Latest Videos

ಬೆಂಗ್ಳೂರಲ್ಲಿ ಡೆಂಘೀ ಆರ್ಭಟ: ಲಾರ್ವಾ ನಾಶಕ್ಕೆ ಮನೆ ಮನೆ ತಪಾಸಣೆ..!

By Kannadaprabha NewsFirst Published Jul 2, 2024, 9:22 AM IST
Highlights

ಡೆಂಘೀ ಪ್ರಕರಣಗಳನ್ನು ನಿಯಂತ್ರಿಸಲು ನಗರದ 12.5 ಲಕ್ಷ ಮನೆಗಳಲ್ಲಿ ಲಾರ್ವಾ ಪತ್ತೆಗಾಗಿ ಪ್ರತಿ 15 ದಿನಗಳಿಗೊಮ್ಮೆ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಆಶಾ ಕಾರ್ಯಕರ್ತೆಯರ ಜತೆಗೆ ಎನ್‌ಎಸ್‌ಎಸ್ ಕಾರ್ಯಕರ್ತರು ಹಾಗೂ ನರ್ಸಿಂಗ್ ಕಾಲೇಜು ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು ಎಂದು ತಿಳಿಸಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್

ಬೆಂಗಳೂರು(ಜು.02):  ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡೆಂಘೀ ಪ್ರಕರಣಗಳನ್ನು ನಿಯಂತ್ರಿಸಲು ನಗರದ 12.5 ಲಕ್ಷ ಮನೆಗಳಲ್ಲಿ ಲಾರ್ವಾ ಪತ್ತೆಗಾಗಿ ಪ್ರತಿ 15 ದಿನಗಳಿಗೊಮ್ಮೆ ತಪಾಸಣೆ ನಡೆಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ಆಶಾ ಕಾರ್ಯಕರ್ತೆಯರ ಜತೆಗೆ ಎನ್‌ಎಸ್‌ಎಸ್ ಕಾರ್ಯಕರ್ತರು ಹಾಗೂ ನರ್ಸಿಂಗ್ ಕಾಲೇಜು ಸಿಬ್ಬಂದಿಯನ್ನು ಬಳಸಿಕೊಳ್ಳಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೆಂಘೀ ಪ್ರಕರಣಗಳ ಹೆಚ್ಚಳ ತಡೆಯಲು ಕ್ರಮ ಕೈಗೊಳ್ಳಲಾಗುತ್ತಿದೆ. ನಗರದಲ್ಲಿನ 28 ಲಕ್ಷ ಮನೆಗಳ ಪೈಕಿ 12.5 ಲಕ್ಷ ಮನೆಗಳಲ್ಲಿ ಪ್ರತಿ 15 ದಿನಕ್ಕೊಮ್ಮೆ ಪರಿಶೀಲನೆ ನಡೆಸಲಾಗುವುದು. ಸದ್ಯ ಆಶಾ ಕಾರ್ಯಕರ್ತೆಯರ ತಂಡಗಳನ್ನು ರಚಿಸಲಾಗಿದೆ. ಆದರೆ, ಎಲ್ಲ ಮನೆಗಳನ್ನು ಅವರಿಂದ ಪರಿಶೀಲಿಸಿ ಲಾರ್ವಾ ಪತ್ತೆ ಮಾಡಿ, ನಾಶ ಮಾಡುವುದು ಕಷ್ಟವಾಗುತ್ತಿದೆ. ಹೀಗಾಗಿ ಎನ್‌ಎಸ್‌ಎಸ್‌ ಕಾರ್ಯಕರ್ತರು, ನರ್ಸಿಂಗ್ ಕಾಲೇಜು ಸಿಬ್ಬಂದಿಯನ್ನು ಬಳಸಿಕೊಳ್ಳಲು ನಿರ್ಧರಿಸಲಾಗಿದೆ. 1,500 ತಂಡಗಳನ್ನು ರಚಿಸಿ ಪ್ರತಿದಿನ ಲಕ್ಷಮನೆಗಳ ಆಸುಪಾಸಿನಲ್ಲಿ ಪರಿಶೀಲಿಸುವಂತೆ ಸೂಚಿಸಲಾಗುವುದು ಎಂದರು.

ಬೆಂಗಳೂರು ಜನರೇ ಹುಷಾರ್‌ !ಡೆಂಘೀಗೆ 27 ವರ್ಷದ ಯುವಕ ಬಲಿ, BBMP ಹೆಲ್ತ್ ಆಡಿಟ್‌ನಲ್ಲಿ ಬಯಲು

* ಲಾರ್ವಾ ಪತ್ತೆಗಾಗಿ ಪ್ರತಿ 15 ದಿನಕ್ಕೊಮ್ಮೆ ತಪಾಸಣೆ
* ನಗರದಲ್ಲಿ ಮನೆ ಪರಿಶೀಲನೆಗೆ ಆಶಾ ಕಾರ್ಯಕರ್ತೆಯರ ತಂಡಗಳು ರಚನೆ
* ಆದರೆ ಅವರಿಂದ ಎಲ್ಲ ಮನೆ ಭೇಟಿ ಕಷ್ಟ ಆಗಿರುವ ಹಿನ್ನೆಲೆ
* ಎನ್‌ಎಸ್‌ಎಸ್, ನರ್ಸಿಂಗ್ ಕಾಲೇಜು ಸಿಬ್ಬಂದಿಗೆ ಬುಲಾವ್

ಡೆಂಘೀ ಪ್ರಕರಣಗಳ ಪರೀಕ್ಷೆಗೆ ಸಂಬಂಧಿಸಿದ ಉಪಕರಣಗಳ ಕೊರತೆಯಿಲ್ಲ. ಬಿಬಿಎಂಪಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ 6000 ಪರೀಕ್ಷಾ ಸಾಮಗ್ರಿಗಳಿವೆ. ಜ್ವರದ ಲಕ್ಷಣಗಳಿರುವವರು ಆರೋಗ್ಯ ಕೇಂದ್ರಕ್ಕೆ ಬಂದರೆ ಅವರನ್ನು ಪರೀಕ್ಷೆಗೆ ಒಳ ಪಡಿಸಲಾಗುವುದು. ಜತೆಗೆ ಶೀಘ್ರದಲ್ಲಿ 30 ಸಾವಿರ ಪರೀಕ್ಷಾ ಸಾಮಗ್ರಿ ನೀಡುವುದಾಗಿ ಆರೋಗ್ಯ ಇಲಾಖೆ ತಿಳಿಸಿದೆ ಎಂದರು. 

click me!