
ಬೆಂಗಳೂರು: ಇತ್ತೀಚೆಗೆ ಬೆಂಗಳೂರೇ ಬೆಚ್ಚಿ ಬಿಳಿಸುವಂತ ಘಟನೆ ನಡೆದಿತ್ತು. ಪ್ರೀತಿ ಮಾಡಲಿಲ್ಲ ಎಂದು ಯುವತಿಗೆ ಯುವಕನೋರ್ವ ನಡುರಸ್ತೆಯಲೇ ಲೈಂಗಿಕ ದೌರ್ಜನ್ಯ ಎಸಗಿದ್ದ, ಪೊಲೀಸರು ಆತನನ್ನು ಹೆಡೆಮುರಿಕಟ್ಟಿದ್ದರು. ಇದೀಗ ಇಂತಹುದ್ದೇ ಮತ್ತೊಂದು ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಸಿಲ್ಕ್ ಬೋರ್ಡ್ ಮುಖ್ಯ ರಸ್ತೆಯಲ್ಲಿ ಯುವತಿಯೊಬ್ಬರಿಗೆ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ವೈಭರ್ ವಾಸುದೇವನ್ ಎಂಬವರು ಈ ಘಟನೆಗೆ ಸಂಬಂಧಿಸಿದ ವಿಡಿಯೋವನ್ನು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.
ಪೋಸ್ಟ್‌ನಲ್ಲಿ ನೀಡಿರುವ ಮಾಹಿತಿಯಂತೆ, ನಿನ್ನೆ ರಾತ್ರಿ ಸುಮಾರು 10 ಗಂಟೆ ವೇಳೆಗೆ ಯುವತಿಯೊಬ್ಬರು ಬೈಕ್‌ನಲ್ಲಿ ಸಿಲ್ಕ್ ಬೋರ್ಡ್ ಪ್ರದೇಶದ ಮೂಲಕ ಸಾಗುತ್ತಿದ್ದರು. ಈ ವೇಳೆ ಒಂದೇ ಬೈಕ್‌ನಲ್ಲಿ ಬಂದ ಮೂವರು ಕಿಡಿಗೇಡಿಗಳು ಯುವತಿಯನ್ನು ಕೆಲ ಕಿಲೋಮೀಟರ್‌ಗಳವರೆಗೆ ಹಿಂಬಾಲಿಸಿಕೊಂಡು ಬಂದಿದ್ದಾರೆ ಎಂದು ಉಲ್ಲೇಖಿಸಿದ್ದಾರೆ. ಯುವತಿಯ ಚಲನವಲನವನ್ನು ಗಮನಿಸುತ್ತಾ ಕಿಲೋ ಮೀಟರ್ ಗಟ್ಟಲೆ ಹಿಂಬಾಲಿಸಿ ಮೂವರು ಕಿಡಿಗೇಡಿಗಳು ಯುವತಿಗೆ ಕಿರುಕುಳ ನೀಡಲು ಯತ್ನಿಸಿದ್ದಾರೆ. ಈ ಘಟನೆ ಸಾರ್ವಜನಿಕ ರಸ್ತೆಯಲ್ಲಿ ನಡೆದಿರುವುದು ನಾಗರಿಕರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಘಟನೆ ಬೆಳಕಿಗೆ ಬಂದ ತಕ್ಷಣ ಸುದ್ದಗುಂಟೆ ಪಾಳ್ಯ ಪೊಲೀಸ್ ಠಾಣೆಯ ಪೊಲೀಸರು ಪ್ರಕರಣದ ಬಗ್ಗೆ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದಾರೆ. ವೈರಲ್ ಆದ ವಿಡಿಯೋ ಮತ್ತು ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ಆಧರಿಸಿ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಪೊಲೀಸರು ಕಿಡಿಗೇಡಿಗಳು ಬಳಸಿದ್ದ ಬೈಕ್‌ನ ಮಾಲೀಕನ ಮಾಹಿತಿಯನ್ನು ಈಗಾಗಲೇ ಪತ್ತೆಹಚ್ಚಿದ್ದು, ಆರೋಪಿಗಳ ಗುರುತು ಮತ್ತು ಚಲನವಲನಗಳ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಶೀಘ್ರದಲ್ಲೇ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ. ನಗರದಲ್ಲಿ ಮಹಿಳೆಯರ ಸುರಕ್ಷತೆ ಪ್ರಶ್ನೆಯಾಗಿ ಪರಿಣಮಿಸಿರುವ ಈ ಘಟನೆಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಮಹಿಳೆಯರ ಭದ್ರತೆಗೆ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.