ನಾನಾ ಭಾಗಗಳಿಂದ ಬರುವ ವಾಹನ ತರುವ ಭಕ್ತರು| ಶಿಸ್ತುಬದ್ಧ ಸಂಚಾರದಿಂದ ಮಾತ್ರ ಜನಜಂಗುಳಿ ನಿಯಂತ್ರಣ ಸಾಧ್ಯ|ಬನಶಂಕರಿಯಲ್ಲಿ ಟ್ರಸ್ಟ್ ಹಾಗೂ ಚೂಳಚಗುಡ್ಡ ಗ್ರಾಪಂ ವತಿಯಿಂದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ| ಅಲ್ಲಿಯೇ ವಾಹನ ನಿಲ್ಲಿಸಬೇಕು ಎಂದು ಬರುವ ಭಕ್ತರಿಗೆ ಆದೇಶಿಸಬೇಕು|
ಶಂಕರ ಕುದರಿಮನಿ
ಬಾದಾಮಿ(ಜ.08): ಐತಿಹಾಸಿಕ ಬಾದಾಮಿ ಬನಶಂಕರಿ ಜಾತ್ರೆಗೆ ದಿನಗಣನೆ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ದಿನದಿಂದ ದಿನಕ್ಕೆ ಟ್ರಾಫಿಕ್ ಹೆಚ್ಚಾಗುತ್ತಿದ್ದು, ಇದನ್ನು ತಪ್ಪಿಸಲು ಅಧಿಕಾರಿಗಳು ಇನ್ನೂ ಹೆಚ್ಚಿನ ಕ್ರಮಗಳನ್ನು ಕೈಗೊಳ್ಳುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಜಾತ್ರೆಯ ದಿನ ಭಕ್ತರು ವಾಹನಗಳ ಸಂಚಾರಕ್ಕೆ ಹೈರಾಣಾಗುವುದರಲ್ಲಿ ಅನುಮಾನ ಇಲ್ಲ.
ಜಾತ್ರೆ ಸಮೀಪವಾಗುತ್ತಿದ್ದಂತೆ ಬಾದಾಮಿಯಲ್ಲಿ ವಾಹನಗಳ ಭರಾಟೆ ಹೆಚ್ಚಾಗುತ್ತದೆ. ಪ್ರತಿದಿನ ಐತಿಹಾಸಿಕ ನಗರಕ್ಕೆ 20 ಸಾವಿರಕ್ಕೂ ಅಧಿಕ ಪ್ರವಾಸಿಗರು ಹಾಗೂ ಹಗಲು ರಾತ್ರಿ ಎನ್ನದೆ ಬನಶಂಕರಿದೇವಿ ಭಕ್ತಾದಿಗಳು ಆಗಮಿಸುತ್ತಾರೆ. ಹೀಗಾಗಿ ಏರುತ್ತಿರುವ ವಾಹನ ದಟ್ಟಣೆಗೆ ಕಡಿವಾಣ ಬೀಳಬೇಕಿದೆ. ಇದಷ್ಟೇ ಅಲ್ಲದೇ ಈ ಸಮಯದಲ್ಲಿ ವಾಹನಗಳ ವೇಗದ ಮೇಲೆ ನಿಗಾಸಹಿತ ಇಡಬೇಕಿದೆ. ಕಾಲ್ನಡಿಗೆಯಿಂದ ಆಗಮಿಸುವ ಭಕ್ತರಿಗೆ ಯಾವುದೇ ರೀತಿ ಅಪಘಾತವಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು. ಕಳೆದ ಎರಡು ದಿನಗಳಿಂದ ನಗರದ ಭಕ್ತರು ಬೆಳಗಿನ ಜಾವ 3 ರಿಂದ 4 ಗಂಟೆಗೆ ಎದ್ದು ದೇವಿ ದರ್ಶನಕ್ಕೆ ಪ್ರತಿದಿನ ಹೋಗುತ್ತಾರೆ. ಸುದೀರ್ಘ ನಾಲ್ಕು ಕಿಮೀ ರಸ್ತೆ ಕತ್ತಲಿಂದ ಕೂಡಿದ ಪಾದಚಾರಿಗಳ ರಸ್ತೆಯಲ್ಲಿಯೇ ಸಂಚಾರ ಹೆಚ್ಚಾಗಿರುತ್ತದೆ. ಅಲ್ಲಿ ಯುವಕರು ಜೋರಾಗಿ ದ್ವಿಚಕ್ರ ವಾಹನ ಓಡಿಸುತ್ತಾರೆ. ಅದನ್ನು ತಡೆಗಟ್ಟುವ ನಿಟ್ಟಿನಲ್ಲಿ ಪೊಲೀಸ್ ಆಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯ ನಿರ್ವಹಿಸಬೇಕು ಎಂದು ಮಾತು ಕೇಳಿಬರುತ್ತಿದೆ.
ನೇರ ಬಸ್ ಸೌಲಭ್ಯ ಒದಗಿಸಲಿ:
ಬನಶಂಕರಿ ಜಾತ್ರೆ ಸಮಯದಲ್ಲಿ ಸಾರಿಗೆ ಮತ್ತು ಖಾಸಗಿ ವಾಹನಗಳ ಸೌಲಭ್ಯಗಳ ಅವಶ್ಯಕತೆ ಹೆಚ್ಚಾಗಿ ಬೇಕಾಗುತ್ತದೆ. ಮಾಜಿ ಸಿಎಂ ಹಾಗೂ ಸ್ಥಳೀಯ ಶಾಸಕ ಸಿದ್ದರಾಮಯ್ಯನವರು ಈಗಾಗಲೇ ಸಾರಿಗೆ ಸಂಸ್ಥೆ ಅಧಿಕಾರಿಗಳಿಗೆ 20 ರಿಂದ 25 ಮಿನಿ ಬಸ್ ತರಿಸಲು ಸೂಚನೆ ನೀಡಿದ್ದಾರೆ. ಜಾತ್ರೆಗೆ ಆಗಮಿಸುವ ಭಕ್ತರು ಹೆಚ್ಚಿನ ಪ್ರಮಾಣದಲ್ಲಿ ಬರುವಾಗ ಕಾಲ್ನಡಿಗೆ ಮೂಲಕ ಆಗಮಿಸುತ್ತಾರೆ. ಆದರೆ ರಥೋತ್ಸವದ ನಂತರ ಮರಳಿ ತೆರಳುವಾಗ ವಿವಿಧ ಜಿಲ್ಲೆ ಹಾಗೂ ತಾಲೂಕಿನ ಜನರಿಗೆ ಸ್ವಲ್ಪ ತೊಂದರೆಯಾಗುತ್ತಿದೆ.
ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ
ಬಾಗಲಕೋಟೆ, ರಾಮದುರ್ಗ, ಗುಳೇದಗುಡ್ಡ, ಕೆರೂರ, ಕಮತಗಿ, ಇಳಕಲ್ಲ, ಹುನಗುಂದ, ರೋಣ, ಗದಗ ಭಾಗದ ಜನರು ಮರಳಿ ಹೋಗುವಾಗ ಅವರಿಗೆ ನೇರ ಊರಿಗೆ ಹೋಗುವ ಬಸ್ ಸೌಲಭ್ಯ ಹೆಚ್ಚಿನ ಪ್ರಮಾಣದಲ್ಲಿ ನೀಡಬೇಕು. ಕಾಲ ಗತಿಸಿದಂತೆ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮೂಲ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ‍್ಯನಿರ್ವಹಿಸಬೇಕು. ಗುಹಾಂತರ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್Ü ವೃತ್ತದಲ್ಲಿ ಇಕ್ಕಟ್ಟಾದ ರಸ್ತೆ ಇರುವುದರಿಂದ ಬರುವ ಪ್ರವಾಸಿಗರ ಅನುಕೂಲಕ್ಕಾಗಿ ಭಾರತೀಯ ಪುರಾತತ್ವ ಇಲಾಖೆ ಮತ್ತು ಸ್ಥಳೀಯ ಪುರಸಭೆಯು ಇತ್ತಕಡೆ ಸ್ವಲ್ಪ ಕಣ್ಣೆತ್ತಿ ನೋಡುತ್ತಿಲ್ಲ. ಆದರೆ ಇಲ್ಲಿಗೆ ಆಗಮಿಸಿದ ಪ್ರವಾಸಿಗರು ಮಾಜಿ ಸಿಎಂ ಕ್ಷೇತ್ರ ಎಷ್ಟುಅಸ್ತವ್ಯಸ್ತ ಎಂದು ಶಪಿಸುತ್ತಿದ್ದಾರೆ.
ರಥೋತ್ಸವ ದಿನ ಬಾದಾಮಿಯಿಂದ ಬನಶಂಕರಿ ರಸ್ತೆಯಲ್ಲಿ ಅಂದು ಹೆಚ್ಚಿನ ಪ್ರಮಾಣದಲ್ಲಿ ವಾಹನಗಳ ದಟ್ಟನೆ ಆಗುವುದರಿಂದ ಜಿಲ್ಲಾ ಹಾಗೂ ತಾಲೂಕು ಪೊಲೀಸ್ ಅಧಿಕಾರಿಗಳ ಕಾರ್ಯನಿರ್ವಹಣೆ ಕಟ್ಟುನಿಟ್ಟಿನಿಂದ ಕೂಡಿರಬೇಕು ಎಂದು ಈಗಾಗಲೇ ಬಾಗಲಕೋಟೆ ಎಸ್‌ಪಿ ಹಾಗೂ ಪೊಲೀಸ್ ಸಿಬ್ಬಂದಿ ಕ್ಷೇತ್ರ ಶಾಸಕ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ.
ಟಿಪ್ಪರ್‌ಗಳಿಗೆ ನಿಷೇಧ ಹೇರಿ
ವಿಶೇಷವಾಗಿ ಜ.10ರಿಂದ 15ನೇ ದಿನಾಂಕದವರೆಗೂ ಕಳಸಾರೋಹಣದ ಮತ್ತು ಅಂದೇ ಮಕರ ಸಂಕ್ರಮಣ ಇರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸುತ್ತ ಮುತ್ತಲಿನ ಜನ ರಥೋತ್ಸವಕ್ಕಿಂತ ಹೆಚ್ಚಿಗೆ ಜನ ಕೂಡುವ ನೀರಿಕ್ಷೆ ಇದೆ. ಈ ಸಮಯದಲ್ಲಿ ಬನಶಂಕರಿ ಮಾರ್ಗವಾಗಿ ಬಾದಾಮಿಯಲ್ಲಿ ಹಗಲು ರಾತ್ರಿಯನ್ನದೆ ಮರಳು ತುಂಬಿದ ಟಿಪ್ಪರ್ ವಾಹನಗಳು ಸಂಚಾರ ನಡೆಸುತ್ತವೆ. ಹೀಗಾಗಿ ಜಾತ್ರೆ ಸಮಯದಲ್ಲಿ ಇವುಗಳಿಗೆ ಈ ಮಾರ್ಗದಲ್ಲಿ ನಿಷೇಧ ಹೇರಬೇಕು ಹಾಗೂ ಟಿಪ್ಪರ್ ಮಾಲೀಕರಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು.
ಟ್ರಾಫಿಕ್ ನಿಯಂತ್ರಣಕ್ಕೆ ಏನು ಮಾಡಬೇಕು?
ರಥೋತ್ಸವದಿನದಂದು ಬಾದಾಮಿ ಎಲ್‌ಐಸಿ ಕಚೇರಿಯಿಂದ ನಗರದ ಅಂಬೇಡ್ಕರ್ ವೃತ್ತದವರೆಗೆ ಪ್ರಮುಖ ರಸ್ತೆ ಎರಡೂ ಬದಿಯಲ್ಲಿ ದ್ವಿಚಕ್ರ ವಾಹನಗಳು ನಿಲ್ಲದಿರುವುವಂತೆ ನೋಡಿಕೊಳ್ಳಬೇಕು. ಬನಶಂಕರಿಯಲ್ಲಿ ಟ್ರಸ್ಟ್ ಹಾಗೂ ಚೂಳಚಗುಡ್ಡ ಗ್ರಾಪಂ ವತಿಯಿಂದ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಅಲ್ಲಿಯೇ ವಾಹನ ನಿಲ್ಲಿಸಬೇಕು ಎಂದು ಬರುವ ಭಕ್ತರಿಗೆ ಆದೇಶಿಸಬೇಕು.
ಈ ಬಗ್ಗೆ ಮಾತನಾಡಿದ ಬಾದಾಮಿ ಪಿಎಸ್‌ಐ ಪ್ರಕಾಶ ಬಣಕಾರ ಅವರು, ಎಸ್‌ಪಿ ಲೋಕೇಶ ಅವರು ಖುದ್ದಾಗಿ ಜಾತ್ರೆಗೆ ಆಗಮಿಸಲಿದ್ದು, ಅವರ ಆದೇಶದ ಮೇರೆಗೆ ಹೆಚ್ಚಿನ ಪೊಲೀಸ್ ಸಿಬ್ಬಂದಿ ನೇಮಿಸಲಾಗುವುದು. ಪ್ರತಿ ಸರ್ಕಲ್‌ಗಳಲ್ಲಿ ಪೊಲೀಸ್ ಸಿಬ್ಬಂದಿಯೊಂದಿಗೆ ಗೃಹರಕ್ಷದಳದ ಸಿಬ್ಬಂದಿಯನ್ನು ಬಳಸಿಕೊಂಡು ಬನಶಂಕರಿ ದೇವಿ ಜಾತ್ರೆಗೆ ಆಗಮಿಸುವ ಭಕ್ತರಿಗೆ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.
ಇಂತಹ ಒಂದು ಇತಿಹಾಸ ಪ್ರಸಿದ್ಧ ಪ್ರವಾಸಿ ತಾಣಕ್ಕೆ ದೂರದ ನಗರ ಮತ್ತು ರಾಜ್ಯಗಳಿಂದ ಪ್ರವಾಸಿಗರು ಆಗಮಿಸುತ್ತಾರೆ. ಈಗ ಜಾತ್ರೆಯ ಸಮಯದ ಪ್ರವಾಸಿಗರ ಸಂಖ್ಯೆ ಇನ್ನಷ್ಟುಅಧಿಕವಾಗುವ ಸಾಧ್ಯತೆ ಇದೆ. ಹೀಗಾಗಿ ಟ್ರಾಫಿಕ್ ಸಮಸ್ಯೆಯಾಗದಂತೆ ನೋಡಿಕೊಳ್ಳಬೇಕು ಎಂದು ಲಕ್ಷ್ಮೇಶ್ವರ ಪ್ರೌಢಶಾಲೆ ಶಿಕ್ಷಕ ಎಚ್.ಆರ್. ಕಲ್ಲಣ್ಣವರ ಅವರು ಹೇಳಿದ್ದಾರೆ.