ಸುತ್ತೂರಿನ ಐಸಿಎಆರ್ ಜೆಎಸ್ ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಣ್ಣೆ ಹಣ್ಣು ಹಾಗೂ ಡ್ರ್ಯಾಗನ್ ಹಣ್ಣಿನ ವೈಜ್ಞಾನಿಕ ಬೇಸಾಯ ಕ್ರಮಗಳನ್ನು ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಸುತ್ತೂರು : ಸುತ್ತೂರಿನ ಐಸಿಎಆರ್ ಜೆಎಸ್ ಎಸ್ ಕೃಷಿ ವಿಜ್ಞಾನ ಕೇಂದ್ರದಲ್ಲಿ ಬೆಣ್ಣೆ ಹಣ್ಣು ಹಾಗೂ ಡ್ರ್ಯಾಗನ್ ಹಣ್ಣಿನ ವೈಜ್ಞಾನಿಕ ಬೇಸಾಯ ಕ್ರಮಗಳನ್ನು ಕುರಿತು ತರಬೇತಿ ಕಾರ್ಯಕ್ರಮ ನಡೆಯಿತು.
ಮುಖ್ಯಅತಿಥಿಯಾಗಿ ಉಡಿಗಾಲದ ರೈತ ಉತ್ಪಾದಕರ ಕಂಪನಿಯ ಶಿವಕುಮಾರ್ ಮಾತನಾಡಿ, ಉತ್ಪಾದಕರ ಕಂಪನಿಯಿಂದ ರೈತರಿಗೆ ಆಗುವ ಪ್ರಯೋಜನಗಳು ಮತ್ತು ಹಾಗೂ ಡ್ರ್ಯಾಗನ್ ಹಣ್ಣಿನ ಮಾರುಕಟ್ಟೆಯ ಬಗ್ಗೆ ಮಾತನಾಡಿದರು.
ಮುಖ್ಯಅತಿಥಿ ನಾಗಭೂಷಣ್ ಮಾತನಾಡಿ, ರೈತರು ಮಾರುಕಟ್ಟೆಯಲ್ಲಿ ಬರುವ ಎಲ್ಲ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಬೇಕು ಮತ್ತು ಮಧ್ಯವರ್ತಿಗಳನ್ನು ಬಿಟ್ಟು ತಾವೇ ಸ್ವತಃ ಮಾರುಕಟ್ಟೆಗಳಿಗೆ ತೆರಳಿ ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಉತ್ತಮ ಬೆಲೆ ಸಿಗುವುದೆಂದು ನೆರೆದ ರೈತರಿಗೆ ಅರಿವು ಮೂಡಿಸಿದರು.
ಹಿರಿಯ ವಿಜ್ಞಾನಿ ಮತ್ತು ಮುಖ್ಯಸ್ಥರಾದ (ಪ್ರಭಾರ) ಎಚ್.ವಿ. ದಿವ್ಯಾ ಅವರು ಮಾತನಾಡಿ, ಕೃಷಿ ವಿಜ್ಞಾನ ಕೇಂದ್ರದ ಕಾರ್ಯವೈಖರಿಯ ಬಗ್ಗೆ ತಿಳಿಸಿದರು, ಬೆಣ್ಣೆ ಹಣ್ಣು ಹಾಗೂ ಡ್ರ್ಯಾಗನ್ ಹಣ್ಣು ಭವಿಷ್ಯದ ತೋಟಗಾರಿಕೆ ಬೆಳೆಗಳು ಮತ್ತು ಅವುಗಳ ವೈಜ್ಞಾನಿಕ ಬೇಸಾಯ ಪದ್ಧತಿಗಳು ಬಹು ಮುಖ್ಯ, ಅತಿ ಹೆಚ್ಚು ರಾಸಾಯನಿಕಗಳನ್ನು ಬಳಸುವ ಬದಲು ಕಡಿಮೆ ಬಳಸಿ ಹೆಚ್ಚು ಆದಾಯ ಪಡೆಯುವ ನಿಟ್ಟಿನಲ್ಲಿ ರೈತರು ಗಮನ ಹರಿಸಲು ತಿಳಿಸಿದರು. ಹಣ್ಣು ಬೆಳೆಗಳ ಮೌಲ್ಯವರ್ಧನೆ ಮಾಡಿ ಅದರ ಉಪ ಉತ್ಪನ್ನಗಳನ್ನು ಮಾಡಿದಲ್ಲಿ ಅತಿ ಹೆಚ್ಚು ಏಳಿಗೆಯನ್ನು ಪಡೆಯಬಹುದಾಗಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಕೊಡಗಿನ ಚಟ್ಟಳ್ಳಿಯ ಐಸಿಎಆರ್ಐಐಎಚ್ಆರ್ಕೋಎದೇರಾಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದ ತೋಟಗಾರಿಕಾ ವಿಜ್ಞಾನಿ, ಸಂಪನ್ಮೂಲ ವ್ಯಕ್ತಿ ಡಾ.ಬಿ.ಎಂ. ಮುರಳಿಧರ ಮಾತನಾಡಿ, ಬೆಣ್ಣೆ ಹಣ್ಣು ಹಾಗೂ ಡ್ರ್ಯಾಗನ್ ಹಣ್ಣಿನ ವೈಜ್ಞಾನಿಕ ಬೇಸಾಯ ಕ್ರಮಗಳನ್ನು ನೆರೆದ ರೈತರಿಗೆ ಸಂಕ್ಷಿಪ್ತವಾಗಿ ವಿವರಿಸಿದರು. ಬೆಣ್ಣೆ ಹಣ್ನು ಮತ್ತು ಡ್ರ್ಯಾಗನ್ ಹಣ್ಣುಗಳ ಪೌಷ್ಟಿಕಾಂಶಗಳ ಬಗ್ಗೆ, ವಿವಿಧ ತಳಿಗಳ ಬಗ್ಗೆ, ಸೂಕ್ತ ವಾತಾವರಣ, ಮಣ್ಣು, ಪೋಷಕಾಂಶ ಮತ್ತು ನೀರಿನ ನಿರ್ವಹಣೆ, ಅಂತರ ಬೆಳೆ ಹಾಗೂ ಮೌಲ್ಯವರ್ಧನೆ ಕುರಿತು ವಿವರಿಸಿದರು. ಬೆಣ್ಣೆ ಹಣ್ಣನ್ನು ಕಪ್ಪು ಮಣ್ಣು ಅಥವಾ ನೀರು ನಿಲ್ಲುವ ಪ್ರದೇಶದಲ್ಲಿ ಬೇರು ಕೊಳೆರೋಗದ ಕಾರಣ ಈ ಹಣ್ಣನ್ನು ಬೆಳೆಯಲು ಸೂಕ್ತವಲ್ಲವೆಂದು ತಿಳಿಸಿದರು. ಮುಂದುವರೆದು ಅವರು ಸಮಗ್ರ ಕೀಟ ಮತ್ತು ರೋಗಗಳ ನಿರ್ವಹಣೆಯ ಕುರಿತು ಮಾತನಾಡಿದರು.
ಸುತ್ತೂರಿನ ಜೆಎಸ್ ಎಸ್ ಕೃಷಿ ವಿಜ್ಞಾನ ಕೇಂದ್ರದ ಮಣ್ಣು ವಿಜ್ಞಾನಿ ಜೆ.ಜಿ. ರಾಜಣ್ಣ ಮಾತನಾಡಿ, ಬೆಣ್ಣೆ ಹಣ್ಣು ಹಾಗೂ ಡ್ರ್ಯಾಗನ್ ಹಣ್ಣಿನಲ್ಲಿ ಲಘು ಪೋಷಕಾಂಶಗಳ ಮಹತ್ವ ಮತ್ತು ನಿರ್ವಹಣೆ ಬಗ್ಗೆ ವಿವರಿಸಿದರು.
ತೋಟಗಾರಿಕೆ ವಿಜ್ಞಾನಿ ಡಾ.ಜಿ.ಎಂ. ವಿನಯ್ ಸ್ವಾಗತಿಸಿದರು. ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಶಾಮರಾಜ್, ವೈ.ಪಿ. ಪ್ರಸಾದ್, ಗಂಗಪ್ಪ ಹಿಪ್ಪರಗಿ, ಸಿಬ್ಬಂದಿ ವರ್ಗದವರು ಹಾಗೂ ಸುಮಾರು 100 ಕ್ಕೂ ಹೆಚ್ಚು ರೈತ ಹಾಗೂ ರೈತ ಮಹಿಳೆಯರು ಭಾಗವಹಿಸಿ ಮಾಹಿತಿ ಪಡೆದುಕೊಂಡರು.