ಕೊಬ್ಬರಿ ಖರೀದಿ ಕೇಂದ್ರ ತೆರೆಯಲು ನಿರ್ಲಕ್ಷ್ಯ ತೋರುತ್ತಿದೆ : ಕೋಡಿಹಳ್ಳಿ ಚಂದ್ರಶೇಖರ್

By Kannadaprabha NewsFirst Published Jan 20, 2024, 12:56 PM IST
Highlights

ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಸಂಸದರ ನಿರ್ಲಕ್ಷದಿಂದಾಗಿ ಕರ್ನಾಟಕದಲ್ಲಿ ಕೇಂದ್ರ ಸರಕಾರವೇ ತಮಿಳುನಾಡು ರೀತಿ ಕೊಬ್ಬರಿ ಖರೀದಿ ಕೇಂದ್ರ ತೆರೆಯಲು ನಿರ್ಲಕ್ಷ ತೋರಿದ್ದು, ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 28 ಜನ ಸಂಸದರು ಕೊಬ್ಬರಿ ಬೆಳೆಗಾರರ ಹಿತ ಮರೆತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ತುಮಕೂರು :  ಕರ್ನಾಟಕದಿಂದ ಆಯ್ಕೆಯಾಗಿ ಹೋಗಿರುವ ಸಂಸದರ ನಿರ್ಲಕ್ಷದಿಂದಾಗಿ ಕರ್ನಾಟಕದಲ್ಲಿ ಕೇಂದ್ರ ಸರಕಾರವೇ ತಮಿಳುನಾಡು ರೀತಿ ಕೊಬ್ಬರಿ ಖರೀದಿ ಕೇಂದ್ರ ತೆರೆಯಲು ನಿರ್ಲಕ್ಷ ತೋರಿದ್ದು, ರಾಜ್ಯದಿಂದ ಆಯ್ಕೆಯಾಗಿ ಹೋಗಿರುವ 28 ಜನ ಸಂಸದರು ಕೊಬ್ಬರಿ ಬೆಳೆಗಾರರ ಹಿತ ಮರೆತಿದ್ದಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಗರದ ಜಿಲ್ಲಾಧಿಕಾರಿಗಳ ಕಚೇರಿಯ ಮುಂಭಾಗಸಂಘ ಮತ್ತು ಹಸಿರುಸೇನೆ ಕೊಬ್ಬರಿ ಕೊಳ್ಳಲು ನಫೆಡ್‌ ಕೇಂದ್ರ ತೆರೆಯುವುದು ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಆಯೋಜಿಸಿರುವ ಅಹೋರಾತ್ರಿ ಧರಣಿಯ 11 ನೇ ದಿನವಾದ ಗುರುವಾರ ನಡೆದ ರ್‍ಯಾಲಿಯಲ್ಲಿ ಪಾಲ್ಗೊಂಡು, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

Latest Videos

ತಮಿಳುನಾಡಿನ ಸಂಸದ ಒತ್ತಾಸೆಯ ಮೇರೆಗೆ ಕೇಂದ್ರ ಸರಕಾರವೇ ನೇರವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆದು 88 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಖರೀದಿಸಲು ಮುಂದಾಗಿದೆ. ಆದರೆ ಕರ್ನಾಟಕಕ್ಕೆ ಮಾತ್ರ ಈ ಅವಕಾಶ ದೊರೆತ್ತಿಲ್ಲ. ಕೊಬ್ಬರಿ ಬೆಂಬಲ ಬೆಲೆ ಕುರಿತು ನಮ್ಮ ರಾಜ್ಯದ ಒಬ್ಬನೇ ಒಬ್ಬ ಸಂಸದ ಸಹ ಮಾತನಾಡಿಲ್ಲ. ಇದು ರಾಜ್ಯದ ದುರಂತ ಎಂದರು.

ಕರ್ನಾಟಕಕ್ಕೆ ಕೇವಲ 62.50 ಸಾವಿರ ಮೆಟ್ರಿಕ್ ಟನ್ ಕೊಬ್ಬರಿ ಕೊಳ್ಳಲು ಮಾತ್ರ ಕೇಂದ್ರ ಅವಕಾಶ ನೀಡಿದೆ. ಆದರೆ ರಾಜ್ಯದಲ್ಲಿ ಒಂದು ವರ್ಷಕ್ಕೆ ಸುಮಾರು 11 ಲಕ್ಷ ಮೆ. ಟನ್ ಕೊಬ್ಬರಿ ಉತ್ಪಾದನೆಯಾಗುತ್ತದೆ. ಇದರಲ್ಲಿ 62.50 ಸಾವಿರ ಮೆಟ್ರಿಕ್ ಟನ್ ಖರೀದಿಸಿದರೆ ರೈತರು ಉಳಿದ ಕೊಬ್ಬರಿಯನ್ನು ಏನು ಮಾಡಬೇಕು. ಹಾಗಾಗಿ ಕನಿಷ್ಠ ವಾರ್ಷಿಕ 1.50 ಲಕ್ಷ ಮೆಟ್ರಿಕ್ ಟನ್ ಖರೀದಿ ಮಾಡಿದರೆ ಹೆಚ್ಚಿನ ಅನುಕೂಲವಾಗಲಿದೆ ಎಂದರು.

ಈಗಾಗಲೇ ಕೇಂದ್ರ ಸರಕಾರ ಕ್ವಿಂಟಲ್ ಕೊಬ್ಬರಿಗೆ 12 ಸಾವಿರ ರು. ರೂ ಬೆಂಬಲ ಬೆಲೆ ನಿಗದಿ ಮಾಡಿದೆ. ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನೀಡಿದ ಭರವಸೆಯಂತೆ ಕ್ವಿಂಟಲ್‌ಗೆ 15 ಸಾವಿರ ರು. ನೀಡಬೇಕು. ಹಾಗಾಗಿ ಕೇಂದ್ರದ 12 ಸಾವಿರದ ಜೊತೆಗೆ, ಉಳಿದ 3 ಸಾವಿರ ರು. ಗಳನ್ನು ರಾಜ್ಯ ಸರಕಾರ ಪ್ರೋತ್ಸಾಹಧನದ ರೂಪದಲ್ಲಿ ನೀಡಿ, ಕೊಬ್ಬರಿ ಖರೀದಿ ಮಾಡಬೇಕು. ಇಲ್ಲದಿದ್ದಲ್ಲಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೊಬ್ಬರಿ ಬೆಳೆಯುವ 20 ಜಿಲ್ಲೆಗಳ ರೈತರು ನಿಮಗೆ ಸರಿಯಾದ ಪಾಠ ಕಲಿಸಲಿದ್ದಾರೆ. ಬಜೆಟ್ ಮಂಡಿಸುವ ಮುಂಚೆ ರೈತರ ಸಮಸ್ಯೆ ಬಗೆಹರಿಸಬೇಕು ಎಂದು ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.

ರಾಜ್ಯ ರೈತ ಸಂಘ ಮತ್ತು ಹಸಿರುಸೇನೆಯ ರಾಜ್ಯ ಉಪಾಧ್ಯಕ್ಷ ಕೆಂಕೆರೆ ಸತೀಶ್ ಮಾತನಾಡಿದರು.

ಪ್ರತಿಭಟನೆಯಲ್ಲಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಧನಂಜಯ್ ಆರಾಧ್ಯ, ತಿಪಟೂರಿನ ಕೆ.ಟಿ. ಶಾಂತಕುಮಾರ್, ಹಾಸನ ಜಿಲ್ಲಾಧ್ಯಕ್ಷ ಬಾಬು, ಆನೆಕೆರೆ ಬಾಬು, ಮಲ್ಲಿಕಾರ್ಜುನಯ್ಯ, ನಾಗೇಂದ್ರ, ಶಿವರತ್ನಮ್ಮ, ಪ್ರಕಾಶ್, ಶಶಿಕಲಾ,ರಾಜಣ್ಣ, ಕೊರಟಗೆರೆ ಸಿದ್ದರಾಜು, ಸೇರಿದಂತೆ ಸಾವಿರಾರು ರೈತರು ತಮ್ಮ ಟ್ರಾಕ್ಟರ್ ಮತ್ತಿತರರ ವಾಹನಗಳ ಮೂಲಕ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಮಿಳುನಾಡಿನಲ್ಲಿ ಶೇ.30ರಷ್ಟು ಮಿಲ್ಲಿಂಗ್ ಕೊಬ್ಬರಿಯನ್ನು ಖರೀದಿಸಲು ಅವಕಾಶ ನೀಡಿದೆ. ಆದರೆ ಕರ್ನಾಟಕಕ್ಕೆ ಮಾತ್ರ ಈ ಅವಕಾಶ ಲಭ್ಯವಾಗಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವೂ ನಿಷ್ಕ್ರಿಯವಾಗಿದೆ. ಹಾಗೆಯೇ ಸಂಸದರ ಬಾಯಿಗಳ ಬಂದ್ ಆಗಿವೆ. ಹೊಳು ಕೊಬ್ಬರಿ ಖರೀದಿಗೆ ಅವಕಾಶ ನೀಡಿದರೆ, ಕರ್ನಾಟಕದಲ್ಲಿ ಇರುವ ಸಣ್ಣದು ಮತ್ತು ಸುಕ್ಕು ಕೊಬ್ಬರಿ ಎಲ್ಲವೂ ಸಹ ಮಾರಾಟವಾಗುತ್ತದೆ. ಈ ಅವಕಾಶ ಕಲ್ಪಿಸುವುದು ಸಂಸದರ ಜವಾಬ್ದಾರಿ ಎಂದರು.

ಕೋಡಿಹಳ್ಳಿ ಚಂದ್ರಶೇಖರ್‌, ಕರ್ನಾಟಕ ರಾಜ್ಯ ರೈತ ಸಂಘ ರಾಜ್ಯಾಧ್ಯಕ್ಷ

click me!