
ಸಂಪತ್ ತರೀಕೆರೆ
ಬೆಂಗಳೂರು(ಫೆ.23): ನಗರದಿಂದ ತುಮಕೂರು ರಸ್ತೆ ಹಾಗೂ ಹೊಸೂರು ರಸ್ತೆಯನ್ನು ಸಂಪರ್ಕಿಸುವ ಎಂಟು ಪಥದ ಬೈಪಾಸ್ ಪೆರಿಫರಲ್ ರಿಂಗ್ ರಸ್ತೆ(PRR) ಯೋಜನೆ ಟೆಂಡರ್ ಪ್ರಕ್ರಿಯೆಗೆ ಇನ್ನೂ ಆರೇಳು ತಿಂಗಳು ಬೇಕಿದ್ದು, ಯೋಜನೆ ಕಾಮಗಾರಿ ಆರಂಭಗೊಳ್ಳಲು ವರ್ಷವೇ ಕಾಯಬೇಕಿದೆ.
ಪಿಆರ್‌ಆರ್ ಯೋಜನೆಯಡಿ ಸುಮಾರು 73 ಕಿ.ಮೀ. ಉದ್ದದ ರಸ್ತೆ ನಿರ್ಮಾಣಕ್ಕಾಗಿ 2,560 ಎಕರೆ ಭೂಸ್ವಾಧೀನಕ್ಕೆ(Land Acquisition) ಯೋಜಿಸಲಾಗಿದೆ. ಇದರಲ್ಲಿ 1,810 ಎಕರೆಗೆ ನೋಟಿಫಿಕೇಷನ್ ಆಗಿದ್ದು, ಪರಿಹಾರ ಕೊಟ್ಟಿಲ್ಲ. ಇನ್ನುಳಿದ 750 ಎಕರೆ ಭೂಸ್ವಾಧೀನಕ್ಕೆ ಪ್ರಾಥಮಿಕ ನೋಟಿಫಿಕೇಷನ್ ಆಗಬೇಕಿದೆ. ಈಗಾಗಲೇ ಸ್ವಾಧೀನ ಪಡಿಸಿಕೊಳ್ಳಬೇಕಿರುವ ಭೂಮಿಯನ್ನು ಗುರುತಿಸಲಾಗಿದ್ದು, ಸರ್ಕಾರಕ್ಕೆ(Government of Karnataka) ಪ್ರಸ್ತಾವನೆಯನ್ನು ಕಳುಹಿಸಿಕೊಡಲಾಗಿದೆ. ಅನುಮೋದನೆ ದೊರೆಯುವುದೊಂದೇ ಬಾಕಿಯಿದೆ.
Bengaluru ಪೆರಿಫೆರಲ್ ರಿಂಗ್ ರಸ್ತೆ ನಿರ್ಮಾಣಕ್ಕೆ ಅಸ್ತು
ಈ ಪೈಕಿ 232 ಎಕರೆ ಸರ್ಕಾರಿ ಭೂಮಿ ಇದ್ದು, ಉಳಿದದ್ದೆಲ್ಲ ಖಾಸಗಿ ಭೂಮಿಯಾಗಿದೆ. ಬಾಕಿ ಇರುವ ಭೂಸ್ವಾಧೀನಕ್ಕೆ ಪ್ರಾಥಮಿಕ ನೋಟಿಫಿಕೇಷನ್ ಆದ ನಂತರ ಸಾರ್ವಜನಿಕರಿಂದ ಆಕ್ಷೇಪಣೆಗೆ ಅವಕಾಶ ನೀಡಬೇಕಿದೆ. ಬಳಿಕ ಅಂತಿಮ ನೋಟಿಫಿಕೇಷನ್ ಹೊರಬೀಳಬೇಕಿದೆ. ಈ ಎಲ್ಲ ಪ್ರಕ್ರಿಯೆಗಳು ಮುಗಿದು ಯೋಜನೆ ಅನುಷ್ಠಾನಕ್ಕೆ ಟೆಂಡರ್ ಕರೆಯಲು ಕನಿಷ್ಠ ಆರೇಳು ತಿಂಗಳ ಅವಶ್ಯಕತೆ ಇದೆ. ಇದಾದ ಬಳಿಕ ಕಾರ್ಯಾದೇಶ ಪಡೆದು ಯೋಜನೆ ಕಾಮಗಾರಿ ಆರಂಭಗೊಳ್ಳಲು ಕನಿಷ್ಠ ಒಂದು ವರ್ಷ ಬೇಕಾಗುತ್ತದೆ ಎಂದು ಬಿಡಿಎ(BDA) ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ನಿರ್ಮಾಣ ವೆಚ್ಚ ಡಬಲ್:
ಸುಮಾರು 15 ವರ್ಷದ ಹಿಂದೆ ಯೋಜನೆಗೆ ಸುಮಾರು 3,000 ಕೋಟಿ ಎಂದು ಅಂದಾಜಿಸಲಾಗಿತ್ತು. ಆದರೆ, ನಿರ್ಮಾಣದಲ್ಲಿನ ದೀರ್ಘ ವಿಳಂಬದಿಂದ ವೆಚ್ಚವನ್ನು ಮೀರಿದೆ. ಇತ್ತೀಚಿನ ಅಂದಾಜಿನ ಪ್ರಕಾರ, ಭೂಸ್ವಾಧೀನಕ್ಕೆ .15,475 ಕೋಟಿ ವೆಚ್ಚವಾಗಲಿದ್ದು ಹಾಗೂ ಸಂಪೂರ್ಣ ಯೋಜನಾ ವೆಚ್ಚ .21,091 ಕೋಟಿ ವೆಚ್ಚವಾಗಲಿದೆ ಎಂದು ಯೋಜಿಸಲಾಗಿತ್ತು. ಆದರೆ, ಯೋಜನೆ ಆರಂಭಕ್ಕೆ ಇನ್ನೂ ಆರೇಳು ತಿಂಗಳು ವಿಳಂಬವಾಗಲಿರುವ ಹಿನ್ನೆಲೆಯಲ್ಲಿ ಭೂಸ್ವಾಧೀನದ ವೆಚ್ಚ .16 ಸಾವಿರ ಕೋಟಿ ಹಾಗೂ ಯೋಜನೆ ನಿರ್ಮಾಣ ವೆಚ್ಚ .5,600 ಕೋಟಿಗೆ ಏರಿಕೆಯಾಗಲಿದೆ ಎಂದು ಅಂದಾಜಿಸಲಾಗಿದ್ದು, ಒಟ್ಟು .21,600 ಕೋಟಿ ವೆಚ್ಚವಾಗಲಿದೆ ಎಂದು ಬಿಡಿಎ ಅಭಿಯಂತರ ಸದಸ್ಯ ಶಾಂತರಾಜಣ್ಣ ಅವರು ‘ಕನ್ನಡಪ್ರಭ’ಕ್ಕೆ ತಿಳಿಸಿದರು.
ನೆನೆಗುದಿಗೆ ಬಿದ್ದಿದ್ದ ಪೆರಿಫೆರಲ್ ರಸ್ತೆಗೆ ಮರುಜೀವ!
73 ಕಿ.ಮೀ. ಉದ್ದದ ಈ ರಸ್ತೆಯು ಬೆಂಗಳೂರಿನ(Bengaluru) ಈಶಾನ್ಯ, ಪೂರ್ವ ಮತ್ತು ಆಗ್ನೇಯ ಭಾಗಗಳನ್ನು ಸಂಪರ್ಕಿಸಲಿದೆ. ಇದರೊಂದಿಗೆ ಬೆಂಗಳೂರು ತನ್ನ ಪರಿಧಿಯಲ್ಲಿ 116 ಕಿ.ಮೀ. ಉದ್ದದ ಬೈಪಾಸನ್ನುಹೊಂದಿದ ನಗರವಾಗಲಿದೆ. 2008ರಲ್ಲಿ ಬಿಡಿಎ ಪಿಆರ್‌ಆರ್ ಮಾರ್ಗವನ್ನು ಪ್ರಸ್ತಾಪಿಸಿದ್ದ ವೇಳೆ, ಪೆರಿಫೆರಲ್ ರಿಂಗ್ ರಸ್ತೆ(Bypass Peripheral Ring Road) ಯೋಜನೆಗೆ 1,810 ಎಕರೆ ಭೂಸ್ವಾಧೀನಕ್ಕೆ ಸೂಚಿಸಿತ್ತು. ಆದರೆ ನಂತರದ ವಿನ್ಯಾಸದಲ್ಲಿನ ಬದಲಾವಣೆಗಳಿಂದಾಗಿ 750 ಎಕರೆಗಳಷ್ಟು ಭೂಮಿ ಹೆಚ್ಚುವರಿಯಾಗಿ ಬೇಕಾಗಿದೆ. ಹೆಚ್ಚುವರಿ ಭೂಸ್ವಾಧೀನ ಪ್ರಕ್ರಿಯೆಗೆ ಸರ್ಕಾರದ ಅನುಮೋದನೆ ಸಿಕ್ಕಿದ ಕೂಡಲೇ ಕಾರ್ಯಾರಂಭ ಮಾಡುತ್ತೇವೆ ಎಂದು ಬಿಡಿಎ ಅಧಿಕಾರಿಗಳು ಮಾಹಿತಿ ನೀಡಿದರು.
ಅತ್ಯಾಧುನಿಕ ಸೌಲಭ್ಯ
ಪೆರಿಫೆರಲ್ ರಿಂಗ್ ಯೋಜನೆಯಲ್ಲಿ ಹೊರ ವರ್ತುಲ ರಸ್ತೆಯುದ್ದಕ್ಕೂ ಟೋಲ್ ಪ್ಲಾಜಾಗಳು ಮತ್ತು ವಿಶ್ರಾಂತಿ ಕೊಠಡಿಗಳಂತಹ ಸೌಲಭ್ಯಗಳನ್ನು ಒದಗಿಸಲು ಯೋಜಿಸಲಾಗಿದೆ. ಪೆರಿಫೆರಲ್ ರಿಂಗ್ ರಸ್ತೆ ಯೋಜನೆಯಲ್ಲಿ ಏರ್ ಆ್ಯಂಬುಲೆನ್ಸ್‌ಗಳಿಗೆ ಹೆಲಿಪ್ಯಾಡ್‌ಗಳು ಮತ್ತು ಇತರ ಸೌಲಭ್ಯಗಳ ಜೊತೆಗೆ ವಿದ್ಯುತ್ ಚಾಲಿತ ವಾಹನಗಳಿಗೆ ಚಾರ್ಜಿಂಗ್ ಕೇಂದ್ರಗಳನ್ನು ನಿರ್ಮಿಸಲಾಗುತ್ತದೆ. ಇದು ಸಿಗ್ನಲ್ ಮುಕ್ತವಾಗಿರುತ್ತದೆ. ವಿವಿಧ ಜಂಕ್ಷನ್‌ಗಳಲ್ಲಿ ಅಂಡರ್‌ಪಾಸ್‌ಗಳು ಮತ್ತು ಮೇಲ್ಸೇತುವೆಗಳನ್ನು ಒಳಗೊಂಡಿರುವ ಹಲವಾರು ಕ್ಲೋವರ್ ಲೀವ್‌ಗಳನ್ನು ಹೊಂದಿರುತ್ತದೆ ಎಂದು ಬಿಡಿಎ ಮೂಲಗಳು ಮಾಹಿತಿ ನೀಡಿವೆ.