
ಬೆಂಗಳೂರು (ಡಿ.26): ಮದುವೆಯಾಗಿ ಒಂದೂವರೆ ತಿಂಗಳಿಗೆ ನವವಧು ಗಾನವಿ ಆತ್ಮಹತ್ಯೆ ಪ್ರಕರಣ ಭಾರೀ ಸುದ್ದುಯಾಗುತ್ತಿದೆ. ಪ್ರಸ್ತುತ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಿಕೊಡಲಾಗಿದ್ದು, ಆಸ್ಪತ್ರೆ ಬಳಿ ಕುಟುಂಬಸ್ಥರು, ಸಂಬಂಧಿಕರು ಆರೋಪಿಗಳನ್ನು ಬಂಧಿಸುವಂತೆ ಪ್ರತಿಭಟನೆ ಮಾಡಿದ್ದಾರೆ. ಗಾನವಿಯ ಪತಿ ಸೂರಜ್ ಆತನ ಅಣ್ಣ ಸಂಜಯ್ ಹಾಗೂ ತಾಯಿ ಜಯಂತಿಯನ್ನು ತಕ್ಷಣವೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಇದರ ನಡುವೆ ಗಾನವಿಯ ಪತಿ ನಪುಂಸಕ, ಹಣದಾಹಿ ಕುಟುಂಬ ಎಂದು ಗಾನವಿಯ ಕುಟುಂಬಸ್ಥರು ಆರೋಪಿಸಿದ್ದಾರೆ.
ಗಾನವಿಯ ದೊಡ್ಡಮ್ಮ ಸಾವಿನ ಬಗ್ಗೆ ಮಾತನಾಡಿದ್ದು, ಒಳ್ಳೆಯ ಸಂಬಂದ ಎಂದು ನಾನೇ ಮದುವೆ ಮಾಡಿಸಲು ಮುಂದಾದೆ. ಅವರು ಹೇಳಿದಂತೆ ಅದ್ದೂರಿಯಾಗಿ ರಿಸೆಪ್ಷನ್ ಮಾಡಿಕೊಟ್ಟೆವು. ವರದಕ್ಷಿಣೆ,ಒಡವೆಗಾಗಿ ಬೇಡಿಕೆ ಇಟ್ಟು ಚಿತ್ರಹಿಂಸೆ ನೀಡಿದ್ದಾರೆ. ಮದುವೆ ಆಗಿ ತಿಂಗಳಾದರೂ ನಮ್ಮ ಹುಡುಗಿಯನ್ನ ಆತ ಟಚ್ ಕೂಡಾ ಮಾಡಿಲ್ಲ. ಹನಿಮೂನ್ ಅನ್ನು ಪದೇ ಪದೇ ಮುಂದೆ ಹಾಕುವ ಕೆಲಸ ಮಾಡುತ್ತಿದ್ದ. ಹನಿಮೂನ್‌ಗೆ ಹೋದರೂ ಇಬ್ಬರ ನಡುವೆ ಏನು ನಡೆದಿಲ್ಲ. ಮದುವೆ ನಡೆದ ದಿನದಿಂದಲೂ ಗಾನವಿಗೆ ಹಿಂಸೆ ನೀಡಿದ್ದಾರೆ ಎಂದು ಆರೋಪಿಸಿದ್ದಾರೆ.
ಒಡವೆ ಮತ್ತು ಹಣಕ್ಕಾಗಿ ಬೇಡಿಕೆ ಇಟ್ಟು ಚಿತ್ರಹಿಂಸೆ ನೀಡಿದ್ದಾರೆ. ಆತನಲ್ಲಿದ್ದ ಸಮಸ್ಯೆಯನ್ನ ಮುಚ್ಚಿಡಲು ಗಾನವಿಗೆ ಹಿಂಸೆ ನೀಡಿದ್ದಾನೆ. ಕಳೆದ ಭಾನುವಾರವೇ ಶ್ರೀಲಂಕಾಕ್ಕೆ ಹನಿಮೂನ್‌ಗೆ ಹೋಗಿ ವಾಪಾಸ್ ಬಂದಿದ್ದಾರೆ. ಅಮ್ಮನ ನೋಡೋಕೆ ಮನೆಗೆ ಕರ್ಕೊಂಡು ಬಂದೆ ಅಂತಾನೆ. ಅಮ್ಮನ ಜೊತೆ ಇರೋಕೆ ಯಾಕೆ ಮದುವೆ ಮಾಡಿಕೊಳ್ಳಬೇಕಿತ್ತು? ಪ್ರಶ್ನೆ ಮಾಡಿದ್ರೆ ನಿಮ್ಮ ಮಗಳನ್ನ ನಿಮ್ಮ ಮನೆಗೆ ಕರೆದುಕೊಂಡು ಹೋಗಿ ಅಂತಿದ್ದ. ಮನೆಗೆ ಕರೆದುಕೊಂಡು ಬರುವಾಗ ನಮ್ಮ ಮಗಳು ಕಾಲು ಹಿಡಿದು ಬೇಡಿಕೊಂಡಳು. ನನ್ನ ಕಳಿಸಬೇಡ ಸೂರಜ್ ನಿನ್ನ ಜೊತೆ ಇರ್ತೀನಿ ನಮ್ಮ ಮನೆಯವರ ಮರ್ಯಾದೆ ಹೋಗುತ್ತೆ ಅಂತ ಹೇಳುತ್ತಿದ್ದಳು. ಏನೇ ಹಿಂಸೆ ಆದ್ರೂ ನಾನು ಇಲ್ಲೇ ಇರ್ತೀನಿ ಅಂತ ಬೇಡಿಕೊಂಡಳು ಎಂದು ಹೇಳಿದ್ದಾರೆ.
ರೂಮ್ ಡೋರ್ ತೆಗೆದಿಟ್ಟುಕೊಂಡು ನಮ್ಮ ಹುಡುಗಿ ಕೂತ್ಕೋಬೇಕಿತ್ತು. ಅವರ ಮನೆಗೆ ಹೋದಾಗಿನಿಂದ ಮಗಳಿಗೆ ಅತ್ತು ಅತ್ತು ಸಾಕಾಗಿದೆ. ನಮಗೆ ನ್ಯಾಯ ಬೇಕು..ಮಗಳ ಸಾವಿಗೆ ನ್ಯಾಯ ಬೇಕು. ಮನೆಯಲ್ಲಿ ಕರೆತಂದಾಗ ಅಮ್ಮನನ್ನ ಹೊರಗೆ ಕಳಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಅವರ ದೊಡ್ಡಮ್ಮ ಅಳಲು ತೋಡಿಕೊಂಡಿದ್ದಾರೆ.
ಗಾನವಿ ಚಿಕ್ಕಪ್ಪ ಕಾರ್ತಿಕ್ ಕೂಡ ಆರೋಪ ಮಾಡಿದ್ದು, 'ಮೂವರ ವಿರುದ್ಧ ದೂರು ನೀಡಲಾಗಿದೆ.ಗಾನವಿ ಗಂಡ ಸೂರಜ್, ಅವರ ಅತ್ತೆ, ಸಂಜಯ್ ಎಂಬುವರ ವಿರುದ್ಧ ದೂರು ನೀಡಿದ್ದೇವೆ, ವರದಕ್ಷಿಣೆ ಕಿರುಕುಳ ಆರೋಪದಡಿ ದೂರು ನೀಡಲಾಗಿದೆ. ಮದುವೆ ಬಳಿಕ ಆಭರಣಕ್ಕಾಗಿ ಸಾಕಷ್ಟು ಕಿರುಕುಳ ನೀಡಿದ್ದಾರೆ. ಇನ್ನೋವಾ ಕಾರು ಯಾವಾಗ ಯಾವಾಗ ಕೊಡ್ತಾರೆ ಅಂತ ಕಾಟ ಕೊಡುತ್ತಿದ್ದ. ಮದುವೆ ನಂತರ ಸಂಸಾರದ ಬಗ್ಗೆ ಆತನಿಗೆ ಆಸಕ್ತಿ ಇರಲಿಲ್ಲ. ಅದನ್ನು ಮುಚ್ಚಿಟ್ಟು ಮದುವೆ ಮಾಡಿಸಿದ್ದಾರೆ. ಪೊಲೀಸರು ದೂರು ತಗೊಂಡು ತನಿಖೆ ಮಾಡುತ್ತಿದ್ದಾರೆ. ಮೂವರ ಪೋನ್ ಸ್ವಿಚ್ ಆಫ್ ಆಗಿದೆ. ಅವರ ಮೇಲೆ ಕ್ರಮ ಆಗಬೇಕು ಎಂದು ಹೇಳಿದ್ದಾರೆ.