ ವಿಭಾಗಗಳಿಗೂ ಮಹಿಳಾ ಸಿಬ್ಬಂದಿ ಕಾರ್ಯನಿರ್ವಹಣೆಗೆ ಅವಕಾಶ ಒದಗಿಸಲಾಗುವುದು ಎಂದು ಎಸ್ಪಿ ತಿಳಿಸಿದ್ದಾರೆ. ಇನ್ನು ಮಹಿಳಾ ಸಿಬ್ಬಂದಿ ತಂಡವೇ ರಾತ್ರಿ ವೇಳೆ ಗಸ್ತು ತಿರುಗುವುದರಿಂದ ಇತರೆ ಮಹಿಳೆಯರಿಗೂ ಸ್ಪೂರ್ತಿ ನೀಡುವಂತಿದೆ. ಜತೆಗೆ ಮಹಿಳೆಯರಿಗೂ ಸುರಕ್ಷತೆಯ ಭಾವನೆ ಮೂಡುತ್ತದೆ ಅಂತಾರೇ ಸ್ಥಳೀಯರಾದ ಉಲ್ಲಾಸ್ ಶಾನಭಾಗ್.

ಒಟ್ಟಿನಲ್ಲಿ ಮಹಿಳಾ ಪೊಲೀಸ್ ತಂಡವನ್ನೇ ರಾತ್ರಿ ಗಸ್ತಿಗೆ ನಿಯೋಜನೆ ಮಾಡಿರುವುದು ನಿಜಕ್ಕೂ ಮಾದರಿ ಕಾರ್ಯವಾಗಿದೆ. ಮುಂದಿನ ದಿನಗಳಲ್ಲಿ ಇದು ಇಡೀ ಜಿಲ್ಲೆಯಲ್ಲಿ ಜಾರಿಯಾಗುವ ಮೂಲಕ ಮಹಿಳಾ ಸಬಲೀಕರಣಕ್ಕೆ ಸಹಕಾರಿಯಾಗುವಂತಾಗಲೀ ಅನ್ನೋದು ಎಲ್ಲರ ಆಶಯ. 
 

click me!