ಬೆಂಗಳೂರಿಗೆ ಬಂತು BMTC 'ಚಕ್ರ': ಲಕ್ಷಾಂತರ ಮಂದಿ ವರ್ಷಗಳ ಕನಸು ನನಸಾಯ್ತು- ರೂಟ್​ ಹೀಗಿದೆ

Published : Jun 11, 2026, 12:29 PM IST
BMTC Chakra Bus

ಸಾರಾಂಶ

ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC)ಯು ಜಿಗಣಿ, ಆನೇಕಲ್ ಮತ್ತು ಚಂದಾಪುರ ಪ್ರದೇಶದ ನಿವಾಸಿಗಳ ಅನುಕೂಲಕ್ಕಾಗಿ 'ಚಕ್ರ-3' ಎಂಬ ಹೊಸ ವೃತ್ತಾಕಾರದ ಬಸ್ ಸೇವೆಯನ್ನು ಆರಂಭಿಸುತ್ತಿದೆ. ಇದೇ 15ರಿಂದ ಆರಂಭವಾಗಲಿರುವ ಈ ಸೇವೆಯು, 4 ಬಸ್‌ಗಳೊಂದಿಗೆ ದಿನಕ್ಕೆ 28 ಟ್ರಿಪ್‌ಗಳನ್ನು ನಡೆಸಲಿದ್ದು, ಈ ಭಾಗದ ಲಕ್ಷಾಂತರ ಜನರ ಪ್ರಯಾಣದ ಸಮಸ್ಯೆಗೆ ಪರಿಹಾರ ನೀಡುವ ನಿರೀಕ್ಷೆಯಿದೆ.

ಬೆಂಗಳೂರಿನಲ್ಲಿ ಎಷ್ಟೇ ನಮ್ಮ ಮೆಟ್ರೋ ಇದ್ದರೂ, ಪ್ರತಿ ಮನೆಯಲ್ಲಿಯೂ ಕಾರು, ಬೈಕುಗಳು ಇದ್ದರೂ, ರಸ್ತೆ ವಿಸ್ತರಣೆ, ಫ್ಲೈ ಓವರ್​, ಅಂಡರ್​ಪಾಸ್​ ಮಾಡಿದ್ರೂ, ಪ್ರತಿನಿತ್ಯ ಉದ್ಯೋಗ ಅರಸಿ ಬರುವವರ ಮುಂದೆ ಇವೆಲ್ಲವೂ ಠುಸ್​ ಆಗುವುದು ಇದೆ. ಬೆಂಗಳೂರು ಬೆಳೆಯುತ್ತಿದ್ದಂತೆಯೇ ಕೆಲವು ಕಡೆಗಳಲ್ಲಿ ಸರಿಯಾದ ವಾಹನ ಸೌಕರ್ಯಗಳೂ ಇಲ್ಲದೇ ಪ್ರಯಾಣಿಕರು ಪರದಾಡುವ ಸ್ಥಿತಿ ಇದೆ. ಇದೀಗ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಚಕ್ರ ಎನ್ನುವ ಹೊಸ ಬಸ್​ ಅನ್ನು ರಸ್ತೆಗೆ ಬಿಡಲಿದೆ. ಇದೇ 15ರಂದು ಈ ಹೊಸ ಬಸ್​ ಸಂಚಾರ ಆರಂಭವಾಗಲಿದ್ದು, ಲಕ್ಷಾಂತರ ಜನರ ಬಹಳ ವರ್ಷಗಳ ಕನಸು ಈಡೇರಲಿದೆ.

ಎಲ್ಲಿಂದ ಎಲ್ಲಿ ರೂಟ್​?

ಈ ಬಸ್​ ರೂಟ್​ ಜಿಗಣಿ, ಆನೇಕಲ್ ಮತ್ತು ಚಂದಾಪುರ ಪ್ರದೇಶದ ನಿವಾಸಿಗಳಿಗೆ ವರದಾನವಾಗಲಿದೆ. ಇದಾಗಲೇ ನಮ್ಮಮೆಟ್ರೋ ಎಲಕ್ಟ್ರಾನಿಕ್​ ಸಿಟಿಯ ಸಮೀಪ ವಿಸ್ತರಣೆ ಆಗಿದ್ದರೂ, ಬಸ್​ಗಾಗಿ ಲಕ್ಷಾಂತರಮಂದಿ ಕಾಯುತ್ತಿದ್ದರು. ಅವರ ಕನಡು ಈಗ ಈಡೇರಿದೆ. ತನ್ನ ಹೊಸ CHAKRA-3 ವೃತ್ತಾಕಾರದ ಸೇವೆ ಆರಂಭ ಆಗಲಿದೆ. 4 ಬಸ್‌ಗಳು ಈ ಮಾರ್ಗದಲ್ಲಿ ಕಾರ್ಯನಿರ್ವಹಿಸಲಿದ್ದು ಬೆಳಗ್ಗೆ 6:00 ರಿಂದ ಸಂಜೆ 7:10 ರವರೆಗೆ ದಿನಕ್ಕೆ 28 ಟ್ರಿಪ್‌ಗಳು ಸಂಚರಿಸಲಿವೆ. ಬಸ್ಸು, ಜಿಗಣಿ APC ಸರ್ಕಲ್‌ನಿಂದ ಹೊರಟು ಅದೇ ಸ್ಥಳಕ್ಕೆ (Place) ಮರಳುವ ಈ ವೃತ್ತಾಕಾರ ಮಾರ್ಗ ಈ ಪ್ರದೇಶದ ಸಾರಿಗೆ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಲಿದೆ. CHAKRA-3 ಬಸ್ ಜಿಗಣಿ APC ಸರ್ಕಲ್‌ನಿಂದ ಹೊರಟು ಹರಗದ್ದೆ, ಇಂದ್ಲುವಾಡಿ ಕ್ರಾಸ್, ಆನೇಕಲ್, ಕಾರ್ಪುರ್ ಗೇಟ್, ಚಂದಾಪುರ ಮತ್ತು ರುಪೇಶ್ ಹೋಟೆಲ್ ಮೂಲಕ ಮತ್ತೆ ಜಿಗಣಿಗೆ ಮರಳುತ್ತದೆ.

ಪ್ರತಿ 20-30 ನಿಮಿಷಕ್ಕೊಂದು ಬಸ್

ಪ್ರತಿ 20-30 ನಿಮಿಷಕ್ಕೊಮ್ಮೆ ಬಸ್ ಲಭ್ಯ ಇರುವುದಾಗಿ ಬಿಎಂಟಿಸಿ ಹೇಳಿದೆ. ಸಾಮಾನ್ಯ ನಾನ್-AC ದರದಲ್ಲಿ 6 ರೂಪಾಯಿಗಳಿಂದ ದರ ಆರಂಭವಾಗುತ್ತದೆ. ಜಿಗಣಿಯಿಂದ ಆನೇಕಲ್‌ಗೆ 15-25 ರೂಪಾಯಿ ಮತ್ತು ಚಂದಾಪುರದವರೆಗೆ 20-35 ರೂಪಾಯಿ ಟಿಕೆಟ್​ ಬೆಲೆ ನಿಗದಿ ಮಾಡಲಾಗಿದೆ. 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಉಚಿತ, ಮಕ್ಕಳಿಗೆ ಅರ್ಧ ದರ, ವೃದ್ಧರಿಗೆ ರಿಯಾಯಿತಿ ಮತ್ತು ದಿವ್ಯಾಂಗರಿಗೆ ವಿಶೇಷ ಸೌಲಭ್ಯ ಲಭ್ಯ ಇರುವುದಾಗಿ ಬಿಎಂಟಿಸಿ ಹೇಳಿದೆ.

ಬಸ್‌ನ ವೇಳಾಪಟ್ಟಿ ಹೀಗಿದೆ

ಜಿಗಣಿ ಎಪಿಸಿ ಸರ್ಕಲ್‌ನಿಂದ ಬಸ್ಸುಗಳು ಹೊರಡುವ ದಿನದ ಸಂಪೂರ್ಣ ವೇಳಾಪಟ್ಟಿ ಹೀಗಿದೆ:

ಬೆಳಗ್ಗೆಯ ವೇಳಾಪಟ್ಟಿ: 06:00, 06:30, 07:00, 07:30, 08:00, 08:25, 08:50, 09:15, 09:40, 10:10, 10:50 ಮತ್ತು 11:30 ಕ್ಕೆ ಹೊರಡಲಿವೆ.

ಮಧ್ಯಾಹ್ನದ ವೇಳಾಪಟ್ಟಿ: 12:00, 12:30, 12:55, 01:20, 01:50, 02:15, 02:40, 03:05, 03:30 ಮತ್ತು 03:55 ಕ್ಕೆ

ಸಂಜೆ ಹಾಗೂ ರಾತ್ರಿಯ ವೇಳಾಪಟ್ಟಿ: 04:20, 04:45, 05:10, 05:55, 06:40 ಮತ್ತು ಕೊನೆಯ ಬಸ್ 07:10 ಕ್ಕೆ ಜಿಗಣಿ ಎಪಿಸಿ ಸರ್ಕಲ್‌ನಿಂದ ಹೊರಡುತ್ತದೆ.

 

PREV
Read more Articles on
click me!

Recommended Stories

ಮಾಳವ್ವ ಹೋಟೆಲ್‌ನಲ್ಲಿ ಊಟಕ್ಕಿಲ್ಲ ಲೆಕ್ಕ; ಇವರೇ ಇಲ್ಲಿನ ಜನರಿಗೆ ಅನ್ನಪೂರ್ಣೇಶ್ವರಿ
1978ರ ಸ್ಕೂಲ್ ಮಾರ್ಕ್ಸ್ ಕಾರ್ಡ್ ವೈರಲ್; ವಿಭಿನ್ನ, ವಿಶೇಷತೆಯ ಕೊಪ್ಪಳ ಶಾಲೆಯ ಅಂಕಪಟ್ಟಿ