ಆಸ್ಪತ್ರೆಗಳ ಅಮಾನವೀಯತೆಗೆ ಮಗು ಬಲಿ! ಪ್ರಪಂಚ ನೋಡುವ ಮುನ್ನ ಕಣ್ಮುಚ್ಚಿತು ಪುಟ್ಟ ಹಸುಗೂಸು

By Kannadaprabha News  |  First Published Jul 21, 2020, 7:25 AM IST

ಸತತ ಎಂಟು ಗಂಟೆಗಳ ಕಾಲ ಹೆರಿಗೆ ನೋವಿನಿಂದ ಬಳಲುತ್ತಾ ಆಸ್ಪತ್ರೆಗಳಿಗೆ ಸುತ್ತಾಡಿದರೂ ದಾಖಲು ಮಾಡಿಕೊಳ್ಳದ ಪರಿಣಾಮ ಪ್ರಪಂಚವನ್ನು ನೋಡಬೇಕಾಗಿದ್ದ ಕಂದಮ್ಮ ಜೀವ ಬಿಟ್ಟಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ಸೋಮವಾರ ನಡೆದಿದೆ.


ಬೆಂಗಳೂರು(ಜು.21): ಸತತ ಎಂಟು ಗಂಟೆಗಳ ಕಾಲ ಹೆರಿಗೆ ನೋವಿನಿಂದ ಬಳಲುತ್ತಾ ಆಸ್ಪತ್ರೆಗಳಿಗೆ ಸುತ್ತಾಡಿದರೂ ದಾಖಲು ಮಾಡಿಕೊಳ್ಳದ ಪರಿಣಾಮ ಪ್ರಪಂಚವನ್ನು ನೋಡಬೇಕಾಗಿದ್ದ ಕಂದಮ್ಮ ಜೀವ ಬಿಟ್ಟಿರುವ ಅಮಾನವೀಯ ಘಟನೆ ಬೆಂಗಳೂರಿನಲ್ಲಿ ಸೋಮವಾರ ನಡೆದಿದೆ.

‘ಕೊರೋನಾ ಪರೀಕ್ಷೆ ವರದಿ ನೀಡಬೇಕು, ಹಾಸಿಗೆ ಖಾಲಿ ಇಲ್ಲ. ವೈದ್ಯರು ಇಲ್ಲ ಎಂದು ಹೇಳಿ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲು ನಿರಾಕರಿಸಿದ್ದರಿಂದ ಮಗು ಗರ್ಭದಲ್ಲಿಯೇ ಸಾವನ್ನಪ್ಪಿತು’ ಎಂದು ಮಹಿಳೆಯರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ, ಆದರೆ ಆಸ್ಪತ್ರೆಯ ಮುಖ್ಯಸ್ಥರು ಗರ್ಭದಲ್ಲೇ ನಾಲ್ಕು ದಿನದಿಂದ ಹಿಂದೆಯೇ ಮೃತಪಟ್ಟಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

Tap to resize

Latest Videos

ಏನಿದು ಘಟನೆ?:

ಶ್ರೀರಾಂಪುರದ ನಿವಾಸಿ ನಿವೇದಿತಾ (23) ಅವರು ಆಟೋ ರಿಕ್ಷಾದಲ್ಲಿ ಭಾನುವಾರ ತಡರಾತ್ರಿ 2.30ರಿಂದ ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆ, ವಾಣಿವಿಲಾಸ ಆಸ್ಪತ್ರೆ ಮತ್ತು ಶ್ರೀರಾಮಪುರ ಬಿಬಿಎಂಪಿ ಆಸ್ಪತ್ರೆಗೆ ತಿರುಗಾಡಿದ್ದಾರೆ. ಎಲ್ಲಿಯೂ ಕೂಡಾ ಹಾಸಿಗೆ, ವೈದ್ಯರಿಲ್ಲ ಎಂಬ ಕಾರಣ ನೀಡಿ ದಾಖಲು ಮಾಡಿಕೊಳ್ಳಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಪುನಃ ಬೆಳಗ್ಗೆ 9ಕ್ಕೆ ಮತ್ತೆ ಕೆ.ಸಿ.ಜನರಲ್‌ ಆಸ್ಪತ್ರೆಗೆ ವಾಪಸ್‌ ಬಂದ ವೇಳೆ ಅಟೋ ರಿಕ್ಷಾದಲ್ಲಿ ಹೆರಿಗೆಯಾಗಿದೆ. ಆದರೆ ಗರ್ಭದಲ್ಲಿ ಮಗು ಮೃತಪಟ್ಟಿತ್ತು.

ಆತಂಕದ ನಡುವೆ ಶುಭಸುದ್ದಿ: ಕರ್ನಾಟಕದಲ್ಲಿ ಶೇಕಡ ಸೋಂಕು ಇಳಿಮುಖ!

ಗರ್ಭಿಣಿ ಸಹೋದರ ಮಾತನಾಡಿ, ‘ರಾತ್ರಿ ಮೂರು ಗಂಟೆಗೆ ಕೆ.ಸಿ.ಜನರಲ್‌ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಕೊರೋನಾ ಪರೀಕ್ಷೆ ಮಾಡಬೇಕು ಎಂದು ತಿಳಿಸಿ ದಾಖಲು ಮಾಡಿಕೊಳ್ಳಲು ನಿರಾಕರಿಸಿದರು. ಹೀಗಾಗಿ ವಾಣಿವಿಲಾಸ ಆಸ್ಪತ್ರೆಗೆ ಕರೆದುಕೊಂಡು ಅದರೆ ಅಲ್ಲಿ ಕೇವಲ ಕೋರೊನಾ ರೋಗಿಗಳಿಗೆ ಮಾತ್ರ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿ ವಾಪಸು ಕಳುಹಿಸಿದರು. ಅಲ್ಲಿಂದ ಶ್ರೀರಾಮಪುರದ ಸರ್ಕಾರಿ ಆಸ್ಪತ್ರೆಗೆ ಬಂದು ವೈದ್ಯರಿಗಾಗಿ ಬೆಳಗ್ಗೆಯವರೆಗೂ ಕಾಯಬೇಕಾಗಿತು. ಈ ವೇಳೆಗಾಗಲೆ ಹೆರಿಗೆ ನೋವು ಹೆಚ್ಚಾಗಿತ್ತು. ನೋವು ನೋಡಲಾರದೆ ಕೆ.ಸಿ.ಜನರಲ್‌ ಆಸ್ಪತ್ರೆಗೆ ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಹೆರಿಗೆಯಾದರೂ ಮಗು ತೀರಿಕೊಂಡಿತ್ತು’ ಎಂದರು.

4 ದಿನ ಹಿಂದೆಯೇ ಗರ್ಭದಲ್ಲೇ ಮಗು ಸಾವು: ವೈದ್ಯರ ಸ್ಪಷ್ಟನೆ

ಘಟನೆಗೆ ಸಂಬಂಧಿಸಿದಂತೆ ‘ಕನ್ನಡಪ್ರಭ’ ಜೊತೆ ಮಾತನಾಡಿರುವ ಮಲ್ಲೇಶ್ವರದ ಕೆ.ಸಿ.ಜನರಲ್‌ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ವೆಂಕಟೇಶಯ್ಯ, ರಾತ್ರಿ ಸುಮಾರು 2 ಗಂಟೆಗೆ ಮಹಿಳೆ ಆಸ್ಪತ್ರೆಗೆ ಬಂದಿಂದ್ದಾರೆ. ತಕ್ಷಣ ಪರಿಶೀಲಿಸಿದ ವೈದ್ಯರು ಕಳೆದ ನಾಲ್ಕು ದಿನಗಳ ಹಿಂದೆ ಮಗು ಮೃತ ಪಟ್ಟಿದೆ. ಹಾಗಾಗಿ ತಕ್ಷಣ ಮಗು ತೆಗೆಯಬೇಕು ಎಂದು ಹೇಳಿದ್ದಾರೆ. ಇದನ್ನು ನಂಬದ ಮಹಿಳೆ ಕುಟುಂಬಸ್ಥರು, ಬೇರೆ ಆಸ್ಪತ್ರೆಗಳಲ್ಲಿ ಪರೀಕ್ಷೆ ಮಾಡಿಸುತ್ತೇವೆ ಎಂದು ಕರೆದುಕೊಂಡು ಹೋಗಿದ್ದಾರೆ. ಆದರೆ ಎಲ್ಲಿಯೂ ದಾಖಲಿಸಿಕೊಂಡಿಲ್ಲ. ಸೋಮವಾರ ನಸುಕಿನ ಜಾವ ಮತ್ತೆ ನಮ್ಮ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ. ಮಗುವಿನ ತಲೆ ಗರ್ಭಕೋಶದಿಂದ ಸ್ವಲ್ಪ ಹೊರಗೆ ಬಂದಿತ್ತು. ಸ್ವಲ್ಪ ಕೊಳೆತಿತ್ತು. ಮಗುವನ್ನು ಹೊರಗೆ ತೆಗೆಯಲಾಗಿದೆ. ತಾಯಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಆರೋಗ್ಯವಾಗಿದ್ದಾರೆ. ಆಸ್ಪತ್ರೆಯ ಸಿಬ್ಬಂದಿ ಯಾವುದೇ ನಿರ್ಲಕ್ಷ್ಯ ವಹಿಸಿಲ್ಲ ಎಂದು ಸ್ಪಷ್ಟಪಡಿಸಿದರು.

ಸರ್ಕಾರಕ್ಕೆ ಸಿದ್ದು ತರಾಟೆ

ಘಟನೆ ಸಂಬಂಧ ತೀವ್ರ ಆಸಮಾಧಾನ ವ್ಯಕ್ತಪಡಿಸಿರುವ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಗರ್ಭಿಣಿಗೆ ಚಿಕಿತ್ಸೆ ನೀಡದಿರುವ ಆಸ್ಪತ್ರೆ ಹಾಗೂ ಸರ್ಕಾರದ ವಿರುದ್ಧ ಸರಣಿ ಟ್ವೀಟ್‌ ಹಾಗೂ ವಿಡಿಯೋ ಬಿಡುಗಡೆ ಮಾಡುವ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

‘ರಾಜ್ಯದಲ್ಲಿ ಕೊರೋನಾ ಸೋಂಕಿತರಿಗಿಂತ ಹೆಚ್ಚು ಬೇರೆ ಕಾಯಿಲೆಯ ರೋಗಿಗಳು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸಿಗದೆ ಸಾಯುತ್ತಿದ್ದಾರೆ. ಮುಖ್ಯಮತ್ರಿಯವರೇ, ಚಿಕಿತ್ಸೆ ನಿರಾಕರಿಸಿರುವ ಖಾಸಗಿ ಆಸ್ಪತ್ರೆಗಳ ಪರವಾನಿಗೆಯನ್ನು ರದ್ದು ಮಾಡುವ ಕಠಿಣ ಕ್ರಮ ಕೈಗೊಳ್ಳಿ, ನಿಮ್ಮ ಹುಸಿ ಬೆದರಿಕೆಯಿಂದ ಅವರು ಜಗ್ಗುವವರಲ್ಲ. ಹೆರಿಗೆಗಾಗಿ ಬೆಂಗಳೂರಿನ ಆಸ್ಪತ್ರೆಗಳೆಲ್ಲ ಸುತ್ತಾಡಿ ಗರ್ಭಿಣಿಯೊಬ್ಬರಿಗೆ ಎಲ್ಲಿಯೂ ಸೇರಿಸಿಕೊಳ್ಳದೆ ಇದ್ದಾಗ ಕೊನೆಗೆ ಆಟೋ ರಿಕ್ಷಾದಲ್ಲಿಯೇ ಹಡೆದ ಪರಿಣಾಮ ಹಸುಗೂಸನ್ನು ಕಳೆದುಕೊಳ್ಳಬೇಕಾಯಿತು. ಮುಖ್ಯಮಂತ್ರಿ ಅವರೇ ಮೊದಲು ಈ ನತದೃಷ್ಟತಾಯಿಯ ಮಗುವಿನ ಕೊಲೆಗಡುಕ ಆಸ್ಪತ್ರೆಗಳ ಮೇಲೆ ಕ್ರಮಕೈಗೊಳ್ಳಿ’ ಎಂದು ವಿಡಿಯೋ ಹರಿಬಿಟ್ಟಿದ್ದಾರೆ.

click me!