ಕ್ರಿಸ್‌ಮಸ್ ರಜೆ ಮುಗಿಸಿ ಕೆಲಸಕ್ಕೆ ಬರುತ್ತಿದ್ದ ಟೆಕ್ಕಿ; ಕಾರು ಮರಕ್ಕೆ ಡಿಕ್ಕಿಯಾಗಿ ಅಪ್ಪ-ಮಗ ಸಾವು

Published : Dec 26, 2025, 01:17 PM IST
Bengaluru Techie Car Accident

ಸಾರಾಂಶ

ಕ್ರಿಸ್‌ಮಸ್ ಹಬ್ಬದ ರಜೆ ಮುಗಿಸಿ ಗೌರಿಬಿದನೂರಿನಿಂದ ಬೆಂಗಳೂರಿಗೆ ಮರಳುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಕುಟುಂಬದ ಕಾರು ಮಾದನಾಯಕನಹಳ್ಳಿ ಬಳಿ ಮರಕ್ಕೆ ಡಿಕ್ಕಿ ಹೊಡೆದಿದೆ. ಈ ಭೀಕರ ಅಪಘಾತದಲ್ಲಿ ಟೆಕ್ಕಿ ಹಾಗೂ ಅವರ ತಂದೆ ಸ್ಥಳದಲ್ಲೇ ಮೃತಪಟ್ಟಿದ್ದು, ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬೆಂಗಳೂರು (ಡಿ.24): ಹಬ್ಬದ ರಜೆ ಕಳೆದು ಹುಟ್ಟೂರಿನಿಂದ ಸಂತೋಷವಾಗಿ ವಾಪಸಾಗುತ್ತಿದ್ದ ಕುಟುಂಬವೊಂದಕ್ಕೆ ವಿಧಿ ಕ್ರೂರವಾಗಿ ಅಟ್ಟಹಾಸ ಮೆರೆದಿದೆ. ಚಾಲಕನ ನಿಯಂತ್ರಣ ತಪ್ಪಿದ ಕಾರು ರಸ್ತೆ ಪಕ್ಕದ ಮರಕ್ಕೆ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಸಾಫ್ಟ್‌ವೇರ್ ಇಂಜಿನಿಯರ್ ಹಾಗೂ ಅವರ ತಂದೆ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ತೋಟಗೆರೆ ಬಳಿ ನಡೆದಿದೆ.

ಘಟನೆಯ ವಿವರ

ಮೃತಪಟ್ಟವರನ್ನು ಬೆಂಗಳೂರಿನ ದಾಸರಹಳ್ಳಿ ನಿವಾಸಿಗಳಾದ ಹರೀಶ್ (39) ಮತ್ತು ಅವರ ತಂದೆ ವೀರಭದ್ರಪ್ಪ (80) ಎಂದು ಗುರುತಿಸಲಾಗಿದೆ. ಹರೀಶ್ ಅವರು ಖಾಸಗಿ ಕಂಪನಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ನಿನ್ನೆ ಕ್ರಿಸ್‌ಮಸ್ ಹಬ್ಬದ ರಜೆ ಇದ್ದ ಹಿನ್ನೆಲೆಯಲ್ಲಿ ಇಡೀ ಕುಟುಂಬ ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರಿನಲ್ಲಿದ್ದ ತಮ್ಮ ಜಮೀನು ನೋಡಿಕೊಳ್ಳಲು ಹುಟ್ಟೂರಿಗೆ ತೆರಳಿತ್ತು.

ಗೌರಿಬಿದನೂರಿನಿಂದ ಕೆಲಸ ಮುಗಿಸಿಕೊಂಡು ವಾಪಸ್ ದಾಸರಹಳ್ಳಿಗೆ ಮರಳುವಾಗ, ರೈಲ್ವೆ ಗೊಲ್ಲಹಳ್ಳಿಯಿಂದ ಹೆಸರಘಟ್ಟ ಮಾರ್ಗವಾಗಿ ಕಾರು ಬರುತ್ತಿತ್ತು. ತೋಟಗೆರೆ ಟರ್ನಿಂಗ್ ಬಳಿ ಬಂದಾಗ ವೇಗವಾಗಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದ ಮರಕ್ಕೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನಜ್ಜುಗುಜ್ಜಾಗಿದ್ದು, ಹರೀಶ್ ಹಾಗೂ ವೀರಭದ್ರಪ್ಪ ಅವರು ಗಂಭೀರ ಗಾಯಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.

ನಾಲ್ವರಿಗೆ ಗಂಭೀರ ಗಾಯ

ಅಪಘಾತದಲ್ಲಿ ಹರೀಶ್ ಅವರ ತಾಯಿ ಗೌರಮ್ಮ (62), ಪತ್ನಿ ಮೈತ್ರಿ (32), ಪುತ್ರಿ ಸಿರಿ (10) ಹಾಗೂ ಸಂಬಂಧಿ ವಂದನಾ (8) ಅವರಿಗೆ ಗಂಭೀರವಾಗಿ ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಹಾಗೂ ಪೊಲೀಸರು ಗಾಯಾಳುಗಳನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಸದ್ಯ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಥಳಕ್ಕೆ ಪೊಲೀಸರ ಭೇಟಿ

ಘಟನೆ ಸಂಭವಿಸಿದ ಕೂಡಲೇ ಮಾದನಾಯಕನಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದೆ. ಸಂಭ್ರಮದಿಂದ ಹಬ್ಬದ ರಜೆ ಮುಗಿಸಿ ಮನೆಗೆ ಮರಳುತ್ತಿದ್ದ ಕುಟುಂಬದಲ್ಲಿ ಸಾವಿನ ಶೋಕ ಕವಿದಿದ್ದು, ದಾಸರಹಳ್ಳಿಯಲ್ಲಿ ಮೌನ ಆವರಿಸಿದೆ. ಈ ಸಂಬಂಧ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

PREV
Read more Articles on
click me!

Recommended Stories

'ಮದುವೆ ಆಗಿ ತಿಂಗ್ಳಾದ್ರೂ ಅವಳನ್ನ ಟಚ್‌ ಕೂಡ ಮಾಡಿಲ್ಲ, ಆತ ಗಂಡಸೇ ಅಲ್ಲ..' ಸೂರಜ್‌ ವಿರುದ್ಧ ಗಾನವಿ ಕುಟುಂಬಸ್ಥರ ಆರೋಪ
ಮಂಡ್ಯ ಜಿಲ್ಲೆಯಲ್ಲಿ ಸಿದ್ಧಪಡಿಸಿದ ಕೈಗಾರಿಕಾ ಭೂಮಿ ಇಲ್ಲ: ಸಚಿವ ಎಂ.ಬಿ.ಪಾಟೀಲ್