ವಿದೇಶಗಳಿಗೆ ಹಾರಿದ ಕನ್ನಡ 'ನೆಲದ ಹಕ್ಕಿಯ ಹಾಡು' ಸಾಕ್ಷ್ಯಚಿತ್ರ

By Kannadaprabha News  |  First Published Oct 8, 2023, 8:54 AM IST

ವನ್ಯಜೀವಿ ಛಾಯಾಗ್ರಾಹಕ ಡಾ. ಲೋಕೇಶ್ ಮೊಸಳೆ ಅವರು ಚಿತ್ರಿಸಿರುವ ''''ನೆಲದ ಹಕ್ಕಿಯ ಹಾಡು ಟೀಯೀ... ಟೀ...ವ್ವಿಟ್...'''' ಎಂಬ ಸಾಕ್ಷ್ಯಚಿತ್ರವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಆಯ್ಕೆಯಾಗಿದೆ.


   ಮೈಸೂರು :  ವನ್ಯಜೀವಿ ಛಾಯಾಗ್ರಾಹಕ ಡಾ. ಲೋಕೇಶ್ ಮೊಸಳೆ ಅವರು ಚಿತ್ರಿಸಿರುವ ''''ನೆಲದ ಹಕ್ಕಿಯ ಹಾಡು'''' ಎಂಬ ಸಾಕ್ಷ್ಯಚಿತ್ರವು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಆಯ್ಕೆಯಾಗಿದೆ.

ದ ನ್ಯೂಯಾರ್ಕ್, ಬೊಸ್ಟಾನ್, ನಪ್ಲೆಸ್ ಹಾಗೂ ಮಲೇಷಿಯಾದ ಕೌಲಲಾಂಪೂರ್, ಚೀನಾದ ಯಾಆನ್ ನಗರದಲ್ಲಿ ಈ ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ.

Latest Videos

undefined

ಮೈಸೂರಿನ ಹೊರವಲಯ ರವೀಂದ್ರನಾಥ ಟ್ಯಾಗೂರ್ ನಗರದಲ್ಲಿ ಈ ಚಿತ್ರವನ್ನು ಡಾ. ಲೋಕೇಶ್ ಮೊಸಳೆ ಚಿತ್ರಿಸಿದ್ದಾರೆ.

ಅಮೇರಿಕಾದ ನಗರದಲ್ಲಿ ಅ.19 ರಿಂದ 29 ರವರೆಗೆ ನಡೆಯಲಿರುವ ವನ್ಯಜೀವಿ ಸಂರಕ್ಷಣಾ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.

ಅಮೇರಿಕಾದ ಬೊಸ್ಟಾನ್ ನಗರದ ಪರ್ಲ್ ಸ್ಟ್ರೀಟ್ ಸ್ಕ್ರಿನಿಂಗ್ ರೂಮ್ ನಲ್ಲಿ ನ.13 ರಿಂದ 15 ರವರೆಗೆ ನಡೆಯುವ ಚಿತ್ರೋತ್ಸವದಲ್ಲಿ ನೆಲದ ಹಕ್ಕಿಯ ಹಾಡು ಪ್ರದರ್ಶನವಿದೆ.

ಫ್ಲೊರಿಡಾದ ನಪ್ಲೇಸ್ ನಗರದಲ್ಲಿರುವ ರೂಕೆರಿ ಬೇ ಪರಿಸರ ಶಿಕ್ಷಣ ಕೇಂದ್ರದಲ್ಲಿ 2024ರ ಜನವರಿ 16 ರಿಂದ 23 ರವರೆಗೆ ನಡೆಯುವ ಪ್ರದರ್ಶನಗಳಿಗೆ ಆಹ್ವಾನ ನೀಡಲಾಗಿದ್ದು, ಪ್ರದರ್ಶನದ ನಂತರ ನಡೆಯುವ ಪ್ರಶ್ನೋತ್ತರ, ಚರ್ಚೆ, ಸಂವಾದಗಳೊಂದಿಗೆ ಕೊನೆಯ ಎರಡು ದಿನಗಳು ವಿಶ್ವ ಪ್ರಸಿದ್ಧ ನಿಸರ್ಗ ತಾಣಗಳಿಗೆ ಆಯ್ದ ಚಿತ್ರ ನಿರ್ದೇಶಕರಿಗೆ ಪ್ರವಾಸ ಏರ್ಪಡಿಸಲಾಗಿದೆ.

15ನೇ ಅಂತಾರಾಷ್ಟ್ರೀಯ ಕೌಲಲಾಂಪುರ್ ಇಕೋ ಫಿಲಂ ಫೆಸ್ಟಿವಲ್ ಅ.19 ರಿಂದ 26 ರವರೆಗೂ ನಡೆಯಲಿದ್ದು, ಮಲೇಷಿಯ ಸರ್ಕಾರದ ಎನ್ಎಫ್ ಡಿಸಿ ಈ ಚಿತ್ರೋತ್ಸವದ ನೇತೃತ್ವ ವಹಿಸಿದೆ.

ಚೀನಾ ದೇಶದ ಯಾಆನ್ ನಗರದಲ್ಲಿ ಅಕ್ಟೋಬರ್ 21 ರಿಂದ 27 ರವರೆಗೆ ನಡೆಯುತ್ತಿರುವ ಅಂತಾರಾಷ್ಟ್ರೀಯ ಗ್ರೀನ್ ಫಿಲಂ ವೀಕ್ ಗೆ ಹಕ್ಕಿಯ ನೆಲದ ಹಾಡು ಚಿತ್ರವು ಸ್ಪರ್ಧೆ ಹಾಗೂ ಪ್ರದರ್ಶನಕ್ಕೆ ಆಯ್ಕೆಯಾಗಿದೆ. ಚೀನಾ ಸರ್ಕಾರದ ಸಹಯೋಗದಲ್ಲಿ ಈ ಚಿತ್ರೋತ್ಸವ ನಡೆಯಲಿದೆ.

ನಗರೀಕರಣದ ಒತ್ತಡದಿಂದಾಗಿ ವನ್ಯಜೀವಿಗಳ ಬದುಕು ಹೋರಾಟದ ಕಥೆಯನ್ನು ನೆಲದ ಹಕ್ಕಿಯ ಹಾಡು ಪ್ರಸ್ತುತಪಡಿಸಲಿದ್ದು, ಸಕಲ ಜೀವಿಗಳ ಬದುಕಿನ ಸೂಕ್ಷ್ಮತೆಯನ್ನು ಅರಿಯಲು ಈ ಸಾಕ್ಷ್ಯಚಿತ್ರ ಪ್ರೇರೇಪಿಸುವಂತಿದೆ.

ಅನೇಕ ವನ್ಯಜೀವಿಗಳ ದುರಂತ ಬದುಕಿಗೆ ಸಾಕ್ಷಿಯಂತಿರುವ ಈ ಚಿತ್ರ ಮೈಸೂರು ಹೊಸ ಬಡಾವಣೆಯ ವನ್ಯಜೀವಿಗಳ ಸಮಸ್ಯೆಯಾಗಿ ಮಾತ್ರ ಉಳಿದಿಲ್ಲ. ಇದು ವಿಶ್ವದ ಹೊಸಹೊಸ ಬಡಾವಣೆಯ ವನ್ಯಜೀವಿಗಳ ಸಮಸ್ಯೆಯಾಗಿರುವುದನ್ನು ಈ ಚಿತ್ರ ಹೇಳುತ್ತಿದೆ.

ಕನ್ನಡ ಭಾಷೆಯ ಈ ಚಿತ್ರವನ್ನು ಡಾ. ಲೋಕೇಶ್ ಮೊಸಳೆ ರೂಪಿಸಿದ್ದು, ಸ್ಕ್ರಿಪ್ಟ್ ಮತ್ತು ಸಿನಿಮಾಟೊಗ್ರಫಿ ಮಾಡಿದ್ದಾರೆ. ಸಂಕಲನ- ಎಂ.ಎನ್. ಸ್ವಾಮಿ, ಶಬ್ದವಿನ್ಯಾಸ- ಬಾಬು ಈಶ್ವರ್ ಪ್ರಸಾದ್, ಚಿತ್ರಕಥಾ ನಿರೂಪಣೆ- ಕೆ.ಟಿ. ಕೃಷ್ಣಕಾಂತ್, ಉಪ ಶೀರ್ಷಿಕೆ- ಕವಿ ಕಮಲಾಕರ ಭಟ್, ಕವಿತೆ ನುಡಿರಾಗ- ಪಿಚ್ಚಳ್ಳಿ ಶ್ರೀನಿವಾಸ್ ಗೋಪಾಲಕೃಷ್ಣ ಅಡಿಗರ ಭೂಮಿಗೀತ ಕವನದ ಸಾಲುಗಳನ್ನು ಚಿತ್ರದಲ್ಲಿ ಬಳಸಲಾಗಿದೆ.

ಮೈಸೂರಿನ ಗ್ರಾವಿಟಿ ಒನ್ ಪ್ರಸ್ತುತ ಪಡಿಸಿದ ಈ ಚಿತ್ರವನ್ನು ಧನಂಜಯ್ ಬಸವರಾಜ್, ನಂದೀಶ್ ಬಿಳಿಕೆರೆ ನಿರ್ಮಿಸಿದ್ದಾರೆ. ಮೈಸೂರಿನ ದಸರಾ ಚಲನಚಿತ್ರೋತ್ಸವದಲ್ಲಿ ನೆಲದ ಹಕ್ಕಿಯ ಹಾಡು ಮಾಲ್ ಆಫ್ ಮೈಸೂರ್ಐನಕ್ಸ್ ಚಿತ್ರಮಂದಿರದಲ್ಲಿ ಪ್ರದರ್ಶನ ನಡೆಯಲಿದೆ.

click me!