ಕೇಂದ್ರ, ರಾಜ್ಯ ಸರ್ಕಾರದ ಯೋಜನೆ ಜನರಿಗೆ ತಲುಪಿಸಿ: ಶಾಸಕಿ ರೂಪಾಲಿ

By Govindaraj SFirst Published Jan 13, 2023, 9:28 PM IST
Highlights

ಕೇಂದ್ರ, ರಾಜ್ಯ ಸರ್ಕಾರಗಳ ಯೊಜನೆಗಳನ್ನು ಮನೆ ಮನೆಗೂ ತಲುಪಿಸಿ, ಪಕ್ಷ ಬಲವರ್ಧನೆಗೆ ಶ್ರಮಿಸುವಂತೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್‌. ನಾಯ್ಕ ವಿನಂತಿಸಿದರು. 

ಕಾರವಾರ (ಜ.13): ಕೇಂದ್ರ, ರಾಜ್ಯ ಸರ್ಕಾರಗಳ ಯೊಜನೆಗಳನ್ನು ಮನೆ ಮನೆಗೂ ತಲುಪಿಸಿ, ಪಕ್ಷ ಬಲವರ್ಧನೆಗೆ ಶ್ರಮಿಸುವಂತೆ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್‌. ನಾಯ್ಕ ವಿನಂತಿಸಿದರು. ಬಿಜೆಪಿ ಕಾರವಾರ ಗ್ರಾಮೀಣ ಮಂಡಲದ ವತಿಯಿಂದ ತಾಲೂಕಿನ ಮಲ್ಲಾಪುರ, ಕದ್ರಾ ಹಾಗೂ ಘಾಡಸಾಯಿ ಹಳಗಾ ವ್ಯಾಪ್ತಿಯ ಬೂತ್‌ ಸಂಖ್ಯೆ 46, 47, 45 ಹಾಗೂ 53ರಲ್ಲಿ ಹಮ್ಮಿಕೊಂಡಿದ್ದ ಬೂತ್‌ ವಿಜಯ ಅಭಿಯಾನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಬೂತ್‌ ವಿಜಯ ಅಭಿಯಾನಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗುತ್ತಿದೆ. 

ಕದ್ರಾ, ಮಲ್ಲಾಪುರ, ಹಳಗಾ ಬೂತ್‌ ಸಮಿತಿಯನ್ನು ಪರಿಶೀಲಿಸಿ 12 ಜನರ ತಂಡವನ್ನು ರಚಿಸಲಾಗಿದೆ. ಅವರೆಲ್ಲರ ಮಾಹಿತಿಯನ್ನು ಪಡೆದು ಪರಿಶೀಲಿಸಲಾಗಿದೆ. ಪಂಚರತ್ನ ಸಮಿತಿಯನ್ನೂ ಪರಿಶೀಲಿಸಿ ರಚಿಸಿದ್ದು, ಪೇಜ್‌ ಪ್ರಮುಖರ ನೇಮಕ, ವಾಟ್ಸ್‌ಆ್ಯಪ್‌ ಗ್ರೂಪ್‌ಗಳ ರಚನೆ ಮಾಡುವ ಬಗ್ಗೆ ವಿವರಿಸಲಾಗಿದೆ. ಪಕ್ಷ ಸಂಘಟನೆಗೆ ನೀಡಿದ ಯೋಜನೆಯನ್ನು ಕಾರ್ಯಗಳನ್ನು ಶಕ್ತಿಮೀರಿ ಮಾಡಬೇಕು ಎಂದರು. ಪಕ್ಷ ಸಂಘಟನೆಯಲ್ಲಿ ಬೂತ್‌ ಕಮಿಟಿ ಅಧ್ಯಕ್ಷರ ಮತ್ತು ಸದಸ್ಯರ ಪಾತ್ರ ಮಹತ್ವದ್ದಾಗಿರುತ್ತದೆ. ಪಕ್ಷವು ನೀಡಿದ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕಾಗಿದೆ. 

ಕೌಶಲ್ಯ ರಹಿತ ಶಿಕ್ಷಣ ಲಾಭದಾಯಕವಲ್ಲ: ಸಚಿವ ಅಶ್ವತ್ಥ ನಾರಾಯಣ್‌

ಕೇಂದ್ರ ಹಾಗೂ ರಾಜ್ಯ ಸರ್ಕಾರದ ಯೋಜನೆಗಳು ಪ್ರತಿಯೊಬ್ಬರಿಗೂ ತಲುಪಿಸುವ ಕಾರ್ಯ ಪ್ರತಿ ಬೂತ್‌ನಲ್ಲಿ ಮಾಡಬೇಕು ಮತ್ತು ಪಕ್ಷ ಬಲವರ್ಧನೆಗೆ ಶ್ರಮಿಸಬೇಕು ಎಂದರು. ಬಿಜೆಪಿ ಕಾರವಾರ ಗ್ರಾಮೀಣ ಮಂಡಲದ ಅಧ್ಯಕ್ಷ ಸುಭಾಷ್‌ ಗುನಗಿ, ಪ್ರಧಾನ ಕಾರ್ಯದರ್ಶಿಗಳು, ಮಹಾಶಕ್ತಿ ಕೇಂದ್ರ, ಶಕ್ತಿಕೇಂದ್ರದ ಪ್ರಮುಖರು, ವಿವಿಧ ಮೋರ್ಚಾ ಪದಾಧಿಕಾರಿಗಳು, ಪ್ರಮುಖರು, ಪಕ್ಷದ ಬೂತ್‌ ಕಮಿಟಿಯವರು, ಕಾರ್ಯಕರ್ತರು, ಉಪಸ್ಥಿತರಿದ್ದರು.

ಅಭಿಯಾನದಲ್ಲಿ ಶಾಂತಾ ಬಾಂದೇಕರ ಭಾಗಿ: ಮಲ್ಲಾಪುರ ಬೂತ್‌ ಸಂಖ್ಯೆ 46ರಲ್ಲಿ ಜಿಪಂ ಮಾಜಿ ಸದಸ್ಯೆ ಶಾಂತಾ ಬಾಂದೇಕರ ಬಿಜೆಪಿಯ ಬೂತ್‌ ವಿಜಯ ಅಭಿಯಾನದಲ್ಲಿ ಸ್ವಯಂ ಪ್ರೇರಿತವಾಗಿ ಪಾಲ್ಗೊಂಡಿದ್ದು ಗಮನಾರ್ಹವಾಗಿತ್ತು. ಅವರು ಬಿಜೆಪಿ ಧ್ವಜವನ್ನು ಹಿಡಿದು ಕಾರ್ಯಕ್ರಮದ ಕೊನೆಯವರೆಗೂ ಉಪಸ್ಥಿತರಿದ್ದರು.

ಬೂತ್‌ ಮಟ್ಟ ಮತ್ತಷ್ಟು ಬಲಿಷ್ಠಗೊಳಿಸಿ: ತಾಲೂಕಿನ ಶಿರವಾಡ ಗ್ರಾಪಂ ವ್ಯಾಪ್ತಿಯ ಮಖೆರಿ ಬೂತ್‌ನಲ್ಲಿ ಮಂಗಳವಾರ ಬೂತ್‌ ವಿಜಯ ಅಭಿಯಾನ ಬಿಜೆಪಿ ಗ್ರಾಮೀಣ ಘಟಕದಿಂದ ನಡೆಯಿತು. ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಶಾಸಕಿ ರೂಪಾಲಿ ನಾಯ್ಕ, ಈ ಹಿಂದೆ ಕ್ಷೇತ್ರದಲ್ಲಿ ಬಿಜೆಪಿ ನೇತೃತ್ವದ ಪಂಚಾಯಿತಿ ಸದಸ್ಯರ ಸಂಖ್ಯೆ ಬಹಳ ಕಡಿಮೆ ಇತ್ತು. ಆದರೆ ಈಗ ಪಕ್ಷದ ಹೆಚ್ಚಿನ ಕಾರ್ಯಕರ್ತರು ಅಧಿಕಾರದಲ್ಲಿ ಇದ್ದಾರೆ. ಹೀಗಾಗಿ ಪಕ್ಷ ಬಲಿಷ್ಠವಾಗಿದೆ ಎಂದರು.

ಎಲ್ಲರೂ ಒಗ್ಗಟ್ಟಾಗಿದ್ದು, ಬೂತ್‌ ಮಟ್ಟವನ್ನು ಮತ್ತಷ್ಟುಬಲಪಡಿಸಬೇಕು. ಬೂತ್‌ನಲ್ಲಿ ಇರುವ ಮನೆಗಳಿಗೆ ಪಿಂಚಣಿ, ಪಡಿತರ, ಆಯುಷ್ಮಾನ್‌ ಹೀಗೆ ಸರ್ಕಾರದ ಹಲವಾರು ಯೋಜನೆಗಳು ಜನರಿಗೆ ತಲುಪುತ್ತದೆಯೋ ಇಲ್ಲವೋ ನೋಡಬೇಕು. ತಲುಪಿಲ್ಲವಾದಲ್ಲಿ ತಲುಪಿಸುವ ಕೆಲಸ ಮಾಡಬೇಕು. ಪಕ್ಷ ತಾಯಿ ಸಮಾನವಾಗಿದ್ದು, ಪಕ್ಷ ದ್ರೋಹ ಮಾಡುವ ಕೆಲಸ ಎಂದೂ ಮಾಡಬಾರದು ಎಂದರು. ವಿಧಾನ ಪರಿಷತ್‌ ಸದಸ್ಯ ಗಣಪತಿ ಉಳ್ವೇಕರ ಮಾತನಾಡಿ, ಪಕ್ಷ ನಮಗೆ ನೀಡಿದ ಜವಾಬ್ದಾರಿಯನ್ನು ಮನಃಪೂರ್ವಕವಾಗಿ ನಿಭಾಯಿಸಿಕೊಂಡು ಹೋಗಬೇಕು ಎಂದರು.

ಯುವಪೀಳಿಗೆಯಲ್ಲಿ ಸಾಧಿಸುವ ಛಲ ಕೊನೆಯಾಗಬಾರದು: ಸಚಿವ ಸುಧಾಕರ್‌ ಸಲಹೆ

ಪೇಜ್‌ ಪ್ರಮುಖರಿಗೆ ಸಾಂಕೇತಿಕವಾಗಿ ಪೇಜ್‌ ನೀಡಲಾಯಿತು. ಅಲ್ಪಾವಧಿ ವಿಸ್ತಾರಕರಾಗಿ ಕಿಶೋರ ಕಡವಾಡಕರ ಅವರನ್ನು ನೇಮಿಸಲಾಯಿತು. ಬಳಿಕ ಮನೆ ಮನೆಗಳಲ್ಲಿ ಬಿಜೆಪಿ ಬಾವುಟವನ್ನು ಕಟ್ಟಲಾಯಿತು. ಬೂತ್‌ ವಿಜಯ್‌ ಅಭಿಯಾನದ ಜಿಲ್ಲಾ ಸಂಚಾಲಕ ರಾಜೇಂದ್ರ ನಾಯ್ಕ, ಮಂಡಲ ಅಧ್ಯಕ್ಷ ಸುಭಾಸ್‌ ಗುನಗಿ, ಗ್ರಾಮೀಣ ಪ್ರಭಾರಿ ಗಜಾನನ ಗುನಗಿ, ಗ್ರಾಮೀಣ ಕಾರ್ಯದರ್ಶಿ ಸುಜಾತಾ, ಬೂತ್‌ ಅಧ್ಯಕ್ಷ ವಿಲಾಸ್‌ ನಾಯ್ಕ, ಸಾಮಾಜಿಕ ಜಾಲತಾಣ ಪ್ರಮುಖ ಕಿಶನ್‌ ಕಾಂಬ್ಳೆ ಇದ್ದರು.

click me!