ಬೆಂಗ್ಳೂರಿನ ವ್ಯಾಪಾರಿ, ಬ್ಯಾಂಕ್‌ ನೌಕರನಿಂದ ಐಸಿಸ್‌ಗೆ ನೇಮಕಾತಿ..!

Kannadaprabha News   | Asianet News
Published : Apr 02, 2021, 07:22 AM IST
ಬೆಂಗ್ಳೂರಿನ ವ್ಯಾಪಾರಿ, ಬ್ಯಾಂಕ್‌ ನೌಕರನಿಂದ ಐಸಿಸ್‌ಗೆ ನೇಮಕಾತಿ..!

ಸಾರಾಂಶ

ಅಕ್ಕಿ ವ್ಯಾಪಾರಿ, ತಮಿಳುನಾಡಿನ ಖಾಸಗಿ ಬ್ಯಾಂಕ್‌ ನೌಕರನಿಂದ ಕುಕೃತ್ಯ| ಡಾಕ್ಟರ್‌ ಟೆರರ್‌ ಜೊತೆ ಸಂಪರ್ಕ| ಐಸಿಸ್‌ನಿಂದ ಹಣದ ನೆರವು| ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ ಎನ್‌ಐಎ| ಸಿರಿಯಾಕ್ಕೆ ಹೋಗಿ ತರಬೇತಿ ಪಡೆದಿದ್ದ ಇರ್ಫಾನ್‌, ಅಬ್ದುಲ್‌| ಧರ್ಮ ಬೋಧನೆ ನೆಪದಲ್ಲಿ ಯುವಕರಿಗೆ ಬ್ರೈನ್‌ವಾಷ್‌| 

ಬೆಂಗಳೂರು(ಏ.02): ಇಸ್ಲಾಮಿಕ್‌ ಸ್ಟೇಟ್ಸ್‌ (ಐಸಿಸ್‌) ನೇಮಕಾತಿಯಲ್ಲಿ ತೊಡಗಿದ್ದ ಇನ್ನಿಬ್ಬರು ಶಂಕಿತರ ವಿರುದ್ಧ ರಾಷ್ಟ್ರೀಯ ತನಿಖಾ ದಳದ (ಎನ್‌ಐಎ) ಅಧಿಕಾರಿಗಳು ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿಸಲ್ಲಿಸಿದ್ದಾರೆ.
ಫ್ರೇಜರ್‌ ಟೌನ್‌ನ ಅಕ್ಕಿ ವ್ಯಾಪಾರಿ ಇರ್ಫಾನ್‌ ನಾಸೀರ್‌ ಹಾಗೂ ತಮಿಳುನಾಡಿನ ರಾಮನಾಥಪುರದ ಬ್ಯಾಂಕ್‌ ನೌಕರ ಅಹಮ್ಮದ್‌ ಅಬ್ದುಲ್‌ ವಿರುದ್ಧ ದೋಷಾರೋಪ ಪಟ್ಟಿಸಲ್ಲಿಕೆಯಾಗಿದೆ.

ಶಂಕಿತರು ಸಿರಿಯಾ ದೇಶಕ್ಕೆ ಹೋಗಿ ಕೆಲ ತಿಂಗಳು ಭಯೋತ್ಪಾದನ ಕೃತ್ಯದ ಬಗ್ಗೆ ತರಬೇತಿ ಪಡೆದಿದ್ದರು. ಬೆಂಗಳೂರಿನ ಮುಸ್ಲಿಂ ಯುವಕರನ್ನು ಸಿರಿಯಾಗೆ ಕಳುಹಿಸಲು ಹಲವು ವರ್ಷಗಳಿಂದ ಆರ್ಥಿಕ ನೆರವು ನೀಡುತ್ತಿದ್ದರು. ಶಂಕಿತರಿಗೆ ಸೇರಿದ ಗುರಪ್ಪನಪಾಳ್ಯ ಮತ್ತು ಫ್ರೇಜರ್‌ ಟೌನ್‌ನಲ್ಲಿನ ಮನೆ, ಅಂಗಡಿಗಳ ಮೇಲೆ ದಾಳಿ ನಡೆಸಿ ಮೊಬೈಲ್‌, ಹಾರ್ಡ್‌ ಡಿಸ್ಕ್‌ ಸೇರಿದಂತೆ ಕೆಲವು ದಾಖಲೆಗಳನ್ನು ಜಪ್ತಿ ಮಾಡಲಾಗಿತ್ತು. ಈ ಎಲ್ಲ ಸಾಕ್ಷ್ಯಗಳನ್ನು ಕೋರ್ಟ್‌ಗೆ ಸಲ್ಲಿಸಲಾಗಿದೆ ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ತಮಿಳುನಾಡಿನ ಅಹ್ಮದ್‌ ಅಬ್ದುಲ್‌, ಚೆನ್ನೈನಲ್ಲಿ ಖಾಸಗಿ ಬ್ಯಾಂಕ್‌ನಲ್ಲಿ ನೌಕರನಾಗಿದ್ದ. ಬೆಂಗಳೂರಿನಲ್ಲಿ ಇರ್ಫಾನ್‌ ನಾಸೀರ್‌ ಅಕ್ಕಿ ವ್ಯಾಪಾರಿಯಾಗಿದ್ದ. ಇಸ್ಲಾಂ ಮೂಲಭೂತವಾದದ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಶಂಕಿತರು, ಉಗ್ರ ಹೋರಾಟ ನಡೆಸದೆ ಭಾರತದಲ್ಲಿ ಐಸಿಸ್‌ ಸಂಘಟನೆ ಬಲಗೊಳಿಸಬೇಕೆಂದು ಯೋಜನೆ ರೂಪಿಸಿದ್ದರು.

ಬೆಂಗಳೂರು ‘ಉಗ್ರ ವೈದ್ಯ’ನ ವಿರುದ್ಧ NIA ಚಾರ್ಜ್‌ಶೀಟ್‌

ಅದಕ್ಕಾಗಿ ಸಿರಿಯಾದ ಐಸಿಸ್‌ ಭಯೋತ್ಪಾದಕ ಸಂಘಟನೆ ನಾಯಕರ ಜತೆ ಸಂಪರ್ಕ ಹೊಂದಿದ್ದ ಅಹ್ಮದ್‌ ಅಬ್ದುಲ್‌ ಮತ್ತು ಇರ್ಫಾನ್‌ ನಾಸೀರ್‌, ಅವರಿಂದ ಹಣಕಾಸಿನ ನೆರವು ಪಡೆಯುತ್ತಿದ್ದರು. ಆನಂತರ ಸಿಲಿಕಾನ್‌ ಸಿಟಿಯ ಮುಸ್ಲಿಂ ಯುವಕರನ್ನು ಸಂಪರ್ಕ ಮಾಡಿ ಧರ್ಮ ಬೋಧನೆ ನೆಪದಲ್ಲಿ ಐಸಿಸ್‌ ಕಡೆಗೆ ಒಲವು ಮೂಡಿಸುತ್ತಿದ್ದರು. ಉಗ್ರ ಚಟುವಟಿಕೆಗಳಿಗೆ ಪ್ರಚೋದನೆ ನೀಡಿ ಐಸಿಸ್‌ ಸಂಘಟನೆಗೆ ನೇಮಕಾತಿ ಮಾಡುತ್ತಿದ್ದರು. ಮೂಲಭೂತವಾದಿಗಳನ್ನು ಮನ ಪರಿವರ್ತನೆ ಮಾಡಿ ಹಣಕಾಸಿನ ನೆರವು ನೀಡಿ ಸಿರಿಯಾಗೆ ಕಳುಹಿಸಿ ಐಸಿಸ್‌ ತರಬೇತಿ ಕೊಡಿಸುತ್ತಿದ್ದರು ಎಂದು ದೋಷಾರೋಪ ಪಟ್ಟಿಸಲ್ಲಿಸಲಾಗಿದೆ.

ಕಳೆದ ವರ್ಷ ಆ.17ರಂದು ಬೆಂಗಳೂರು ಮೂಲದ ನೇತ್ರ ವೈದ್ಯ ಅಬ್ದುರ್‌ ರೆಹಮಾನ್‌ ಐಸಿಸ್‌ ಜತೆ ಸಂಪರ್ಕ ಹೊಂದಿದ್ದ ಆರೋಪದ ಮೇರೆಗೆ ಎನ್‌ಐಗೆ ಸಿಕ್ಕಿ ಬಿದ್ದಿದ್ದ. ವೈದ್ಯ ಅಬ್ದುರ್‌ ರೆಹಮಾನ್‌, ಅಹ್ಮದ್‌ ಅಬ್ದುಲ್‌ ಮತ್ತು ಇರ್ಫಾನ್‌ ಐಸಿಸ್‌ ಉಗ್ರರನ್ನು ನೇಮಕ ಮಾಡುವ ತಂಡದಲ್ಲಿದ್ದರು. ವೈದ್ಯ ಕೊಟ್ಟಮಾಹಿತಿ ಮೇರೆಗೆ ಅಹ್ಮದ್‌ ಅಬ್ದುಲ್‌ ಮತ್ತು ಇರ್ಫಾನ್‌ ನಾಸೀರ್‌ ಕೂಡ ಸಿಕ್ಕಿ ಬಿದ್ದಿದ್ದರು.
 

PREV
click me!

Recommended Stories

ಅಧಿವೇಶನದ ಮೊದಲ ದಿನವೇ ಕೇಬಲ್‌ ಆಪರೇಟರ್‌ಗಳಿಗೆ ಸಿಹಿಸುದ್ದಿ ನೀಡಿದ ಇಂಧನ ಸಚಿವ ಕೆಜೆ ಜಾರ್ಜ್‌!
ಕೊಪ್ಪಳ: ಹಸೆಮಣೆ ಏರಬೇಕಿದ್ದ ಜೋಡಿ ಮಸಣಕ್ಕೆ - ಪ್ರಿ-ವೆಡ್ಡಿಂಗ್ ಶೂಟಿಂಗ್ ಮುಗಿಸಿ ವಾಪಸಾಗುವಾಗ ಭೀಕರ ದುರಂತ!