ಹಾವೇರಿ ಶಿಕ್ಷಕರಿಗೆ ವಿದ್ಯಾರ್ಥಿಗಳನ್ನು ಎಬ್ಬಿಸುವ ಕೆಲಸ!| ನಿತ್ಯ ಬೆಳಕ್ಕೆ 4ಕ್ಕೇ ಎದ್ದು ಪೋಷಕರಿಗೆ ಕರೆ| ಮಕ್ಕಳನ್ನು ಏಳಿಸಿ ಓದಿಸಲು ಸೂಚನೆ| ಮಕ್ಕಳೆದುರು ಟೀವಿ ನೋಡದಂತೆ ಮನವೊಲಿಕೆ| ಫಲಿತಾಂಶದಲ್ಲಿ ರಾಜ್ಯದ ಟಾಪ್ 10ರೊಳಗೆ ಸ್ಥಾನ ಪಡೆಯಲು ಶಿಕ್ಷಕರ ಕಸರತ್ತು| ಮಕ್ಕಳ ಮನೆಗೆ ಹಠಾತ್ ಭೇಟಿ ನೀಡಿ ತಪಾಸಣೆ
ನಾರಾಯಣ ಹೆಗಡೆ
ಹಾವೇರಿ[ಜ.13]: ಎಸ್ಸೆಸ್ಸೆಲ್ಸಿ ಮಕ್ಕಳಿಗಿಂತಲೂ ಮೊದಲು ಏಳುವ ಪೋಷಕರು, ಪೋಷಕರನ್ನು ಎಬ್ಬಿಸೋದು ಶಿಕ್ಷಕರು!
ಇಂಥದ್ದೊಂದು ವಿಶೇಷ ಕಸರತ್ತು ನಡೆಯುತ್ತಿರುವುದು ಹಾವೇರಿ ಜಿಲ್ಲೆಯಲ್ಲಿ. ಕಳೆದ 15 ದಿನಗಳಿಂದ ಜಿಲ್ಲೆಯ ಕೆಲವೆಡೆ ಮುಂಜಾನೆ 4 ಗಂಟೆಗೆ ಏಳುವ ಸರ್ಕಾರಿ ಪೌಢಶಾಲೆ ಶಿಕ್ಷಕರು ನಂತರ ಪೋಷಕರನ್ನೂ ಎಬ್ಬಿಸಿ ಎಸ್ಸೆಸ್ಸೆಲ್ಸಿ ಮಕ್ಕಳು ಓದಿಗೆ ಕೂರುವಂತೆ ನೋಡಿಕೊಳ್ಳುತ್ತಿದ್ದಾರೆ. ಜತೆಗೆ, ಎಸ್ಸೆಸ್ಸೆಲ್ಸಿ ಪರೀಕ್ಷೆ ಮುಗಿಯುವವರೆಗೆ ಮಕ್ಕಳ ಮುಂದೆ ಟೀವಿ ನೋಡದಂತೆ ಪೋಷಕರ ಮನವೊಲಿಸಿದ್ದಾರೆ. ಇನ್ನೆರಡು ತಿಂಗಳಲ್ಲಿ ಎಸ್ಸೆಸ್ಸೆಲ್ಸಿ ಅಂತಿಮ ಪರೀಕ್ಷೆ ಶುರುವಾಗಲಿದೆ. ಹೇಗಾದರೂ ಮಾಡಿ ಮಕ್ಕಳು ಉತ್ತಮದರ್ಜೆಯಲ್ಲಿ ಪಾಸಾಗಬೇಕು, ಪೋಷಕರು, ಶಾಲೆ, ಜಿಲ್ಲೆಗೆ ಹೆಸರು ತಂದುಕೊಡಬೇಕು ಎಂಬ ಏಕೈಕ ಉದ್ದೇಶದಿಂದ ಜಿಲ್ಲೆಯ ಸರ್ಕಾರಿ ಶಾಲೆ ಶಿಕ್ಷಕರು ಸ್ವತಃ ನಿದ್ದೆಗೆಟ್ಟು, ಮಕ್ಕಳು ಹಾಗೂ ಪೋಷಕರ ನಿದ್ದೆ ಬಿಡಿಸಿ ಇಂಥದ್ದೊಂದು ಪ್ರಯತ್ನ ಆರಂಭಿಸಿದ್ದಾರೆ.
SSLC, PUC ವಿದ್ಯಾರ್ಥಿಗಳಿಗೆ 10 ಗ್ರಾಂ ಚಿನ್ನದ ಸರ ಕೊಡುಗೆ
ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ರಾಜ್ಯದಲ್ಲೇ ಟಾಪ್ 15ರೊಳಗೆ ಸ್ಥಾನ ಪಡೆಯುತ್ತಿದ್ದ ಹಾವೇರಿ ಜಿಲ್ಲೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಫಲಿತಾಂಶದಲ್ಲಿ ಹಿಂದೆ ಬಿದ್ದಿದೆ. ಶೇಕಡಾವಾರು ಫಲಿತಾಂಶದಲ್ಲಿ ಸುಧಾರಣೆ ಕಂಡಿದ್ದರೂ, ರಾರಯಂಕಿಂಗ್‌ನಲ್ಲಿ ನಿರೀಕ್ಷಿತ ಪ್ರಗತಿ ಕಾಣುತ್ತಿಲ್ಲ. 2017ರಲ್ಲಿ 26ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದ ಜಿಲ್ಲೆ, 2018ರಲ್ಲಿ 23ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. 2019ರಲ್ಲಿ 19ನೇ ಸ್ಥಾನಕ್ಕೇರಿತ್ತು. ಈ ಹಿನ್ನೆಲೆಯಲ್ಲಿ ಹೇಗಾದರೂ ಮಾಡಿ ಈ ವರ್ಷ ಅಗ್ರ 10ರೊಳಗೆ ಸ್ಥಾನ ಪಡೆಯಲೇಬೇಕೆಂದು ಪಣತೊಟ್ಟಿರುವ ಜಿಲ್ಲಾ ಶಿಕ್ಷಣ ಇಲಾಖೆ ಇದಕ್ಕಾಗಿ ಸರ್ವರೀತಿಯ ಪ್ರಯತ್ನ ನಡೆಸುತ್ತಿದೆ. ಶಿಕ್ಷಣ ಇಲಾಖೆಯ ಈ ಪ್ರಯತ್ನಕ್ಕೆ ಶಿಕ್ಷಕರು, ಪೋಷಕರು ಸಾಥ್ ನೀಡುತ್ತಿದ್ದಾರೆ.
ಈ ವರ್ಷ ಮಾ.27ರಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆ ಆರಂಭಗೊಳ್ಳಲಿದ್ದು, ಅಂತಿಮ ತಯಾರಿಗೆ ಹೆಚ್ಚು ದಿನ ಉಳಿದಿಲ್ಲ. ಈ ಅವಧಿಯಲ್ಲಿ ಸರಣಿ ಪರೀಕ್ಷೆ, ಪೂರ್ವಭಾವಿ ಪರೀಕ್ಷೆ ನಡೆಸುವ ಜತೆಗೆ ಪ್ರತಿ ವಿದ್ಯಾರ್ಥಿಯ ಓದಿನ ಬಗ್ಗೆಯೂ ಶಿಕ್ಷಕರು ಕಾಳಜಿ ವಹಿಸುತ್ತಿದ್ದಾರೆ. ಕೆಲ ಸರ್ಕಾರಿ ಶಾಲೆಗಳಲ್ಲಿ ಸ್ವಯಂ ಪ್ರೇರಿತರಾಗಿ ಶಿಕ್ಷಕರೇ ಮಕ್ಕಳ ಓದಿನ ಬಗ್ಗೆ ಕಾಳಜಿ ವಹಿಸುತ್ತಿದ್ದು, ಪೋಷಕರು ಮತ್ತು ವಿದ್ಯಾರ್ಥಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಫಲಿತಾಂಶ ಸುಧಾರಣೆಗೆ ಶ್ರಮಿಸುತ್ತಿದ್ದಾರೆ.
ಪೋಷಕರನ್ನು ಎಬ್ಬಿಸಿ ಸುಮ್ಮನಾಗಲ್ಲ:
ಮುಂಜಾನೆ ಸ್ವತಃ 4 ಗಂಟೆಗೇ ಏಳುವ ಶಿಕ್ಷಕರು ನಂತರ ಪೋಷಕರನ್ನು ಎಬ್ಬಿಸಿ ತಮ್ಮ ಜವಾಬ್ದಾರಿ ಮುಗಿಯಿತು ಎಂದು ಸುಮ್ಮನಾಗುವುದಿಲ್ಲ. ಮತ್ತೆ ಒಂದು ತಾಸು ಬಿಟ್ಟು ಕರೆ ಮಾಡಿ ವಿದ್ಯಾರ್ಥಿಗಳು ಎದ್ದಿದ್ದಾರಾ? ಅಭ್ಯಾಸ ನಡೆಸುತ್ತಿದ್ದಾರಾ? ಎಂಬುದನ್ನು ಖಚಿತ ಪಡಿಸಿಕೊಳ್ಳುತ್ತಿದ್ದಾರೆ. ಈ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳೂ ಉತ್ತಮ ದರ್ಜೆಯಲ್ಲಿ ಪಾಸಾಗಬೇಕೆಂಬ ಪ್ರಯತ್ನ ನಡೆಸುತ್ತಿದ್ದಾರೆ.
ವಿಶೇಷ ತರಗತಿ, ಸಂಪನ್ಮೂಲ ಶಿಕ್ಷಕರಿಂದ ಪಾಠ ಇನ್ನಿತರ ಸಾಮಾನ್ಯ ಉಪಕ್ರಮಗಳೊಂದಿಗೆ ವಿದ್ಯಾರ್ಥಿಗಳ ಮನೆಗೆ ರಾತ್ರಿ ವೇಳೆ ಹೋಗಿ ಅಭ್ಯಾಸ ಮಾಡುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ವಿಶೇಷ ಪ್ರಯತ್ನವನ್ನೂ ಕೆಲವೆಡೆ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳ ಕಲಿಕಾ ಮಟ್ಟದ ಆಧಾರದಲ್ಲಿ ಉತ್ತಮ, ಸಾಧಾರಣ ಮತ್ತು ಕಲಿಕೆಯಲ್ಲಿ ಹಿಂದುಳಿದವರು ಎಂಬ ವಿಭಾಗ ಮಾಡಿಕೊಂಡು ಪ್ರತಿಯೊಂದು ಮಗುವಿನ ಬಗ್ಗೆಯೂ ವಿಶೇಷ ನಿಗಾ ವಹಿಸುತ್ತಿದ್ದಾರೆ.
ಕೊಪ್ಪಳ: SSLC ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯಿಂದ ವಿನೂತನ ಕಾರ್ಯಕ್ರಮ
ಅನಿರೀಕ್ಷಿತ ಭೇಟಿ:
ಜಿಲ್ಲೆಯ ಬಹುತೇಕ ಶಾಲೆಗಳಲ್ಲಿ ಕಳೆದೆರಡು ತಿಂಗಳಿಂದ ಬೆಳಗ್ಗೆ ಮತ್ತು ಸಂಜೆ ಹೆಚ್ಚುವರಿ ತರಗತಿ ತೆಗೆದುಕೊಳ್ಳಲಾಗುತ್ತಿದೆ. ಪಾಲಕರ ಸಭೆ, ತಾಯಂದಿರ ಸಭೆಗಳನ್ನು ಪ್ರತ್ಯೇಕವಾಗಿ ನಡೆಸಿ ಮಕ್ಕಳ ಕಲಿಕಾ ಪ್ರಗತಿ ಬಗ್ಗೆ ಚರ್ಚಿಸಲಾಗಿದೆ. ಮಕ್ಕಳ ಮನೆಗೆ ರಾತ್ರಿ ವೇಳೆ ಅನಿರೀಕ್ಷಿತ ಭೇಟಿ ನೀಡಿ ಪರಿಶೀಲಿಸಲಾಗುತ್ತಿದೆ. ಭಾನುವಾರವೂ ಸೇರಿ ಎಲ್ಲ ದಿನಗಳಂದು ತರಗತಿ ನಡೆಸಲಾಗಿದೆ. ಜಯಂತಿ, ಸ್ಥಳೀಯ ರಜೆಗಳಂದೂ ವಿದ್ಯಾರ್ಥಿಗಳಿಗೆ ತರಗತಿ ನಡೆಸಲಾಗಿದೆ.