
ಬೆಂಗಳೂರು: ಮೈಸೂರು ರಸ್ತೆ ಕಡೆಯಿಂದ ಕೆಂಗೇರಿ ಸೇರಿದಂತೆ ನಗರದ ಇತರೆ ಭಾಗಗಳಿಗೆ ಪ್ರಯಾಣಿಸುವ ವಾಹನ ಸವಾರರಿಗೆ ಶೀಘ್ರವೇ ನೆಮ್ಮದಿಯ ಸುದ್ದಿಯೊಂದು ಸಿಗಲಿದೆ. ಬೆಂಗಳೂರಿನ ದೀಪಾಂಜಲಿ ನಗರ ಜಂಕ್ಷನ್ (ಬಿಎಚ್‌ಇಎಲ್ ಸಮೀಪ)ದಿಂದ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು ಹತ್ತಿರದ ನೈಸ್ ರಸ್ತೆಯನ್ನು ಸಂಪರ್ಕಿಸುವ 1.5 ಕಿ.ಮೀ ಉದ್ದದ ನೈಸ್ ಲಿಂಕ್ ರಸ್ತೆ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಸಾರ್ವಜನಿಕರ ಬಳಕೆಗೆ ಮುಕ್ತವಾಗಲಿದೆ. ಶೀಘ್ರ ಮಾರ್ಗ ಓಪನ್ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನೈಸ್ ಮುಖ್ಯಸ್ಥ ಅಶೋಕ್ ಖೇಣಿ ಮಾಹಿತಿ ಹಂಚಿಕೊಂಡಿದ್ದಾರೆ. ಈ ಹೊಸ ಸಂಪರ್ಕ ರಸ್ತೆ ಆರಂಭವಾದ ಬಳಿಕ ಈ ಭಾಗದಲ್ಲಿ ವರ್ಷಗಳಿಂದ ಕಾಡುತ್ತಿದ್ದ ಟ್ರಾಫಿಕ್ ಸಮಸ್ಯೆಗೆ ಗಣನೀಯ ಮಟ್ಟದಲ್ಲಿ ಪರಿಹಾರ ದೊರೆಯಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.
ನಂದಿ ಇನ್ಫ್ರಾಸ್ಟ್ರಕ್ಚರ್ ಕಾರಿಡಾರ್ ಎಂಟರ್‌ಪ್ರೈಸಸ್ ಲಿಮಿಟೆಡ್ (ನೈಸ್) ಸಂಸ್ಥೆ ನಿರ್ಮಾಣ ಮಾಡಿರುವ ಈ ಮಾರ್ಗ ದೀಪಾಂಜಲಿ ನಗರ ಜಂಕ್ಷನ್‌ನಿಂದ ಆರಂಭವಾಗಿ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು ಸಮೀಪದ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಈ ನಾಲ್ಕು ಪಥದ ರಸ್ತೆ ನಿರ್ಮಾಣ ಕಾರ್ಯ ಈಗ ಅಂತಿಮ ಹಂತ ತಲುಪಿದೆ. ಬಹುತೇಕ ಕಾಮಗಾರಿ ಪೂರ್ಣಗೊಂಡಿದ್ದು, ಸದ್ಯ ಅಂತಿಮ ಸ್ಪರ್ಶದ ಕೆಲಸಗಳು ಭರದಿಂದ ನಡೆಯುತ್ತಿವೆ. ರಸ್ತೆ ಸಂಚಾರಕ್ಕೆ ಮುಕ್ತವಾದರೆ, ಮೈಸೂರು ರಸ್ತೆಯಲ್ಲಿ ದೀಪಾಂಜಲಿ ನಗರ ಜಂಕ್ಷನ್ ಬಳಿ ಉಂಟಾಗುವ ಸಂಚಾರ ದಟ್ಟಣೆ ಗಣನೀಯವಾಗಿ ಕಡಿಮೆಯಾಗಲಿದೆ. ಅಲ್ಲದೆ, ರಿಂಗ್ ರಸ್ತೆ ಹಾಗೂ ನೈಸ್ ರಸ್ತೆ ಕಡೆಗೆ ತೆರಳುವ ವಾಹನಗಳಿಗೆ ಸುಗಮ ಸಂಪರ್ಕ ಸಿಗಲಿದೆ.
ಈ ಹೊಸ ನೈಸ್ ಲಿಂಕ್ ರಸ್ತೆ ಆರಂಭವಾದ ನಂತರ, ನಗರದ ಒಳಭಾಗದಿಂದ ನೈಸ್ ರಸ್ತೆ ಮೂಲಕ ಸಂಚರಿಸಿ ಹೊಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಮೈಸೂರು ರಸ್ತೆ, ತುಮಕೂರು ರಸ್ತೆ ಹಾಗೂ ಇತರೆ ಪ್ರಮುಖ ಪ್ರದೇಶಗಳಿಗೆ ಸಂಪರ್ಕ ಪಡೆಯುವುದು ಇನ್ನಷ್ಟು ಸುಲಭವಾಗಲಿದೆ. ಟ್ರಾಫಿಕ್ ತುಂಬಿರುವ ನಗರ ರಸ್ತೆಗಳ ಮೂಲಕ ಸಾಗುವ ಬದಲು, ಟೋಲ್ ಪಾವತಿಸಿ ನೈಸ್ ರಸ್ತೆಯ ಮೂಲಕ ತಲೆಬಿಸಿ ಇಲ್ಲದೆ ವೇಗವಾಗಿ ಸಂಚರಿಸಲು ವಾಹನ ಸವಾರರಿಗೆ ಇದು ದೊಡ್ಡ ಅನುಕೂಲವಾಗಲಿದೆ.
ಈ ನೂತನ ಸಂಪರ್ಕ ರಸ್ತೆ ಮೂಲಕ ದೀಪಾಂಜಲಿ ನಗರ ಜಂಕ್ಷನ್‌ನಿಂದ ಕೇವಲ ಎರಡು–ಮೂರು ನಿಮಿಷಗಳಲ್ಲಿ ನೈಸ್ ರಸ್ತೆಯ ಟೋಲ್ ಗೇಟ್‌ವರೆಗೆ ತಲುಪಬಹುದಾಗಿದೆ. ಇದರಿಂದ ಸಮಯದ ಉಳಿತಾಯದ ಜೊತೆಗೆ ಇಂಧನ ವೆಚ್ಚವೂ ಕಡಿಮೆಯಾಗಲಿದೆ. ವಿಶೇಷವಾಗಿ ವಿಜಯನಗರ, ಬಾಪೂಜಿನಗರ, ಬ್ಯಾಟರಾಯನಪುರ, ಮೆಜೆಸ್ಟಿಕ್ ಹಾಗೂ ಕೆ.ಆರ್. ಮಾರುಕಟ್ಟೆ ಭಾಗಗಳಿಂದ ಮೈಸೂರು ರಸ್ತೆಗೆ ಆಗಮಿಸುವ ವಾಹನ ಸವಾರರಿಗೆ ಈ ರಸ್ತೆ ಅತ್ಯಂತ ಉಪಯುಕ್ತವಾಗಲಿದೆ.
ಮೈಸೂರು ರಸ್ತೆಯ ದೀಪಾಂಜಲಿ ನಗರ ಜಂಕ್ಷನ್‌ನಿಂದ ಹೊಸಕೆರೆಹಳ್ಳಿ ಪಿಇಎಸ್ ಕಾಲೇಜು ಸಮೀಪದ ನೈಸ್ ರಸ್ತೆಗೆ ಸಂಪರ್ಕ ಕಲ್ಪಿಸುವ ಯೋಜನೆಯನ್ನು ನೈಸ್ ಸಂಸ್ಥೆ ಹಲವು ವರ್ಷಗಳ ಹಿಂದೆಯೇ ರೂಪಿಸಿತ್ತು. ಆದರೆ ಭೂಸ್ವಾಧೀನ ಪ್ರಕ್ರಿಯೆ ಹಾಗೂ ಭೂ ವಿವಾದಗಳ ಕಾರಣದಿಂದ ಈ ಯೋಜನೆ ಅರ್ಧಕ್ಕೆ ಸ್ಥಗಿತಗೊಂಡಿತ್ತು. ಇದೀಗ ಆ ಎಲ್ಲಾ ಅಡೆತಡೆಗಳನ್ನು ದಾಟಿ, ನೈಸ್ ಸಂಸ್ಥೆ ಈ ಮಹತ್ವದ ಯೋಜನೆಯನ್ನು ಪೂರ್ಣಗೊಳಿಸಿದ್ದು, ಶೀಘ್ರದಲ್ಲೇ ಸಂಚಾರಕ್ಕೆ ಮುಕ್ತಗೊಳಿಸಲು ಸಿದ್ಧತೆ ನಡೆಸಿದೆ.
ಈ ರಸ್ತೆ ಸಾರ್ವಜನಿಕರ ಬಳಕೆಗೆ ಮುಕ್ತವಾದ ಬಳಿಕ ಮೈಸೂರು ರಸ್ತೆ ದೀಪಾಂಜಲಿ ನಗರ ಜಂಕ್ಷನ್‌ನಲ್ಲಿನ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಕೆಂಗೇರಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಗೆ ಸುಗಮ ಸಂಪರ್ಕ ಸಿಗಲಿದೆ.ನಗರ ಒಳಭಾಗದ ರಸ್ತೆಗಳ ಮೇಲಿನ ಒತ್ತಡ ತಗ್ಗಲಿದೆ. ಒಟ್ಟಾರೆ, ಈ ನೈಸ್ ಲಿಂಕ್ ರಸ್ತೆ ಬೆಂಗಳೂರು ನಗರದ ಪಶ್ಚಿಮ ಭಾಗದ ಸಂಚಾರ ವ್ಯವಸ್ಥೆಗೆ ಹೊಸ ಉಸಿರು ನೀಡಲಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.