ಮಂಗಳೂರು ಕದ್ರಿಯಲ್ಲಿ ಮತ್ತೊಂದು ಉದ್ಯಾನವನಕ್ಕೆ ಸಿದ್ಧತೆ! 3.50ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ, ಇಲ್ಲಿ ಏನೇನಿರಲಿದೆ?

Published : May 10, 2026, 05:38 PM IST
New park in Kadri Mangaluru

ಸಾರಾಂಶ

ಮಂಗಳೂರಿನ ಕದ್ರಿಯಲ್ಲಿ ಕೇಂದ್ರ ಸರ್ಕಾರದ ಅಮೃತ್ ಯೋಜನೆಯಡಿ 3.50 ಕೋಟಿ ರೂ. ವೆಚ್ಚದಲ್ಲಿ ಹೊಸ ಉದ್ಯಾನವನ ನಿರ್ಮಾಣವಾಗಲಿದೆ. ಹಾಲಿ ಉದ್ಯಾನವನದ ಎದುರು ನಿರ್ಮಾಣವಾಗಲಿರುವ ಈ ಪಾರ್ಕ್‌ನಲ್ಲಿ ವಾಕಿಂಗ್ ಪಥ, ಸಣ್ಣ ವೇದಿಕೆ ಹಾಗೂ ಪಾರ್ಕಿಂಗ್ ಸೌಲಭ್ಯಗಳಿರಲಿವೆ. ಅಲ್ಲದೆ, ಹಳೆಯ ಪಾರ್ಕ್‌ನ ನೀರಿನ ಕೊರತೆ ನೀಗಿಸಲು ಎಸ್‌ಟಿಪಿ ನೀರು ಮರುಬಳಕೆ ಯೋಜನೆ ರೂಪಿಸಲಾಗಿದೆ.

ದಕ್ಷಿಣ ಕನ್ನಡ: ಮಂಗಳೂರಿಗೆ ಶಿಖರಪ್ರಾಯವಾಗಿರುವ ಕದ್ರಿಯ ಹಾಲಿ ಉದ್ಯಾನವನದ ಎದುರು ಭಾಗದಲ್ಲೇ ಶೀಘ್ರವೇ ಇನ್ನೊಂದು ದೊಡ್ಡ ಉದ್ಯಾನವನ ನಿರ್ಮಾಣವಾಗಲಿದೆ. ಸುಮಾರು 3.50 ಎಕರೆ ಜಾಗದಲ್ಲಿ ಕೇಂದ್ರ ಸರ್ಕಾರದ ಅಮೃತ್‌ ಯೋಜನೆಯಡಿ 3.50 ಕೋಟಿ ರು. ವೆಚ್ಚದಲ್ಲಿ ಈ ಉದ್ಯಾನವನ ನಿರ್ಮಾಣವಾಗಲಿದೆ. ಕದ್ರಿ ಉದ್ಯಾನವನ ಹೊರತುಪಡಿಸಿದರೆ, ಬೇರೆ ದೊಡ್ಡ ಉದ್ಯಾನವನ ಮಂಗಳೂರಲ್ಲಿ ಇಲ್ಲ. ಉಳಿದಂತೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 10ಕ್ಕೂ ಅಧಿಕ ಸಣ್ಣ ಪಾರ್ಕ್‌ಗಳು ಇವೆ.

ಕದ್ರಿಯಲ್ಲಿರುವ ಹಾಲಿ ಪಾರ್ಕ್‌ನ್ನು ತೋಟಗಾರಿಕಾ ಇಲಾಖೆ ನಿರ್ವಹಿಸುತ್ತಿದೆ. ಒಟ್ಟು 17 ಎಕರೆ ಪೈಕಿ 13 ಎಕರೆ ಪಾರ್ಕ್‌ ಹಾಗೂ 4 ಎಕರೆ ಜಿಂಕೆ ಉದ್ಯಾನವಿದೆ. ಹೆಸರಿಗೆ ಪಾರ್ಕ್‌ ಆದರೂ ಬೇಸಗೆಯಲ್ಲಿ ನಳನಳಿಸುವ ಸಸ್ಯಗಳು ವಿರಳ. ಯಾಕೆಂದರೆ, ಈ ಪಾರ್ಕ್‌ನಲ್ಲಿ ನೀರಿನ ಕೊರತೆ ಇದೆ. ಇದರಿಂದಾಗಿ ಪಾರ್ಕ್‌ ಬಿಸಿಲಿಗೆ ಬಣಗುಡುತ್ತಿರುವಂತೆ ಕಂಡುಬರುತ್ತಿದೆ. ಪಾರ್ಕಿಂಗ್‌ ಕೊರತೆಯಿಂದ ಕದ್ರಿ ಉದ್ಯಾನವನ ರಸ್ತೆಯ ಇಕ್ಕೆಲಗಳಲ್ಲೇ ಪಾರ್ಕ್‌ ಮಾಡಬೇಕಾಗಿದೆ. ಕದ್ರಿ ಪಾರ್ಕ್‌ನಲ್ಲಿ ಬಯಲು ರಂಗ ಮಂದಿರ ಇದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು, ಉತ್ಸವಗಳು ನಡೆಯುತ್ತಿರುತ್ತವೆ.

2ನೇ ಪಾರ್ಕ್‌ ನವೋದ್ಯಾನ:

ಪ್ರಸ್ತಾವಿತ 2ನೇ ಪಾರ್ಕ್‌ನಲ್ಲಿ ಹಾಲಿ ಕದ್ರಿ ಪಾರ್ಕ್‌ನಲ್ಲಿ ಇಲ್ಲದ ಅನೇಕ ಸಂಗತಿಗಳು ಇರಲಿವೆ. ಹೊಸ ಪಾರ್ಕ್‌ನಲ್ಲಿ ಸಣ್ಣ ವೇದಿಕೆ, ಗಾರ್ಡನ್‌, ವಾಕಿಂಗ್‌ ಪಥ ನಿರ್ಮಾಣವಾಗಲಿದೆ. ಅಲ್ಲದೆ ಪಾರ್ಕ್‌ನ ಪ್ರವೇಶ ದ್ವಾರದ ಎರಡೂ ಕಡೆಗಳಲ್ಲಿ ಗರಿಷ್ಠ ವಾಹನಗಳ ನಿಲುಗಡೆಗೆ ಉದ್ದೇಶಿಸಲಾಗಿದೆ.

ಜಿಲ್ಲಾಧಿಕಾರಿ ದರ್ಶನ್‌, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್‌, ಮೂಡಾ ಕಮಿಷನರ್‌ ಮೊಹಮ್ಮದ್‌ ನಝೀರ್‌ ಹಾಗೂ ಪಾಲಿಕೆ ಉಪ ಆಯುಕ್ತ ನರೇಶ್‌ ಶೆಣೈ ಮತ್ತಿತರರು ಪ್ರಸ್ತಾವಿತ ಹೊಸ ಪಾರ್ಕ್‌ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕದ್ರಿ ಪಾರ್ಕ್‌ಗೆ ಎಸ್‌ಟಿಪಿ ನೀರು ಮರು ಬಳಕೆಗೆ ಯೋಜನೆ

ಕದ್ರಿಯ ಹಾಲಿ ಉದ್ಯಾನವನ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಇದನ್ನು ನಿವಾರಿಸಲು ಕದ್ರಿ ಉದ್ಯಾನ ಸಮಿತಿ ಬೆಂದೂರ್‌ವೆಲ್‌ ಎಸ್‌ಟಿಪಿ ನೀರನ್ನು ಮರು ಬಳಕೆ ಮಾಡಲು ಯೋಜನೆ ರೂಪಿಸಿದೆ. ಅಲ್ಲಿಂದ ಶೇ.30ರಷ್ಟು ಮರು ಬಳಕೆಯ ನೀರನ್ನು ಪಂಪ್‌ ಮಾಡಿ ಕದ್ರಿ ಪಾರ್ಕ್‌ ಬಳಿಯ ದೊಡ್ಡ ಟ್ಯಾಂಕ್‌ನಲ್ಲಿ ಸಂಗ್ರಹಿಸುವುದು. 70 ಲಕ್ಷ ಲೀಟರ್‌ ಸಾಮರ್ಥ್ಯದ ಈ ಟ್ಯಾಂಕ್‌ನಿಂದ ಇಡೀ ಕದ್ರಿ ಪಾರ್ಕ್‌ಗೆ ನೀರುಣಿಸಲು ಬಳಸಲು ಉದ್ದೇಶಿಸಲಾಗಿದೆ. ಇದರಿಂದಾಗಿ ಪಾರ್ಕ್‌ಗೆ ನೀರಿನ ಕೊರತೆ ದೂರವಾಗಲಿದೆ.

ಕದ್ರಿ ಪಾರ್ಕ್‌ನ ಎದುರು ಭಾಗದಲ್ಲಿ ಈ ಹಿಂದೆ ಪಾರ್ಕ್‌ ಆಗಿ ಅಭಿವೃದ್ಧಿಪಡಿಸಲಾಗಿತ್ತು. ಅಲ್ಲಿ ಸ್ಕೇಟಿಂಗ್‌ ಜಾಗದ ಬಳಿ ಇನ್ನೊಂದು ಪಾರ್ಕ್‌ನ್ನು ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಹೊಸ ಪಾರ್ಕ್‌ನಲ್ಲಿ ಏನೇನು ಇರಬೇಕು ಎಂಬ ಬಗ್ಗೆ ರೂಪುರೇಷೆ ಹಾಕಿಕೊಳ್ಳಲಾಗಿದೆ. ಈ ಕುರಿತ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಲಾಗಿದೆ.

-ಜಗನ್ನಾಥ ಗಂಭೀರ್‌, ಸದಸ್ಯರು, ಕದ್ರಿ ಉದ್ಯಾನ ಸಮಿತಿ ಕಾರ್ಯಕಾರಿ ಸಮಿತಿ

PREV
Read more Articles on
click me!

Recommended Stories

ಮಂಗಳೂರು ರೈಲು ನಿಲ್ದಾಣದಲ್ಲಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಯುವಕನನ್ನು ಹಿಡಿದ ರೈಲ್ವೆ ಪೊಲೀಸರೇ ಶಾಕ್ ಆದ್ರು!
ಮಲೆ ಮಹದೇಶ್ವರ ಬೆಟ್ಟದಲ್ಲಿ ಚಿರತೆ ದಾಳಿಗೆ ಬೆಂಗಳೂರು ಬಾಲಕ ಬಲಿಯಾಗಲು ಅರಣ್ಯ ಇಲಾಖೆ ನಿರ್ಲಕ್ಷ್ಯವೇ ಕಾರಣ!