ಧಾರವಾಡ ನವಲಗುಂದನಲ್ಲಿ ಹೃದಯಾಘಾತದ ಆರ್ಭಟ; ಒಂದೇ ದಿನ 3 ಬಲಿ

Published : Jul 09, 2025, 12:27 PM IST
Navalgund Heart Attack Case

ಸಾರಾಂಶ

ನವಲಗುಂದ ಪಟ್ಟಣ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿವೆ. ಕಳೆದ 10 ದಿನಗಳಲ್ಲಿ 6 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಜುಲೈ 7 ರಂದು ಸೋಮವಾರ ಒಂದೇ ದಿನ ಮೂವರು ಸಾವನ್ನಪ್ಪಿದ್ದು, ಆತಂಕ ಹೆಚ್ಚಿಸಿದೆ.

ಧಾರವಾಡ (ಜು.09): ಧಾರವಾಡ ಜಿಲ್ಲೆಯ ನವಲಗುಂದ ಪಟ್ಟಣ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಹೃದಯಾಘಾತದ ಪ್ರಕರಣಗಳು ಭಾರೀ ಆತಂಕವನ್ನು ಹುಟ್ಟುಹಾಕಿವೆ. ಕಳೆದ ಕೆಲ ದಿನಗಳಿಂದ ನಿರಂತರವಾಗಿ ವರದಿಯಾಗುತ್ತಿರುವ ಈ ಪ್ರಕರಣಗಳು ಆರೋಗ್ಯ ಇಲಾಖೆಯ ಗಮನ ಸೆಳೆದಿವೆ. ಜುಲೈ 7ರಂದು, ಒಂದೇ ದಿನದಲ್ಲಿ ಮೂವರು ಜನರು ಹೃದಯಾಘಾತಕ್ಕೆ ಬಲಿಯಾದ ಘಟನೆ ನವಲಗುಂದ ಪಟ್ಟಣದಲ್ಲಿ ತೀವ್ರ ಭೀತಿ ಉಂಟುಮಾಡಿದೆ.

ಮೃತರಾದವರ ವಿವರಗಳು:

  • ನವಲಗುಂದ ಪಟ್ಟಣದ ನಾರಾಯಣ ರಾಯ್ಕರ್ (52)
  • ನವಲಗುಂದ ಪಟ್ಟಣದ ಬಸಪ್ಪ ಬಾಗಲಕೋಟೆ (78)
  • ನವಲಗುಂದ ತಾಲೂಕಿನ ಬಸಾಪೂರ ಗ್ರಾಮದ ಯಲ್ಲವ್ವ ಚವಡಿ (56)
  • ಇವರು ಒಂದೇ ದಿನ ಜುಲೈ 7ರಂದು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ವೈದ್ಯಕೀಯ ವರದಿಗಳು ತಿಳಿಸುತ್ತವೆ.

10 ದಿನದಲ್ಲಿ 6 ಜನರು ಸಾವು:

ಇದು ಕೇವಲ ಒಂದೇ ದಿನದ ವಿಚಾರವಲ್ಲ. ಕಳೆದ 10 ದಿನಗಳಲ್ಲಿ ನವಲಗುಂದ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ 6 ಜನರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಕಳೆದ ವಾರವೂ ಒಂದೇ ದಿನದಲ್ಲಿ ಇಬ್ಬರು ತಮ್ಮ ಪ್ರಾಣ ಕಳೆದುಕೊಂಡಿದ್ದರು. ನವಲಗುಂದ ತಾಲೂಕಿನಲ್ಲಿ ಈ ರೀತಿಯ ಹೃದಯಾಘಾತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ಅಲರ್ಟ್ ಆಗಿದ್ದು, ತಾತ್ಕಾಲಿಕ ಆರೋಗ್ಯ ಶಿಬಿರಗಳು, ತ್ವರಿತ ತಪಾಸಣಾ ಶಿಬಿರಗಳ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಸ್ಥಳೀಯ ವೈದ್ಯರ ಪ್ರಕಾರ, ಹೃದಯಾಘಾತಕ್ಕೆ ಕಾರಣವಾಗುತ್ತಿರುವ ಅಂಶಗಳಲ್ಲಿ ತೀವ್ರ ಮಾನಸಿಕ ಒತ್ತಡ, ಅತಿಯಾದ ತಾಪಮಾನ, ಅಸ್ವಸ್ಥ ಜೀವನಶೈಲಿ ಪ್ರಮುಖವಾಗಿದೆ ಎಂದು ತಿಳಿಸಿದ್ದಾರೆ.

ಸಾರ್ವಜನಿಕರಲ್ಲಿ ಆತಂಕ:

ಈ ಶ್ರೇಣಿಯ ಹೃದಯಾಘಾತದ ಸಾವುಗಳು ಸಾರ್ವಜನಿಕರಲ್ಲಿ ಭೀತಿಯನ್ನುಂಟುಮಾಡಿದ್ದು, ಹಲವರು ಈಗಾಗಲೇ ತಮ್ಮ ಆರೋಗ್ಯದ ಬಗ್ಗೆ ಶಂಕೆ ತಾಳತೊಡಗಿದ್ದಾರೆ. ಆಸ್ಪತ್ರೆಗಳಲ್ಲೂ ತಕ್ಷಣ ತಪಾಸಣೆ ಮಾಡಿಸಿಕೊಳ್ಳುವವರ ಸಂಖ್ಯೆಯೂ ಹೆಚ್ಚಾಗಿದೆ. ಗ್ರಾಮಾಂತರ ಪ್ರದೇಶಗಳಲ್ಲಿ ತ್ವರಿತ ಚಿಕಿತ್ಸಾ ವ್ಯವಸ್ಥೆ, ಆರೋಗ್ಯ ಸಜಾಗತೆ ಮತ್ತು ಸಾರ್ವಜನಿಕ ಅರಿವು ಮೂಡಿಸುವ ಕಾರ್ಯಕ್ರಮಗಳು ಅಗತ್ಯವಿದೆ ಎಂಬುದು ಇದೀಗ ಸ್ಥಳೀಯರ ಆಗ್ರಹವಾಗಿದೆ. ಹೃದಯಾಘಾತ ಹೆಚ್ಚುತ್ತಿರುವ ಈ ತಲ್ಲೂಕಿನಲ್ಲಿ ಶೀಘ್ರವೇ ಸಮಗ್ರ ಆರೋಗ್ಯ ಪರಿಶೀಲನೆ ಕಾರ್ಯಕ್ರಮ ಕೈಗೊಳ್ಳದಿದ್ದರೆ ಪರಿಸ್ಥಿತಿ ಇನ್ನಷ್ಟು ಗಂಭೀರವಾಗುವ ಸಾಧ್ಯತೆಯಿದೆ.

PREV
Read more Articles on
click me!

Recommended Stories

ಸಮಾಜ ಕಲ್ಯಾಣ ಸಚಿವರೇ ಇಲ್ಲಿ ನೋಡಿ, ಅಂಬೇಡ್ಕರ್ ವಸತಿ ಶಾಲೆಯಲ್ಲಿ ಮಕ್ಕಳಿಗೆ ನಿತ್ಯ ಟಾರ್ಚರ್!, ಪೆನ್ನು ಪುಸ್ತಕ ಕೇಳಿದ್ರೆ ಏಟು!
ನನಗೂ ಸಿಎಂ ಆಗುವ ಆಸೆ ಇದೆ, ಹೈಕಮಾಂಡ್ ನಿರ್ಧಾರ ಅಂತಿಮ: ದಿನೇಶ್‌ ಗುಂಡೂರಾವ್