
ಬೆಂಗಳೂರು (ಫೆ. 22) ಹಿಜಾಬ್ (Hijab) ಧರಿಸುವುದು ಮುಸ್ಲಿಂ (Muslim) ಹೆಣ್ಣು ಮಕ್ಕಳ (woman) ಅತ್ಯಗತ್ಯ ಧಾರ್ಮಿಕ ಆಚರಣೆಯೇ ಎಂಬ ಸಾಂವಿಧಾನಿಕ ಪ್ರಶ್ನೆಯನ್ನು (Karnataka High Court) ಹೈಕೋರ್ಟ್ ಇತ್ಯರ್ಥಪಡಿಸುವ ಅಗತ್ಯವಿದೆ ಎಂದು ಸರ್ಕಾರ (Karnataka Govt0 ಹೈಕೋರ್ಟ್‌ಗೆ ಮನವಿ ಮಾಡಿದೆ.
ಹಿಜಾಬ್ ಧರಿಸಿ ಕಾಲೇಜು ಪ್ರವೇಶಿಸುವುದನ್ನು ನಿರ್ಬಂಧಿಸಿದ್ದ ಕ್ರಮ ಪ್ರಶ್ನಿಸಿ ಮುಸ್ಲಿಂ ವಿದ್ಯಾರ್ಥಿನಿಯರು ಸಲ್ಲಿಸಿರುವ ಅರ್ಜಿಗಳ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ಥಿ, ನ್ಯಾಯಮೂರ್ತಿಗಳಾದ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾ. ಖಾಜಿ ಜೈಬುನ್ನೀಸಾ ಮೊಹಿಯುದ್ದೀನ್ ಅವರಿದ್ದ ವಿಸ್ತೃತ ಪೀಠ ಸೋಮವಾರ ಸುಮಾರು ಎರಡು ಗಂಟೆಗಳ ವಾದ ಆಲಿಸಿ ವಿಚಾರಣೆಯನ್ನು ಮಂಗಳವಾರ ಮಧ್ಯಾಹ್ನ 2.30ಕ್ಕೆ ಮುಂದೂಡಿತು.
ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಶಾಲಾ ಕಾಲೇಜುಗಳಲ್ಲಿ ಹಿಜಾಬ್ ನಿರ್ಬಂಧಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳಲ್ಲಿ ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಹಕ್ಕು ಎಂಬ ಬಗ್ಗೆ ಸೂಕ್ತ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ಈ ಬಗ್ಗೆ ಸ್ಪಷ್ಟವಾದ ವಿವರಣೆ ಇಲ್ಲ. ಅಲ್ಲದೆ, ಶಿಕ್ಷಣದಲ್ಲಿ ಆಂತರಿಕ ಶಿಸ್ತು ಕಾಪಾಡುವ ಅಧಿಕಾರ ಆಯಾ ಶಿಕ್ಷಣ ಸಂಸ್ಥೆಗಳಿಗಿದೆ. ಶಿರೂರು ಮಠ, ಅಜ್ಮೀರ್ ದರ್ಗಾ, ತ್ರಿವಳಿ ತಲಾಖ್, ಶಬರಿಮಲೆ ತೀರ್ಪುಗಳಲ್ಲಿ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ನ್ಯಾಯಾಲಯಗಳು ತೀರ್ಮಾನಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ಹಿನ್ನೆಲೆಯಲ್ಲಿ ಹಿಜಾಬ್ ಧರಿಸುವುದು ಅತ್ಯಗತ್ಯ ಧಾರ್ಮಿಕ ಹಕ್ಕು ಎಂಬ ಪ್ರಶ್ನೆ ಇತ್ಯರ್ಥವಾಗಬೇಕು ಎಂದರು.
ಧರ್ಮಾಚರಣೆಗೆ ಯಾವುದು ಅತ್ಯಗತ್ಯ ಎಂಬುದು ಮುಖ್ಯ. ಕೆಲ ಆಚರಣೆಗಳು ಧಾರ್ಮಿಕವಾಗಿ ಅತ್ಯಗತ್ಯವಲ್ಲದಿರಬಹುದು. ಕೆಲವು ಆಚರಣೆಗಳು ಮೌಢ್ಯದಿಂದ ಕೂಡಿರಬಹುದು. ಹಿಂದೂ ಹಾಗೂ ಮುಸ್ಲಿಮರ ಕೆಲ ಆಚರಣೆಗಳು ಅತ್ಯಗತ್ಯ ಧಾರ್ಮಿಕ ಆಚರಣೆಗಳಲ್ಲವೆಂದು ದರ್ಗಾ ಕಮಿಟಿ ಆಜ್ಮೇರ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತಿಳಿಸಿದೆ.
ಕೆಲವು ಆಚರಣೆಗಳನ್ನು ಆಚರಿಸದಿದ್ದರೆ ಧರ್ಮದ ಅಸ್ತಿತ್ವಕ್ಕೆ ಧಕ್ಕೆಯಾಗುವಂತಿರಬೇಕು. ಅಂತಹ ಆಚರಣೆಗಳಷ್ಟೇ ಅತ್ಯಗತ್ಯ ಆಚರಣೆಗಳು, ಪೂಜೆ ಕೂಡಾ ಹಿಂದೂ ಧರ್ಮದ ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಈ ಆಚರಣೆ ಸಾರ್ವಜನಿಕ ಸುವ್ಯವಸ್ಥೆಗೆ, ಸಾರ್ವಜನಿಕ ಆರೋಗ್ಯ, ನೈತಿಕತೆಗೆ ವಿರುದ್ಧವಾಗಿರಬಾರದು. ಮೂಲಭೂತ ಹಕ್ಕುಗಳಿಗೂ ವಿರುದ್ಧವಾಗಿರಬಾರದು. ಆಗಷ್ಟೇ ಅದಕ್ಕೆ ಸಂವಿಧಾನದ ರಕ್ಷಣೆ ಸಿಗಲಿದೆ ಎಂದು ನಾವದಗಿ ವಾದಿಸಿದರು.
ಹಿಂದೂ ಕಾರ್ಯಕರ್ತನ ಹತ್ಯೆ, ಶಿವಮೊಗ್ಗ ಉದ್ವಿಗ್ನ, ವೈರಲ್ ಆಗುತ್ತಿದೆ ಮುಸ್ಲಿಂ ಪೇಜ್‌ನ ಆ ಒಂದು ಪೋಸ್ಟ್!
ಅರ್ಜಿದಾರರೇ ಸಾಬೀತುಪಡಿಸಬೇಕು: ಹಿಜಾಬ್ ವ್ಯಕ್ತಿಯ ಆಯ್ಕೆಗೆ ಬಿಟ್ಟಿದ್ದರೆ ಅದು ಅತ್ಯಗತ್ಯ ಆಚರಣೆಯಲ್ಲ. ಎಲ್ಲ ಮಹಿಳೆಯರಿಗೂ ಹಿಜಾಬ್ ಧರಿಸುವುದು ಕಡ್ಡಾಯವೇ ಎಂಬುದನ್ನು ಅರ್ಜಿದಾರರೇ ಸಾಬೀತು ಮಾಡಬೇಕು. ಹಿಜಾಬ್ ಕಡ್ಡಾಯವೆಂಬುದಕ್ಕೆ ಆಧಾರಗಳಿಲ್ಲ. ಅರ್ಜಿದಾರರು ಒಂದೇ ಒಂದು ದಾಖಲೆ ಹಾಗೂ ಸಾಕ್ಷ್ಯಗಳನ್ನು ನೀಡಿಲ್ಲಎಂದು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ವಾದಿಸಿದರು.
ಧಾರ್ಮಿಕ ಚಟುವಟಿಕೆಗಳಿಗೆ ಸಂವಿಧಾನ ರಕ್ಷಣೆಯಿಲ್ಲ: ವೆಂಕಟರಮಣ ದೇವರು ಪ್ರಕರಣದಲ್ಲಿ ಗೌಡ ಸಾರಸ್ವತ ಬ್ರಾಹ್ಮಣರ ಪೂಜೆಯ ಅಧಿಕಾರದ ಬಗ್ಗೆಯೂ ಸುಪ್ರೀಂಕೋರ್ಟ್ ತೀರ್ಪು ನೀಡಿದೆ. ಹಾಗಾಗಿ ಆಹಾರ, ಉಡುಪು ಅತ್ಯಗತ್ಯ ಧಾರ್ಮಿಕ ಆಚರಣೆಯಲ್ಲ. ಎಲ್ಲಾ ಧಾರ್ಮಿಕ ಚಟುವಟಿಕೆಗಳಿಗೂ ಸಂವಿಧಾನದ ರಕ್ಷಣೆಯಿಲ್ಲ ಎಂದು ನಾವದಗಿ ವಿವರಿಸಿದರು.
ಸರ್ಕಾರ ಹಿಜಾಬ್ ನಿರ್ಬಂಧಿಸಿಲ್ಲ: ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಅವರು ಕೇಳಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಸರ್ಕಾರ ಹಿಜಾಬ್ ನಿರ್ಬಂಧಿಸಿಲ್ಲ, ಆ ಅಧಿಕಾರವನ್ನು ಶಿಕ್ಷಣ ಸಂಸ್ಥೆಗಳಿಗೆ ನೀಡಲಾಗಿದೆ, ಒಂದು ವೇಳೆ ಶಿಕ್ಷಣ ಸಂಸ್ಥೆಗಳು ಹಿಜಾಬ್‌ಗೆ ಅನುಮತಿ ನೀಡಿದರೆ, ಆ ಸಂದರ್ಭದಲ್ಲಿ ಪ್ರಕರಣಕ್ಕೆ ಅನುಗುಣವಾಗಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.
ಬುರ್ಖಾಧಾರಿ ಮಹಿಳೆಗೆ ಬ್ಯಾಂಕ್ ವಹಿವಾಟಿಗೆ ಅವಕಾಶ ನಿರಾಕರಣೆ: ಬುರ್ಖಾಧಾರಿ ಮಹಿಳೆಗೆ ರಾಷ್ಟ್ರೀಕೃತ ಬ್ಯಾಂಕಿನಲ್ಲಿ ವ್ಯವಹಾರ ನಡೆಸಲು ಸಿಬ್ಬಂದಿಯು ಅವಕಾಶ ನಿರಾಕರಿಸಿದ ಘಟನೆ ಶನಿವಾರ ಬಿಹಾರದ ಬೇಗುಸರಾಯ್‌ನಲ್ಲಿ ನಡೆದಿದೆ.
ಬುರ್ಖಾಧಾರಿ ಮಹಿಳೆ ಬೇಗುಸರಾಯ್‌ನ ಯುಸಿಒ ಬ್ಯಾಂಕಿಗೆ ಹಣವನ್ನು ತೆಗೆಯಲು ಹೋಗಿದ್ದಳು. ಆಗ ಬ್ಯಾಂಕಿನ ಸಿಬ್ಬಂದಿ ಆಕೆಯನ್ನು ತಡೆದು ಹಿಜಾಬ್ ತೆಗೆದರೆ ಮಾತ್ರ ಹಣವನ್ನು ನೀಡುವುದಾಗಿ ಹೇಳಿದರು. ಇದಕ್ಕೆ ಆಕ್ಷೇಪಿಸಿದ ಮಹಿಳೆಯ ಪಾಲಕರು ಈ ಮೊದಲು ಎಂದಿಗೂ ಹಿಜಾಬ್ ಧರಿಸಿದರೆ ಬ್ಯಾಂಕಿಗೆ ಪ್ರವೇಶವಿಲ್ಲ ಎಂಬ ನಿಯಮವಿರಲಿಲ್ಲ. ಕರ್ನಾಟಕದಲ್ಲಿ ನಡೆದ ಹಿಜಾಬ್ ವಿವಾದವನ್ನು ಬಿಹಾರದಲ್ಲೇಕೆ ಜಾರಿಗೊಳಿಸಲು ಪ್ರಯತ್ನಿಸುತ್ತೀರಿ ಎಂದು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಲಾಗಿದ್ದು, ಆರ್‌ಜೆಡಿ ನಾಯಕ ತೇಜಸ್ವಿ ಯಾದವ್ ಘಟನೆಯ ವಿರುದ್ಧ ಕಿಡಿಕಾರಿದ್ದಾರೆ.
ಬ್ಯಾಂಕಿನ ಅಧಿಕೃತ ಟ್ವೀಟರ್ ಖಾತೆಯು ಬ್ಯಾಂಕ್ ಧರ್ಮದ ಆಧಾರದ ಮೇಲೆ ಗ್ರಾಹಕರ ನಡುವೆ ಭೇದಭಾವ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಅಲ್ಲದೇ ಈ ವಿಡಿಯೋದ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಾಗಿ ಭರವಸೆ ನೀಡಿದೆ.